Thursday, August 2, 2012

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!




ತನ್ನ ಬದುಕಿನ ಉದ್ದಕ್ಕೂ ಕುಟುಂಬದಿಂದಲೇ ಮಾನಸಿಕ ಒತ್ತಡ, ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ಸವೆಸಿದ ತುಮಕುರು ಜಿಲ್ಲೆ, ತಿಪಟೂರು ತಾಲೂಕು ಅರಳುಗುಪ್ಪೆಯ ಆಶಾ (೨೬) ಕೊನೆಗೂ ಮನದಾಳದ ನೂರಾರು ಕನಸುಗಳನ್ನು ಹೊತ್ತುಕೊಂಡೇ ೨೦೧೨ರ ಜುಲೈ ೧೧ರಂದು ಕೊನೆ ಉಸಿರು ಎಳೆದು, ಈ ಲೋಕ ಬಿಟ್ಟು ಬಾರದ ಲೋಕಕ್ಕೆ ಹೋಗಿ ಬಿಟ್ಟಳು.

ತಿಪಟೂರು ತಾಲೂಕು ಅರಳುಗಪ್ಪೆ ವಾಸಿ ನಿವೃತ್ತ ಶಿಕ್ಷಕ ಪುಟ್ಟಶಾಮಯ್ಯನವರ ಕೊನೆ ಪತ್ರಿ ಆಶಾ ತನ್ನ ೨೧ರ ಹರೆಯದಲ್ಲಿ ತನ್ನ ಸಹಪಾಟಿ ಗೆಳೆತಿಯರಂತೆ ನೂರು ಕನಸು ಕಟ್ಟಿ ಪುಟಿಯುವ ಕಾಲದಲ್ಲೇ ಮನೆಯ ಮೂಲೆಯ ಕತ್ತಲೆಯ ಕೋಣೆಯಲ್ಲಿ ಯಾತನಮಯ ಜೀವನ ನಡೆಸುತ್ತಿದ್ದಳು. ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಮತ್ತು ವಿಕ ಸಹಕಾರದಿಂದ ಆಕೆಯನ್ನು ನರಕಕೂಪದಿಂದ ಬಿಡುಗಡೆಗೊಳಿಸಿ, ತಕ್ಷಣ ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ತಂದೆಯಿಂದ ಮಗಳ ಕತ್ತಲಕೊಣೆಯ ಬಂಧನ, ಮಾನಸಿಕ ಹಿಂಸೆ ಬಗ್ಗೆ ವಿಜಯಕರ್ನಾಟಕದಲ್ಲಿ ಸಮಗ್ರವಾಗಿ ವರದಿ ಮಾಡಿ ಬೆಳಕು ಚೆಲ್ಲಲಾಗಿತ್ತು.

