ಕಾನ್ವೆಂಟ್‌ಗಳ ಹಾವಳಿಗೆ ಸವಾಲು: ಖಾಸಗಿ ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿ ಮತ್ತು ಮಕ್ಕಳ ಕೊರತೆಯ ಕಾರಣದಿಂದ ಪ್ರತಿವರ್ಷ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವ ಆತಂಕದ ನಡುವೆಯೂ ತಿಪಟೂರು ತಾಲೂಕಿನ ಕೆಲವು ಸರಕಾರಿ ಶಾಲೆಗಳು ಕಾನ್ವೆಂಟ್‌ಗಳ ವ್ಯವಸ್ಥೆಗೆ ಸಡ್ಡು ಹೊಡೆದು ಪ್ರಗತಿಯತ್ತ ಸಾಗುತ್ತಿರುವುದು ಸಮಾಧಾನ ಉಂಟು ಮಾಡಿದೆ.
ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಕಳೆದ ವರ್ಷದಿಂದ ಸುಮಾರು ೧೦ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿದ್ದು ಖಾಸಗಿ ಕಾನ್ವೆಂಟ್‌ಗಳ ಅಬ್ಬರ ಮತ್ತು ಲಾಭಿಯಲ್ಲಿ ಸುಮಾರು ೯೫ ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ ಮತ್ತು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ತಾಲೂಕಿನ ಜಾಬಘಟ್ಟ, ಆಲೂರು, ಅಂಚೆಕೊಪ್ಪಲು, ಬಿದರೆಗುಡಿ, ತಿಮ್ಲಾಪುರ, ಕುರುಬರಹಳ್ಳಿ ಹಾಗೂ ನಗರದ ಕಂಚಾಘಟ್ಟ ಸೇರಿದಂತೆ ಹತ್ತಾರು ಶಾಲೆಗಳು ಇಂದಿಗೂ ಜನಮನದಿಂದ ದೂರ ಉಳಿದಿಲ್ಲ.
ಗ್ರಾಮಸ್ಥರ ವಿಶ್ವಾಸ ಗಳಿಸಿ ಶಾಲೆಯನ್ನು ಆಕರ್ಷಣೆಗೊಳಿಸಿರುವುದಲ್ಲದೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಕಾನ್ವೆಂಟ್ ವ್ಯವಸ್ಥೆಗೆ ಸವಾಲೆಸೆದಿರುವ ಶಾಲೆಗಳಲ್ಲಿ ಕುರುಬರಹಳ್ಳಿ ಪ್ರಾಥಮಿಕ ಪಾಠಶಾಲೆಯೂ ಒಂದು. ಶಿಕ್ಷಕರ ಸತತ ಪರಿಶ್ರಮ, ಗ್ರಾಮಸ್ಥರ ಸಹಕಾರದಿಂದ ಇಲ್ಲಿನ ಶೈಕ್ಷಣಿಲ ವಾತಾವರಣದ ಯಾವ ಇಂಗ್ಲೀಷ್ ಕಾನ್ವೆಂಟ್ ಶಾಲೆಗೂ ಕಡಿಮೆ ಇಲ್ಲ. ಇದೊಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದು ಉಳಿದ ಶಾಲೆಗಳಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.
ಪುಟ್ಟ ಗ್ರಾಮದಲ್ಲಿ ಮಾದರಿ ಶಾಲೆ:ನಗರಕ್ಕೆ ಸಮೀಪ ಇರುವ ಕುರುಬರಹಳ್ಳಿ ೧೨೦ ಮನೆಗಳಿರುವ ಪುಟ್ಟ ಗ್ರಾಮ. ಆದರೆ ಇಲ್ಲಿರುವ ಸರಕಾರಿ ಶಾಲೆಗೆ ಯಾರಾದರೂ ಹೊದರೆ ಅವರು ಮೊದಲು ಅಚ್ಚರಿ ಪಡುವುದು ಶಾಲಾ ವಾತವಾರಣ, ಮಕ್ಕಳ ಶಿಸ್ತು ಬದ್ಧ ಸಮವಸ್ತ್ರ ಮತ್ತು ನಡತೆ.
ಶಾಲೆಯ ಒಟ್ಟು ಮಕ್ಕಳ ಸಂಖ್ಯೆ ಈ ಬಾರಿ ೪೫ಕ್ಕೆ ಏರಿದೆ. ಗ್ರಾಮದಿಂದ ನಗರದ ಕಾನ್ವೆಂಟ್‌ಗಳಿಗೆ ಹೋಗುತ್ತಿದ್ದ ಹಲವಾರು ಮಕ್ಕಳು ಈ ಸರಕಾರಿ ಶಾಲೆಗಳ ಕಡೆ ಮುಖ ಮಾಡಿ, ಇಲ್ಲಿಯೇ ತಮ್ಮ ಕಲಿಕೆ ಆರಂಭಿಸಿವೆ. ನಗರಕ್ಕೆ ಹತ್ತಿರದಲ್ಲಿದ್ದು, ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿರುವ ಗ್ರಾಮದ ಮಕ್ಕಳು ಮತ್ತು ಪೋಷಕರು ಕಾನ್ವೆಂಟ್‌ಗಳ ಕಡೆ ಆಕರ್ಷಿತರಾಗದಂತೆ ನೋಡಿಕೊಳ್ಳುವಲ್ಲಿ ಈ ಶಾಲೆಯ ವ್ಯವಸ್ಥೆ ಯಶಸ್ವಿಯಾಗಿದೆ.
