ತುಮಕೂರು ಜಿಲ್ಲೆಯಲ್ಲಿ ಕಲ್ಪತರು ನಾಡು ಎಂದೇ ಪ್ರಸಿದ್ಧವಾದ ತಿಪಟೂರು ತಾಲೂಕಿನ ಮಟ್ಟಿಗೆ ಒಬ್ಬ ಅಪರೂಪದ ಮತ್ತು ಮಾದರಿ ರಾಜಕಾರಣಿ ಎಂದರೆ ಅದು ಟಿ.ಜಿ.ತಿಮ್ಮೇಗೌಡರು ಮಾತ್ರ.
ಕಳೆದ ೬೦ ವರ್ಷದ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ರಾಜಕಾರಣಿಯನ್ನು ಜನತೆ ನೋಡೇ ಇಲ್ಲ. ಒಬ್ಬ ರಾಜಕಾರಣಿ ಹೇಗಿರಬೇಕು. ಅವನ ಕರ್ತವ್ಯ ಮತ್ತು ಸಮಾಜಕ್ಕೆ ಅವನ ಕೊಡುಗೆ ಏನು. ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು ಎಂಬ ನಾನಾ ಅಂಶಗಳಿಗೆ ಇಡೀ ರಾಜ್ಯಕ್ಕೆ ಮಾಜಿ ಶಾಸಕ ಟಿ.ಜಿ.ತಿಮೇಗೌಡರು ನಿಜಕ್ಕೂ ಇಂದು ಮಾದರಿ.
ರಾಜ್ಯ ವಿಧಾನ ಸಭೆಗೆ ೬೦ ವರ್ಷದ ಸಂಭ್ರಮ. ಹಾಗೆಯೇ ತಾಲೂಕಿನ ಮೊದಲ ಶಾಸಕ ೧೦೩ ವರ್ಷದ ಶತಾಯುಷಿ ಟಿ.ಜಿ.ತಿಮ್ಮೆಗೌಡರಿಗೂ ಸ್ವಾತಂತ್ರ್ಯದ ನಂತರ ತಾಲೂಕು ಆಡಳಿತದಲ್ಲಿ ಅಧಿಕಾರ ನಡೆಸಿದ ನೆನಪಿನ ೬೦ರ ಸಂಭ್ರಮ. ಇವರು ಇಂದಿನ ರಾಜಕಾರಣಿಗಳಿಗೆ ಮತ್ತು ಯುವಜನತೆಗೆ ಸ್ಪೂರ್ತಿ ಕೂಡ.
ವಿಧಾನ ಸಭೆಗೆ ೬೦ ವರ್ಷದ ತುಂಬಿರುವ ಕಾರಣ ಸರಕಾರ ಜೂನ್ ೧೮ರ ವೇಳೆಗೆ ಒಂದು ಸಮಾರಂಭ ಹಮ್ಮಿಕೊಂಡಿದ್ದು ಅಂದು ತಿಮ್ಮೇಗೌಡರನ್ನು ಗೌರವಿಸುವ ಏರ್ಪಾಡು ಮಾಡಿದೆ. ಹಾಗಾಗಿ ಅವರಿಗೆ ಗೌರವ ಸೂಚಕವಾಗಿ ಈ ಲೇಖನ.
ವಯಸ್ಸು ನೂರು ದಾಟಿದ್ದರೂ ಯುವಕರಂತೆ ಓಡಾಡಿಕೊಂಡಿರುವ ತಿಮ್ಮೇಗೌಡರು ಸ್ವಾತಂತ್ರ್ಯ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನ ಸಭೆಯ ತಾಲೂಕಿನ ಪ್ರಥಮ ಶಾಸಕರೂ ಆಗಿದ್ದಾರೆ. ೧೯೪೭ರಲ್ಲಿ ಮೈಸೂರು ರಾಜರ ಆಡಳಿತದ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ ೧೯೫೨ರವರೆಗೂ ಸೇವೆ ಮಾಡಿದ್ದ ಇವರು ೧೯೫೨ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು ೧೯೫೭ರವರೆಗೂ ಶಾಸಕರಾಗಿ ಕೆಲಸ ಮಾಡಿದ್ದಾರೆ. ನಂತರ ೧೯೫೭ರಲ್ಲಿ ನಡೆದ ಎರಡನೇ ವಿಧಾನ ಸಭಾ ಚುನಾವಣೆಯಲ್ಲಿ ಜಾತಿ ರಾಜಕಾರಣದಿಂದ ಎರಡನೇ ಬಾರಿಗೆ ಕಡಿಮೆ ಅಂತರದಿಂದ ಪರಾಭವಗೊಂಡ ಅವರು ಮತ್ತೆಂದೂ ಚುನಾವಣೆ ಕಡೆಗೆ ಮುಖ ಮಾಡಿಲ್ಲ.
ಹೆಚ್ಚು ಮಾತನಾಡದ ಯಾರಿಗೂ ತೊಂದರೆ ಕೊಡದ ತಿಮ್ಮೇಗೌಡರು ಇಂದು ತಾಲೂಕಿನಲ್ಲಿ ಪ್ರಾಮಾಣಿಕ ರಾಜಕಾರಣಿ, ಉತ್ತಮ ವರ್ತಕ, ಗೌರವಯುತ ಪತಿ, ಆದರ್ಶ ತಂದೆ, ಮಾದರಿ ತಾತಾ ಎನಿಸಿಕೊಂಡಿದ್ದು ತಮ್ಮ ಸಜ್ಜನಿಖೆ, ನಡೆ ನುಡಿಯಲ್ಲಿ ಉತ್ತಮ ಚಾರಿತ್ರ್ಯವನ್ನು ಗಳಿಸಿದ್ದಾರೆ. ಅಸೂಹೆ, ಅತೃಪ್ತಿ ಮತ್ತು ಸ್ವಾರ್ಥದ ಹತ್ತಿರವೂ ಸುಳಿಯದ ಅವರು ಸರಳವಾಗಿ ಗಾಂಧಿ ಮಾರ್ಗದಲ್ಲಿ ಬದುಕು ಸಾಗಿಸುತ್ತಾ ತೃಪ್ತಿ ಮತ್ತು ಸಂತೋಷ ಕಂಡವರು. ಇವರ ಸ್ವಂತ ಊರು ತಾಲೂಕಿನ ತಿಮ್ಲಾಪುರ ಗ್ರಾಮ, ತಂದೆ ಗಿರಿಗೌಡರ ಮೂವರು ಮಕ್ಕಳಲ್ಲಿ ಮೂರನೆವರು. ನಗರದ ಸಮೀಪದ ಗ್ರಾಮದ ಗೌರಮ್ಮ ಎಂಬುವರೊಂದಿಗೆ ವಿವಾಹವಾದ ಇವರಿಗೆ ೭ ಮಕ್ಕಳು, ೫ ಹೆಣ್ಣು, ೨ ಗಂಡು. ಗಂಡು ಮಕ್ಕಳಲ್ಲಿ ನಿರಂಜನ್ (ವರ್ತಕ) ಮತ್ತು ಕುಮಾರ್( ಕೃಷಿ) ಈಗ ೭ ಜನ ಮೊಮ್ಮಕ್ಕಳಿದ್ದು ತುಂಬೂ ಕುಟುಂಬ.
ದಿವಾನ್ ಮಾಧವರಾವ್ ಜೊತೆ ಸೇವೆ:
೧೯೪೭ರಿಂದ ೧೯೫೨ ರವರೆಗೆ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಅಂದು ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮತ್ತು ಮಾಧವರಾವ್ ಜೊತೆ ಕೆಲಸ ಮಾಡಿದ್ದಾರೆ.
ರಾಜ್ಯದ ಮೊದಲ ವಿಧಾನನಸಭೆಯ ಮುಖ್ಯಮಂತ್ರಿ ಕೆಂಗಲ್ ಹನಮಂತಯ್ಯ ಇದ್ದಾಗ ಇವರು ಅವರೊಂದಿಗೆ ಆತ್ಮೀಯವಾಗಿದ್ದರು. ವಿಧಾನ ಸೌಧದ ನಿರ್ಮಾಣಕ್ಕೆ ಶಾಸಕರಾಗಿದ್ದುಕೊಂಡು ಅವರ ಜೊತೆ ಕೈ ಜೋಡಿಸಿದ್ದರು. ನಂತರ ಮುಖ್ಯ ಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರು ತಿಮ್ಮೇಗೌಡರ ಮನಯ ಗೃಹಪ್ರವೇಶಕ್ಕೆ ಬಂದು ಹರಸಿದ್ದರು. ಅಂದಿನ ರಾಜಕೀಯ ಮುತ್ಸದ್ದಿ ನಿಜಲಿಂಗಪ್ಪ ಅವರೊಂದಿಗೆ ವಿಶ್ವಾಸ ಬೆಳೆಸಕೊಂಡಿದ್ದ ಅವರು ತಿಪಟೂರಿನಲ್ಲಿ ಸಾರ್ವಜುನಿಕ ಆಸ್ಪತ್ರೆ ಮತ್ತು ತಿಪಟೂರು ಹೊನ್ನವಳ್ಳಿಗೆ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮುಂಜೂರಾತಿ ಪಡೆದು ಚಾಲನೆ ಕೊಟ್ಟದ್ದರು.
