‘ಯಕನಾತಿ ಯಲ್ಲವ್ವಾ ಚೌಡ್ಕೆ ಚಾಮುಂಡೆವ್ವ, ರಕ್ಕಸರ ಸೊಕ್ಕ ಮುರಿದ ತಾಯೆ ಕೊಲ್ಲಾಪುರದವ್ವ, ಭಕುತೀಲಿ ಬಾಗುವೆ-ವರವನ್ನೇ ಬೇಡುವೆ, ಶಕುತೀಯ ಕೊಟ್ಟು ಕಾಪಾಡೆ, ತಾಯೆ....ಕಾಪಾಡೆ-
ವಂಶಪಾರಂಪರ‍್ಯವಾಗಿ ಬಂದ ಚೌಡಿಕೆ ಮೇಳದ ಕಲೆಯಲ್ಲೆ ತನ್ನ ಬದುಕನ್ನು ಕಂಡು ಕೊಂಡ ಯಲ್ಲಯ್ಯ ತನ್ನ ಶ್ರಮಕ್ಕೆ ತಿಚೋರಿ ತುಂಬುವಷ್ಟು ಪ್ರಶಸ್ತಿ ಮತ್ತು ಸನ್ಮಾನ ಪತ್ರ ಪಡೆದು ಹಳ್ಳಿಯಿಂದ ಡಿಲ್ಲಿಯವರೆಗೂ ಹೆಸರು ಮಾಡಿದ್ದರೂ ಸರಕಾರದ ಅವಕೃಪೆಗೆ ಒಳಗಾಗಿರುವುದು ವಿಷಾಧನೀಯ. ದರ್ಬಲ ಮತ್ತು ಆರ್ಥಿಕವಾಗಿ ಹಿನ್ನಡೆಯುಳ್ಳ ಎಂತಹ ಕಲಾವಿದರಾದರೂ ಇದೇ ಗತಿ.
ತಿಪಟೂರು ತಾಲೂಕಿನ ಬಜಗೂರು ಗ್ರಾಮ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಕಾರಣ ನಮ್ಮ ಚೌಡಿಕೆ ಮೇಳದ ಯಲ್ಲಯ್ಯ ಎಂಬುದನ್ನು ಜನ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಚೌಡಿಕೆ ಗುಡಿಕಟ್ಟಿನ ಬಡ ದಲಿತ ಕುಟುಂಬದಲ್ಲಿ ಜನಿಸಿದ ಬಜಗೂರಿನ ಚೌಡಿಕೆ ಯಲ್ಲಯ್ಯನಿಗೆ ಈಗ ೬೫, ಆದರೂ ಅವರು ಜಾನಪದ ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ.
ಮುತ್ತಜ್ಜ ದೊಡ್ಡಯಲ್ಲಯ್ಯ, ಅಜ್ಜ ರಾಮಯ್ಯ, ತಂದೆ ಪರಶುರಾಮಯ್ಯ ಎಲ್ಲರೂ ಚೌಡಿಕೆ ಕಲಾವಿದರೇ. ರೇಣುಕಾದೇವಿ ಆರಾಧಕರಾದ ಇವರ ಕುಟುಂಬದಲ್ಲಿ ಚೌಡಿಕೆ ಮೇಳ ಪಾರಂಪರಿಕವಾಗಿ ಬಂದಿದೆ. ಬಾಲ್ಯದಿಂದಲೂ ಚೌಡಿಕೆಯ ನಾದ, ಹಾಡು ಕೇಳುತ್ತಲೇ ಬೆಳೆದ ಯಲ್ಲಯ್ಯನಿಗೆ ಮುಂದೆ ಜೀವನೋಪಾಯದ ಜೊತೆಗೆ ಹೆಸರು ಮತ್ತು ಕೀರ್ತಿ ತಂದಿದ್ದು ಇದೇ ಕಲೆಯೇ. ಸಾಧನೆಯ ಆ ದಾರಿ ಯಶೋಗಾಥೆಯೇ ಸರಿ.
