ಸಾಧಕಿಯ ಯಶೋಗಾಥೆ: "ಒಲೆಯಮ್ಮ"
ಓದಿಲ್ಲ, ಬರೆದಿಲ್ಲ ಅಕ್ಷರ ಜ್ಞಾನ ಮೊದಲೇ ಇಲ್ಲ. ಆದರೂ ಮನಸ್ಸಿದ್ದರೆ ಮಾರ್ಗ ಎನ್ನುವ ಪ್ರೋತ್ಸಾಹ ನುಡಿಯ ಬೆನ್ನು ಹತ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿಗೆ ಕೀರ್ತಿತಂದಿರುವ "ಒಲೆಯಮ್ಮ" ಹೊಸ ದಾಖಲೆ ಮಾಡಿ ಮತ್ತೊಮ್ಮೆ ದೇಶದ ಗಮನ ಸೆಳೆಯಲು ಹೊರಟಿದ್ದಾರೆ.
ನಮ್ಮ ಹಳ್ಳಿ ಅಡಿಗೆ ಮನೆ ಸಮಸ್ಯೆಯಲ್ಲಿ ಮಹಿಳೆಯರ ಉಸಿರುಗಟ್ಟಿಸಿ, ಕಣ್ಣಿನಲ್ಲಿ ನೀರು ಬರಿಸುವ ಹೊಗೆಯ ಉಪಟಳ ಸಹಿಸಲಸಾಧ್ಯ. ಸಮಸ್ಯೆಗೆ ಪರಿಹಾರ ಹುಡುಕಿ ಹೊಗೆ ರಹಿತ ಸುಲಭ ಮತ್ತು ಸರಳ ಅಸ್ತ್ರ ಒಲೆ ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಮಹಿಳೆಯರ ಸಮಸ್ಯೆಗೆ ಮುಕ್ತಿ ಕಾಣಿಸಿ ಅವರ ಅಚ್ಚುಮೆಚ್ಚಿನವರಾಗಿ "ಒಲೆಯಮ್ಮ" ಎಂದೇ ಪ್ರಸಿದ್ಧರಾಗಿರುವ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಮುದ್ದೇನಹಳ್ಳಿ ತಾಂಡ್ಯದ ಲಲಿತಾಬಾಯಿಯ ಯಶೋಗಾಥೆ ಇದು.
ತನ್ನ ಅವಿರತ ಶ್ರಮದಿಂದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಈಗಾಗಲೇ ೧೪ಸಾವಿರಕ್ಕೂ ಹೆಚ್ಚು ಒಲೆಗಳನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ೨೦ಸಾವಿರ ಒಲೆ ನಿರ್ಮಿಸುವ ಅತ್ಯುತ್ಸಾಹದಲ್ಲಿದ್ದಾರೆ. ವಯಸ್ಸು ೪೯ ಆದರೂ ಅವರ ಉತ್ಸಾಹ ಒಂದಿಷ್ಟೂ ಕುಗ್ಗಿಲ್ಲ. ಹಾಗಾಗಿ ಒಬ್ಬ ಮಾದರಿ ಯಶಸ್ವಿ ಗೃಹಿಣಿ ಎನಿಸಿದ್ದಾರೆ.
ಟೈಡ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಸಿಗುವ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಒಲೆಗಳನ್ನು ಕೇವಲ ೨೦೦-೩೦೦ರೂಗಳಲ್ಲಿ ಸರಳ, ಸುಲಭ ಅಸ್ತ್ರಒಲೆಯನ್ನು ತಯಾರಿಸಿ ಕೊಡುವ ಇವರು ಸ್ಥಳೀಯ ಮಟ್ಟದ ಉದ್ಯಮವಾಗಿಸಿಕೊಂಡು ಶ್ರಮವಹಿಸಿ, ನ್ಯಾಯವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಒಲೆಗಳಿಗಿಂಥ ವಿಭಿನ್ನ ಹಾಗೂ ಗ್ರಾಮೀಣ ಪರಿಸರಕ್ಕೆ ಸೂಕ್ತವಾಗಿ ಹೊಂದುವಂತಹ ಈ ಒಲೆಗಳು ಇಂಧನ ಮಿತವ್ಯಯಿ ಕೂಡ. ಗ್ರಾಮೀಣ ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲೂ ಇದು ಉತ್ತಮ ಎನಿಸಿದೆ. ಸಾಂಪ್ರದಾಯಿಕ ಒಲೆಗಳಿಗಿಂತ ಅರ್ಧ ಪಟ್ಟು ಕಡಿಮೆ ಕಟ್ಟಿಗೆಯಿಂದ ಅತ್ಯಂತ ಹೆಚ್ಚಿನ ಶಾಖ ನೀಡುವ ಈ ಒಲೆ ಹೊಗೆ ರಹಿತವಾಗಿದ್ದು ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚು ಎನಿಸಿದೆ.
