Tuesday, May 10, 2011

ನಾವು ಯಾರಿಗಿಂಥ ಕಮ್ಮಿ ಇಲ್ಲ


ನಾವು ಯಾರಿಗಿಂಥ ಕಮ್ಮಿ ಇಲ್ಲ 
ಕರ್ನಾಟಕದ ರಾಜ್ಯದ ಕಲ್ಪತರು ನಾಡೆಂದೇ ಪ್ರಸಿದ್ಧವಾದ ಊರು ತಿಪಟೂರು.  ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಹಿತ್ಯಕವಾಗಿ ಬೆಳೆದಿರುವ ನಮ್ಮ ಈ ಊರು ವಾಣಿಜ್ಯವಾಗಿ ಹೆಸರು ಮಾಡಿದಂತೆಯೇ ಕಲೆ ಮತ್ತು ನಾಟಕರಂಗ ಕ್ಷೇತ್ರದಲ್ಲೂ ಖ್ಯಾತಿಗಳಿಸಿದೆ.

ನಮ್ಮ ತಾಲೂಕಿನಲ್ಲಿ ವೀರಶೈವ ಸಮೂದಾಯದವರೇ ಹೆಚ್ಚು ಸಂಖ್ಯೆಯಲ್ಲಿದ್ದು ಪಂಚ ಮಠಗಳ ಸಾಮಿಪ್ಯದಿಂದ ಒಂದು ರೀತಿಯ ಧಾರ್ಮಿಕ ಕ್ಷೇತ್ರ ಎನಿಸಿದೆ. ಹಲವು  ವೈಶಿಷ್ಟ್ಯವಿರುವ ತಮ್ಮ ಊರು ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ.    ಇಂತಹ ನಮ್ಮ ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ದಲಿತರು ಒಂದು ಇತಿಹಾಸ ಸೃಷ್ಟಿಸಿ, ಗಮನ ಸೆಳೆದಿದ್ದಾರೆ. ತಮ್ಮ ನಡೆ ನುಡಿ ಸಾಧನೆಗಳಿಂದ ಅಚ್ಚರಿ ಮೂಡಿಸಿರುವ ಇವರು ಸಮಾಜದ ಜನ ನಿಬ್ಬೆರಗಾಗಿ ನೋಡುವಂತಹ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ.

 ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಕಾಯಾ, ವಾಚಾ, ಮನಸಾ ಚಾಚೂ ತಪ್ಪದೇ ಪಾಲಿಸುವ ಇವರು ಇಡೀ ದಲಿತ ಸಮೂದಾಯಕ್ಕೆ ಮಾದರಿಯಾಗಿದ್ದಾರೆ. ಸರಕಾರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಈ ದಲಿತ ಕಾಲೋನಿಯಲ್ಲಿ ಎಲ್ಲರೂ ವಿದ್ಯಾವಂತರೇ. ಕನಿಷ್ಟ ಹತ್ತನೇ ತರಗತಿಯಿಂದ ಪದವಿವರೆಗೂ ಓದಿಕೊಂಡಿದ್ದಾರೆ.  ಹಾಗಾಗಿ ಇದು ಸಂಪೂರ್ಣ ಸಾಕ್ಷರಗ್ರಾಮ ಎನಿಸಿದೆ.
 ಮತ್ತೊಂದು ಅಚ್ಚರಿ ಎಂದರೆ, ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಸರಕಾರಿ ಸೇವೆಯಲ್ಲಿದ್ದಾರೆ.    ಗುಮಾಸ್ತನಿಂದ ಹಿಡಿದು, ಶಿಕ್ಷಕ, ಬಸ್ ಚಾಲಕ, ಬಸ್ ಕಂಡಕ್ಟರ್, ಮೆಕ್ಯಾನಿಕ್, ಕಂದಾಯ ಇಲಾಖೆ, ಅರಣ್ಯ, ತೆರಿಗೆ ಇಲಾಖೆಯ ಅಧಿಕಾರಿ, ತಹಸೀಲ್ದಾರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೀಗೇ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಈ ಊರಿನ ದಲಿತರ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಇದೂವರೆಗೂ ಮೇಲ್ಜಾತಿಯವರ ಜೊತೆ ಕಲಹ ಮಾಡಿಕೊಳ್ಳದೇ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿರುವುದು. ವೀರಶೈವರು ಬಿಟ್ಟರೆ ಇಲ್ಲಿ ವಾಸಿಸುವುದು ದಲಿತರೇ, ಬೇರೆ ಯಾವುದೇ ಜನ ಇಲ್ಲಿ ಇಲ್ಲ. ಊರಿನ ವೀರಶೈವ ದೇವರಿಗೆ ಎಲ್ಲರೂ ಸೇರಿ ನಮಿಸಿ, ಪೂಜಿಸುತ್ತಾರೆ. ಒಂದೇ ಕುಟುಂಬದವರಂತೆ ಜಾತ್ರೆ ಉತ್ಸವಗಳಲ್ಲಿ ಒಟ್ಟಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ. ಸಂಪ್ರದಾಯ ಮತ್ತು ಮಡಿವಂತಿಕೆಗೆ ಇಲ್ಲಿ ದಲಿತರು ಎಂದೂ ಭಿನ್ನ ಮಾಡಿಲ್ಲದಿರುವುದರಿಂದ ಮೇಲ್ಜಾತಿಯವರೂ ಸಹ ಇಲ್ಲಿನ ದಲಿತರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.
