Thursday, October 14, 2010

ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಸುದ್ದಿಯಾದವ.

ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಸುದ್ದಿಯಾದವ.

ತಿಪಟೂರು: ಜಗತ್ತಿನಲ್ಲಿ ಸುದ್ದಿಯಾಗಲು ಯಾರ‍್ಯರೋ ಏನೇನೋ ಮಾಡುತ್ತಾರೆ. ಆದರೆ ಇಲ್ಲಿ ಒಬ್ಬ ವಿಚಿತ್ರ ಆಸಾಮಿ ತಾನು ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಮೋಕ್ಷ ಬಯಸಿದ್ದವನು ಈಗ ತನ್ನ ಮನೆಯ ಗೃಹ ಪ್ರವೇಶಕ್ಕೆ ಯಾರನ್ನೂ ಕರೆಯದೇ ಮತ್ತೊಮ್ಮೆ ಸುದ್ದಿಯಾಗಿದ್ದಾನೆ.
ಮೊನ್ನೆ ನಡೆದ ವರಮಹಾಲಕ್ಷ್ಮಿ ಪೂಜೆಯ ದಿನ ಗೆಳೆಯರೊಬ್ಬರು ಫೋನ್ ಮಾಡಿ ನಮ್ಮ ತಿಮ್ಮಶೆಟ್ಟರು ಮತ್ತೊಂದು ಸುದ್ದಿ ಮಾಡುತ್ತಿದ್ದಾರೆ ಕುತೂಹಲವಿದ್ದರೆ ಬನ್ನಿ ಎಂದರು. ಮತ್ತೇನನ್ನೂ ಅವರು ಹೇಳಲಿಲ್ಲ. ತಕ್ಷಣ ಕ್ಯಾಮೆರಾ ಎತ್ತಿಕೊಂಡು ದೌಡಾಯಿಸಿದಾಗ ಅಲ್ಲೊಂದು ವಿಚಿತ್ರ ಪ್ರಸಂಗ ನಡೆಯುತ್ತಿತ್ತು.
ತಿಪಟೂರು ತಾಲೂಕಿನ ಕೊನೆಹಳ್ಳಿಯ ರೈಲ್ವೇ ನಿಲ್ದಾಣದ ಬಳಿ ಈ ತಿಮ್ಮಶೆಟ್ಟರ ಮನೆಯಿತ್ತು. ಮುಂಭಾಗದಲ್ಲಿ ಬೃಹತ್ ಭಂಗಲೆ ತರಹದ ಮನೆ ಅದರೊಳಗೊಂದು ದಿನಸಿ ಅಂಗಡಿ. ಹಿಂಬಾಗದಲ್ಲಿ ಸುಮಾರು ೨೫-೩೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆಕರ್ಷಕ ವಿನ್ಯಾಸದ ಮನೆಗಳು. ಅಲ್ಲಿ ಏನೋ ಶುಭಕಾರ್ಯ ನಡೆಯುತ್ತಿರುವ ಸೂಚನೆಗಳು ಕಂಡು ಬಂದಿತು. ಹತ್ತಿರ ಹೋದಾಗ ಅಲ್ಲಿ ತಿಮ್ಮಶೆಟ್ಟಿ ಮತ್ತು ಆತನ ಹೆಂಡತಿ ಜೊತೆಗೆ ಒಬ್ಬ ಪುರೋಹಿತ. ಅಷ್ಟೇ ಮತ್ಯಾರೂ ಇಲ್ಲ. ಸ್ವಾರಸ್ಯ ಅದಲ್ಲ ಅಷ್ಟೊಂದು ಹಣ ಖರ್ಚು ಮಾಡಿ ಮನೆ ಕಟ್ಟಿರುವ ತಿಮ್ಮಶೆಟ್ಟರು ಗೃಹಪ್ರವೇಶಕ್ಕೆ ಯಾರಿಗೂ ಹೇಳಿಲ್ಲವಂತೆ. ಕರೆಯುವುದೂ ಇಲ್ಲವಂತೆ. ಅಲ್ಲಿ ಗಂಡ ಹೆಂಡತಿ ಮತ್ತು ಪುರೋಹಿತ ಬಿಟ್ಟರೆ ಬೇರೆ ಯಾರೂ ಇಲ್ಲ. ಸುದ್ದಿಗಲ್ಲದಿದ್ದರೂ ಇರಲಿ ಎಂದು ಅವರ ಅನುಮತಿ ಮೇರೆಗೆ ಒಂದು ಪೋಟೋ ಕ್ಲಿಕ್ಕಿಸಿಕೊಂಡು ಮಾತನಾಡಿಸಿದಾಗ ಅವರು ಹೇಳಿದ ಕಥೆ ಕೇಳಿ ಹೈವೋಲ್ಟೇಜ್ ಕರೆಂಟ್ ಹೊಡೆದಷ್ಟು ಶಾಕ್ ಆಗಿದ್ದು ನಮಗೆ.
ಇಷ್ಟೊಂದು ಹಣ ಖರ್ಚು ಮಾಡಿ ಮನೆ ಕಟ್ಟಿರುವ ನೀವು, ಅಭಿವೃದ್ಧಿ ಮತ್ತು ಶಾಂತಿಗಾಗಿ ಗೃಹ ಪ್ರವೇಶದಲ್ಲಿ ಹತ್ತು ಜನಕ್ಕೆ ಅನ್ನ ಹಾಕಬೇಕಲ್ಲವೇ ಎಂದು ಕೇಳಿದ್ದಕ್ಕೆ ಆತ, ಅರೇ ನಾನು ನನ್ನ ತಿಥಿಯಲ್ಲಿ ಏಳು ಸಾವಿರ ಜನಕ್ಕೆ ಅನ್ನ ಹಾಕಿ ಇಡೀ ಊರಿಗೇ ಶಾಂತಿಮಾಡಿಸಿದ್ದೇನೆ. ಮತ್ತೇಕೆ ಊಟ, ಶಾಂತಿ ನೀವೆ ಹೇಳಿ ಎಂದು ಬಿಟ್ಟ.
ಆತ ಬಹಳ ಉತ್ಸಾಹದಿಂದ ದೊಡ್ಡ ಸಾಹಸ ಮಾಡಿದವನಂತೆ ನನ್ನ ತಿಥಿ ಎಂದಾಗ ಸಿಡಿಲು ಬಡಿದಂತಾಯಿತು. ಏನು ನಿಮ್ಮ ತಿಥಿಯೇ, ಅದು ಹೇಗೆ ಸಾಧ್ಯ. ಬದುಕಿದ್ದಾಗಲೇ ತಿಥಿ ಮಾಡಿಕೊಳ್ಳಬಹುದೇ. ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ಅವಕಾಶ ಉಂಟೇ. ಇದನ್ನು ನಾವು ಎಂದೂ ಕೇಳಿಲ್ಲ ಎಂದು ಬೆರಗಾಗಿ ಕೇಳಿದಾಗ, ಅವರು ತಾವು ಮಾಡಿಕೊಂಡ ಜೀವಂತ ತಿಥಿ ಕಾರ್ಯದ ಕಥೆಯನ್ನು ತಿಮ್ಮಶೆಟ್ಟರು ಬಿಚ್ಚಿಟ್ಟಿದ್ದು ಹೀಗೆ:

ನನಗೆ ಎರಡು ಹೆಂಡಿತಿಯರು. ಮೊದಲನೇ ಹೆಂಡತಿ ತೀರಿಕೊಂಡ ಮೇಲೆ ಎರಡನೇ ಹೆಂಡತಿ ಮದುವೆಯಾದೆ. ಮೊದಲನೇ ಹೆಂಡತಿಗೆ ನಾಲ್ಕು ಮಕ್ಕಳು. ಎರಡು ಗಂಡು, ಎರಡು ಹೆಣ್ಣು. ಈಗ ಅವರೆಲ್ಲಾ ಮದುವೆಯಾಗಿ ನನ್ನಿಂದ ದೂರ ಉಳಿದಿದ್ದಾರೆ. ಮನೆಗೆ ಯಾರೂ ಬರುವುದಿಲ್ಲ. ಎರಡನೇ ಹೆಂಡತಿಗೆ ಒಬ್ಬ ಮಗನಿದ್ದಾನೆ. ಆತ ಈಗ ಶಿವಮೊಗ್ಗದಲ್ಲಿ ಪಿ.ಯು.ಸಿ ಓದುತ್ತಿದ್ದಾನೆ. ಇಷ್ಟೊಂದು ಆಸ್ತಿ ನೋಡಿಕೊಂಡು ನಾನು ನನ್ನ ಹೆಂಡತಿ ಇಬ್ಬರೇ ವ್ಯಾಪಾರ ಮಾಡಿಕೊಂಡು ಸುಖವಾಗಿದ್ದೇವೆ ಎನ್ನುವ ತಿಮ್ಮಶೆಟ್ಟರು ತಮ್ಮ ಮತ್ತೊಂದು ಮುಖವನ್ನು ಬಯಲುಮಾಡುತ್ತಾರೆ.
ಬಹಳ ವರ್ಷಗಳ ಹಿಂದೆ ಬೆಳಗರಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಜೀವಂತ ತಿಥಿ ಮಾಡಿಕೊಂಡಿದ್ದರು. ಅಲ್ಲಿ ನಾನು ಊಟ ಮಾಡಿದ್ದೆ. ಆದರೆ ಅಂದಿನಿಂದ ಆರೀತಿ ನಾನೂ ತಿಥಿ ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿತ್ತು. ಅದು ಕಾಡೂತ್ತಲೂ ಇತ್ತು. ಆಗಾಗ ನನ್ನ ಸ್ನೇಹಿತರ ಬಳಿ ಜೀವಂತ ತಿಥಿ ಮಾಡಿಕೊಳ್ಳಬೇಕು ಎಂದು ಮನಸ್ಸಿನ ಹಿಂಗಿತ ಹೇಳುತ್ತಿದ್ದೆ. ಅದಕ್ಕೊಂದು ತಯಾರಿಯೂ ನಡೆಯುತ್ತಿತ್ತು ಎಂದು ಸಂಕೋಚವಿಲ್ಲದೇ ಹೇಳಿದ ಅವರಲ್ಲಿ ತಾನು ಮಾಡಿದ್ದು ಮಹತ್ಕಾರ್ಯ ಎನ್ನುವಂತಹ ಬಿಗುಮಾನವಿತ್ತು.