ಶ್ರದ್ಧಾಭಕ್ತಿಯ ಹಾಡಿನೊಂದಿಗೆ ಚೌಡಿಕೆ ಆರಂಭಿಸುವ ಯಲ್ಲಯ್ಯ ತನ್ನ ಬದುಕಿಗೂ ಸಹ ಈ ಜಾನಪದ ಪ್ರಕಾರದಿಂದ ಶಕ್ತಿ ತುಂಬಿಕೊಂಡು ಧನ್ಯತೆ ಕಂಡಿದ್ದಾರೆ. ರೇಡಿಯೋದಲ್ಲಿ ಯಾವಾಗಲಾದರೂ ಚೌಡಿಕೆ ಮೇಳ ಕೇಳಿದರೆ ಇದು ಬಜಗೂರು ಚೌಡಿಕೆ ಯಲ್ಲಯ್ಯನದೇ ಇರಬೇಕೆನ್ನುವಷ್ಟರ ಮಟ್ಟಿಗೆ ಅವರು ಆ ಜಾನಪದ ಪ್ರಕಾರದಲ್ಲಿ ಛಾಪು ಮೂಡಿಸಿದ ಅಪ್ರತಿಮ ಕಲಾವಿದ. ಜಾನಪದ ಪ್ರಕಾರಗಳು ಸೊರಗಿರುವ ಈ ಆಧುನಿಕ ಕಾಲದಲ್ಲೂ ಯಲ್ಲಯ್ಯನ ಮಕ್ಕಳಾದ ಜಗದೀಶ್, ಪ್ರಕಾಶ್, ಬಾಬು, ರವೀಶ್ ಅವರಲ್ಲಿ ಮೊದಲ ಮೂವರು ಅಪ್ಪನ ದಾರಿಯನ್ನೇ ತುಳಿದು ವಂಶದ ಕಲೆಯನ್ನು ಮುಂದುವರೆಸುತ್ತಿದ್ದಾರೆ. ಯಲ್ಲಯ್ಯ ಚೌಡಿಕೆ ಮೇಳ ಪ್ರದರ್ಶನಕ್ಕೆ ತನ್ನ ಮೂವರು ಮಕ್ಕಳನ್ನೇ ಜತೆಕಲಾವಿದರನ್ನಾಗಿ ಬಳಸಿಕೊಂಡು ಕಲಿಸಿ, ಕಲೆಗೆ ಗೌರವ ನೀಡುವ ಜೊತೆಗೆ ಅದರ ಸಂರಕ್ಷಣೆ, ಉಳಿವಿಗೆ ಕಾರಣರಾಗಿದ್ದಾರೆ.
ಬದುಕಿನ ಮಾರ್ಗ ಕಲೆ:
ಅಪರೂಪದ ಎನಿಸುವಂತ ಕಲಾವಿದರ ವಂಶಕ್ಕೆ ಬೆಳೆದು ತಿನ್ನಲು ಅಂಗೈಯಗಲ ಭೂಮಿ ಇಲ್ಲದಿರುವುದು ದುರದುಷ್ಟಕರ. ಹಿರಿಯರಿಂದ ಇಂದಿನ ಪೀಳಿಗೆಯವರೆಗೆ ಹೊಲಿದು ಬಂದದ್ದು ಚೌಡಿಕೆ ಮೇಳ ಮಾತ್ರ. ಇದೇ ಜೀವನ ಕೂಡ. ಸಂಪ್ರದಾಯ ಪ್ರಕಾರ ರೇಣುಕಾದೇವಿ ಭಕ್ತರ ಮನೆಗಳ ನಿಗದಿತ ಪೂಜೆ ನೆರವೇರಿಸುತ್ತಾ ವಾರ್ಷಿಕ ಪಡಿ ಆಧಾರದಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಕಾಲಕ್ರಮೇಣ ಕಲೆಯೇ ಕೈಹಿಡಿದಿದೆ.
ಅಂದಿನ ಬಡತನ ಮತ್ತು ಆರ್ಥಿಕ ದುಸ್ಥಿತಿ ಕಾರಣದಿಂದ ಯಲ್ಲಯ್ಯ ಕೂಲಿ ಮಠದಲ್ಲಿ ೩ನೇ ತರಗತಿ ಕಲಿತದ್ದೇ ಹೆಚ್ಚು. ಮುಂದೆ ತನ್ನ ಅನುಭವದಿಂದ ಕನ್ನಡ ಓದು ಬರಹ ಕಲಿತಿದ್ದಾರೆ. ಹಿರಿತಲೆಗಳಿಂದ ಬಂದ ಚೌಡಿಕೆ ಮೇಳಕ್ಕೆ ಮೌಖಿಕ ಸಾಹಿತ್ಯವೇ ಸಾಕೆಂದು ನಂಬಿದ ವ್ಯಕ್ತಿ ಅವರು. ಸುಮಾರು ೧೦ಕ್ಕೂ ಹೆಚ್ಚು ಕಥೆಗಳು ಇವರ ಸ್ಮೃತಿಪಟಲದಲ್ಲಿದ್ದು ಮೇಳಕ್ಕೆ ನಿಂತು ಪ್ರೇಕ್ಷಕರ ಬೇಡಿಕೆಯ ಕಥೆಯನ್ನು ನಿರಾಯಾಸವಾಗಿ ನಡೆಸಿಕೊಡುವ ಕೌಶಲ್ಯಗಳಿಸಿದ್ದಾರೆ. ಹಾಗಾಗಿ ಜಾನಪದ ವಿಧ್ವಾಂಸ ಪಿ.ಕೆ. ರಾಜಶೇಖರ್ ಅವರು ಯಲ್ಲಯ್ಯನಿಂದ ಹೊರ ಬಂದ ಕಥಾ ಸಾರವನ್ನು ‘ಚೌಡಿಕೆ ಕಾವ್ಯ ಪುಸ್ತಕದ ಮೂಲಕ ದಾಖಲಿಸಿದ್ದಾರೆ.