ಕಡದಾಳು ಮಂಜಪ್ಪ, ನಿಜಲಿಂಗಪ್ಪ, ಡಾ.ಪಟ್ಟಾಭಿರಾಮಯ್ಯ, ಹೆಚ್.ಎಂ.ಚನ್ನಬಸಪ್ಪ, ವೀರಣ್ಣಗೌಡ, ಸಿದ್ದವೀರಪ್ಪ, ತಾಳಕೆರೆ ಸುಬ್ರಮಣ್ಯಂ ತಿಮ್ಮೇಗೌಡರ ಆತ್ಮೀಯರು ಜೊತೆಗೆ ತಿಪಟೂರಿನ ವಿಎಲ್‌ಶಿವಪ್ಪ, ಎಂ.ಆರ್.ರಂಗಪ್ಪ, ಎಂ.ಚನ್ನಬಸಪ್ಪ ಮತ್ತಿತರರು ಗೆಳೆಯರಾಗಿದ್ದುಕೊಂಡು ರಾಜಕಾರಣದಲ್ಲಿ ಸಹಕಾರ ನೀಡಿದ್ದರು.
೧೦೩ ವರ್ಷದ ಚಿರ ಯುವಕ:
ತಿಮ್ಮೇಗೌಡರಿಗೆ ೧೦೩ ವರ್ಷ ತುಂಬಿದ್ದರೂ ಯಾವುದೇ ಕಾಯಿಲೆ ಇಲ್ಲದೇ ಇಂದಿಗೂ ಆರೋಗ್ಯವಾಗಿದ್ದಾರೆ. ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರನ್ನೂ ಅವಲಂಬಿಸಿಲ್ಲ, ಎಲ್ಲಾ ಕೆಲಸವನ್ನೂ ಅವರೇ ಮಾಡಿಕೊಳ್ಳುತ್ತಾರೆ. ಕಣ್ಣು ಚೆನ್ನಾಗಿ ಕಾಣುತ್ತವೆ. ಈಗಲೂ ಮುದ್ದಾಗಿ ಬರೆಯುತ್ತಾರೆ. ಓದುತ್ತಾರೆ. ಚೆನ್ನಾಗಿ ಓಡಾಡುತ್ತಾರೆ, ಸದಾ ಆರೋಗ್ಯವಾಗಿರುವ ಅವರ ಆಯುಷ್ಯದ ಗುಟ್ಟು ಚೆನ್ನಾಗಿ ಊಟ ಮಾಡುವುದು ಮತ್ತು ನಿದ್ದೆ ಮಾಡುವುದು, ಶಾಂತ ಸ್ವಭಾವ, ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಗಾಧ ನೆನಪಿನ ಶಕ್ತಿ, ಸ್ವಚ್ಚತೆಗೆ ಹೆಚ್ಚು ಆಧ್ಯತೆ. ಇವರ ನಡತೆ ಮನೆಯವರ ಅಚ್ಚು ಮೆಚ್ಚು,
ಪ್ರಸ್ತುತ ರಾಜಕೀಯಕ್ಕೆ ಬೇಸರ:
ಸರಕಾರ ಜನರ ಸೇವೆಗಾಗಿ ಇರೋದು. ಈಗ ಸ್ವಾರ್ಥ ಮತ್ತು ಮೋಸದ ರಾಜಕಾರಣವೇ ವೈಭವೀಕರಿಸುತ್ತಿದೆ. ಹಿಂದೆ ಎಂದೂ ಕಾಣದಂತಹ ಕೆಟ್ಟ ರಾಜಕಾರಣದ ವಾತಾವರಣ ರಾಜ್ಯದಲ್ಲಿ ಕೇಳಿತ್ತಿದ್ದು ಮನನೊಂದಿದೆ. ಯಡಿಯೂರಪ್ಪ ಮಾಡ ಬಾರದನ್ನು ಮಾಡಿದರು. ಇನ್ನೂ ಮನಸ್ಸು ಪರಿವರ್ತನೆಯಾಗಿಲ್ಲ. ಜಾತಿ ರಾಜಕಾರಣ ಬೇಡ. ಇದು ಸಮಾಜಕ್ಕೆ ಮಾರಕ ಎಂಬ ತಮ್ಮ ಅಭಿಪ್ರಾಯವನ್ನು ತಿಮ್ಮೇಗೌಡರು ವ್ಯಕ್ತಪಡಿಸುತ್ತಾರೆ.
