ಶೈಕ್ಷಣಿಕ ವ್ಯವಸ್ಥೆಗೆ ಒಂದು ಸವಾಲು:
ಮನೆಯಲ್ಲೇ ಶಾಲಾ ಶಿಕ್ಷಣದ ಪ್ರಯೋಗ.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ಮತ್ತು ಅತೃಪ್ತಿ ವ್ಯಕ್ತಪಡಿಸಿರುವ ವಿದ್ಯಾವಂತ ದಂಪತಿಗಳು ತಮ್ಮ ಮಗುವಿಗೆ ಮನೆಯಲ್ಲೇ ಪಾಠ ಹೇಳಿಕೊಡುವ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ತಂದೆ ಶಶಿಕುಮಾರ್ ವಿಪ್ರೋ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಸ್ವ ಇಚ್ಚೆಯಿಂದ ನಿವೃತ್ತಿಹೊಂದಿದ್ದು ಈಗ ತಿಪಟೂರು ತಾಲೂಕಿನಲ್ಲಿ ನಡೆಯುತ್ತಿರುವ ಭೈಫ್ ರೆಡ್ಡಿಯವರ ಕಲ್ಪಗಂಗಾ ಎಂಬ ಸಾವಯವ ಡೈರಿ ಯೋಜನೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶಿಲ್ಪಾ ಜಿ. ಎಂಟೆಕ್ ಪಧವಿಧರೆಯಾಗಿದ್ದು ಮನೆಯ ಕೆಲಸ ಮತ್ತು ಮಗನ ಆರೈಕೆಯಲ್ಲಿ ತೊಡಗಿದ್ದಾರೆ.
ಈ ಇಬ್ಬರು ದಂಪತಿಗಳ ಪ್ರಯೋಗಕ್ಕೆ ಸಿದ್ಧನಾಗಿರುವ ಸಿದ್ಧನಾಗಿರುವ ಮಗ ಶ್ರೇಯಸ್ ಎಸ್. (೮) ಶಾಲೆಗೆ ಹೋಗದೇ ತಂದೆ ತಾಯಿಗಳ ಜೊತೆಯಲ್ಲೇ ಜೀವನದ ಶಿಕ್ಷಣ ಪಡೆಯಲು ಆರಂಭಿಸಿದ್ದಾನೆ. ಮೂಲತಃ ತೆಲುಗು ಮಾತೃ ಭಾಷೆಯಾದರೂ ಈಗಾಗಲೇ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡಲು, ಓದಲು, ಬರೆಯಲು ಶುರುವಿಟ್ಟಿದ್ದಾನೆ. ತನ್ನ ಭವಿಷ್ಯವನ್ನು ತನ್ನ ತಂದೆ ತಾಯಿಗಳೇ ಹೋಂ ಸ್ಕೂಲ್ ಎಂಬ ಪರೀಕ್ಷಗೆ ಒಡ್ಡಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿರುವ ಶ್ರೇಯಸ್ ಸ್ವತಂತ್ರವಾಗಿ ಆಡುತ್ತಾ, ನಲಿಯುತ್ತಾ, ಸಂತೋಷವಾಗಿ ಎಲ್ಲವನ್ನೂ ಕಲಿಯುತ್ತಿದ್ದಾನೆ.
ಕಂಪ್ಯೂಟರ್ ಜ್ಞಾನ ಹೊಂದಿರುವ ಶ್ರೇಯಸ್ ಈಗಾಗಲೇ ಅಂತರಜಾಲದಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ತಂದೆಗೆ ಬಿಡುವಿದ್ದಾಗ ಅವರೊಂದಿಗೆ ತನಗೆ ಬಂದ ನಾನಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ಪಡೆದು ಪಟ್ಟಿ ಮಾಡಿಕೊಳ್ಳುತ್ತಾನೆ. ಮನೆಗೆ ಬಂದವರ ಹೋದವರ ವಿವರ ಪಡೆಯುತ್ತಾನೆ. ತಂದೆ ಹೊರಗೆ ಹೋಗುವಾಗ ಅವರೊಂದಿಗೆ ಹೋಗಿ ಸಮಾಜದ ಎಲ್ಲಾ ಸಂಪರ್ಕಗಳನ್ನು, ವ್ಯವಹಾರವನ್ನೂ ತಿಳಿದುಕೊಳ್ಳುತ್ತಿದ್ದಾನೆ. ಯಾವ ಅಡ್ಡಿ ಆತಂಕವಿಲ್ಲದೇ ಮನಸ್ಸಿಗೆ ಬಂದಂತೆ ಓದುವಾಗ ಓದುತ್ತಾನೆ, ಬರೆಯುತ್ತಾನೆ, ಆಡುತ್ತಾನೆ, ಕಂಪ್ಯೂಟರ್ ಹೀಗೆ ಯಾವ ನಿರ್ಭಂಧ ಮತ್ತು ಭಯವಿಲ್ಲದೇ ಸರ್ವ ಸ್ವತಂತ್ರವಾಗಿ ಬದುಕಿನ ಪಾಠ ಕಲಿಯುತ್ತಿದ್ದಾನೆ.