ಸತತ ಐದು ವರ್ಷದ ವೈಧ್ಯಕೀಯ ಆರೈಕೆಯಲಿ ಮಾನಸಿಕ ಅನಾರೋಗ್ಯದಿಂದ ಹೊರಬಂದ ಆಶಾ ಕತ್ತಲ ಕೋಣೆಯಲ್ಲಿ ಅಂಟಿಕೊಂಡ ನಾನಾ ರೋಗಗಳಿಂದ ಹೊರ ಬರಲಾಗಲಿಲ್ಲ. ಎಂಟು ತಿಂಗಳ ನಿಮಾನ್ಸ್‌ನ ಚಿಕಿತ್ಸೆಯ ನಂತರ ಎರಡು ತಿಂಗಳು ಫಿಜಿಯೋಥೆರಪಿಗೆ ಒಳಪಡಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಬೆಂಗಳೂರಿನ ಫ್ರೀಡಂ ಫೌಂಡೇಶನ್ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿ, ಎರಡು ವರ್ಷಗಳ ಕಾಲ ಆರೈಕೆಯಲ್ಲಿಡಲಾಗಿತ್ತು. ಈ ಮಧ್ಯೆ ಆಕೆಯಲ್ಲಿ ಉಲ್ಪಣಗೊಳ್ಳುತ್ತಿದ್ದ ಕ್ಷಯ, ಅನಿಮಿಯಾ ಮತ್ತಿತರ ರೋಗಗಳ ಗುಣಪಡಿಸಲು ಹಾಸನ ಇತರೆ ಆಸ್ಪತ್ರೆಯ ತಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದುಷ್ಟವಶಾತ್ ಆಕೆ ತನ್ನ ಬರ್ಬರ ಬದುಕಿಗೆ ವಿದಾಯ ಹೇಳಿ ಬಿಟ್ಟಳು. ಅಷ್ಟು ವರ್ಷಗಳ ಕಾಲ ಆಕೆಯ ಜೀವ ಮತ್ತು ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಮಾನವೀಯ ವೈಧ್ಯರು ಹನಿ ಕಣ್ಣೀರು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬದುಕುವ ಉತ್ಕಟವಾದ ಆಸೆಯಿಟ್ಟುಕೊಂಡಿದ್ದ ಆಶಾ ೨೬ನೇ ವಯಸ್ಸಿನಲ್ಲಿ ತನ್ನ ಎಲ್ಲಾ ನೋವು, ವೇದನೆಗಳಿಗೆ ಅಂತ್ಯ ಹಾಡಿದ್ದು ಮಾತ್ರ ವಿಷಾಧನಿಯ. ಸಾವಿನ ಕಾಲದವರೆಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಕೆ ತನ್ನದಲ್ಲದ ತಪ್ಪಿಗೆ ಗುಣವಾಗದ ನಾನಾ ರೋಗಗಳ ಹಾವಳಿಗೆ ಹೆದರಿ ಬಸವಳಿದು ಸಾವನ್ನು ಅಪ್ಪಿಕೊಳ್ಳಬೇಕಾಗಿತ್ತು. ಜೀವನೋತ್ಸವದ ಯಾವ ಸುಖವನ್ನು ಕಾಣದ ಮುಗ್ದ ಹುಡುಗಿ ತಂದೆಯಿಂದ ಬಂದ ಬದುಕಿನ ಬರ್ಬರತೆಗೆ ಹೆದರಿ ತತ್ತರಿಸಿ ಹೋಗಿದ್ದಳು. ಕೊನೆಗೆ ಸಾವು ಮಾತ್ರ ಆಕೆಗೆ ಶಾಶ್ವತ ಸುಖನೀಡಿತ್ತು.

ಹಿನ್ನಲೆ:
೨೦೦೬ರಲ್ಲಿ ತಂದೆ ಪುಟ್ಟಶಾಮಯ್ಯ ಮಗಳು ಆಶಾಳನ್ನು ಅರಳುಗುಪ್ಪೆಯ ತನ್ನ ಮನೆಯ ಕೊಠಡಿಯೊಂದರಲ್ಲಿ ಬಂಧಿಸಿ, ಹೊರ ಪ್ರಪಂಚದಿಂದ ಬೇರೆ ಇಡುವ ಮೂಲಕ ತನ್ನ ಪೈಶಾಚಿಕ ವರ್ತನೆ ತೋರಿದ್ದ. ೨೦೦೭ರ ಮಾರ್ಚ್ ೧೪ರಂದು ಗ್ರಾಮದ ಎ.ಟಿ.ಪ್ರಸಾದ್ ಈ ವಿಷಯ ಬಯಲಾಗಿತ್ತು. ಮಾಹಿತಿ ಮೇರೆಗೆ ವಿಕ ವರದಿಗಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಎಸ್.ನಟರಾಜು ಅವರೊಂದಿಗೆ ಸ್ಥಳಕೆ ಬೇಟಿ ನೀಡಿ ಈ ಘೋರ ಘಟನೆಯನ್ನು ಬಯಲು ಮಾಡಿ, ಕತ್ತಲ ಕೋಣೆಯ ನರಕದಲ್ಲಿ ದುರ್ವಾಸನೆ ಬೀರುತ್ತಾ ಕೊಳೆಯುತ್ತಿದ್ದ ಆಶಾಳ ಬಿಡುಗಡೆಗೊಳಿಸಲಾಗಿತ್ತು.

ಸ್ಥಳದಲ್ಲಿ ಇದ್ದ ಎಸಿಡಿಪಿಒ ಸುಂದರಮ್ಮ, ಮೇಲ್ವಿಚಾರಕಿ ಪ್ರೇಮಾ, ಸ್ತ್ರಿಶಕ್ತಿ ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ತಕ್ಷಣ ಆಶಾಳನ್ನು ಸ್ವಚ್ಚಗೊಳಿಸಿ, ಬೆಂಗಳೂರಿನ ನಿಮಾನ್ಸ್‌ಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆಗೆ ಏರ್ಪಾಡು ಮಾಡಲಾಗಿತ್ತು. ಕೆಲವು ತಿಂಗಳ ನಂತರ ಅಲ್ಲಿ ಆಕೆಯ ಆರೋಗ್ಯ ಚೇತರಿಕೆ ಕಂಡು ಬಂದಿತ್ತು. ಒಬ್ಬಳೆ ಕೂರುವುದು, ಮಾತನಾಡುವುದು, ತಿರುಗಾಡುವುದು ಮತ್ತು ಪತ್ರಿಕೆಯನ್ನು ಓದುವುದು ಮಾಡುತ್ತಾ ಆರೋಗ್ಯ ಸುಧಾರಣೆ ಕಂಡು ಬಂದಿತ್ತು. ಆದರೆ ಆಕೆಯನ್ನು ವಿಧಿ ಬಿಡದೇ ಕರೆದೊಯ್ದು ಬಿಟ್ಟಿದ್ದಾನೆ. ಆಕೆಯ ಬದುಕಿಗಾಗಿ ಮಾಡಿದ ಎಲ್ಲರ ಶ್ರಮ ವ್ಯರ್ಥವಾಯಿತು.

