Sunday, October 17, 2010

ಸದುಪಯೋಗವಾಗದ ತೆಂಗು "ಕಲ್ಪವೃಕ್ಷ ವಾದೀತೇ"

ತಿಪಟೂರು: ತಾಲೂಕಿನ ತೆಂಗಿನಕಾಯಿ ಒಣ ಪುಡಿ ಕೈಗಾರಿಕಾ ಘಟಕಗಳಿಂದ ಹೊರಚೆಲ್ಲುತ್ತಿರುವ ತಾಜ್ಯಗಳು ಜೀವಿಗಳ ಆರೋಗ್ಯಕ್ಕೆ  ಹಾನಿಕಾರಕವಾಗಿದ್ದು ಪರಿಸರಕ್ಕೆ ತೀವ್ರತರವಾದ ದಕ್ಕೆ ಉಂಟಾಗುತ್ತಿದೆ ಅಲ್ಲದೇ ನಾನಾ ಸಮಸ್ಯೆಗಳಿಗೆ ಎಡೆಮಾಡಿದೆ.
ತಿಪಟೂರು ನಗರ ಮತ್ತು ತಾಲೂಕಿನಲ್ಲಿ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣತುರಿ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದೊಂದು ಕೈಗಾರಿಕಾ ಘಟಕದಲ್ಲೂ ಪ್ರತಿನಿತ್ಯ ಕನಿಷ್ಟ ೧೦ ಸಾವಿರದಿಂದ ಒಂದು ಲಕ್ಷದವರೆಗೆ ತೆಂಗಿನಕಾಯಿಗಳನ್ನು ಒಡೆದು ಅದರಿಂದ ಒಣಪುಡಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಕಾಯಿಗಳನ್ನು ಹೊಡೆದಾಗ ಒಳಗಿನ ಕಾಯಿನೀರು ಹೊರಬರುತ್ತದೆ. ಇದನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಗೆ ನೀರನ್ನು ಬಳಸಲಾಗುತ್ತದೆ. ಕಾಯಿಯಿಂದ ಹೊರಬಂದ ನೀರು ಕೊಳೆತು, ಹುಳಿಯಾಗಿ ದುರ್ವಾಸನೆ ಬೀರಲು ಆರಂಭಿಸುತ್ತದೆ. ಈ ರೀತಿಯಿಂದ ಒಂದೊಂದು ಕೈಗಾರಿಕಾ ಘಟಕದಿಂದ ನಿತ್ಯಾ ಸುಮಾರು ೧೦ಸಾವಿರ ಲೀಟರ್‌ನಿಂದ ೧ಲಕ್ಷ ಲೀಟರ್‌ನಷ್ಟು ಕೊಳೆತ, ದುರ್ವಾಸನೆಯುಕ್ತ ಪರಸರಕ್ಕೆ ಹಾನಿಕಾರಕವಾದ ಮಲೀನ ನೀರು ಹೊರ ಹರಿಯುತ್ತದೆ.
ನಗರದ ಮಧ್ಯೆಯಿರುವ ಕೈಗಾರಿಕಾ ಘಟಕಗಳು ಚರಂಡಿ ಮೂಲಕ ಹೊರಗೆ ಹರಿಯ ಬಿಡುತ್ತಿದ್ದಾರೆ. ನಗರ ಪ್ರದೇಶದಿಂದ ದೂರವಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ಘಟಕಗಳು ಹತ್ತಿರವೇ ಗುಂಡಿ ನಿರ್ಮಿಸಿ ಸಂಗ್ರಹಿಸುತ್ತಿದ್ದರೆ ಕೆಲವರು ಬೇರೆಯವರ ತೋಟ, ಹೊಲಗಳಿಗೆ ಅಥವಾ ಸರಕಾರಿ ಪ್ರದೇಶಗಳಿಗೆ ಹರಿಯ ಬಿಡುತ್ತಿದ್ದಾರೆ. ನಗರದಲ್ಲಿ ಚರಂಡಿಗಳ ಮೂಲಕ ಹರಿಯುವ ಕೊಳೆತ ಕಾಯಿನೀರಿನ ಕೆಟ್ಟ ವಾಸನೆಯಿಂದ ಸಾರ್ವಜನಕರಿಗೆ ನಾನಾ ರೀತಿಯ ತೊಂದರೆ ಜೊತೆಗೆ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗುತ್ತಿದೆ. ನಗರದ ಹೊರ ವಲಯ ಮತ್ತು ಗ್ರಾಮೀಣ ಪ್ರದೇಶಲ್ಲಿರುವ ಕೈಗಾರಿಕಾ ಘಟಕಗಳಿಂದ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ರೈತರ ತೆಂಗು, ರಾಗಿ ಇತರೆ ಬೆಳೆಗಳು ಹಾಳಾಗುತ್ತಿವೆ. ಮಳೆ ಬಂದಾಗ ಈ ಮಲೀನ ನೀರು ಹರಿದು ಕೆರೆ ಕಟ್ಟೆ ಹಾಗೂ ತಗ್ಗು ಪ್ರದೇಶ ಸೇರುವುದರಿಂದ ಅಲ್ಲಿನ ನೀರು ಮಲೀನಗೊಂಡು ಪ್ರಾಣಿ, ಪಕ್ಷಿಗಳು ಕುಡಿಯಲು ಯೋಗ್ಯವಾಗುವುದಿಲ್ಲ.
ಪ್ರತಿಯೊಂದು ಕೈಗಾರಿಕಾ ಘಟಕದ ಬಳಿಯೂ ಈ ರೀತಿ ನೀರು ನಿಂತು ಪರಿಸರಕ್ಕೆ ನಾನಾ ರೀತಿಯಲ್ಲಿ ದಕ್ಕೆ ಆಗುತ್ತಿದೆ. ನಿಂತ ನೀರಿನಲ್ಲಿ ಸೊಳ್ಳೆ, ನೊಣಗಳ ಹಾವಳಿ ತೀವ್ರಗೊಂಡು ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಸೇರಿದಂತೆ ನಾನಾ ರೋಗಗಳು ಉಂಟಾಗಲು ಕಾರಣವಾಗಿದೆ. ಘಟಕಗಳಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಮಾಲೀಕರು ವಿಫಲವಾಗಿದ್ದು ನಾನಾ ರೋಗಗಳ ಆವಾಸ ಸ್ಥಾನವಾಗಿದೆ. ಕಾಯಿ ನೀರಿನಲ್ಲಿ ಎಣ್ಣೆ ಮತ್ತು ಆಸಿಡ್‌ನಂತಹ ಅಂಶವಿರುವುದರಿಂದ ಈ ನೀರು ಹರಿದ ಪ್ರದೇಶವೆಲ್ಲಾ ಕಪ್ಪುಬಣ್ಣಕ್ಕೆ ತಿರುಗಿ ಸುಟ್ಟಂತಾಗುತ್ತದೆ. ಕೆಟ್ಟ ನೀರಿನ ದುರ್ವಾಸನೆ ಸುಮಾರು ಒಂದು ಕಿ.ಮಿ.ವರೆಗೂ ಹರಡುವುದರಿಂದ ಸ್ವಾಸ್ಥ ಪರಿಸರದ ಮೇಲೆ ದುಷ್ಪರಿಣಾಮವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಂತೆ ಇಂತಹ ಅಪಾಯಕಾರಿ ನೀರನ್ನು ಶುದ್ಧಿಕರಿಸಿ, ಸಂಸ್ಕರಿಸಿ ಹೊರ ಬಿಡಬೇಕಾಗಿದೆ. ಆದರೆ ಕೈಗಾರಿಕಾ ಘಟಕದ ಮಾಲೀಕರು ಇಂತಹ ಯಾವ ಪ್ರಯತ್ನವನ್ನು ಮಾಡದೇ ಮಂಡಳಿಯ ನಿಯಮ ಹಾಗೂ ಸ್ಥಳೀಯ ಸಂಸ್ಥೆಗಳ ನಿಬಂಧನೆಗಳನ್ನು ನಿರ್ಲಕ್ಷಿಸಿದ್ದಾರೆ.