ಭ್ಯೆಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನರ್ಸರಿ ತರಬೇತಿಯನ್ನೂ ಪಡೆದಿರುವ ಇವರು ತಮ್ಮ ಗ್ರಾಮದಲ್ಲಿ ಔಷಧ ಗಿಡಗಳನ್ನು ನೆಟ್ಟು ಜನರಿಗೆ ಉಪಕಾರಿಯಾದರು. ಹೋದ ಕಡೆಯಲ್ಲಿ ತನ್ನ ಕಾಯಕದ ಜೊತೆಗೆ ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ, ಬಾಯಿ ಮಾತಿನ ಪ್ರಚಾರ ಮಾಡುವ ಸಾಮಾಜಿಕ ಸೇವಕಿ ಎನಿಸಿದ್ದಾರೆ.
ತರಬೇತಿಯಿಂದ ಏನಾದೀತು ಎಂದು ಗ್ರಾಮದ ಕೆಲವು ಜನರು ಹೀಯಾಳಿಸಿದ್ದರು. ಸೌದೆ, ಸೀಮೆಎಣ್ಣೆ, ವಿದ್ಯುತ್ ಹಾಗೂ ಆಧನಿಕ ಗ್ಯಾಸ್ ಸ್ಟೌಗಳ ಭರಾಟೆಯಲ್ಲಿ ಲಲಿತಾಬಾಯಿಯ ಅಸ್ತ್ರ ಒಲೆ ಉಳಿಯುತ್ತಾ ಎಂದು ಜನರಾಡಿ ಕೊಳ್ಳುವಾಗಲೇ ತನ್ನ ನಿಷ್ಟೆ, ಶ್ರದ್ದೆ ಮತ್ತು ಅಚಲ ವಿಶ್ವಾಸದಿಂದ ಮುನ್ನುಗಿದ್ದ ಅವರು ಎರಡು ವರ್ಷ ಕಳೆಯುವುದರ ಒಳಗೆ ೨೦೦೭ ಸಾಲಿನ ಸಿಐಐ-ಭಾರತಿ ಆದರ್ಶ ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗಿ ಆಗದು ಎಂದು ಕೈ ಹೊತ್ತು ಕುಳಿತ ಮಂದಿಯ ಎದುರು ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಟೆಲಿಕಾಂ ವಲಯದ ಏರ್‌ಟೆಲ್ ಭಾರತದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಹಸಿ ಉದ್ಯಮಿ ಎಂದು ಗುರ್ತಿಸಿಕೊಂಡು ಒಂದು ಲಕ್ಷ ನಗದು ಪುರಸ್ಕಾರ, ಪ್ರಶಸ್ತಿ ಹಾಗೂ ಪದಕದೊಂದಿಗೆ ದೆಹಲಿಯ ಅಂದಿನ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರಿಂದ ಬೆನ್ನುತಟ್ಟಿಸಿಕೊಂಡ ಹೆಮೆಯ ಮಹಿಳೆ ಎನಿಸಿದ್ದರು. ಈಗ ಹತ್ತಾರು ಸನ್ಮಾನಗಳು ಅಅರನ್ನು ಅರಸಿ ಬಂದಿವೆ.
ಸಾಧಕಿಯ ಯಶೋಗಾಥೆ:
ತಿಪಟೂರು ತಾಲೂಕಿನ ಹಿಂದುಳಿದ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಅತ್ಯಂತ ಬಡತನದ ಶಾಪದಲ್ಲಿ ಕನಸ್ಸುಗಳನ್ನು ಗಂಟು ಕಟ್ಟಿ ಮೂಲೆಗೆಸೆದು ಗಂಡನೊಂದಿಗೆ ಬದುಕಿನ ಬಂಡಿ ನೆಡಸಲು ಹೆಗಲು ಕೊಟ್ಟಿದ್ದ ಲಿಲಿತಾಬಾಯಿ, ಹಸಿದ ಹೊಟ್ಟೆಯ ತಣಿಸಲು ಗಾರೆ ಕೆಲಸ, ಜಲ್ಲಿ ಹೊಡೆಯುವ ಕೆಲಸ, ಸೌದೆ ಹೊರುವ ಕೆಲಸ ಮಾಡಿ ಹೇಗೋ ಸಂಜೆಯ ವೇಳೆಗೆ ೨೦-೩೦ರೂ ದುಡಿಯುತ್ತಿದ್ದ ಲಲಿತಾಬಾಯಿ ಮುಂದೆ ತಾನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿ, ಆರ್ಥಿಕವಾಗಿ ಉತ್ತಮ ಜೀವನ ನಡೆಸುತ್ತೇನೆ ಎನ್ನುವ ಕಲ್ಪನೆಯೂ ಸಹ ಇರಲಿಲ್ಲ. ಕಿತ್ತು ತಿನ್ನುವ ಬಡತನದಲ್ಲಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರ ಭವಿಷ್ಯ ನಿರ್ಮಿಸುವ ಕನಸನ್ನೂ ಕಾಣದ ಸ್ಥಿತಿಯಲ್ಲಿ ಲಲಿತಾಬಾಯಿಗೆ ಕೈಹಿಡಿದಿದ್ದು ಟೈಡ್( ಟೆಕ್ನಾಲಜಿ ಇನ್ಫೋಮೆಟ್ರಿಕ್ ಡಿಸೈನ್ ಎಂಡೀವರ್) ಸಂಸ್ಥೆ.