ತನ್ನದೇ ಯೋಚನೆಯಂತೆ, ತನಗೆನಿಸಿದಂತೆ ೨೦೦೪ರ ಮಾರ್ಚ್ ೭ನೇ ತಾರೀಕು ಭಾನುವಾರ ಜೀವಂತ ತಿಥಿಯನ್ನು ಮಾಡಿಕೊಳ್ಳಲು ನಿರ್ಧರಿಸಿ, ಅದರಂತೆ ಸಮಯ ಗೊತ್ತುಮಾಡಿಕೊಂಡು ಸಿದ್ಧತೆ ನಡೆಸಲಾಯಿತು. ಸುಮಾರು ೫೦೦೦ ಸಾವಿರ ತಿಥಿ ಕಾರ್ಡ್‌ಗಳನ್ನು ಮುದ್ರಿಸಿ ತಾಲೂಕಿನಾದ್ಯಂತ ಹಂಚಲಾಯಿತು. ನೆಂಟುರು, ಬಂದುಗಳು, ಗೆಳೆಯರು, ಸೇರಿದಂತೆ ಗಣ್ಯಾತೀಗಣ್ಯರಿಗೆ ಆಮಂತ್ರಿಸಲಾಯಿತು. ಮಕ್ಕಳು ಮುಜುಗರ ಪಟ್ಟರು, ಆದರೂ ತನ್ನ ಒತ್ತಡ ಮತ್ತು ಮನದ ಆಸೆಯಂತೆ ಅವರೇ ಮುಂದು ನಿಂತು ತಿಥಿ ಕಾರ್ಯಕ್ಕೆ ಸನ್ನದ್ಧರಾದರು.
ಸಮಾಧಿ ಪೂಜೆಗಾಗಿ ನಾಲ್ಕು ತಿಂಗಳ ಮುಂಚೆಯೇ ಬೆಂಗಳೂರು-ಹೊನ್ನಾವರದ ರಾ.ಹೆ.೨೦೬ರ ಪಕ್ಕದಲ್ಲೆ ಎರಡು ಗುಂಟೆ ಜಮೀನು ಖರೀದಿಸಲಾಯಿತು. ಅಲ್ಲಿ ಸುತ್ತಾ ಮುಳ್ಳುತಂತಿ ಹಾಕಲಾಯಿತು. ಉಳಿದಂತೆ ಎಲ್ಲವೂ ಸಿದ್ಧಗೊಂಡಿತು. ತಿಥಿ ದಿನ ಸಮಾಧಿ ಪೂಜೆ ಮಾಡಬೇಕಲ್ಲವೇ ಅದಕ್ಕೆ ಯಾರಿಗೂ ಅನುಮಾನ ಮತ್ತು ನಿರೀಕ್ಷೆ ಉಳಿಯದಂತೆ ಅಂದು ಭಾನುವಾರ ಮುಂಜಾನೆ ತನ್ನ ಕುಟುಂಬ ಸಮೇತ ಸಮಾಧಿ ಸ್ಥಳದ ಉದ್ಘಾಟನೆಯನ್ನೂ ಸಹ ನಾನೇ ಮಾಡಿದೆ. ಅಲ್ಲಿ ಕುಟುಂಬದವರು ಮತ್ತು ಬಂಧುಬಳಗದವರು ಸೇರಿಕೊಂಡು ಆರಾಧನೆ ಮಾಡಿದರು. ಬೆಳಿಗ್ಗೆ ೯ಗಂಟೆಯೊಳಗೆ ಹಿಂದೂ ಸಂಪ್ರದಾಯದಂತೆ ಗುಡ್ಡೆ ಶಾಸ್ತ್ರ ಮುಗಿಸಿ, ಯಾರಿಗೂ, ಯಾವ ಪ್ರಶ್ನೆಗೂ ಆವಕಾಶ ನೀಡದಂತೆ ಊಟದ ಕಾರ್ಯ ಆರಂಭಿಸಲಾಯಿತು.
ತಾಲೂಕಿನ ಆಗಿನ ಶಾಸಕ ಕೆ.ಷಡಕ್ಷರಿ, ಮಾಜಿಶಾಸಕ ಬಿ.ನಂಜಾಮರಿ ಸೇರಿದಂತೆ ತಾಲೂಕಿನ ನಾನಾ ಗಣಾತಿಗಣ್ಯರು ಜೀವಂತ ತಿಥಿ ಕಾರ್ಯದಲ್ಲಿ ಭಾಗವಹಿಸಿ, ತಿಥಿ ಊಟ ಉಂಡು ತಮ್ಮ ಮನಸ್ಸಿಗೆ ಬಂದಂತೆ ಹರಸಿದ್ದರು ಎಂದು ಹೇಳುವಾಗ ತಿಮ್ಮಶೆಟ್ಟರು ಆತ್ಮಸಂತೋಷದಿಂದ ಬೀಗುತ್ತಿದ್ದರು. (ಏನು ಹರಸಿದ್ದರು ಎಂಬುದು, ಭಾಗವಹಿಸಿದ್ದವರಿಗೆ ಗೊತ್ತು). ಯಾರ‍್ಯಾರಿಗೆ ಯಾವ ಯಾವ ತರಹದ ಊಟ ಬೇಕೋ ಅದನ್ನೇ ಮಾಡಿಸಿದ್ದೆ. ಬೃಹತ್ ಶಾಮಿಯಾನದೊಳಗೆ ಸಸ್ಯಹಾರದವರಿಗೆ ಸಸ್ಯಹಾರ, ಮಾಂಸಹಾರದವರಿಗೆ ಕೋಳಿ, ಕುರಿ ಮತ್ತು ಹಂದಿಮಾಂಸಹಾರದ ಹೀಗೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ವಿಶಾಲವಾದ ಪ್ರತ್ಯೇಕ ಶಾಮಿಯಾನದಡಿ ಸಾವಿರಾರು ಜನರು ತಿಥಿ ಊಟ ಮಾಡಿದರು. ಕೆಲವರು ಏನು ಜೀವಂತ ತಿಥಿ ಎಂದು ತಮ್ಮ ಕುತೂಹಲದಿಂದ ಬಂದು ನೋಡಿಕೊಂಡು ಹೋದರು. ಮತ್ತೆ ಕೆಲವರು ಮಾತನಾಡಿದಸಿದರು, ಮತ್ತೆ ಕೆಲವರು ಸಮಾಧಿ ಬಳಿ ಅಚ್ಚರಿಯಿಂದ ನೋಡಿ ಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮರು ಹತ್ತು ಸಾವಿರಕ್ಕೂ ಹೆಚ್ಚು ಜನರು ಜಾತ್ರೋಪಾದಿಯಲ್ಲಿ ಬಂದು ಹೋದರು ಆಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಜೀವನ ಪೂನೀತವಾಯಿತು, ಪುನರ್ಜನ್ಮ ಬಂದಂತಾಯಿತು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಯಿತು. ಆದರೆ ಮನದ ಬಯಕೆ ಈಡೇರಿತು ಎನ್ನುತ್ತಾರೆ ತಿಮ್ಮಶೆಟ್ಟಿ.