ನಗರದ ರಂಗಾಪುರರಸ್ತೆ, ಕೆರಗೋಡಿರಸ್ತೆ, ಯಡಿಯೂರುರಸ್ತೆ, ಹಾಲ್ಕುರಿಕೆ ರಸ್ತೆ ಹಾಗೂ ಹಳೇಪಾಳ್ಯಗಳಲ್ಲಿ ಇಂತಹ ಮಾಲಿನ್ಯಯುಕ್ತ ಕೈಗಾರಿಕಾ ಘಟಕಗಳು ಹೆಚ್ಚುತ್ತಿವೆ. ಹಾಲ್ಕುರಿಕೆ ರಸ್ತೆಯಲ್ಲಿ ಒಂದೇ ಪ್ರದೇಶದಲ್ಲಿ ಸುಮಾರು ೧೨ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ಪರ್ಧೆಯ ರೀತಿಯಲ್ಲಿ ಆರಂಭಗೊಳ್ಳುತ್ತಿವೆ. ಈ ಘಟಕಗಳು ಹೊರ ಚೆಲ್ಲುವ ತಾಜ್ಯ ನೀರಿನಿಂದ ಸುತ್ತಾಮುತ್ತಲ ಪರಿಸರ ಹಾಳಾಗುತ್ತಿದೆ. ಕೆಲವರು ಸರಕಾರದ ಸಹಾಯಧನ ವಂಚಿಸಲು ಎರಡು ಮೂರು ಘಟಕಗಳನ್ನು ತೆರೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆ ನಗರಸಭೆಯೂ ಘಟಕಗಳ ವಿರುದ್ಧ ಕ್ರಮವಹಿಸಬೇಕಿದೆ.

ಮರಗಳ ನಾಶದಿಂದ ಬರಡು ಭೂಮಿಗೆ ಆಹ್ವಾನ: ಪ್ರತಿ ಕೈಗಾರಿಕಾ ಘಟಕದಲ್ಲೂ ಕಾಯಿತುರಿಯನ್ನು ಒಣಗಿಸಲು ಶಾಖೋತ್ಪತ್ತಿಗಾಗಿ ನಿತ್ಯಾ ಸುಮಾರು ಎರಡು ಮೂರು ಮರಗಳನ್ನು ಕಡಿದು ತಂದು ಉರುವಲು ಆಗಿ ಬಳಸಲಾಗುತ್ತಿದೆ.
ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣಪುಡಿ ತಯಾರಿಕಾ ಕೈಗಾರಿಕಾ ಘಟಕಗಳಿಗಾಗಿ ನಿತ್ಯಾ ೧೫೦ಕ್ಕೂ ಹೆಚ್ಚು ಮರಗಳು ಅನುಮತಿಯಿಲ್ಲದೇ ಅಕ್ರಮವಾಗಿ ಕಟಾವು ಆಗುತ್ತಿದೆ. ಪ್ರತಿ ಎಕರೆಯಲ್ಲಿ ೪೦ಮರಗಳು ಕಟಾವು ಆಗುತ್ತವೆ ಎಂದರೆ ಈ ಘಟಕಗಳಿಗಾಗಿ ನಿತ್ಯಾ ಸುಮಾರು ೪ಎಕರೆಯಷ್ಟು ಮರಗಳು ಕಟಾವು ಆಗುತ್ತವೆ.
ಒಂದು ದಿನಕ್ಕೆ ೪ಎಕರೆ ಅರಣ್ಯ ಅಥವಾ ಮರಗಳಿರುವ ಹಸಿರು ಭೂಮಿ ನಾಶವಾಗುತ್ತಿದೆ. ವರ್ಷಕ್ಕೆ ೧೫೦೦ ಎಕರೆ ಪ್ರದೇಶ ಬರಡಾಗುತ್ತಿದೆ. ಸುಮಾರು ೨೦ ವರ್ಷದಿಂದ ೩೦ಸಾವಿರ ಎಕರೆಯಷ್ಟು ಮರಗಳು ನಾಶವಾಗಿದೆ ಎಂದರೆ ಈ ಭೂ ಪ್ರದೇಶವನ್ನು, ವನರಾಶಿಯನ್ನು ಸಂರಕ್ಷಿಸಿ ಉಳಿಸಲಾಗುತ್ತದೆಯೇ? ಈ ಎಲ್ಲಾ ಸತ್ಯ ಸಂಗತಿಗಳು ಅರಣ್ಯ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗೊತ್ತಿದ್ದರೂ ಘಟಕಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿವೆ.