ಸದಾ ಶಾಂತ ಚಿತ್ತದಿಂದ ಹಸನ್ಮುಖಿಯಾಗಿ ಎಲ್ಲವನ್ನೂ ಗಮನಿಸುವ ಶ್ರೇಯಸ್ ತಾನು ಶಾಲೆಗೆ ಹೋಗುತ್ತಿಲ್ಲ, ಇತರೆ ಗೆಳೆಯರೊಂದಿಗೆ ಬೆರೆಯುತ್ತಿಲ್ಲ, ಗುಂಪು ಗೂಡಿ ನಲಿಯುತ್ತಿಲ್ಲ, ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲಿ ಸಾಮೂಹಿಕವಾಗಿ ಇತರೆ ಮಕ್ಕಳೊಂದಿಗೆ ಸೇರಿ ತನ್ನ ಪ್ರತಿಭೆ ಗುರ್ತಿಸಿ ಕೊಳ್ಳುತ್ತಿಲ್ಲ ಎಂಬ ಯಾವುದೇ ಆತಂಕವಾಗಲಿ, ಬಯಕೆಯಾಗಲಿ ಇಟ್ಟುಕೊಂಡಿಲ್ಲ. ಶಾಲೆಗೇ ಹೋಗಿ ಕಲಿಯಬೇಕೇ ಮನೆಯಲ್ಲಿ ಯಾಕೆ ಕಲಿಯಲು ಸಾಧ್ಯವಿಲ್ಲ ಎಂದು ಮುಗ್ಧತನದಿಂದ ಪ್ರಶ್ನಿಸುವ ಹಿಂದೆ ಅವನ ಶಾಲೆಯ ಅನುಭವಗಳು ಸ್ಫೂಟವಾಗುತ್ತವೆ.
ಶಾಲೆಯಲ್ಲಿ ಏನಿದೆ? ಅಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಎಲ್ಲರಿಗೂ ಒಂದೇ ಪಾಠ. ನಮ್ಮ ಇಷ್ಟ ಕೇಳುವವರಿಲ್ಲ. ಅವರ ಶೈಕ್ಷಣಿಕ ಕಲ್ಪನೆಯನ್ನು ನಮ್ಮ ಮೇಲೆ ತುರುಕುತ್ತಾರೆ. ಸಾಮೂಹಿಕವಾಗಿ ಹೇಳಿ ಕೊಡುವುದರಿಂದ ನಾವು ಎಷ್ಟರ ಮಟ್ಟಿಗೆ ಕಲಿತ್ತಿದ್ದೇವೆ ಎಂದು ಗಮನಿಸುವುದಿಲ್ಲ. ನಮ್ಮ ಸಾಮಾರ್ಥ್ಯವನ್ನು ಪರೀಕ್ಷೆಗೆ ಒಡ್ಡುತ್ತಾರೆ. ಮನುಷ್ಯರಂತೆ ನಡೆಸಿಕೊಳ್ಳದೇ ಬಾಯಿಗೆ ಬಂದಂತೆ ಬೈಯುವುದು ಮತ್ತು ಒಡೆಯುವುದು ಮಾಡುತ್ತಾರೆ. ಪ್ರಶ್ನಗಳಿಗೆ ಅವಕಾಶ ನೀಡದೇ ಅವರ ಮಾನಸಿಕ ಸ್ಥಿತಿಗೆ ತಕ್ಕಂತೆ ನಮ್ಮನ್ನು ಕರೆದೊಯ್ಯುತ್ತಾರೆ. ಜಾತಿ, ವರ್ಗ ಬೇಧ ಭಾವ ಮಾಡುತ್ತಾರೆ. ಜಾನುವಾರುಗಳ ದೊಡ್ಡಿಯಂತಿರುವ ಶಾಲಾ ವಾತಾವರಣದಲ್ಲಿ ನಾನು ಕಲಿಯಲು ಸಾಧ್ಯವೇ ಇಲ್ಲ ಎಂದು ಕಡಾಕಂಡಿತವಾಗಿ ಹೇಳುವ ಶ್ರೇಯಸ್ ವಯಸ್ಸಿಗೆ ಮೀರಿದ ಮಾನಸಿಕ ಬೆಳವಣಿಗೆ ಹೊಂದಿದ್ದಾನೆ.