ಸಾಧನೆ ಮತ್ತು ಖ್ಯಾತಿ:
ಈವರೆಗೆ ಲೆಕ್ಕವಿಲ್ಲದಷ್ಟು ಪ್ರದರ್ಶನಗಳನ್ನು ಕೊಟ್ಟಿರುವ ಯಲ್ಲಯ್ಯನ ಕಲಾಸಾಮಾರ್ಥ್ಯದ ಎದುರಿಗೆ ಸಾಟಿ ಮಾಡುವವರೂ ಇಲ್ಲ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಯಲ್ಲಯ್ಯ ಪ್ರದರ್ಶನ ನೀಡಿ, ಮೆಚ್ಚಿಗೆ ಪಡೆದಿದ್ದಾರೆ. ೧೯೯೬ರಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ, ಕರ್ನಾಟಕ ಜಾನಪದ ಪರಿಷತ್, ಜಾನಪದ ಲೋಕದಿಂದ ಪ್ರದರ್ಶನಗಳನ್ನು ನೀಡಿದ್ದಾರೆ. ೧೯೯೭ರಲ್ಲಿ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಿ ಅಭಿನಂದನಾ ಪತ್ರ ಪಡೆದಿದ್ದಾರೆ. ನಾನಾ ಜಾನಪದ ಮೇಳಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡಿರುವುದು ಇವರ ಹೆಗ್ಗಳಿಕೆ. ದೂರದರ್ಶನದಲ್ಲಿ ಪ್ರಸಾರಗೊಂಡ ನಾಗೇಗೌಡರ ಜಾನಪದ ಸರಣಿ ‘ಸಿರಿಗಂಧದಲ್ಲಿ ಇವರ ಬಗ್ಗೆ ಬಿತ್ತರವಾಗಿದೆ. ಆಕಾಶವಾಣಿಯಲ್ಲಿ ಇವರ ಚೌಡಿಕೆ ಮೇಳ ಆಗಾಗ್ಗೆ ಬಿತ್ತರವಾಗುತ್ತಿದೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರ ದೀರ್ಘಾವಧಿಯ ಸಾಧನೆ ಗುರ್ತಿಸಿ ೨೦೦೫ರಲ್ಲಿ ಪ್ರಶಸ್ತಿ ನೀಡಿ, ಗೌರವಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳು ಸಿಕ್ಕಿವೆ. ಆದರೆ ನಾಡೋಜ ಗೌರವ ಪ್ರಶಸ್ತಿ ನೀಡುವ ಹಂಪಿ ವಿವಿಗಾಗಲಿ, ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗಾಗಲಿ ಈ ಜಾನಪದ ಪ್ರತಿಭೆ ಕಾಣದಿರುವುದು ವಿಷಾಧನೀಯ.
ಕಲಾಸೇವೆ ಮತ್ತು ಸಾಧನೆ ಬ್ಗಗೆ ಸಂತೃಪ್ತಿ ಹೊಂದಿರುವ ಯಲ್ಲಯ್ಯನಿಗೆ ಸರಕಾರದ ಧೋರಣೆ ಬಗ್ಗೆ ಬೇಸರ ಮತ್ತು ನೋವು ಇದೆ. ಕಂದಾಯ ಇಲಾಖೆಯಿಂದ ೧೯೬೮ರಲ್ಲಿ ಮಂಜೂರಾಗಿದ್ದ ೧.೩೪ ಎಕರೆ ಜಮೀನನ್ನು ಇವರ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳು ಪುಸ್ತಕ ಅಥವಾ ಸಿಡಿ ರೂಪದಲ್ಲಿ ದಾಖಲಾಗುತ್ತಿರುವ ಸಮಯದಲ್ಲಿ ಛಲತೊಟ್ಟು ಮುಂದಿನ ಪೀಳಿಗೆಗೆ ಉಳಿಸುವ ಈ ಕುಟುಂಬ ಆ ಕಲೆಗಾಗಿಯೇ ಜೀವನ ಮುಡುಪಿಟ್ಟಿದೆ. ಚೌಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವ ಕುಟುಂಬಕ್ಕೆ ಸರಕಾರ ಮತ್ತು ಸಮಾಜ ತಿರುಗಿ ನೋಡುವುದೇ ?. ಕಲಾವಿದಳ ಬಾಳು ಬೆಳಗುವುದೇ?
No comments:
Post a Comment