ಛಲವೊಂದೇ ಯಶಸ್ಸಿನ ಗುಟ್ಟು:ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಹಿರಿಯರ ನಾಣ್ಣುಡಿಯಂತೆ ಹೆಚ್ಚು ವಿದ್ಯೆ ಕಲಿಯದ ತಂದೆ, ಮಗ ಇಬ್ಬರೂ ಸೇರಿ ಇಲ್ಲಿ ತೀರಾ ಬೇಡಿಕೆಯಿರುವ ತೆಂಗಿನಕಾಯಿಯ ಸಿಪ್ಪೆ ತೆಗೆಯುವ ಯಂತ್ರವನ್ನು ಕಂಡು ಹಿಡಿದು ಅಚ್ಚರಿ ಮೂಡಿಸಿದ್ದಾರೆ.
ತಿಪಟೂರು ತಾಲೂಕಿನಲ್ಲಿರುವ ಸುಮಾರು ೫೦ಕ್ಕೂ ಹೆಚ್ಚು ತೆಂಗಿನ ಕಾಯಿ ಒಣ ಪುಡಿ ತಯಾರಿಕಾ ಘಟಕಗಳಿಗೆ ಕೆಲಸಗಾರರದ್ದೇ ತಲೇ ನೋವು. ಚೆನ್ನಾಗಿ ಕೆಲಸ ಮಾಡುವವರು ಕಾರ್ಖಾನೆ ಮಾಲೀಕರಿಂದ ಮುಂಗಡ ಪಡೆದು ಹೋದರೆ ಮತ್ತೆ ಅವರನ್ನು ಕರೆತಂದು ಕೆಲಸ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಕೈಗಾರಿಕೆಗಳಲ್ಲಿ ತೆಂಗಿನಕಾಯಿಯ ಒಳಭಾಗದ ಉಂಡೆಯ ಮೇಲಿನ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಕಷ್ಟದ ಕೆಲಸ. ಅದನ್ನು ಯಂತ್ರದಿಂದ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಕೆಲಸಗಾರರೇ ಮಾಡಬೇಕು. ಅವರು ಸಣ್ಣ ತಗಡಿನ ಸಾಧನದಿಂದ ಮೇಲಿನ ಸಿಪ್ಪೆ ಎರೆಯುತ್ತಾರೆ. ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಕಾಯಿ ತುರಿದುಹೋಗುತ್ತದೆ. ಮುಂದೆ ಇದು ಕೌಟಾಗಿ ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ.
ಕಾಯಿಯ ಮೇಲ್ಭಾಗದ ಚಿಪ್ಪು ತೆಗೆಯುವುದು ಮತ್ತು ಒಳಗಿರುವ ಉಂಡೆಯ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಮಾತ್ರ ಮಾನವ ಕೆಲಸಗಾರರರು ಮಾಡಬೇಕು ಉಳಿದಂತೆ ಎಲ್ಲಾ ಯಂತ್ರದಿಂದಲೇ ನಡೆಯುತ್ತದೆ. ಈಗ ಸಿಪ್ಪೆ ತೆಗೆಯುವುದಕ್ಕೂ ಒಂದು ಯಂತ್ರ ಕಂಡು ಹಿಡಿಯಲಾಗಿದೆ ಎಂಬ ವಿಚಾರ ತಿಳಿಯುತ್ತಿದಂತೆ ಕಾರ್ಖಾನೆಗಳ ಮಾಲೀಕರು ಆಶ್ಚರ್ಯದ ಜೊತೆಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಲ್ಲಿ ಓಡಾಡಿಕೊಂಡಿರುವ ಜಯರಾಂ ಎಂಬ ವ್ಯಕ್ತಿ ಎಲ್ಲರಿಗೂ ಪರಿಚಯ. ಆದರೆ ಅವರು ಯಾವುದೇ ಕೈಗಾರಿಕೆ ನಡೆಸದಿದ್ದರೂ ಆಗಾಗ ತಾಲೂಕಿನಲ್ಲೇ ಹೆಚ್ಚಾಗಿರುವ ತೆಂಗಿನ ಮತ್ತು ನಾರಿನ ಕೈಗಾರಿಕಗಳಿಗೆ ಬೇಟಿ ನೀಡುವುದು ಅಲ್ಲಿನ ಯಂತ್ರಗಳ ಕಾರ್ಯವೈಖರಿಯನ್ನು ನೋಡುವುದು, ಯಂತ್ರದ ಬಗ್ಗೆ ತಮ್ಮಲ್ಲೇ ಏನೋ ಲೆಕ್ಕಹಾಕುವುದು ಮಾಡುತ್ತಾ ತಿರುಗುತ್ತಾರೆ. ಹಾಗೆಯೇ ಜಿಲ್ಲೆ, ರಾಜ್ಯ ಅಲ್ಲದೇ ಹೊರ ರಾಜ್ಯಕ್ಕೂ ಆಗಾಗ ಹೋಗಿ ಬರುತ್ತಾರೆ. ತೆಂಗಿನ ಉತ್ಪನ್ನಗಳನ್ನು ಕಚ್ಚಾಪದಾರ್ಥವಾಗಿ ಉಪಯೋಗಿಸಲ್ಪಡುವ ನಾನಾ ಕೈಗಾರಿಕೆಗಳನ್ನು ಸುತ್ತಿಬಂದಿರುವ ಅವರು ಕೈಗಾರಿಕಾ ಘಟಕಗಳ ನಾನಾ ಸಮಸ್ಯೆಗಳನ್ನು ಪಟ್ಟಿಮಾಡಿಟ್ಟುಕೊಂಡಿದ್ದಾರೆ.
ಕೇವಲ ಏಳನೇ ತರಗತಿಯವರೆಗೆ ಮಾತ್ರ ಓದಿರುವ ಜಯರಾಂ ಕೈಗಾರಿಕೆಗಳ ಬಗ್ಗೆ ಅವರಲ್ಲಿರುವ ಜ್ಞಾನ ಒಂದು ಪ್ರಭಂಧ ಬರೆದು ಪಿಹೆಚ್‌ಡಿ ಮಾಡಬಹುದು. ಹಾಗಾಗಿ ಅವರು ತೆಂಗಿನ ನಾರಿನ ಕೈಗಾರಿಕೆಗಳಿಗೆ ಬರುವ ನಾನಾ ಸುಧಾರಿತ ಯಂತ್ರಗಳನ್ನು ಮಾಡಿಕೊಟ್ಟಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಪ್ರಭಲರಲ್ಲದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಏನನ್ನೂ ಮಾಡಲಾಗಿಲ್ಲ. ಆದರೆ ಇದೂವರೆಗೂ ನಾನಾ ಯಂತ್ರಗಳನ್ನು ಪ್ರಾಯೋಗಿಕವಾಗಿ ಮಾಡಲು ಲಕ್ಷಾಂತರ ರೂಗಳನ್ನು ಕಳೆದುಕೊಂಡಿರುವುದಂತೂ ಸತ್ಯ. ಇವರು ಸಂಶೋಧೀಸಿ ಮಾಡಿರುವ ಯಂತ್ರಗಳು ನಾನಾ ತೆಂಗಿನ ನಾರಿನ ಕೈಗಾರಿಕಾ ಘಟಕದಲ್ಲಿ ಈಗಲೂ ಯಶಸ್ವಿಯಾಗಿ ಚಾಲನೆಯಲ್ಲಿಯಂತೆ.