ತಮ್ಮ ಅನುಭವ ಮತ್ತು ಕಲ್ಪನೆಗೆ ಮಗನ ಭವಿಷ್ಯವನ್ನು ಹೋಂ ಸ್ಕೂಲ್ ಎಂಬ ಪ್ರಯೋಗಕ್ಕೆ ಒಡ್ಡಿ ಆತನ ಭವಿಷ್ಯದೊಂದಿಗೆ ಆಟ ಆಡುವುದು ಸರಿಯೇ ಎಂಬ ಪ್ರಶ್ನೆಗೆ ದಂಪತಿಗಳ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿ, ಪುನಃ ಪ್ರಶ್ನಾರ್ತಕವಾಗಿಯೇ ನಿಲ್ಲಿಸುತ್ತದೆ. ವೇದಿಕ್ ಶಾಸ್ತ್ರದ ಪಂಡಿತರಾಗಿರುವ ಸುಧಾಕರ್ ಶಾಸ್ತ್ರಿಗಳ ಹೋಂ ಸ್ಕೂಲಿಂಗ್ ಯಶಸ್ಸಿನಿಂದ ಸ್ಪೂರ್ತಿಗೊಂಡು ತಾವು ತಮ್ಮ ಮಗನಿಗೆ ಮನೆಯ ಒಳಗೆ ಮತ್ತು ಹೊರಗೆ ಬದುಕಿನ ಪಾಠ ಕಲಿಸಲು ನಿರ್ಧರಿಸಿದ್ದೇವೆ ಎಂದು ಉತ್ತರಿಸುತ್ತಾರೆ.
ಥಾಮಸ್ ಆಲ್ವಾ ಎಡಿಸನ್ ಸೇರಿದಂತೆ ನಾನಾ ವಿಜ್ಞಾನಿಗಳು, ಜ್ಞಾನಿಗಳು, ಮಹಾನ್ ವ್ಯಕ್ತಿಗಳ ಜೀವನದ ಸಂಘರ್ಷವನ್ನು ಸಾಕ್ಷಿಯಾಗಿ ಕೊಡುವ ಶಶಿಕುಮಾರ್ ಇಂದಿನ ಶೈಕ್ಷಣಿಕ ವ್ಯವಸ್ಥೆಯಿಂದ ವಿದ್ಯಾವಂತರಾಗಿ ಹೊರ ಬರುವ ಶೇ.೮೦ರಷ್ಟು ವ್ಯಕ್ತಿಗಳು ಮನಷ್ಯನಾಗಿ ಉಳಿದಿರುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಅವರೆಲ್ಲಾ ಯಾಂತ್ರಿಕೃತ ಜೀವನದ ದುಡಿಯುವ ಸಾಧನಗಳಷ್ಟೆ. ನಾಲ್ಕು ಗೋಡೆಗಳ ಮಧ್ಯೆ ಕೃತಕ ಪರಿಸರದಲ್ಲಿ ಕಲಿಯುವ ಅಂಕಾಧಾರಿತ ಶಿಕ್ಷಣದಿಂದ ಬದುಕು ಪೂರ್ಣಗೊಳ್ಳುವುದಿಲ್ಲ. ಪ್ರತಿಭೆಗೆ ವಿರುದ್ಧವಾದ ಬದುಕು ಅವರದ್ದಾಗಿರುತ್ತದೆ. ಎಲ್ಲವನ್ನೂ ಕಳೆದುಕೊಂಡ ಅವರು ಮಾನಸಿಕವಾಗಿ ಅನಾರೋಗ್ಯದಿಂದಿರುತ್ತಾರೆ. ಓದುವುದು ಒಂದನ್ನು ಬಿಟ್ಟು ಬೇರೆ ಯಾವುದೇ ವಿಷಯದಲ್ಲಿ ಅರೆಜ್ಞಾನಿಗಳಾಗಿರುತ್ತಾರೆ. ಪ್ರತಿಭೆ ಮತ್ತು ಕ್ರೀಯಾಶೀಲತೆಗೆ ಮಾನ್ಯತೆ ಇಲ್ಲದ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೊಂದು ಬೆಂದು ಬಂದ ನಾನು ನನ್ನ ಮಗನನ್ನು ಈ ಕೆಟ್ಟ ಶೈಕ್ಷಣಿಕ ವ್ಯವಸ್ಥೆಗೆ ತಳ್ಳಿ ಆತನ ಬದುಕನ್ನು ನರಕವಾಗಿಸಲಾರೆ ಎಂದು ತಂದೆ ಶಶಿಕುಮಾರ್ ತನ್ನ ಮತ್ತು ತನ್ನ ಮಡದಿಯ ನಿರ್ಧಾರವೇ ಸರಿ ಎಂದು ನಾನಾ ಉದಾಹರಣೆಗಳ ಮೂಲಕ ಸ್ಪಷ್ಟ ಪಡಿಸುತ್ತಾರೆ.