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸುಸ್ಥಿರ ತಂತ್ರಜ್ಞಾನ ಕೇಂದ್ರ ಸರಳ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ ಸೌದೆ ಆಧಾರಿತ ಉರಿಯುವ ಒಲೆಯನ್ನು ನಿರ್ಮಿಸುವ ತರಬೇತಿಯನ್ನು ಎಲ್ಲರಂತೆ ಮುಗಿಸಿದ ಲಲಿತಾಬಾಯಿ ಇದರಲ್ಲೇ ತನ್ನ ಭವಿಷ್ಯವನ್ನು ಕನಸಿಕೊಂಡು ಅದಕ್ಕೊಂದು ರೂಪ ಮತ್ತು ಶಕ್ತಿ ಕೊಟ್ಟರು. ಕಲಿತದ್ದು ಈಕೆಯ ಕೈ ಹಿಡಿದ ಪರಿಣಾಮ ಇಂದು ಅತ್ಯಂತ ಬೇಡಿಕೆಯ ಸ್ವಯಂ ವೃತ್ತಿ ಮಹಿಳೆಯಾಗಿದ್ದಾರೆ. ತನ್ನ ೪೫ರ ವಯಸ್ಸಿನಲ್ಲಿ ದಿಕ್ಕು ಕಾಣದ ದಿನಗಳಲ್ಲಿ ತೆಗೆದುಕೊಂಡ ದೃಡ ನಿರ್ಧಾರ ಇಂದು ಆಕೆಯ ಭವಿಷ್ಯವನ್ನೇ ಬದಲಿಸಿದೆ. ಸಾಧಕಿ ಲಿಲತಾಬಾಯಿಯ ಛಲ ಮತ್ತು ಪರಿಶ್ರಮ ಆಕೆಗೆ ಗೌರವ, ಕೀರ್ತಿ, ಹಣ ಹಾಗೂ ತೃಪ್ತಿಯನ್ನು ನೀಡಿದೆ. ತನ್ನ ಮಗಳಿಗೆ ಟಿಸಿಹೆಚ್ ಓದಿಸಿ ಕೆಲಸ ಕೊಡಿಸಿದ್ದಾರೆ. ಮಗನಿಗೆ ಐಟಿಐ ತರಬೇತಿ ಕೊಡಿಸಿದ್ದಾರೆ. ತನ್ನ ನಿಷ್ಠೆ, ನಿಸ್ವಾರ್ಥ ಮತ್ತು ಅರ್ಪಣಾ ಮನೋಭಾವ ಕಾಯಕಕ್ಕೆ ದಿನಕ್ಕೆ ಕನಿಷ್ಟ ಐದು ನೂರು ದುಡಿಯುತ್ತಾ ಅದರಲ್ಲೇ ಸಂತೃಪ್ತಿ ಪಡುತ್ತಾರೆ. ಸಂಕಟದ ಬದುಕಿನ ತೀವ್ರತೆ ಅರಿತಿರುವ ಲಲಿತಾಬಾಯಿ ಕಷ್ಟ ಎಂದು ಬಂದ ಮಹಿಳೆಯರಿಗೆ ಬದುಕುವ ಮಾರ್ಗವನ್ನು ಹೇಳಿಕೊಡುತ್ತಾರೆ ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿ, ಪ್ರೋತ್ಸಾಹಿಸುತ್ತಿದ್ದಾರೆ. ಅವರೂ ಸ್ವ ಉದ್ಯೋಗ ಮಾಡುವಂತೆ ಹುರಿದುಂಬಿಸಿ, ಮಾರ್ಗದರ್ಶನ ನೀಡುತ್ತಾ ಪರಿಪೂರ್ಣ ಮಹಿಳೆ ಎನಿಸಿರುವ ಆಕೆಯನ್ನು ನಾನಾ ಸಂಘಟನೆಗಳು ಗುರ್ತಿಸಿ, ಹೆಮ್ಮೆಯಿಂದ ಅಭಿನಂದಿಸಿವೆ. ತಾಲೂಕು ಆಡಳಿತದ ನಾನಾ ಇಲಾಖೆಗಳು ಸನ್ಮಾನಿಸಿ, ಪುರಸ್ಕರಿಸಿವೆ.
ಬೆನ್ನ ಹಿಂದೆ ಬಿದ್ದು ಅಂಗಲಾಚಿ ಬೇಡುವ ಹುಂಬರಿಗೆ, ಹೊಗಳುವ ನಿರರ್ಥಕರಿಗೆ, ಸ್ವಾರ್ಥ ಪ್ರಚಾರ ಪ್ರಿಯರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಸರಕಾರ ಕೂಡಲೇ ಕೈಬಿಟ್ಟು ಇಂತಹ ನಿಸ್ವಾರ್ಥ ಶ್ರಮ ಜೀವಿಗಳನ್ನು ಗುರ್ತಿಸಿ, ಪುರಸ್ಕರಿಸಿದರೆ ಸಾರ್ಥಕ್ಯ ಎನಿಸುತ್ತದೆ.
No comments:
Post a Comment