ಇವರ ಮತ್ತೊಂದು ಗಮನ ಸೆಳೆಯುವ ವಿಶೇಷ ಎಂದರೆ, ಕ್ಷೌರಿಕರ ಸಹಾಯವಿಲ್ಲದೇ ಅವರ ತಲೆ ಕೂದಲುಗಳನ್ನು ಅವರೇ ಕತ್ತರಿಸಿಕೊಳ್ಳುವುದು. ತಮ್ಮ ತಮ್ಮ ತಲೆ ಕೂದಲುಗಳನ್ನು ತಾವೇ ಅಂದವಾಗಿ ಕತ್ತರಿಸಿಕೊಂಡು ಆಕರ್ಷಕವಾಗಿ ಕಾಣುವ ಮೂಲಕ ಸಮೂದಾಯದ ಸ್ವಾಭಿಮಾನ ಮೆರೆದಿರುವುದಲ್ಲದೇ, ಪ್ರಜ್ಞಾವಂತ ಸಮಾಜಕ್ಕೆ ಸ್ವಾವಲಂಬನೆಯ ಪಾಠ ಹೇಳುತ್ತಾರೆ.
ಹೌದು, ಗಾಂಧಿಜಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ವ್ಯಾಸಂಗ ಮಾಡುವಾಗ ತಾವೇ ಹೇರ್ ಕಟ್ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನಾವು ಓದಿದ್ದೇವೆ. ಆದರೆ ಇಲ್ಲಿನ ಯುವಕರೂ ಆಧುನಿಕ ಆಡಂಬರ, ದುಭಾರಿ ವೆಚ್ಚಕ್ಕೆ ಬಲಿಯಾಗದೇ ನಿಷ್ಠೆಯಿಂದ ಸಮಾಜದ ಬದ್ಧತೆಗೆ ಶರಣಾಗಿ ತಮ್ಮ ಕ್ಷೌರವನ್ನು ಮತ್ತು ಕೂದಲಿನ ಕಟಿಂಗ್‌ನ್ನು ತಾವೇ ಮಾಡಿಕೊಳ್ಳುವ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು  ಅಭಿವ್ಯಕ್ತಗೊಳಿಸಿದ್ದಾರೆ.