ನತದೃಷ್ಟೆ ಆಶಾ ನರಕದ ಬಾಗಿಲಿಗೆ:
ಆಶಾಳ ತಂದೆ ಪಟ್ಟುಶಾಮಯ್ಯ ನಿವೃತ್ತ ಶಿಕ್ಷಕ. ಇವರೂ ಕಳೆದ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಗಳನ್ನು ಒಂದೂವರೆ ವರ್ಷದ ಕಾಲ ಕತ್ತಲ ಕೊಣೆಯಲ್ಲಿ ಕೂಡಿ ಹಾಕಿ ಆಕೆಯ ಬದುಕನ್ನು ನರಕವಾಗಿಸಿದ ಎಂಬ ಆರೋಪ ಹೊತ್ತುಕೊಂಡೇ ಅವರು ತನ್ನ ಬದುಕಿಗೂ ವಿದಾಯ ಹೇಳಿದ್ದರು. ತಾಯಿ ಜಯಲಕ್ಷ್ಮಮ್ಮ, ದೊಡ್ಡ ಅಕ್ಕ ರೂಪ, ಅಣ್ಣ ಶಿವು, ಎರಡನೇ ಅಣ್ಣ ರಾಜಣ್ಣ ಮತ್ತು ನಾಲ್ಕನೇ ಅಣ್ಣ ಮಧುಸೂಧನ್ ಕೊನೆಗೆ ಹುಟ್ಟಿದವಳೇ ನತದೃಷ್ಟೆ ಆಶಾ.

ಹತ್ತನೇ ತರಗತಿಯವರೆಗೂ ಚೆನ್ನಾಗಿ ಓದಿಕೊಂಡಿದ್ದ ಆಶಾ ಮನೆಯ ಪರಿಸ್ಥಿತಿಯನ್ನು ಸಹಜವಾಗಿ ತೆಗೆದುಕೊಂಡು ಸ್ಪುರದ್ರೂಪಿಯಾಗಿ ಬೆಳೆದವಳು. ನೋಡಲು ಅಂದವಾಗಿ ಮುದ್ದಾಗಿ ಕಾಣುತ್ತಿದ್ದ ಆಕೆ ಅಕ್ಕಪಕ್ಕದವರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಳು. ನಡತೆ ಮತ್ತು ಸ್ವಭಾದಲ್ಲಿಯೂ ಸರಳತೆ ಎದ್ದು ಕಾಣುತ್ತಿತ್ತು. ಆದರೆ ಇಡೀ ಕುಟುಂಬವನು ಕಾಡುತ್ತಿರುವ ವಿಧಿ ಈಕೆಯ ಬಾಳಿನಲ್ಲೂ ಅಪ್ಪನ ರೂಪದಲ್ಲಿ ೨೦೦೧ರಲಿಯೇ ಕಾಲಿಟ್ಟು ಬಿಟ್ಟಿದ್ದ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಆಕೆಯನ್ನು ೨೦೦೨, ೨೦೦೪ ಮತ್ತು ೨೦೦೬ರಲ್ಲಿ ಕೆಲವು ಕಾಲ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಗುಣಮುಖಳಾಗುತ್ತಿದ್ದ ಆಕೆ ಚೆನ್ನಾಗಿ ಓಡಾಡಿಕೊಂಡಿದ್ದಳು. ಆದರೆ ೨೦೦೬ ಆಗಸ್ಟ್ ನಂತರ ಆಕೆ ಎಲ್ಲಿಯೂ ಕಾಣಲಿಲ್ಲ. ಊರಿನವರು ಪುನಃ ನಿಮಾನ್ಸ್‌ಗೆ ಕರೆದುಕೊಂಡು ಹೋಗಿರಬೇಕು ಎಂದು ಸುಮ್ಮನಾಗಿದ್ದರು. ಆದರೆ ಆಕೆ ಆಗಲೇ ತಂದೆಯ ದೌರ್ಜನ್ಯಕ್ಕೆ ಬಲಿಯಾಗಿ, ಮನೆಯೆಂಬ ಜೈಲಿನ ಕತ್ತಲ ಕೋಣೆಯ ಖೈಧಿಯಾಗಿ ಹೊರಗಿನ ಲೋಕದ ಸಂಪರ್ಕ ಕಡಿದುಕೊಂಡು ನರಳುತ್ತಿದ್ದಳು. ಪುಟ್ಟಶಾಮಯ್ಯನವರಿಗೆ ಹೆದರಿ ತಾಯಿ ಮತ್ತು ಅಣ್ಣಂದಿರು ಯಾವುದೇ ಸಹಾಯ ಮಾಡದೇ ವೇದನೆ ಅನುಭವಿಸುತ್ತಿದ್ದರು.

