Wednesday, October 13, 2010

ತಿಪಟೂರು ಗಣಪತಿ

ತಿಪಟೂರು ಗಣಪತಿ
ಕಲ್ಪತರು ನಾಡೆಂದೇ ಸುಪ್ರಸಿದ್ದವಾದ ತಿಪಟೂರು ಗಣಪತಿ ಮತ್ತು ಕೊಬ್ಬರಿಗೆ ಪ್ರಖ್ಯಾತಿ. ಇಲ್ಲಿನ ಕೊಬ್ಬರಿಗೆ ರಾಷ್ಟ್ರದ್ಯಾದ್ಯಂತ ಮನ್ನಣೆಯಿದ್ದರೆ, ಗಣಪತಿ ಮಹೋತ್ಸವಕ್ಕೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.
ಬೆಂಗಳೂರು ಕರಗ, ಮೈಸೂರು ದಸರಾದಷ್ಟೇ ಇಲ್ಲಿನ ತಿಪಟೂರಿನ ಗಣಪತಿ ಉತ್ಸವ ವಿಶೇಷವಾಗಿದೆ. ನಗರದ ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಕಾರ್ಯಕರ್ತರು ಗಣೇಶ ಚತುರ್ಥಿಯಂದು ಶ್ರೀಗಳನ್ನು ಇಲ್ಲಿನ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿ ಸುಮಾರು ೭೫ರಿಂದ ೮೬ ದಿನಗಳವರೆಗೆ ಪೂಜಿಸುತ್ತಾರೆ. ಪ್ರತಿನಿತ್ಯಾ ನಿರಂತರವಾಗಿ ಹರಿಕಥೆ, ಸಂಗೀತಾ, ಯಕ್ಷಗಾನ, ಆರ್ಕೆಷ್ಟ್ರಾ, ನೃತ್ಯ ಹೀಗೇ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಈ ಅವಧಿಯಲ್ಲಿ ಸಾಂಸ್ಕೃತಿಕ ಹಬ್ಬವೇ ನಡೆಯುತ್ತದೆ.
ಸಮಿತಿಯೂ ನಾಡಿನ ಮೂಲೆ ಮೂಲೆಯಿಂದ ನಾನಾ ಪ್ರಸಿದ್ದ ಕಲಾವಿದರನ್ನು ಕರೆಸಿ ಪ್ರದರ್ಶನ ನೀಡಿ ಜನರಿಗೆ ಪರಿಚಯಿಸುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಕಲಾಶ್ರೀಮಂತಿಕೆಯನ್ನು ಮೆರೆಸುವ ವೇದಿಕೆಯಾಗಿಯೂ ಆಗಿದೆ. ನಿತ್ಯಾ ಇಲ್ಲಿ ನಡೆಯುವ ಅಭಿಷೇಕ, ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗ ವಿಶಿಷ್ಟವಾದದು. ಅಲ್ಲದೇ ವಾರಕ್ಕೊಮ್ಮೆ ವಿಶೇಷ ಪೂಜೆ, ಪ್ರದೂಷ ಪೂಜೆ, ಶ್ರೀಸಂಕಷ್ಟಹರ ಗಣಪತಿ ವ್ರತ, ಅಂಗಾರಕ ಸಂಕಷ್ಟಹರ ಗಣಪತಿ ವ್ರತ, ಸತ್ಯನಾರಾಯನ ಪೂಜಾ, ಸಹಸ್ರಮೋದಕ ಗಣಪತಿ ಹೋಮ ಹೀಗೆ ವಿಶೇಷ ಧಾರ್ಮಿಕ ಪೂಜಾ ವಿಧಾನಗಳು ನಿರಂತರವಾಗಿ ನಡೆಯುವ ಮೂಲಕ ಆಸ್ಥಿಕರನ್ನು ತನ್ನಡೆಗೆ ಸೆಳೆದಿದೆ.