ಕಾರ್ಮಿಕರಿಗೆ ರಕ್ಷಣೆ ಮತ್ತು ಆರೋಗ್ಯದ ಕಡೆ ಗಮನವಿಲ್ಲ:
 ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ಘಟಕಗಳಲ್ಲಿ ೧೦ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಘಟಕಗಳಲ್ಲಿ ಯಾವುದೇ ಸ್ವಚ್ಚತೆ ಕಾಪಾಡುತ್ತಿಲ್ಲ. ದುರ್ವಾಸನೆ ಬೀರುವ ಅಶುದ್ಧವಾದ, ಕೊಳಚೆ ವಾತಾವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ.
ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಅನೇಕ ಕ್ರಿಮಿಕೀಟಗಳು, ಸೂಕ್ಷ್ಮ ಹಾನಿಕಾರಕ ಜೀವಾಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಇದರಿಂದ ಆಗಾಗ ಕಾರ್ಮಿಕರು ಆನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇವರ ಆರೋಗ್ಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಘಟಕಗಳಿಂದ ಸ್ಥಳೀಯವಾಗಿ ಯಾವುದೇ ಲಾಭವಿಲ್ಲ: ತೆಂಗಿನ ಕಾಯಿ ತುರಿ ತಯಾರಿಸುವ ಈ ಘಟಕಗಳು ಮುಖ್ಯವಾಗಿ ಸ್ಥಳೀಯ ತೆಂಗಿನಕಾಯಿಯನ್ನು ಬಳಸಬೇಕು. ಆದರೆ ಕೈಗಾರಿಕಾ ಘಟಕಗಳು ಸಾಮಾಜಿಕ ಪ್ರಜ್ಞೆಗಿಂತ ಲಾಭದ ಉದ್ದೇಶವಿಟ್ಟುಕೊಂಡು ಕೇರಳದಿಂದ ಕಾಯಿಗಳನ್ನು ತರಿಸಿಕೊಂಡು ಪುಡಿ ತಯಾರಿಸುತ್ತವೆ. ಹಾಗಾಗಿ ಸ್ಥಳೀಯ ತೆಂಗು ಬೇಡಿಕೆ ಮತ್ತು ಬೆಲೆ ಕಳೆದುಕೊಂಡು ನಿರ್ಲಕ್ಷಕ್ಕೊಳಗಾಗಿದೆ. ಇದರಿಂದ ತೆಂಗು ಬೆಳೆಗಾರ ಅತಂತ್ರ ಸ್ಥಿತಿಗೆ ತಲುಪಿ ನಾಶವಾಗುತ್ತಿದ್ದಾನೆ.
ತಾಲೂಕಿನ ಎಲ್ಲಾ ಕೈಗಾರಿಕಾ ಘಟಕಗಳಿಂದ ಪ್ರತಿನಿತ್ಯಾ ಸುಮಾರು ೧೦ಲಕ್ಷಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಬಳಸಿಕೊಂಡು ಒಣಪುಡಿ ತಯಾರಿಸುತ್ತವೆ. ವರ್ಷಕ್ಕೆ ಸಮಾರು ೨೫ಕೋಟಿ ತೆಂಗಿನಕಾಯಿ ಬಳಕೆಯಾಗುತ್ತದೆ. ಇಷ್ಟು ಪ್ರಮಾಣದಲ್ಲಿ ಸ್ಥಳೀಯ ತೆಂಗು ಬಳಕೆಯಾದರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿ ಧಾರಣೆ ಏರುತ್ತದೆ. ಆಗ ತೆಂಗುಬೆಳೆಗಾರ ಆರ್ಥಿಕ ಸಂಕಟದಿಂದ ಹೊರ ಬರುತ್ತಾನೆ. ಸರಕಾರ ಬೆಂಬಲ ಬೆಲೆ ನಿಡುವ ಅಥವಾ ಕೊಬ್ಬರಿ ಖರೀದಿಸುವ ಸಮಸ್ಯೆ ಬರುವುದಿಲ್ಲ. ಆದ್ದರಿಂದ ಸರಕಾರ ಒಂದು ನಿಯಮ ರೂಪಿಸಿ ಘಟಕಗಳು ಹೊರ ರಾಜ್ಯದಿಂದ ತೆಂಗನ್ನು ಖರೀದಿಸುವುದಕ್ಕಿಂತ ಸ್ಥಳೀಯ ತೆಂಗನ್ನು ಬಳಸುವಂತೆ ಹಾಗೂ ಅವುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ತಾಕೀತು ಮಾಡಬಹುದು. ಇದರಿಂದ ತೆಂಗು ಬೆಳೆಗಾರನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಬಗ್ಗೆ ರೈತ ಸಂಘಟನೆಗಳು ಹೋರಾಟದ ಮೂಲಕ ನ್ಯಾಯ ಪಡೆಯಬಹುದಾಗಿದೆ. ಎಪಿಎಂಸಿಯೂ ಹೊರ ರಾಜ್ಯದಿಂದ ಬರುವ ತೆಂಗಿನಕಾಯಿಗಳಿಗೆ ಹೆಚ್ಚು ಹೆಚು ತೆರಿಗೆ ವಿಧಿಸುವ ಮೂಲಕ ನಿಯಂತ್ರಣ ಮಾಡಬಹುದು.
ಉರುವಲುಗಾಗಿ ತೆಂಗಿನಎಡಮಟ್ಟೆ ಬಳಕೆ ಸೂಕ್ತ:
ಘಟಕಗಳು ತಮ್ಮ ಶಾಖೋತ್ಪನ್ನ ಯಂತ್ರಗಳ ಬಳಕೆಗಾಗಿ ನಿತ್ಯಾ ನೂರಾರು ಮರಗಳನ್ನು ಕಡಿದು ಪರಿಸರ ಹಾಳು ಮಾಡುವುದಕ್ಕಿಂತ ತೆಂಗಿನ ಮರದ ಎಡಮಟ್ಟೆಯನ್ನು ಉಪಯೋಗಿಸಿದರೆ ಲಾಭದ ಜೊತೆಗೆ ನಮ್ಮ ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ಜೀವಧಾನ ನೀಡುವ ಮರಗಳನ್ನು ರಕ್ಷಿಸಬಹುದು.
ಮಾರಾಟ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಆಹಾರ ಮತ್ತು ನಾಗರೀಕ ಸರಭರಾಜು ಇಲಾಖೆಗಳು ಘಟಕಗಳ ಮೇಲೆ ಹದ್ದಿನ ಕಣ್ಣು ಇಟ್ಟರೆ ವಾಮಮಾರ್ಗದ ಮಾರಾಟ, ಕಲಬೆರಕೆ, ತೆರಿಗೆ ವಂಚನೆ ತಪ್ಪಿಸಬಹುದು.

Thursday, October 14, 2010

ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಸುದ್ದಿಯಾದವ.

ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಸುದ್ದಿಯಾದವ.

ತಿಪಟೂರು: ಜಗತ್ತಿನಲ್ಲಿ ಸುದ್ದಿಯಾಗಲು ಯಾರ‍್ಯರೋ ಏನೇನೋ ಮಾಡುತ್ತಾರೆ. ಆದರೆ ಇಲ್ಲಿ ಒಬ್ಬ ವಿಚಿತ್ರ ಆಸಾಮಿ ತಾನು ಬದುಕಿದ್ದಾಗಲೇ ತಿಥಿ ಮಾಡಿಕೊಂಡು ಮೋಕ್ಷ ಬಯಸಿದ್ದವನು ಈಗ ತನ್ನ ಮನೆಯ ಗೃಹ ಪ್ರವೇಶಕ್ಕೆ ಯಾರನ್ನೂ ಕರೆಯದೇ ಮತ್ತೊಮ್ಮೆ ಸುದ್ದಿಯಾಗಿದ್ದಾನೆ.
