ಸರಕಾರಿ ಶಾಲೆಗಳ ದುಸ್ಥಿತಿ:ಕಾನ್ವೆಂಟ್‌ಗಳ ಹಾವಳಿ, ಗ್ರಾಮಸ್ಥರ ಇಂಗ್ಲೀಷ್ ವ್ಯಾಮೋಹ ಮತ್ತು ಅವರು ಸರಕಾರಿ ಶಾಲೆಗಳ ಬಗ್ಗೆ ತಾಳಿರುವ ಅಸಹಕಾರದಿಂದ ತಾಲೂಕಿನ ಮಾವಿನಹಳ್ಳಿಯಲ್ಲಿ ಅಭಿವೃದ್ಧಿಗೊಂಡಿದ್ದ ಸುಂದರ ಹಳೆಯ ಶಾಲೆಯೊಂದು ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ.
ಸರಕಾರದ ಧೋರಣೆ ಮತ್ತು ಶಿಕ್ಷಣ ವ್ಯಾಪಾರಿಗಳ ಲಾಭಿಯಿಂದ ಆಕರ್ಷಣೆ ಕಳೆದುಕೊಳ್ಳುತ್ತಿರುವ ಸರಕಾರಿ ಶಾಲೆಗಳು ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಂಡು ಕೊನೆಯ ದಿನಗಳನ್ನು ಎಣಿಸುತ್ತಿವೆ. ಉದಾಹರಣಗೆ ಕಳೆದ ವರ್ಷ ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಎಂಟು ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಅದು ಈ ವರ್ಷವೂ ಮುಂದುವರೆದಿದ್ದು ಈ ಬಾರಿ ಶಿಕ್ಷಣ ಇಲಾಖೆ ಒಂಬತ್ತು ಶಾಲೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲಿದೆ. ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಬೇಡಿ ನಮ್ಮ ಸರಕಾರಿ ಶಾಲೆಗೆ ಕಳುಹಿಸಿ ಎಂದು ನಾನಾ ರೀತಿಯಲ್ಲಿ ಆಂದೋಲನ ನಡೆಸಿ ಜಾಗೃತಿ ಉಂಟು ಮಾಡುತ್ತಿರುವ ಶಿಕ್ಷಣ ಇಲಾಖೆ ಈಗಾಗಲೇ ಕಾರೇಕುರ್ಚಿ, ಅಯ್ಯನಪಾಳ್ಯ, ಕೆ.ಎಂ.ಗೊಲ್ಲಹಟ್ಟಿ, ಮತ್ತು ಹುಚ್ಚಗೊಂಡನಹಳ್ಳಿಯ ನಾಲ್ಕು ಶಾಲೆಗಳನ್ನು ಮುಚ್ಚುನ ಮೂಲಕ ಖಾಸಗೀ ಸವಾಲಿನಲ್ಲಿ ಹಿನ್ನಡೆ ಸಾಧಿಸಿದೆ.
ತಾಲೂಕಿನಲ್ಲಿ ೧೦೨ ಹಿರಿಯ ಪ್ರಾಥಮಿಕ ಪಾಠ ಶಾಲೆಗಳು ಹಾಗೂ ೧೮೬ ಕಿರಿಯ ಪ್ರಾಥಮಿಕ ಪಾಠ ಶಾಲೆಗಳಿವೆ. ಈ ಪೈಕಿ ವಿಠಲಾಪುರ, ಮೂಗುತಿಹಳ್ಳಿಹೊಸೂರು, ಕೋಡಿಕೊಪ್ಪಲು, ಹರಚನಹಳ್ಳಿ, ಬಿಳಿಗೆರೆಪಾಳ್ಯ, ಮತ್ತು ಮಾವಿನಹಳ್ಳಿ ಶಾಲೆಗಳು ಮಕ್ಕಳ ಕೊರತೆ ಕಾರಣದಿಂದ ಮುಚ್ಚಲು ದಿನಗಳನ್ನು ಎಣಿಸುತ್ತಿವೆ. ಕನಿಷ್ಟ ಹತ್ತು ಮಕ್ಕಳಿರುವ ಶಾಲೆಗಳನ್ನು ಮುಚ್ಚಬಾರದು ಎಂದು ಸರಕಾರ ನಿಯಮ ರೂಪಿಸಿದೆ ಆದರೆ ಖಾಸಗೀ ಕಾನ್ವೆಂಟ್‌ಗಳ ಹಾವಳಿಯಿಂದ ಕೆಲವು ಗ್ರಾಮಗಳಲ್ಲಿ ಸರಕಾರಿ ಶಾಲೆಗೆ ಮೂರು-ನಾಲ್ಕು ಮಕ್ಕಳು ಸಿಗುತ್ತಿಲ್ಲ ಎಂದು ಇಲಾಖೆಯ ಅಳಲು. ಮಕ್ಕಳನ್ನು ದುಡಿಯಲು ಕಳುಹಿಸದೇ ಶಾಲೆಗೆ ಕಳುಹಿಸಿ, ಮರಳಿ ಶಾಲೆಗೆ ಬಾ ಈ ರೀತಿ ನಾನಾ ಘೋಷಣೆ ಕೂಗುತ್ತಾ ಶಿಕ್ಷಣ ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿಕೊಂಡು ಶೈಕ್ಷಣಿಕ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿವೆ.
ಖಾಸಗೀ ಕಾನ್ವೆಂಟ್‌ಗಳು ಪೈಪೋಟಿ ನಡೆಸುತ್ತಾ ಸರಕಾರಿ ಶಾಲೆಗಳಿಗೆ ಸವಾಲೊಡ್ಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಹಾಕಿ ತಮ್ಮ ತಮ್ಮ ವಾಹನ ಸೌಲಭ್ಯಗಳಿಂದ ಎರಡು ಮೂರು ಮಕ್ಕಳನ್ನು ಬಿಡದೇ ಬಾಚಿಕೊಳ್ಳುತ್ತಿವೆ.
ದೇಶದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸರಕಾರ ಸರ್ವ ಶಿಕ್ಷ ಅಭಿಯಾನದಲ್ಲಿ ಸಾವಿರಾರು ಕೋಟಿ ರೂಗಳನ್ನು ವ್ಯಹಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹಣವೂ ನೀರಿನಂತೆ ಖರ್ಚಾಗುತ್ತಿದೆ ಆದರೆ ಖಾಸಗಿ ವಲಯಕ್ಕೆ ಕಡಿವಾಣ ಹಾಕದೇ ನಿರ್ಲಕ್ಷ್ಯ ತೋರಿದ ಸರಕಾರದಿಂದಲೇ ಸರಕಾರದ ಶಾಲೆಗಳು ಇಂದು ಇಂತಹ ದುಸ್ಥಿಗೆ ಬರಲು ಕಾರಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುದೊಂದು ದಿನ ಎಲ್ಲಾ ಭಾಗದಲ್ಲೂ ಸರಕಾರಿ ಶಾಲೆಗಳು ಮುಚ್ಚಿ ಎಲ್ಲವನ್ನೂ ಖಾಸಗೀಯವರಿಗೆ ಬಿಟ್ಟು ಕೊಡಬೇಕಾಗುತ್ತದೆ.
ಮಾವಿನಹಳ್ಳಿ ಶಾಲೆಯ ದುಸ್ಥತಿ:ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಾವಿನಹಳ್ಳಿ ಕಿರಿಯ ಪ್ರಾಥಮಿಕ ಪಾಠಶಾಲೆಯಿಂದ ಕಲಿತು ಹೋದ ಅನೇಕರು ಇಂದು ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಶಿಕ್ಷಕರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಗೊಂಡಿದ್ದ ಈ ಶಾಲೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದುಕೊಂಡಿತ್ತು ಆದರೆ ಇಂದು ಈ ಶಾಲೆಯನ್ನೂ ಮುಚ್ಚಲಾಗುತ್ತಿದೆ.