ನಿತ್ಯಾ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆಗಾಗ ನಾಡಿನ ಹೆಸರಾಂತ ಕಲಾವಿದರು, ಕಲಾತಂಡಗಳ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಕಲಾರಸಿಕರ ತಣಿಸುವ ಏಕೈಕ ತಾಣ ಇದಾಗಿದೆ. ಸಂಗೀತಾ ರಸಮಂಜರಿ ಕಾರ್ಯಕ್ರಮ, ನಾಟಕ, ನೃತ್ಯ, ಅಭಿನಯ, ಜಾದೂ, ಮಿಮಿಕ್ರಿ, ಹಾಸ್ಯ ಸೇರಿದಂತೆ ನಾನಾ ವಿಶಿಷ್ಟ ಕಾರ್ಯಕ್ರಮಗಳು ಜರುಗುವುದರಿಂದ ಸುತ್ತಾಮುತ್ತಲ ತಾಲೂಕಿಗಳಿಂದ ಸಾವಿರಾರು ಜನರು ಆಕರ್ಷಿತರಾಗಿದ್ದಾರೆ. ಎಂ.ಎಸ್. ಸುಬ್ಬಲಕ್ಷ್ಮಿ, ಕೆ. ವೈದ್ಯನಾಥನ್, ಜೇಸುದಾಸ್, ಪಿ. ಕಾಳಿಂಗರಾವ್ ಮತ್ತಿತರ ಮಹಾನ್ ಕಲಾವಿದರು ಕಾರ್ಯಕ್ರಮ ನೀಡಿದ ಹೆಚ್ಚುಗಾರಿಕೆ ಇದೆ ಎಂದರೆ ತಪ್ಪಾಗಲಾರದು.
ಕೊನೆಯಲ್ಲಿ ಕಾರ್ಯಕ್ರಮಗಳ ಭರಾಟೆ ತೀವ್ರಗೊಳ್ಳುತ್ತೆ. ಮಹಾಮಂಗಳಾರತಿ, ಅನ್ನದಾನ, ವಿಸರ್ಜನಾ ಮಹೋತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ವಿಶೇಷಗಳಲ್ಲಿ ವಿಶೇಷ. ಮಹಾಮಂಗಳಾರತಿಯಲ್ಲಿ ನಗರದ ಎಲ್ಲಾ ಮಹಿಳೆಯರೂ ಭಯ ಭಕ್ಯಿಯಿಂದ ಪಾಲ್ಗೊಂಡರೆ ಸಿಡಿಮದ್ದು ಪ್ರದರ್ಶನ ಹಾಗೂ ಅನ್ನದಾನದಲ್ಲಿ ಲಿಂಗ ಬೇದ ಮತ್ತು ವರ್ಗ ಬೇದ ಮರೆತು ಎಲ್ಲರೂ ಸಾಮರಸ್ಯದಿಂದ ಭಾಗವಹಿಸುತ್ತಾರೆ. ವಿಸರ್ಜನಾ ಮಹೋತ್ಸವ ಎರಡು ಹಗಲು ಮತ್ತು ಒಂದು ರಾತ್ರಿ ನಡೆಯುತ್ತದೆ ಆಗ ಸುಮಾರು ೨೫ ಸಾವಿರಕ್ಕೂ ಅದಿಕ ಸಂಖ್ಯೆಯಲ್ಲಿ ಜನರು ಹಾಜರಿದ್ದು ಭಕ್ತಿ ಜೊತೆಗೆ ಮನರಂಜೆನಯನ್ನು ಪಡೆಯುತ್ತಾರೆ.
ವಿಸರ್ಜನಾ ಮಹೋತ್ಸವದ ಮುನ್ನ ದಿನ ನಡೆಯುವ ರಾತ್ರಿ ಉತ್ಸವ ನಿಜಕ್ಕೂ ಆಕರ್ಷಕ ಮತ್ತು ಮನರಂಜನಾತ್ಮಕವಾದುದು. ರಾತ್ರಿ ಪ್ರಸಿದ್ಧ ಕಂಪನಿಗಳು ಲಾರಿಗಳಲ್ಲಿ ದೀಪಾಲಂಕಾರದೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾರೆ. ನಂದಿಧ್ವಜ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ತಮಟೆ, ಕೇರಳದ ವಾದ್ಯ, ಕೋಲಾಟ ಸೇರಿದಂತೆ ನಾನಾ ಕಲಾತಂಡಗಳು ಇಡೀ ರಾತ್ರಿ ಆಯಾಸವಿಲ್ಲದಂತೆ ಸ್ಪರ್ದೆಯ ರೀತಿಯಲ್ಲಿ ಪ್ರದರ್ಶನ ನಿಡುತ್ತಾರೆ. ನಾಡಿನ ಮೂಲೆ ಮೂಲೆಯಿಂದ ಬರುವ ಭಕ್ತರು ಅಂದಿನ ರಾತ್ರಿ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಕಲಾಪ್ರದರ್ಶನಗಳ ಸವಿಯನ್ನು ಉಣ್ಣುತ್ತಾರೆ. ಯುವಕ ಯುವತಿಯರು ಕೈ ಕೈ ಹಿಡಿದು ಇಡೀ ನಗರದಲ್ಲೆಲ್ಲಾ ನಡೆಯುವ ಉತ್ಸವದಲ್ಲಿ ಆನಂದದಿಂದ ಭಾಗವಹಿಸುತ್ತಾರೆ. ಮಧ್ಯೆ ರಾತ್ರಿ ನಡೆಯುವ ವಿಶೇಷ ಆಕರ್ಷಕ ಸಿಡಿಮದ್ದಿನ ಬಾಣ, ಬಿರುಸು ಪ್ರದರ್ಶನ ನೋಡುವುದೇ ಒಂದು ಆನಂದ.