ಬಹಳ ಹಿಂದೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕನೊಬ್ಬ ತಿರಸ್ಕರಿಸಿದ್ದ ಎಂಬ ಕಾರಣಕ್ಕೆ ಬೇಸತ್ತಿದ್ದ ಗ್ರಾಮಸ್ಥರು  ಅಂದಿನಿಂದಲೇ ಸ್ವತಃ ತಾವೇ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು, ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರಂತೆ. ಅದು ಹಾಗೆಯೇ ರೂಡಿಯಾಗಿ ಎಲ್ಲರೂ ಹೇರ್ ಕಟ್ಟಿಂಗ್ ಮಾಡಿ ಕೊಳ್ಳುತ್ತಾರೆ. ತಲೆ ಕೂದಲು ಕತ್ತರಿಸುವುದು, ವಿನ್ಯಾಸಗೊಳಿಸುವುದು ನಮ್ಮ ಕೆಲಸವಲ್ಲ ಎಂದು ಇವರು ಯಾವತ್ತೂ ಮೂಗು ಮುರಿದವರಲ್ಲ. ಹಲವು ದಶಕಗಳಿಂದ ಗ್ರಾಮದಲ್ಲಿ ಯಾವ ಕ್ಷೌರಿಕನೂ ಇಲ್ಲ, ಗ್ರಾಮದ ದಲಿತರ‍್ಯಾರೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರಿಕರ ಬಳಿ ಹೋದ ಉದಾಹರಣೆಗಳೂ ಇಲ್ಲ. ಹಾಗಂಥ ಅವರು ಹೇಗೆ ಬೇಕೋ ಆಗೇ ಕೂದಲುಗಳನ್ನು ಕತ್ತರಿಸಿಕೊಳ್ಳುವುದಿಲ್ಲ. ಅವರು ಮಾಡುವ ಹೇರ್ ಕಟಿಂಗ್ ನೋಡಿ ಪರಿಣಿತ ಹಾಗೂ ಅನುಭವಿ ಕ್ಷೌರಿಕರೇ ತಲೆ ಬಾಗಿದ್ದಾರೆ. ಅಚ್ಚರಿ ಎಂದರೆ ಗ್ರಾಮದ ವೀರಶೈವ ಕೋಮಿನ ಪಟೇಲ  ಹಾಗೂ ದಲಿತ ಯುವಕರ ಗೆಳೆತನ ಬೆಳೆಸಿರುವ ಲಿಂಗಾಯಿತ ಕೋಮಿನ ಅನೇಕರು ಇವರ ಬಳಿಯೇ ಹೇರ್ ಕಟ್ ಮಾಡಿಸುತ್ತಾರೆ. ಯಾರಿಗೇ ಕ್ಷೌರ ಮತ್ತು ಕಟ್ಟಿಂಗ್ ಮಾಡಿದರೂ ಹಣ ಪಡೆಯುವುದಿಲ್ಲ. ಹಾಗಾಗಿ ಈ ಕಾಲೋನಿಯ ಜನ ಕ್ಷೌರ ಮತ್ತು ಕೂದಲು ಕತ್ತರಿಸಿಕೊಳ್ಳಲು ಹಣ ಖರ್ಚು ಮಾಡುವುದಿಲ್ಲ. ಎಲ್ಲಾ ತರಹದ ಕೇಶ ವಿನ್ಯಾಸದಲ್ಲಿ ಸಿದ್ಧ ಹಸ್ತರಾದ ಇವರ ಕೌಶಲ್ಯ ಮೆಚ್ಚುವಂತಾದ್ದು. ಆದರೆ ಈ ಪರಿವರ್ತನೆಯ ಹಿಂದೆ ನೋವಿನ ಕಥೆಯಿದೆ. ಸ್ವಾಭಿಮಾನದ ಪ್ರಶ್ನೆಯಿದೆ.
ಹೌದು, ಈ ಊರಿನ ಇತಿಹಾಸದಲ್ಲಿ ದಲಿತ ವರ್ಗದ ಜನ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಮೂಡನಂಬಿಕೆ, ಅಂಧಚಾರ, ಅಸ್ಪೃಶ್ಯತೆ ತೀಕ್ಷ್ಣವಾಗಿದ್ದ ಕಾಲ. ಸಾಕಷ್ಟು ಅವಮಾನಗಳು ನಡೆದಿವೆ, ಮನಸ್ಸು ನೊಂದಿವೆ. ನಮ್ಮ ತಾತ ಮತ್ತು ಅಪ್ಪಂದಿರು ಸಮಾಜದ ಕಟ್ಟು ಪಾಡಿಗೆ ಅಂಟಿಕೊಂಡು ಬದುಕುತ್ತಿದ್ದರು. ಅವರಿಗೆ ಜ್ಞಾನೋದಯವಾಗುವುದರೊಳಗೆ ನಮ್ಮ ಪೀಳಿಗೆಯ ಜನ ಹುಟ್ಟಿದ್ದರು ಎಂದು ತಮಗಾದ ಅನುಭವವನ್ನು ಬಿಚ್ಚಿಡುತ್ತಾರೆ ಗ್ರಾಮದ ಶೀಲ ಸಂಪನ್ನ ಎಂಬ ಯುವಕ.