ವಿಪರ್ಯಾಸ ಎಂದರೆ ಇದೇ ಶಾಲೆಯಲ್ಲಿ ಓದಿದ್ದ ಶಿಕ್ಷಕಿಯೊಬ್ಬರು ಕಳೆದ ನಾಲ್ಕು ವರ್ಷದಿಂದ ಇಲ್ಲೇ ಸೇವೆ ಸಲ್ಲಿಸುತ್ತಿದ್ದು ಇಂದು ತಾವು ಓದಿದ ಶಾಲೆಯನ್ನೇ ಮುಚ್ಚುವಂತ ದುಸ್ಥಿತಿ ಎದುರಿಸುತ್ತಿದ್ದಾರೆ. ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂದು ಈ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳಿವೆ. ಅಚ್ಚರಿ ಎಂದರೆ ಅವರಲ್ಲಿ ಅದೇ ಶಾಲೆಯ ಶಿಕ್ಷಕರ ಮಗ ಒಬ್ಬ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ವರ್ಷ ಓದುತ್ತಿದ್ದ ಎಂಟು ಮಕ್ಕಳಲ್ಲಿ ಇದೇ ಶಿಕ್ಷಕಿಯ ಮತ್ತೊಬ್ಬ ಮಗಳು ಓದುತ್ತಿದ್ದಳು. ಊರಿಗೆ ನಗರದ ಕಾನ್ವೆಂಟ್ ಒಂದರ ಬಸ್ ಬಂದು ಹೋಗುವ ಕಾರಣ ಮತ್ತು ತಮ್ಮ ಪೋಷಕರ ಒತ್ತಾಯದಿಂದ ಇಲ್ಲಿನ ಎಂಟು ಹತ್ತು ಮಕ್ಕಳು ಈ ಶಾಲೆ ತೊರೆದು ಕಾನ್ವೆಂಟ್ ಕಡೆ ಮುಖ ಮಾಡಿದ್ದಾರೆ.
ಹತ್ತಿರವೇ ಮತ್ತೊಂದು ಶಾಲೆ:ಈ ಗ್ರಾಮದ ಹತ್ತಿರವೇ ಇರುವ ಗೊಲ್ಲರಹಟ್ಟಿಯಲ್ಲಿ ಒಂದು ಶಾಲೆ ತೆರೆದ ಕಾರಣ ಅಲ್ಲಿಂದ ಬರುತ್ತಿದ್ದ ಮಕ್ಕಳು ಇಲ್ಲಿಗೆ ಬರದೇ ಇಂದು ಈ ಶಾಲೆ ಅಂತ್ಯ ಕಂಡು ಇತಿಹಾಸ ಸೇರುತ್ತಿದೆ. ಸರಕಾರದ ಅವೈಜ್ಞಾನಿಕ ನೀತಿಗಳು ಇಂತಹ ದುರಾವಸ್ಥೆಗೆ ನೇರ ಉದಾಹರಣೆಗಳು. ಅಲ್ಲಲ್ಲಿ ಹೊಸ ಶಾಲೆಗಳನ್ನು ತೆರೆದು ಹಳೆಯ ಶಾಲೆಗಳನ್ನು ಮುಚ್ಚುವ ಸಂಪ್ರದಾಯವನ್ನು ಪ್ರಜ್ಞಾವಂತ ನಾಗರೀಕರು ಹುಚ್ಚುತನ ಎಂದು ಹೇಳುತ್ತಿದ್ದಾರೆ. ಗ್ರಾಮಪಂಚಾಯಿತಿ ವ್ಯಾಪ್ತಿಗೆ ಕೇಂದ್ರಿಯ ವಿದ್ಯಾಲಯ ಮಾದರಿಯಲ್ಲಿ ಸಕಲ ಸೌಲಭ್ಯವಿರುವ ವ್ಯವಸ್ಥಿತ ಒಂದೋ ಎರಡೋ ಶಾಲೆಗಳನ್ನು ತೆರದರೆ ಇಂತಹ ದುರಾವಸ್ಥೆಗಳು ನಿಯಂತ್ರಣಗೊಳ್ಳಬಹುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
No comments:
Post a Comment