ಹಿಂದಿನ ಮತ್ತು ಇವತ್ತಿನ ಸರಕಾರದ ಆಡಳಿತ ವ್ಯವಸ್ಥೆ ವ್ಯತ್ಯಾಸ ಹೇಳಲು ಬರೋದಿಲ್ಲ. ಆಗ ಜನ ಸೇವೆಯೇ ಮುಖ್ಯವಾಗಿತ್ತು. ಜನರು ತಮ್ಮ ಪ್ರತಿನಿಧಿಗಳನ್ನು ಗೌರವವಾಗಿ ಕಾಣುತ್ತಿದ್ದರು. ಹಣ ಇತರೆ ಕೆಟ್ಟದನ್ನು ಬಯಸುತ್ತಿರಲಿಲ್ಲ. ಅಂದು ನಾನು ಚುನಾವಣೆಗೆ ಕೇವಲ ೨೫-೩೦ಸಾವಿರ ಖರ್ಚು ಮಾಡಿದ್ದೆ. ಅದು ಪ್ರಚಾರ, ಓಡಾಟಕ್ಕೆ ಮಾತ್ರ, ಜನರಿಗೆ ಒಂದಾಣಿ ಕೊಟ್ಟಿಲ್ಲ. ಈಗ ಕೋಟಿ ಗಟ್ಟಲೆ ಹಣ ಬೇಕು ಎಲ್ಲಿಂದ ತರೋದು. ಇದು ಭ್ರಷ್ಟಾಚಾರಕ್ಕೆ ನಾಂದಿ. ಜನರ ಮನಸ್ಥಿತಿ ಬದಲಾಗಬೇಕು ಎಂದು ಸಲಹೆ ನೀಡುತ್ತಾರೆ ಅವರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ. ಇದು ಅಪಾಯದ ಸಂಕೇತ. ಜನ ಕ್ಷಮಿಸಲ್ಲ, ಇಂದು ಸಮಾಜ ರಾಜಕಾರಣಿಗಳಿಂದ ಹೊಲಸಾಗಿದೆ. ಚುನಾವಣೆ ಮತ್ತು ಸಮಾರಂಭಗಳಿಗೆ ಅನೈತಿಕವಾಗಿ ಸಂಪಾದಿಸಿದ್ದ ದುಡ್ಡು ಚೆಲ್ಲುತ್ತಾರೆ, ನಂತರ ಲಂಚ ಪಡೆಯುತ್ತಾರೆ. ಇದು ವ್ಯಾಪಾರವಾಗಿದೆ. ಆದರ್ಶವಿಲ್ಲ ಮೌಲ್ಯಗಳಿಲ್ಲ. ಮೋಸವೇ ತುಂಬಿದೆ. ಇದು ಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಸೇವೆ:
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ವಿಧಾನ ಸೌಧ ನಿರ್ಮಾಣದಲಿ ಸಹಾಯ, ಅಂದಿನ ಮೈಸೂರು ರಾಜ್ಯದ ನಾನಾ ಪ್ರಮುಖ ಸಂಘಗಳ ಸದಸ್ಯರಾಗಿ ಸೇವೆ, ಅಂದಿನ ಮೈಸೂರು ಅಸೆಂಬ್ಲಿಯಿಂದ ಸತತ ೩ ಬಾರಿ ಹೌಸ್ ಕಮಿಟಿ ಸದಸ್ಯರಾಗಿ ಸೇವೆ. ಬೆಂಗಳೂರು ಇಂಜಿನಿಯರಿಂಗ್ ಇನ್ಸಿಟ್ಯೂಟ್ ಸದಸ್ಯರಾಗಿ ಎರಡು ವರ್ಷ ಸೇವೆ. ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಸದಸ್ಯರಾಗಿ ಸೇವೆ, ತುಮಕೂರು ಜಿಲ್ಲಾ ಬೋರ‍್ಡ್ ಸದಸ್ಯರಾಗಿ, ಡಿಸಿಸಿ ಬ್ಯಾಂಕ್ ಸದಸ್ಯರಾಗಿ ಹಾಗೂ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಂಟು ವರ್ಷದ ಸೇವೆ ಸಲ್ಲಿಸಿ ಹೆಸರು ಮಾಡಿದ್ದಾರೆ.