ದಿನಗಳು, ತಿಂಗಳುಗಳು ಕಳೆದಂತೆ ಗಾಳಿ ಬೆಳಕಿನ ಸಂಪರ್ಕವಿಲ್ಲದೇ ಕತ್ತಲಕೊಣೆಯ ಬದುಕಿನಲ್ಲಿ ಜೀವನ ಚೈತನ್ಯ ಕಳೆದುಕೊಂಡ ಆಶಾ ರಕ್ತ ಮಾಂಸದ ಮುದ್ದೆಯಾಗಿದ್ದಳು. ಕುಳಿತ ಜಾಗದಲ್ಲಿ ಒಂದು ಸಣ್ಣ ಬೆಳಕಿನ ಕಿಂಡಿಯನ್ನೆ ನೋಡುತ್ತಾ ಕುಳಿತುಕೊಳ್ಳುವುದೇ ಆಕೆಗೆ ಒಲಿದು ಬಂದ ಭಾಗ್ಯವಾಗಿತ್ತು. ಹೊರಗೆ ಬರದಂತೆ ಮಲ ಮೂತ್ರವನ್ನೂ ಅಲ್ಲೆ ಮಾಡಿಕೊಳ್ಳುವ ದುಸ್ಥಿತಿ. ಅಂಡಮಾನ್ ಜೈಲಿನಲ್ಲಿ ಖೈದಿಗಳಿಗೆ ನೀಡುವಂತೆ ಒಂದು ಅಲ್ಯೂಮಿನಿಯಂ ತಟ್ಟೆಯಲ್ಲಿ ಯಾವಾಗಲೋ ಊಟ ತಿಂಡಿ ನೀರು ಬರುತ್ತಿತ್ತು. ಅದರ ಬಗ್ಗೆ ಆಸಕ್ತಿ ಕಳೆದುಕೊಂಡ ಆಕೆ ತನಗೆ ಬೇಕಾದಾಗ ತಿಂದು ಅಲ್ಲೇ ಇದ್ದ ಹಳೇಯ ಹರಿದ ಗೋಣಿಚೀಲದ ಮೇಲೆ ಮಲಗುತ್ತಿದ್ದಳು.

ಕುಳಿತಲ್ಲೇ ಬೆನ್ನು ಬಾಗಿ ಹೋಗಿತ್ತು. ಮೈಗೆ ನೀರು ಸೋಕದಿದ್ದರೂ ಮೈ ಬೆಳ್ಳಗೆ ಬಿಳಿಚಿಕೊಂಡಿತ್ತು. ಗೇಣುದ್ದದ ಉಗುರುಗಳು ಅವಳ ಬದುಕಿನ ಬರ್ಬರತೆಯನ್ನು ಸಾರುತ್ತಿದ್ದವು. ಕೋಣೆಯ ತುಂಬಾ ಮನಷ್ಯ ಮಾತ್ರದವರು ವಾಸಿಸದಷ್ಟು ದುರ್ವಾಸನೆ. ಯಾವಾಗಲೋ ಒಮ್ಮೆ ತಾಯಿ ಒಳಬಂದು ಹೊಲಸನ್ನು ತೆಗೆದು ಹಾಕುತ್ತಿದ್ದಳು. ನಂತರದ ದಿನಗಳಲ್ಲಿ ಬಾಗಿಲು ತೆರೆದರೂ ಹೊರಗೆ ಹೋಗದಷ್ಟು ನಿತ್ರಾಣಳಾದ ಆಶಾ ಹಾಗೆಯೇ ಬಾಗಿಕೊಂಡು ಚೀರುತ್ತಿದ್ದಳು. ಅವಳಿಗೆ ಆಗ ಹೊರಿಗಿನ ಬೆಳಕು ಕಂಡರೆ ಭಯ ಆವರಿಸಿಕೊಂಡು ಬಿಟ್ಟಿತ್ತು. ಕತ್ತಲೆಯ ಪ್ರಪಂಚ ಆಕೆಗೆ ಅಪ್ಯಾಯಮಾನವಾಗಿತ್ತು. ನಿಜಕ್ಕೂ ಯಾವುದೇ ದುಷ್ಟ ಹೃದಯದವರೂ ಕಂಡರೂ ಕರಗಿ ಕಣ್ಣೀರು ಹಾಕುವಂತ ದೃಶ್ಯ ಅದು. ಅಂತಹ ಯಾತನೆಯ ಬದುಕನ್ನು ಆಕೆ ಕಳೆದಿದ್ದು ಬರೋಬ್ಬರಿ ಒಂದೂವರೆ ವರ್ಷ. ಕೊನೆಗೊಮ್ಮೆ ಆಪದ್ಭಾಂದವರಂತೆ ಆಕೆಗೆ ಆಗ ಒಲಿದು ಬಂದವರು ಸಿಡಿಪಿಒ ಎಸ್.ನಟರಾಜು, ಸ್ಥಳೀಯ ಎ.ಟಿ.ಪ್ರಸಾದ್ ಮತ್ತು ವಿಕ ಪತ್ರಿಕೆ.