ದಲಿತ ಯುವಕ ಶಿವರಾಜು ಹೇಳುವ ಕಥೆ ಕೇಳಿ: ಹಿಂದೆ ಪಕ್ಕದ ಗ್ರಾಮದಲ್ಲಿದ್ದ ಒಬ್ಬ ಭಜಂತ್ರಿಯೇ ಮನಸ್ಸು ಮಾಡಿ ಎಲ್ಲರ ತಲೆ ಕೂದಲುಗಳನ್ನು ಕತ್ತರಿಸಿ, ಮುಖ ಕ್ಷೌರ ಮಾಡಬೇಕಿತ್ತು. ದಲಿತರ ಅಂತರ ಕಾಪಾಡಿಕೊಂಡು ಕ್ಷೌರಿಕ ತನ್ನ ಕೆಲಸ ಮುಗಿಸುತ್ತಿದ್ದ. ಅಲ್ಲದೇ ದಲಿತರಿಗಾಗಿಯೇ ಬೇರೆ ಪರಿಕರಗಳನ್ನು ಅಂಗಡಿಯ ಹೊರಗೆ ಮಡಗಿದ್ದನಂತೆ. ದಲಿತರ ಬಗ್ಗೆ ತೀರಾ ಅಸಡ್ಡೆ ತೋರುತ್ತಿದ್ದ ಆತ ಹೇರ್ ಕಟ್ಟಿಂಗ್ ಮತ್ತು ಕ್ಷೌರ ಮಾಡಿದ ನಂತರ ಸ್ನಾನ ಮಾಡಿ ಶುದ್ಧವಾಗುತ್ತಾ ಸ್ವತಃ ಅವನಾಗಿಯೇ ಮಡಿವಂತಿಕೆ ಆಚರಿಸಿಕೊಂಡಿದ್ದನಂತೆ.  ದಲಿತರ ಬಗ್ಗೆ ಅಷ್ಟೊಂದು ಪ್ರೀತಿ ತೋರದ ಕ್ಷೌರಿಕರೊಬ್ಬರಿಂದ ತಲೆ ಕೂದಲು ಕತ್ತರಿಸಿಕೊಂಡಿದ್ದ ನಮ್ಮ ಗ್ರಾಮದ ಯುವಕನೊಬ್ಬ ಮನಸ್ಸು ಬದಲಾಯಿಸಿ ತನ್ನ ಕೂದಲನ್ನು ತಾನೇ ಕಟ್ ಮಾಡಿಕೊಂಡಿದ್ದನಂತೆ. ಮನಸ್ಸು ಮತ್ತು ಛಲದಿಂದ ಆ ವಿದ್ಯೆ ಕರಗತ ಮಾಡಿಕೊಳ್ಳಲು ಸಾಹಸ ಮಾಡಿದ್ದನಂತೆ.
ಮೊದ ಮೊದಲು ಆತ ತನ್ನ ಮನೆಯಲ್ಲಿ ಒಂದು ಕನ್ನಡಿ ಹಿಡಿದುಕೊಂಡು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡನಂತೆ. ಆದರೆ ಅವತ್ತು ಅದು ಸಮಾಜಕ್ಕೆ ಒಂದು ಹಾಸ್ಯದಂತೆ ಕಂಡರೂ ಮುಂದಿನ ಬದಲಾವಣೆಗೆ ನಾಂದಿಯಾಯಿತು. ದಿನೇ ದಿನೇ ಆತ ಶ್ರದ್ದೆಯಿಂದ ಪ್ರಯತ್ನಿಸುತ್ತಾ, ಕಲಿಯುತ್ತಾ ಉತ್ತಮವಾಗಿ ಕೂದಲು ಕತ್ತರಿಸುವುದನ್ನು ರೂಡಿ ಮಾಡಿಕೊಂಡನಂತೆ. ನಂತರ ತನ್ನ ಮನೆಯವರಿಗೆ, ಸಂಬಂಧಿಕರಿಗೆ ಬೇರೆಯವರಿಗೆ ಕೂದಲನ್ನು ನಾನಾ ವಿನ್ಯಾಸದಲ್ಲಿ ಕತ್ತರಿಸಲು ಆರಂಭಿಸಿದ. ಗ್ರಾಮದ ಇತರರು ಇವನಂತೆಯೇ ರೂಢಿಸಿಕೊಂಡರು. ಕೊನೆಗೆ ಅವರವರ ಮನೆಯವರ ಕೂದಲುಗಳನ್ನು ಅವರೇ ಕತ್ತರಿಸಿ, ವಿನ್ಯಾಸಗೊಳಿಸುತ್ತಿದ್ದರಂತೆ.