ಇಲ್ಲಿನ ಶಿಕ್ಷಕರ ಪ್ರಾಮಾಣಿಕತೆ, ಪ್ರಯೋಗಶೀಲತೆ, ಶ್ರಮದ ಫಲವಾಗಿ ಶಾಲೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು ಗ್ರಾಮದ ಸರಕಾರಿ ಶಾಲೆಯೇ ಉತ್ತಮ ಶಿಕ್ಷಣ ನೀಡುವಾಗ ನಮಗೇಕೆ ಕಾನ್ವೆಂಟ್‌ಗಳ ಉಸಾಬರಿ ಎನ್ನುವ ಗ್ರಾಮಸ್ಥರು ತಮ್ಮೂರಿನ ಶಾಲೆಯ ವಿಶಿಷ್ಟತೆ ಕಂಡು ಅಭಿಮಾನ ಮೆರೆದಿದ್ದಾರೆ. ಆರ್ಥಿಕವಾಗಿ ಅಷ್ಟು ಸಬರಲ್ಲದ ಗ್ರಾಮದಲ್ಲಿ ಕೆಲವು ಮಕ್ಕಳು ಬೇರೆ ಊರುಗಳಿಂದ ಬಂದವರಾಗಿದ್ದುಕೊಂಡು ಇಲ್ಲಿಯೇ ಅಜ್ಜಿ, ತಾತನ ಮನೆಯಲ್ಲಿದ್ದು ಓದುತ್ತಿದ್ದಾರೆ ಎನ್ನುವದು ಇಲಿನ ವಿಶೇಷ.
ಇಲ್ಲಿನ ಮಕ್ಕಳು ಕಾನ್ವೆಂಟ್ ಮಕ್ಕಳನ್ನೂ ಮೀರಿಸುವಂತೆ ಇಂಗ್ಲಿಷ್, ಸಾಮಾನ್ಯ ಜ್ಞಾನ ಸೇರಿದಂತೆ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಮಕ್ಕಳ ಪ್ರವೇಶ ಹೆಚ್ಚುತಿರುವ ಕಾರಣ ಶಿಕ್ಷಣ ಇಲಾಖೆ ಶಾಲೆಗೆ ಹೆಚ್ಚಿನ ನಿಗಾ ವಹಿಸಿದೆ. ಶಾಲೆಯ ಶಿಕ್ಷಕರಾದ ಎಸ್. ಚಿದಾನಂದಸ್ವಾಮಿ, ಪಂಚಾಕ್ಷರಿ ಮತ್ತು ಮೀನಾಕ್ಷಮ್ಮ ಸರಳ ಮತ್ತು ವಿಶಿಷ್ಟ ಬೋಧನೆ ಕ್ರಮದ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪಂಚಾಕ್ಷರಿ ಅವರು ತಾವೇ ಅನ್ವೇಷಿಸಿ ತಯಾರಿಸಿದ ಸೂತ್ರಗಳಿಂದ ಮಕ್ಕಳ ಸಾಮಾನ್ಯ ಜ್ಞಾನ ಮತ್ತು ಇಂಗ್ಲಿಷ್, ಗಣಿತ ಕಲಿಕೆ ಅಚ್ಚರಿ ಪಡುವಂತಿದೆ. ರಾಜ್ಯಗಳು, ಜಿಲ್ಲೆಗಳು, ನದಿಗಳು, ಪ್ರವಾಸಿ ಕ್ಷೇತ್ರಗಳು, ಸಮಾಜ ಸುಧಾರಕರು, ವಿಜ್ಞಾನಿಗಳು, ಸಚಿವರು, ಪಕ್ಷಿದಾಮ ಮತ್ತಿತರ ಮಾಹಿತಿಗಳನ್ನು ಮಕ್ಕಳು ಸುಲಭವಾಗಿ ಹೇಳುವಂತೆ ಸೂತ್ರದ ಮೂಲಕ ಕಲಿಸಲಾಗುತ್ತಿದೆ.