ಜೀವಂತ ತಿಥಿ ಜೊತೆಗೆ ತನ್ನ ಹೂಳುವ ಸ್ಮಶಾನವನ್ನೇ ಉದ್ಘಾಟಿಸಿದ್ದರು:
ತಾನು ಸತ್ತ ಮೇಲೆ ಮೊದಲು ತನ್ನನ್ನೇ ಹೂಳಬೇಕು ಎಂದು ತಿಮ್ಮಶೆಟ್ಟರು ಹೆದ್ದಾರಿ ಪಕ್ಕದಲ್ಲೇ ಎರಡು ಗುಂಟೆ ಜಮೀನು ಖರೀದಿಸಿ, ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದರು. ಅದನ್ನು ತನ್ನ ಜೀವಂತ ತಿಥಿದಿನವೇ ಸ್ವತಃ ಉದ್ಘಾಟಿಸಿದ್ದರು.
ಆದರೆ ಅವರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಅವರ ಅಣ್ಣನ ಮಗ ಸತ್ತಾಗ. ಆತ ಕಳೆದ ಒಂದು ವರ್ಷದ ಮುಂಚೆ ಬೈಕ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಆಗಾಗಿ ಅವರನ್ನು ತಿಮ್ಮಶೆಟ್ಟರ ಸ್ಮಶಾನದಲ್ಲೇ ಹೂಳ ಬೇಕಾಯಿತು. ಗ್ರಾಮದಲ್ಲಿ ತುಂಬಾ ಹಿರಿಯ ಎಂದರೆ ತಿಮ್ಮಶೆಟ್ಟರೇ. ಅವರ ಸಮಾಧಿಯೇ ಮೊದಲು ಆ ಸ್ಮಶಾನದಲ್ಲಿ ಆಗಬೇಕು ಎಂದು ಅವರು ಯೋಜನೆ ರೂಪಿಸಿದ್ದರು. ಆದರೆ ಅವರ ಲೆಕ್ಕಚಾರ ತಲೆಕೆಳಗಾದ ಕಾರಣ ಆ ಕೊರಗು ತಿಮ್ಮಶೆಟ್ಟರಲ್ಲಿ ಈಗಲೂ ಇದೆ. ತನ್ನ ಅಣ್ಣನ ಮಗ ಮೃತಪಟ್ಟಿದ್ದು ದುಃಖದ ತಂದಿದ್ದಲ್ಲದೇ ಆ ಹೊಸ ಸಮಾಧಿ ಸ್ಥಳದಲ್ಲಿ ವಾಸ್ತವಾಗಿ ಹಿರಿತನ ಕೈ ತಪ್ಪದ್ದಕ್ಕೆ ಬೇಸರವಿದೆ ಎನ್ನುತ್ತಾರೆ.

ನಿಮ್ಮ ಬಳಿ ಇಂತಹ ಸುದ್ದಿಗಳಿವೆಯೇ ಕಳುಹಿಸಿ ಕೊಡಿ.

No comments:

Post a Comment