ತಂದೆಯ ನಡೆಯನ್ನೇ ಅನುಸರಿಸಿರುವ ಮಗ ಕೃಷ್ಣಮೂರ್ತಿ ಈ ಹೊಸ ಯಂತ್ರದ ಜನಕ. ಕೇವಲ ಎಸ್‌ಎಸ್‌ಎಲ್‌ಸಿಯನ್ನೂ ಪೂರ್ಣಗೊಳಿಸದ ಈತ ಈಗ ತೆಂಗಿನ ಕಾಯಿ ತುರಿ ಕೈಗಾರಿಕಾ ಘಟಕಗಳಿಗೆ ನಾನಾ ಮಾಧರಿಯ ಯಂತ್ರಗಳನ್ನು ತಯಾರಿಸಿಕೊಡುವ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ತಂದೆ, ಮಗನ ಬಳಿ ಯಾವ ತಾಂತ್ರಿಕತೆಯ ಪ್ರಮಾಣ ಪತ್ರವಾಗಲಿ ಅಥವಾ ಪಧವಿಯಾಗಲಿ ಇಲ್ಲದಿದ್ದರೂ ಅನುಭವ ಮಾತ್ರ ಅವರ ಉತ್ಸಾಹವನ್ನು ಹಿಮ್ಮಡಿಗೊಳಿಸಿ, ಸತತ ಪ್ರಯತ್ನಕ್ಕೆ ಅಣಿಗೊಳಿಸೆ. ಸ್ವಂತ ಖರ್ಚಿನಲ್ಲಿ ಹೊಸ ಹೊಸ ಯಂತ್ರಗಳನ್ನು ಕಂಡು ಹಿಡಿಯುವ ಇವರಿಗೆ ಇವರೇ ಮಾರ್ಗದರ್ಶಕರು ಮತ್ತು ಪ್ರೋತ್ಸಾಹಕರು.
ಸಿಪ್ಪೆ ತೆಗೆಯುವ ಯಂತ್ರ ಆವಿಷ್ಕಾರ:
ಮೇಲಿನ ಮಟ್ಟೆ ತೆಗೆದ ನಂತರ ಒಳಗೆ ಉಳಿಯುವ ಚಿಪ್ಪಿನಿಂದ ಆವರಿಸಿರುವ ತೆಂಗಿನಕಾಯಿಯನ್ನು ಕಾರ್ಖಾನೆಯಲ್ಲಿರುವ ನಿಪುಣ ಕೆಲಸಗಾರರು ಚೂಪಾದ ಸಣ್ಣ ಕೊಡಲಿಗಳಿಂದ ಗಟ್ಟಿಯಾದ ಚಿಪ್ಪನ್ನು ತೆಗೆದು ಹಾಕುತ್ತಾರೆ. ಪುನಃ ಕಂದು ಬಣ್ಣದ ತೆಳುವಾದ ಚಿಪ್ಪೆ ಕಾಯಿಯ ಉಂಡೆಯ ಮೇಲೆ ಉಳಿದಿರುತ್ತದೆ. ಕಾರ್ಖಾನೆಯ ಮಹಿಳಾ ಕೆಲಸಗಾರರು ಚೂಪಾದ ಚಾಕುವಿನಿಂದ ಅಥವಾ ಚೂಪಾದ ಬ್ಲೇಡ್‌ಯಿರುವ ಸಾಧನದಿಂದ ಉಂಡೆಯ ಮೇಲಿರುವ ಕಂದು ಬಣ್ಣದ ಸಿಪ್ಪೆಯನ್ನು ಎರೆದು ಬಿಳಿ ಉಂಡೆ ಮಾಡಿ ಅದನ್ನು ಪುಡಿ ಮಾಡುವ ಅಥವಾ ತುರಿಯುವ ಯಂತ್ರಕ್ಕೆ ಕೊಡುತ್ತಾರೆ.