ಹೊರಗೆ ಬರುವ ಸಮಯದಲ್ಲಿ ಆಶಾ ಭಯದಿಂದ ತತ್ತರಿಸಿ ಚೀರುತ್ತಿದ್ದಳು. ಎಷ್ಟು ಸಮಾಧಾನ ಮಾಡಿದರೂ ತಿರುಗಿ ತಿರುಗಿ ತನ್ನ ಕೋಣೆಗೆ ಹೋಗುತ್ತಾ ತನ್ನ ಜಾಗದಲ್ಲಿ ಮುದುರಿಕೊಂಡು ಕೂರುತ್ತಿದ್ದಳು. ನಡುಗುತ್ತಿದ್ದಳು. ಎಸಿಡಿಪಿಒ ಸುಂದರಮ್ಮ, ಸಹಾಯಕಿ ಪ್ರೇಮಾ, ಸ್ಥಳೀಯ ಅಂಗನವಾಡಿ ಕಾಯಕರ್ತೆಯರು ಮತ್ತು ಸ್ತ್ರೀಶಕ್ತಿ ಮಹಿಳೆಯರು ಜೊತೆಗೆ ಆಕೆಯ ತಾಯಿ ಜಯಲಕ್ಷ್ಮಮ್ಮ ಸೇರಿಕೊಂಡು ಮೆಲ್ಲಗೇ ಮಾತಾಡಿಸಿ ದೈರ್ಯ ತುಂಬಿದರು. ತಕ್ಷಣ ಉಗುರು ಬೆಚ್ಚಗಿನ ಬಿಸಿ ನೀರು ಹಾಕಿ ಮೈ ತೊಳೆದರು. ಮೈ ಯಿಂದ ಹುಂಡೆ ಹುಂಡೆ ಗಾತ್ರದ ಕೊಳೆಯೂ ನೀರಿನಲ್ಲಿ ಹರಿದು ಹೋಯಿತು. ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಕರೆದುಕೊಂಡು ಬಿಟ್ಟಾಗ ಹಕ್ಕಿಯಂತೆ ದಾರಿ ತುಂಬಾ ನಡೆದಾಡಿದಳು ಆಶಾ. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ವತಂತ್ರ ಪಡೆದವಳಂತೆ ಇದ್ದ ಬದ್ದ ಶಕ್ತಿ ಉಪಯೋಗಿಸಿ, ಉತ್ಸಾಹ ತುಂಬಿಕೊಂಡು ನಗುತ್ತಿದ್ದಳು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಅಲ್ಲಿದ್ದ ಅಷ್ಟು ಮಂದಿಗೆ ಕಣ್ಣಿನಲ್ಲಿ ನೀರು ತೊಟ್ಟಿಕ್ಕಿದವು.

-

ನಿಮ್ಮ ಅನಿಸಿಕೆ ತಿಳಿಸಿ: ೯೪೪೮೪೧೬೫೫೦,

e-mಚಿiಟ:ಣiಠಿಣuಡಿಞಡಿishಟಿಚಿ_ಟಿeತಿs@ಥಿಚಿhoo.ಛಿo.iಟಿ













No comments:

Post a Comment