ಇಂಗ್ಲಿಷ್ ಕಲಿಕೆಗೂ ಇಂಥದ್ದೇ ಸೂತ್ರ ಅನುಸರಿಸಿದ್ದರಿಂದ ದಾಖಲಾಗಿ ಒಂದೇ ತಿಂಗಳಾಗಿರುವ ಒಂದನೇ ತರಗತಿ ಮಕ್ಕಳು ಕೂಡ ಅಕ್ಷರ, ರೈಮ್ಸ್‌ಗಳನ್ನು ಸುಲಭವಾಗಿ ಹೇಳುತ್ತಾರೆ. ೪ ಮತ್ತು ೫ನೇ ತರಗತಿ ಮಕ್ಕಳು ಇಂಗ್ಲಿಷ್‌ನಲ್ಲಿ ವಾಕ್ಯ ರಚಿಸುವಷ್ಟು ಕಲಿಕೆಯಲ್ಲಿದ್ದಾರೆ. ಇವೆಲ್ಲಾ ಕಾರಣದಿಂದ ಈ ಮಕ್ಕಳು ಎಲ್ಲದರಲ್ಲೂ ಕಾನ್ವೆಂಟ್‌ನವರಿಗಿಂತ ಮುಂದಿರುವುದರಿಂದ ಪೋಷಕರು ಸಹಜವಾಗಿ ಆಕರ್ಷಿಕರಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಶಾಲೆಯ ಸತ್ಕಾರ್ಯಗಳಿಗೆ ಕೈಜೋಡಿಸುತ್ತಾ ಬಂದಿದೆ. ತಾವು ಬೆಳೆದ ತರಕಾರಿಯಲ್ಲಿ ಸ್ವಲ್ಪ ಪಾಲನ್ನು ಶಾಲೆಯ ಬಿಸಿಯೂಟಕ್ಕೆ ನೀಡುವ ಪರಿಪಾಠ ಈ ಗ್ರಾಮಸ್ಥರಲ್ಲಿ ಬೆಳೆದಿದೆ. ಕೈತೋಟ, ಮರಗಿಡಗಳ ಉತ್ತಮ ಪರಿಸರವೂ ಇಲ್ಲಿದೆ. ಜನಮೆಚ್ಚಿದ ಶಿಕ್ಷಕ, ಅತ್ಯುತ್ತಮ ಶಾಲೆ, ಅತ್ಯುತ್ತಮ ಎಸ್‌ಡಿಎಂಸಿ ಮತ್ತಿತರ ಪ್ರಶಸ್ತಿ ಮತ್ತು ಪುರಸ್ಕಾರಗಳು ಈ ಶಾಲೆಗೆ ಹಾಗೂ ಶಿಕ್ಷಕರಿಗೆ ಲಭಿಸಿದ್ದು ಶಾಲೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಶಿಕ್ಷಣ ಇಲಾಖೆಯ ಸಮಾಧಾನ:ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಮತ್ತು ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿಯಿಂದ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಪುನಶ್ಚೇತನಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಬಿಇಒ ಮನಮೋಹನ್ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಸಾಕಷ್ಟು ಶಾಲೆಗಳನ್ನು ಮುಚ್ಚಿದ್ದು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿರುವ ಕಾರಣದಿಂದ ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗ್ರಾಮಸ್ಥರ ಸಹಕಾರದಲ್ಲಿ ಒಂದು ತಂಡ ರಚಿಸಿ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಗ್ರಾಮದಲ್ಲಿ ಪೋಷಕರ ಮನವೋಲಿಸುವ ಪ್ರಯತ್ನ ನಡೆಸಲಾಗಿದೆ.
ಜುಲೈ-೨೦ ವೀಶೇಷ ದಾಖಲಾತಿಯ ಅಂತಿಮ ದಿನವಾಗಿದ್ದು ಈಗಾಗಲೇ ತಂಡ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಪರಿಣಾಮವಾಗಿ ಮುಚಿರುವ ಶಾಲೆಗಳ ಪೈಕಿ ಅಯ್ಯನಪಾಳ್ಯ ಮತ್ತು ಕೆ.ಎಂ.ಗೊಲ್ಲರಹಟ್ಟಿ ಶಾಲೆಗಳನ್ನು ಪುನಃ ತೆರೆಯಲಾಗಿದೆ. ಮುಂದೆ ಕಾರೇಕುರ್ಚಿ, ಕೋಡಿಕೊಪ್ಪಲು, ಹುಚ್ಚಗೊಂಡನಹಳ್ಳಿ, ಹರಚನ ಹಳ್ಳಿ ಸೇರಿದಂತೆ ಇತರೆ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಯತ್ನಿಸಲಾಗುತಿದೆ ಎಂದಿದ್ದಾರೆ.
ಸರಕಾರಿ ಶಾಲೆಗಳು ಮುಚ್ಚದಂತೆ ಸಹಕಾರ ನೀಡುವುದರಲ್ಲಿ ಗ್ರಾಮಸ್ಥರ ಸಹಕಾರ ಅಮೂಲ್ಯವಾಗಿರುತ್ತದೆ. ಅದು ಆ ಊರಿಗೆ ಶೋಭೆ ಕೂಡ.
-ಕರೆ ಮಾಡಿ:೯೪೪೮೪೧೬೫೫೦
No comments:
Post a Comment