ಆದರೆ ಹೀಗೆ ಚಿಪ್ಪು ತೆಗೆಯುವಾಗ ಕೆಲವೊಮ್ಮೆ ಉಂಡೆ ಸಲೀಸಾಗಿ ಬರದೆ ಚಿಪ್ಪಿಗೆ ಅಂಟಿಕೊಂಡ ಚೂರು ಬರುವುದು ಸಹಜ. ಅಂತಹ ಚೂರನ್ನು ಚಿಪ್ಪಿನಿಂದ ಬೇರ್ಪಡಿಸಿದರೂ ಮೇಲಿನ ಕಂದು ಬಣ್ಣದ ಸಿಪ್ಪೆಯನ್ನು ಕೈಯಿಂದ ತೆಗೆಯುವುದು ಅಷ್ಟು ಸುಲಭವಲ್ಲ. ತೆಗೆದರೂ ಸಮಯ ಹಿಡಿಯುವುದರಿಂದ ಇದರಿಂದ ಮಾಲೀಕರಿಗೆ ನಷ್ಟವೇ ಹೊರತು ಲಾಭವಿಲ್ಲ. ಹಾಗಾಗಿ ಅಂತಹ ಚೂರಿನ ಕಂದು ಸಿಪ್ಪೆ ತೆಗೆಸುವ ಗೋಜಿಗೆ ಹೋಗದೆ ಒಣಗಿಸಿ ಕೌಟು ಲೆಕ್ಕಕ್ಕೆ ಮಾರಾಟ ಮಾಡುತ್ತಾರೆ. ಈಗ ಅದನ್ನು ಸಹ ಈ ಹೊಸ ಯಂತ್ರದಿಂದ ತೆಗೆಯಬಹುದು
ಇಂತಹ ಪುಟ್ಟ ಯಂತ್ರವನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುತ್ತಿದ್ದಾರೆ. ಆ ಯಂತ್ರಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ತಮ್ಮ ತಂತ್ರಜ್ಞಾವನ್ನು ಯಾರೂ ಕದಿಯಲು ಸಾಧ್ಯವೇ ಇಲ್ಲ. ಎಲ್ಲಾ ಬಿಡಿ ಭಾಗಗಳನ್ನು ಬೆಂಗಳೂರಿನಲ್ಲಿ ತಯಾರಿಸಿ ತಂದು ಇಲ್ಲಿನ ವರ್ಕ್ ಶಾಪ್ ಒಂದರಲ್ಲಿ ಜೋಡಿಸುತ್ತೇವೆ ಎನ್ನುತ್ತಾರೆ ಕೃಷ್ಣಮೂರ್ತಿ. ಗಂಟೆಗೆ ೬೦ ಕಿಲೋ ಕಾಯಿ ಚೂರು ಸಿಪ್ಪೆ ಎರೆಯುವ ಇದರಿಂದ ಕಾರ್ಖಾನೆ ಮಾಲೀಕರಿಗೆ ತುಂಬಾ ಅನುಕೂಲವಾಗಿದೆ. ಚೂರನ್ನು ಒಣಗಿಸಿ ಕಡಿಮೆ ಬೆಲೆಗೆ ಕೌಟಿಗೆ ಮಾರುತ್ತಿದ್ದ ಅವರಿಗೆ ಆಗುತ್ತಿದ್ದ ನಷ್ಟವೂ ತಪ್ಪಿದೆ. ಇದರಿಂದ ಮಾಲೀಕರಿಗೆ ಕನಿಷ್ಠ ಕೆಜಿಗೆ ೫೦ ರೂಪಾಯಿ ಹೆಚ್ಚು ಹಣ ಸಿಗುತ್ತಿದೆ. ಹೆಚ್ಚು ಅನುಕೂಲವೂ ಆಗಿದೆ. ಪ್ರಾತ್ಯಕ್ಷಿತೆ ನೋಡಿದ ಮಾಲೀಕರಿಂದ ಯಂತ್ರಗಳಿಗೆ ಬೇಡಿಕೆಯೂ ಬರುತ್ತಿದೆ ಎಂದು ತಮ್ಮ ನೂತನ ಆವಿಷ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೃಷ್ಣಮೂರ್ತಿ(೯೬೩೨೯೧೫೫೪೧).
No comments:
Post a Comment