ಮೊನ್ನೆ ನಡೆದ ವರಮಹಾಲಕ್ಷ್ಮಿ ಪೂಜೆಯ ದಿನ ಗೆಳೆಯರೊಬ್ಬರು ಫೋನ್ ಮಾಡಿ ನಮ್ಮ ತಿಮ್ಮಶೆಟ್ಟರು ಮತ್ತೊಂದು ಸುದ್ದಿ ಮಾಡುತ್ತಿದ್ದಾರೆ ಕುತೂಹಲವಿದ್ದರೆ ಬನ್ನಿ ಎಂದರು. ಮತ್ತೇನನ್ನೂ ಅವರು ಹೇಳಲಿಲ್ಲ. ತಕ್ಷಣ ಕ್ಯಾಮೆರಾ ಎತ್ತಿಕೊಂಡು ದೌಡಾಯಿಸಿದಾಗ ಅಲ್ಲೊಂದು ವಿಚಿತ್ರ ಪ್ರಸಂಗ ನಡೆಯುತ್ತಿತ್ತು.
ತಿಪಟೂರು ತಾಲೂಕಿನ ಕೊನೆಹಳ್ಳಿಯ ರೈಲ್ವೇ ನಿಲ್ದಾಣದ ಬಳಿ ಈ ತಿಮ್ಮಶೆಟ್ಟರ ಮನೆಯಿತ್ತು. ಮುಂಭಾಗದಲ್ಲಿ ಬೃಹತ್ ಭಂಗಲೆ ತರಹದ ಮನೆ ಅದರೊಳಗೊಂದು ದಿನಸಿ ಅಂಗಡಿ. ಹಿಂಬಾಗದಲ್ಲಿ ಸುಮಾರು ೨೫-೩೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆಕರ್ಷಕ ವಿನ್ಯಾಸದ ಮನೆಗಳು. ಅಲ್ಲಿ ಏನೋ ಶುಭಕಾರ್ಯ ನಡೆಯುತ್ತಿರುವ ಸೂಚನೆಗಳು ಕಂಡು ಬಂದಿತು. ಹತ್ತಿರ ಹೋದಾಗ ಅಲ್ಲಿ ತಿಮ್ಮಶೆಟ್ಟಿ ಮತ್ತು ಆತನ ಹೆಂಡತಿ ಜೊತೆಗೆ ಒಬ್ಬ ಪುರೋಹಿತ. ಅಷ್ಟೇ ಮತ್ಯಾರೂ ಇಲ್ಲ. ಸ್ವಾರಸ್ಯ ಅದಲ್ಲ ಅಷ್ಟೊಂದು ಹಣ ಖರ್ಚು ಮಾಡಿ ಮನೆ ಕಟ್ಟಿರುವ ತಿಮ್ಮಶೆಟ್ಟರು ಗೃಹಪ್ರವೇಶಕ್ಕೆ ಯಾರಿಗೂ ಹೇಳಿಲ್ಲವಂತೆ. ಕರೆಯುವುದೂ ಇಲ್ಲವಂತೆ. ಅಲ್ಲಿ ಗಂಡ ಹೆಂಡತಿ ಮತ್ತು ಪುರೋಹಿತ ಬಿಟ್ಟರೆ ಬೇರೆ ಯಾರೂ ಇಲ್ಲ. ಸುದ್ದಿಗಲ್ಲದಿದ್ದರೂ ಇರಲಿ ಎಂದು ಅವರ ಅನುಮತಿ ಮೇರೆಗೆ ಒಂದು ಪೋಟೋ ಕ್ಲಿಕ್ಕಿಸಿಕೊಂಡು ಮಾತನಾಡಿಸಿದಾಗ ಅವರು ಹೇಳಿದ ಕಥೆ ಕೇಳಿ ಹೈವೋಲ್ಟೇಜ್ ಕರೆಂಟ್ ಹೊಡೆದಷ್ಟು ಶಾಕ್ ಆಗಿದ್ದು ನಮಗೆ.