ಅವನು ಯಾವುದನ್ನೂ, ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುವುದಿಲ್ಲ. ಆದರೆ ಬಾಲ್ಯದಲ್ಲಿ ಸುಪ್ತವಾಗಿರುವ ಪ್ರತಭೆಯನ್ನು ಈಗಲೇ ಬೆಳಕಿಗೆ ತಂದು ಕೊಂಡು ಪೋಷಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತೇವೆ. ನನ್ನ ಇರುವ ಒಬ್ಬನೇ ಮಗ ನಮ್ಮ ಮನೆಯ ಒಳಗೆ ಮತ್ತು ಹೊರಗೆ ಕಲಿಯುತ್ತಾನೆ. ನಿತ್ಯಾ ನಡೆಯುವ ಬದುಕಿನ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಅನುಮಾನ ಮತ್ತು ಸಮಸ್ಯೆಗಳನ್ನು ಪ್ರಶ್ನಿಸುವ ಮೂಲಕ ಪರಿಹಾರ ಕಂಡು ಕೊಳ್ಳುತ್ತಾನೆ. ಎಲ್ಲಾ ಸ್ವಾತಂತ್ರ್ಯವನ್ನೂ ಅವನಿಗೆ ನೀಡಿದ್ದು ಉತ್ಸಾಹ, ಆನಂದ ಮತ್ತು ಲವಲವಿಕೆಯಿಂದ ಸದಾ ಇರುತ್ತಾನೆ ಎನ್ನುವ ಅವರು ಅವನು ಇಷ್ಟ ಪಟ್ಟರೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕಟ್ಟಿಸುತ್ತೇವೆ, ನಂತರ ಕಾಲೇಜು ಶಿಕ್ಷಣ ಮಾಡಿಸುತ್ತೇವೆ ಎನ್ನುತ್ತಾರೆ.
ಎಲ್ಲಾ ವಿಷಯಗಳನ್ನೂ ಮೊದಲಿಗೆ ಅರ್ಥ ಮಾಡಿಸುತ್ತೇವೆ, ನಂತರ ಆತನಿಂದ ಅರ್ಥ ಮಾಡಿಕೊಂಡಿದ್ದನ್ನು ಹೇಳುವುದನ್ನು ಕಲಿಸುತ್ತೇವೆ. ಹತ್ತನೇ ವಯಸ್ಸಿನವರೆಗೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡಲು ಕಲಿಸುತ್ತೇವೆ, ನಂತರ ಬರೆಯವುದು ಕಲಿಸುತ್ತೇವೆ. ಎಂದಿಗೂ ಬಾಯಿ ಪಾಠ ಮಾಡುವ ಕೆಟ್ಟ ಸಂಪ್ರದಾಯವನ್ನು ಬೆಳೆಸುವುದಿಲ್ಲ ಎನ್ನುವ ಅವರು ಬೇರೆಯವರ ದೃಷ್ಟಿಯಲ್ಲಿ ಇದು ಸರಿಕಾಣದೇ ವೈಫಲ್ಯವಾಗಬಹುದು ಆದರೆ ನಮ್ಮ ದೃಷ್ಟಿಯಲ್ಲಿ ಇದು ಸರಿಯಾದ ಕ್ರಮ. ಯಶಸ್ಸು ಅಥವಾ ವಿಫಲತೆ ನಮ್ಮ ಉದ್ದೇಶವಲ್ಲ ಎಂದು ಬಹಳ ದೃಡತೆಯಿಂದ ಹೇಳುತ್ತಾರೆ.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬದಲಾಗಬೇಕು. ಆದರೆ ಸಧ್ಯದಲ್ಲಿ ಅದು ಸಾಧ್ಯವಿಲ್ಲ. ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದು ಹೇಳುವ ಅವರ ನಿರ್ಧಾರವನ್ನು ನಮ್ಮ ಸಮಾಜದ ಜನ ಅರಗಿಸಿಕೊಳ್ಳುವುದು ಕಷ್ಟ ಅಲ್ಲವೇ? ಇದಕ್ಕೆ ನಮ್ಮ ಶಿಕ್ಷಣ ಇಲಾಖೆ ಮತ್ತು ತಜ್ಞರು ಏನೆನ್ನುತ್ತಾರೆ.
No comments:
Post a Comment