ಇಂದು ಗ್ರಾಮದ ಎಲ್ಲರೂ ಅಂದವಾಗಿ ಹೇರ್ ಕಟ್ ಮಾಡುತ್ತಾರೆ. ಹಿರಿಯ ಕಿರಿಯ ಎಂಬ ಬೇಧ ಭಾವವಿಲ್ಲದೇ ಎಲ್ಲರ ಕೈಗಳೂ ಚೆನ್ನಾಗಿ ಪಳಗಿವೆ. ಯಾರೂ ಬೇಕಾದರೂ ಯಾರನ್ನಾದರೂ ಕಟ್ಟಿಂಗ್ ಮಾಡುತ್ತಾರೆ. ದಾರಿಯಲ್ಲಿ ಹೋಗುವ ನಮ್ಮೂರಿನ ಹುಡುಗರನ್ನು ಬಾರೋ ಕಟಿಂಗ್ ಮಾಡು ಎಂದರೆ ತಕ್ಷಣ ಕತ್ತರಿ ಮತ್ತು ಬಾಚಣಿಗೆಯೊಂದಿಗೆ ಸಿದ್ಧವಾಗಿ ಪಟಾಪಟ್ ಎಂದು ಕತ್ತರಿಸಿ ಹೋಗುತ್ತಾರೆ. ಎಲ್ಲಾ ಸಿಂಪಲ್.  


 ಈಗ ಗ್ರಾಮದಲ್ಲಿ ಪ್ರತಿಯೊಬ್ಬ ಯುವಕನೂ ಅಂದವಾಗಿ, ಆಕರ್ಷಕವಾಗಿ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು ನೋಡುಗರು ಗಮನಿಸುವಂತೆ ಸಿನಿಮಾ ನಟರಂತೆ ಮಿಂಚುತ್ತಿದ್ದಾರೆ. ಒಬ್ಬರ ಕೂದಲು ಇರುವಂತೆ ಮತ್ತೊಬ್ಬರ ಕೂದಲು ಇರುವುದಿಲ್ಲ. ಎಲ್ಲರದ್ದೂ ವಿಶೇಷ ಮತ್ತು ವಿಭೀನ್ನ ರೀತಿಯ ಆಕರ್ಷಕ ಕೇಶ ವಿನ್ಯಾಸಗಳೇ. ಮಾರಕಟ್ಟೆಯ ಯಾವುದೇ ಕೇಶ ವಿನ್ಯಾಸನ್ನೂ ಕೇಳಿದರೂ ಕ್ಷಣಾರ್ಧದಲ್ಲಿ ಮಾಡಿ ತೋರಿಸುತ್ತಾರೆ. ಹಾಗಂತ ಯಾರೂ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ.
ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದು ಎಂದು ಹೇಳುವ ಯುವಕರ ಒಂದೊಂದು ಮಾತುಗಳು ಆಳ ಮತ್ತು ಅರ್ಥ ಗರ್ಭಿತ. ಬೇರೆಯವರನ್ನ ಅವಲಂಬಿಸದೇ ತಮ್ಮ ಕೆಲಸಗಳನ್ನು ತಾವು ಶುದ್ಧವಾಗಿ ಮತ್ತು ಆತ್ಮತೃಪ್ತಿಗಾಗಿ ಮಾಡಿಕೊಳ್ಳುವುದರಲ್ಲಿ ಹಿತವಿದೆ ಎಂದು ಉಪದೇಶ ನೀಡುವ  ಅವರ ಅನುಭವ ಸಿದ್ಧ ಮಾತುಗಳಲ್ಲಿ ಚೈತನ್ಯವಿದೆ. ಸಮಯ, ಹಣ ಎರಡೂ ಉಳಿಯುತ್ತದೆ ಮತ್ತು ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಎದೆ ಹುಬ್ಬಿಸಿ ಹೇಳುವಾಗ ಅವರ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಚ್ಚರಿ ಮತ್ತು ಆಸಕ್ತಿಯಿಂದ ಯಾರಾದರೂ ಬಂದರೆ ಅವರ ಮುಖಕ್ಕೆ ಹೊಂದುವ ಕೇಶ ವಿನ್ಯಾಸ ಮಾಡಿ, ತಮ್ಮ ಕೈ ಚಳಕ ತೋರಿಸಿ ನಾವು ಯಾರಿಗಿಂಥ ಕಮ್ಮಿ ಇಲ್ಲ ಎನ್ನುತ್ತಾರೆ ಈ ಛಲದಂಕಮಲ್ಲ ಸಾಧಕ ಯುವಕರು. ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಒಂದು ತಣ್ಣನೆಯ ಮೌನ ಸಂದೇಶ ರವಾನಿಸಿದ್ದಾರೆ..

No comments:

Post a Comment