ಇಷ್ಟೊಂದು ಹಣ ಖರ್ಚು ಮಾಡಿ ಮನೆ ಕಟ್ಟಿರುವ ನೀವು, ಅಭಿವೃದ್ಧಿ ಮತ್ತು ಶಾಂತಿಗಾಗಿ ಗೃಹ ಪ್ರವೇಶದಲ್ಲಿ ಹತ್ತು ಜನಕ್ಕೆ ಅನ್ನ ಹಾಕಬೇಕಲ್ಲವೇ ಎಂದು ಕೇಳಿದ್ದಕ್ಕೆ ಆತ, ಅರೇ ನಾನು ನನ್ನ ತಿಥಿಯಲ್ಲಿ ಏಳು ಸಾವಿರ ಜನಕ್ಕೆ ಅನ್ನ ಹಾಕಿ ಇಡೀ ಊರಿಗೇ ಶಾಂತಿಮಾಡಿಸಿದ್ದೇನೆ. ಮತ್ತೇಕೆ ಊಟ, ಶಾಂತಿ ನೀವೆ ಹೇಳಿ ಎಂದು ಬಿಟ್ಟ.
ಆತ ಬಹಳ ಉತ್ಸಾಹದಿಂದ ದೊಡ್ಡ ಸಾಹಸ ಮಾಡಿದವನಂತೆ ನನ್ನ ತಿಥಿ ಎಂದಾಗ ಸಿಡಿಲು ಬಡಿದಂತಾಯಿತು. ಏನು ನಿಮ್ಮ ತಿಥಿಯೇ, ಅದು ಹೇಗೆ ಸಾಧ್ಯ. ಬದುಕಿದ್ದಾಗಲೇ ತಿಥಿ ಮಾಡಿಕೊಳ್ಳಬಹುದೇ. ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ಅವಕಾಶ ಉಂಟೇ. ಇದನ್ನು ನಾವು ಎಂದೂ ಕೇಳಿಲ್ಲ ಎಂದು ಬೆರಗಾಗಿ ಕೇಳಿದಾಗ, ಅವರು ತಾವು ಮಾಡಿಕೊಂಡ ಜೀವಂತ ತಿಥಿ ಕಾರ್ಯದ ಕಥೆಯನ್ನು ತಿಮ್ಮಶೆಟ್ಟರು ಬಿಚ್ಚಿಟ್ಟಿದ್ದು ಹೀಗೆ:

ನನಗೆ ಎರಡು ಹೆಂಡಿತಿಯರು. ಮೊದಲನೇ ಹೆಂಡತಿ ತೀರಿಕೊಂಡ ಮೇಲೆ ಎರಡನೇ ಹೆಂಡತಿ ಮದುವೆಯಾದೆ. ಮೊದಲನೇ ಹೆಂಡತಿಗೆ ನಾಲ್ಕು ಮಕ್ಕಳು. ಎರಡು ಗಂಡು, ಎರಡು ಹೆಣ್ಣು. ಈಗ ಅವರೆಲ್ಲಾ ಮದುವೆಯಾಗಿ ನನ್ನಿಂದ ದೂರ ಉಳಿದಿದ್ದಾರೆ. ಮನೆಗೆ ಯಾರೂ ಬರುವುದಿಲ್ಲ. ಎರಡನೇ ಹೆಂಡತಿಗೆ ಒಬ್ಬ ಮಗನಿದ್ದಾನೆ. ಆತ ಈಗ ಶಿವಮೊಗ್ಗದಲ್ಲಿ ಪಿ.ಯು.ಸಿ ಓದುತ್ತಿದ್ದಾನೆ. ಇಷ್ಟೊಂದು ಆಸ್ತಿ ನೋಡಿಕೊಂಡು ನಾನು ನನ್ನ ಹೆಂಡತಿ ಇಬ್ಬರೇ ವ್ಯಾಪಾರ ಮಾಡಿಕೊಂಡು ಸುಖವಾಗಿದ್ದೇವೆ ಎನ್ನುವ ತಿಮ್ಮಶೆಟ್ಟರು ತಮ್ಮ ಮತ್ತೊಂದು ಮುಖವನ್ನು ಬಯಲುಮಾಡುತ್ತಾರೆ.