ಸವಲತ್ತುಗಳಿಂದ ವಂಚಿತರು:
ಮಾಜಿ ಶಾಸಕರ ವೇತನ ಬಿಟ್ಟರೆ ಬೇರೆ ಯಾವುದೇ ಸರಕಾರದಿಂದ ಬರುವ ಸವಲತ್ತುಗಳನ್ನು ಪಡೆಯುತ್ತಿಲ್ಲ.
ಸಂದೇಶ:
ಇಂದಿನ ಪೀಳಿಗೆ ಹಿರಿಯರಾದ ನಮ್ಮ ಮಾತು ಯಾರೂ ಕೇಳಲ್ಲ. ಹೊಸ ಜನರೇಷನ್ ಕಾಲ ಬದಲಾಗಿದೆ ಎನುತ್ತಾರೆ. ಆದರೂ ಒಂದು ಮಾತು ಹೇಳುತ್ತೇನೆ. ಬೇಡ ಹಣದ ವ್ಯಾಮೋಹ ಸರಿಯಲ್ಲ. ನಾನು ದಡ್ಡ ಶಾಸಕನಾಗಿದ್ದೆ. ಹಣ ಮಾಡಲಿಲ್ಲ. ಅಕ್ರಮ ಆಸ್ತಿ ಸಂಪಾದಿಸಲಿಲ್ಲ. ಆದರೆ ಭಗವಂತ ಕೋಟ್ಯಾಂತರ ಬೆಲೆ ಬಾಳುವ ಆಯುಷ್ಯ ಮತ್ತು ಆರೋಗ್ಯ ಕೊಟ್ಟ. ವ್ಯಾಪಾರ ಮಾಡಿದೆ, ಲಾಭ ಮತ್ತು ನಷ್ಟ ಎರಡೂ ಆಗಿದೆ. ಆದರೆ ನೆಮ್ಮದಿ ಹಾಳಾಗಿಲ್ಲ.
ಮುಂದಿನ ಯುವ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಚಾರ ದೇಶದಲ್ಲಿ ಬೇಡ. ಇದರ ವಿರುದ್ಧ ಹೋರಾಡುತ್ತಿರುವ ಅಣ್ಣಾಹಜಾರೆಗೆ ನನ್ನ ಬೆಂಬಲವಿದೆ. ಮನುಷ್ಯರ ನಡುವಿನ ಭಾವನೆ ಮತ್ತು ಸಂಬಂಧಗಳು ಅನ್ಯಾಯ, ಅಕ್ರಮ ಭ್ರಷಟಚಾರದಿಂದ ನಾಶವಾಗುತ್ತಿದೆ. ಇದು ಅಪಾಯ.
ಇಗಾಗಲೇ ನಾನಾ ಸಂಘ ಸಂಸ್ಥೆಗಳು ಅವರನ್ನು ಗುರ್ತಿಸಿ ಗೌರವಿಸಿವೆ. ರಾಜ್ಯ ವಿಧಾನ ಸಭೆಯ ೬೦ರ ಸಂಭ್ರಮಕ್ಕೆ ಶುಭ ಹಾರೈಸಿದ್ದಾರೆ. ರಾಜ್ಯದ ಜನತೆಗೆ ಆಶೀರ್ವಚಿಸಿ ಉತ್ತಮ ಮಳೆ ಬೆಳೆ ಬಂದು ಉತ್ತಮ ಸರಕಾರ ಜನರ ಪಾಲಿಗೆ ಬರಲಿ ಎಂದಿದ್ದಾರೆ.
ಸ್ವಾತಂತ್ರ್ಯದ ನಂತರ ರಚನೆಯಾದ ರಾಜ್ಯದ ಮೊದಲ ಶಾಸಕಾಂಗ ಸಭೆಯ ಶಾಸಕರು ಮತ್ತು ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರೊಂದಿಗೆ ತಿಪಟೂರಿನ ಅಂದಿನ ಶಾಸಕ ಟಿ.ಜಿ.ತಿಮ್ಮೇಗೌಡರು (ವಿಧಾನ ಸೌಧದ ಮುಂದೆ ತೆಗೆದ ಚಿತ್ರ ೧೯೫೬)
No comments:
Post a Comment