ತಿಪಟೂರಿನ ಗಣೇಶ ವಿಶೇಷ ಮತ್ತು ಹೆಚು ಆಕರ್ಷಕ. ಸುಮಾರು ಆರುಕ್ಕಾಲು (೬.೨೫)ಅಡಿಯ ಇಲ್ಲಿನ ಮೂರ್ತಿಯನ್ನು ವಿಶೇಷ ಭಾವ ಸಂಯೋಜನೆಯಲ್ಲಿ ಸಿದ್ಧಪಡಿಸಲಾಗುತ್ತದೆ. ಮೂರ್ತಿಯ ನೋಟ ವಿಶಿಷ್ಟವಾಗಿದ್ದು, ದರ್ಶನ ಮಾಡಿದವರಲ್ಲಿ ಭಕ್ತಿತೀವ್ರತೆ ಉಂಟು ಮಾಡುತ್ತದೆ. ಮೂರ್ತಿಯನ್ನು ಸತತ ೫೦ ವರ್ಷ ತಯಾರಿಸಿಕೊಟ್ಟ ಕೀರ್ತಿ ತಿಪಟೂರು ಸಮೀಪದ ಕೊಪ್ಪದ ನಂಜಪ್ಪ ಶೆಟ್ಟರಿಗೆ ಸಲ್ಲುತ್ತದೆ. ಅವರು ನಿಧನರಾದ ನಂತರ ಅವರ ತಮ್ಮನ ಮಗ ಯೋಗಾನಂದ್ ಸುಮಾರು ೨೨ ವರ್ಷದಿಂದ ಮೂರ್ತಿಯನ್ನು ಸಿದ್ಧಪಡಿಸಿಕೊಡುತ್ತಿದ್ದಾರೆ.

ಪ್ರತಿಷ್ಠಾಪನೆಗೊಂಡಂದಿನಿಂದ ೭೦-೮೦ ದಿನಗಳ ಕಾಲ ನಿರಂತರವಾಗಿ ತಿಪಟೂರು ಜನತೆಗೆ ಸಾಂಸ್ಕೃತಿಕ ರಸದೌತಣ ನೀಡುವ ಗಣಪತಿ ಮಹೋತ್ಸವ ಈ ರೀತಿಯಲ್ಲಿ ಸುಪ್ರಸಿದ್ಧವಾಗಿದೆ. ೧೯೩೦ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರು ರಾಷ್ಟ್ರ ಮಟ್ಟದಲ್ಲಿ ಗಣಪತಿ ಮಹೋತ್ಸವಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ತಿಪಟೂರಿನಲ್ಲೂ ಗಣಪತಿ ಪ್ರತಿಷ್ಠಾಪನೆ ಮತ್ತು ಉತ್ಸವ ಆಚರಣೆಗೆ ಬಂತು. ಅಂದು ಬೆಂಗಳೂರಿನ ತಿಮ್ಮಪ್ಪ ಎಂಬುವರು ಇಲ್ಲಿನ ದಿವಾನ್ ನರಸಿಂಹಯ್ಯನವರ ಛತ್ರದಲ್ಲಿ ಶ್ರೀಸತ್ಯಗಣಪತಿಯನ್ನು ಪ್ರತಿಷ್ಟಾಪಿಸಿ ಪೂಜೆ ಆರಂಭಿಸಿದ್ದರು. ಅಂದಿನಿಂದ ಇದೂವರೆಗೂ ಯಾವುದೇ ವಿಘ್ನವಿಲ್ಲದಂತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಇಂದು ತನ್ನ ಸ್ವಂತ ನೆಲದಲ್ಲಿ ಸುಮಾರು ೨ಕೋಟಿಯ ಆಸ್ತಿಯನ್ನು ಹೊಂದಿರುವ ಶ್ರೀಗಣಪತಿಯ ಯಶಸ್ವಿಗೆ ಕಾರಣ ಈಗಿನ ಟ್ರಸ್ಟ್.
ಹಲವು ಗಣ್ಯಮಾನ್ಯರ ಸಹಕಾರದಿಂದ ದಿ.ಬಿ.ಎಸ್.ಚಂದ್ರಶೇಖರಯ್ಯನವರ ನೇತೃತ್ವದಲ್ಲಿ ಬಲಗೊಂಡ ಶ್ರೀ ಸತ್ಯಗಣಪತಿ ಸೇವಾ ಸಂಘವನ್ನು ೧೯೭೬ರಲ್ಲಿ ಟ್ರಸ್ಟ್ ಆಗಿ ಪರಿವರ್ತಿಸಲಾಯಿತು. ಟ್ರಸ್ಟ್‌ನ ಸತತ ಪರಿಶ್ರಮದಿಂದ ಸಕಲ ಭಕ್ತರ ಸಹಕಾರದಿಂದ ಶಾಶ್ವತ ಭವ್ಯ ಆಸ್ಥಾನ ಮಂಟಪ ಮತ್ತು ಪ್ರತತಿಷ್ಠಾಪನೆಯ ನೆನಪಿಗಾಗಿ ಸುವರ್ಣ ಮಹೋತ್ಸವ ಭವನ ನಿರ್ಮಾಣಗೊಂಡವು. ಚಂದ್ರಶೇಖರಯ್ಯನವರ ನಿದನ ನಂತರ ಅವರ ಪುತ್ರ ಬಿ.ಸಿ. ರವಿಶಂಕರ್ ಅವರು ಟ್ರಸ್ಟ್ ಅಧ್ಯಕ್ಷರಾಗಿದ್ದು ಮೊದಲಿಗರು ಹಾಕಿಕೊಟ್ಟ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಧಾರ್ಮಿಕ ಸ್ಥಳವನ್ನು ಈಗ ಸಾಮಾಜಿಕ ಸೇವೆಗೂ ವಿಸ್ತರಿಸಿಕೊಂಡ ಟ್ರಸ್ಟ್ ತಾಲೂಕಿನ ಸಮಸ್ತರ ಪ್ರೀತಿ ಮತ್ತು ವಿಶ್ವಾಸದ ಕೇಂದ್ರವಾಗಿದೆ.
ಭಕ್ತರು ನೀಡುವ ದೇಣಿಗೆ ಹಾಗೂ ಹಿಂದಿನಿಂದ ನಿರಂರವಾಗಿ ನಡೆದುಕೊಂಡು ಬಂದ ಬಹುಮಾನ ಯೋಜನೆಯಿಂದ ಬಂದ ಹಣದಲ್ಲಿ ಶ್ರೀಗಣೇಶನಿಗಾಗಿ ಭವ್ಯ ಆಸ್ಥಾನ ಮಂಟಪ ಹಾಗೂ ಪಕ್ಕದಲ್ಲೇ ಸುವರ್ಣ ಮಹೋತ್ಸವ ಭವನ ನಿರ್ಮಾಣವಾಗಿದೆ. ಭವನವನ್ನು ಕಡಿಮೆ ದರದಲ್ಲಿ ಶುಭಕಾರ್ಯಗಳಿಗೆ ಭವನವನ್ನು ನೀಡುವುದರಿಂದ ಬರುವ ಆದಾಯದಿಂದ ಆದಾಯದಿಂದ ಪ್ರತಿ ತಿಂಗಳು ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. ಈವರೆಗೆ ೫೦೦೦ಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆದು ಧನ್ಯರೆನೆಸಿದ್ದಾರೆ. ಒಂದು ಧಾರ್ಮಿಕ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ಸಮಾಜದ ನಾನಾ ಆಯಾಮಗಳತ್ತ ಕೆಲಸಮಾಡುವಲ್ಲಿ ಪ್ರಮಾಣಿಕತೆ, ಶ್ರದ್ಧೆ ಹಾಗೂ ನಿಷ್ಠೆ ಅತ್ಯಗತ್ಯ ಎಂಬುದನ್ನು ಟ್ರಸ್ಟ್ ಮಾಡಿ ತೋರಿಸುವ ಮೂಲಕ ಮಾದರಿ ಎನಿಸಿದೆ.

No comments:

Post a Comment