ಬಹಳ ವರ್ಷಗಳ ಹಿಂದೆ ಬೆಳಗರಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಜೀವಂತ ತಿಥಿ ಮಾಡಿಕೊಂಡಿದ್ದರು. ಅಲ್ಲಿ ನಾನು ಊಟ ಮಾಡಿದ್ದೆ. ಆದರೆ ಅಂದಿನಿಂದ ಆರೀತಿ ನಾನೂ ತಿಥಿ ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿತ್ತು. ಅದು ಕಾಡೂತ್ತಲೂ ಇತ್ತು. ಆಗಾಗ ನನ್ನ ಸ್ನೇಹಿತರ ಬಳಿ ಜೀವಂತ ತಿಥಿ ಮಾಡಿಕೊಳ್ಳಬೇಕು ಎಂದು ಮನಸ್ಸಿನ ಹಿಂಗಿತ ಹೇಳುತ್ತಿದ್ದೆ. ಅದಕ್ಕೊಂದು ತಯಾರಿಯೂ ನಡೆಯುತ್ತಿತ್ತು ಎಂದು ಸಂಕೋಚವಿಲ್ಲದೇ ಹೇಳಿದ ಅವರಲ್ಲಿ ತಾನು ಮಾಡಿದ್ದು ಮಹತ್ಕಾರ್ಯ ಎನ್ನುವಂತಹ ಬಿಗುಮಾನವಿತ್ತು.

ತನ್ನದೇ ಯೋಚನೆಯಂತೆ, ತನಗೆನಿಸಿದಂತೆ ೨೦೦೪ರ ಮಾರ್ಚ್ ೭ನೇ ತಾರೀಕು ಭಾನುವಾರ ಜೀವಂತ ತಿಥಿಯನ್ನು ಮಾಡಿಕೊಳ್ಳಲು ನಿರ್ಧರಿಸಿ, ಅದರಂತೆ ಸಮಯ ಗೊತ್ತುಮಾಡಿಕೊಂಡು ಸಿದ್ಧತೆ ನಡೆಸಲಾಯಿತು. ಸುಮಾರು ೫೦೦೦ ಸಾವಿರ ತಿಥಿ ಕಾರ್ಡ್‌ಗಳನ್ನು ಮುದ್ರಿಸಿ ತಾಲೂಕಿನಾದ್ಯಂತ ಹಂಚಲಾಯಿತು. ನೆಂಟುರು, ಬಂದುಗಳು, ಗೆಳೆಯರು, ಸೇರಿದಂತೆ ಗಣ್ಯಾತೀಗಣ್ಯರಿಗೆ ಆಮಂತ್ರಿಸಲಾಯಿತು. ಮಕ್ಕಳು ಮುಜುಗರ ಪಟ್ಟರು, ಆದರೂ ತನ್ನ ಒತ್ತಡ ಮತ್ತು ಮನದ ಆಸೆಯಂತೆ ಅವರೇ ಮುಂದು ನಿಂತು ತಿಥಿ ಕಾರ್ಯಕ್ಕೆ ಸನ್ನದ್ಧರಾದರು.
ಸಮಾಧಿ ಪೂಜೆಗಾಗಿ ನಾಲ್ಕು ತಿಂಗಳ ಮುಂಚೆಯೇ ಬೆಂಗಳೂರು-ಹೊನ್ನಾವರದ ರಾ.ಹೆ.೨೦೬ರ ಪಕ್ಕದಲ್ಲೆ ಎರಡು ಗುಂಟೆ ಜಮೀನು ಖರೀದಿಸಲಾಯಿತು. ಅಲ್ಲಿ ಸುತ್ತಾ ಮುಳ್ಳುತಂತಿ ಹಾಕಲಾಯಿತು. ಉಳಿದಂತೆ ಎಲ್ಲವೂ ಸಿದ್ಧಗೊಂಡಿತು. ತಿಥಿ ದಿನ ಸಮಾಧಿ ಪೂಜೆ ಮಾಡಬೇಕಲ್ಲವೇ ಅದಕ್ಕೆ ಯಾರಿಗೂ ಅನುಮಾನ ಮತ್ತು ನಿರೀಕ್ಷೆ ಉಳಿಯದಂತೆ ಅಂದು ಭಾನುವಾರ ಮುಂಜಾನೆ ತನ್ನ ಕುಟುಂಬ ಸಮೇತ ಸಮಾಧಿ ಸ್ಥಳದ ಉದ್ಘಾಟನೆಯನ್ನೂ ಸಹ ನಾನೇ ಮಾಡಿದೆ. ಅಲ್ಲಿ ಕುಟುಂಬದವರು ಮತ್ತು ಬಂಧುಬಳಗದವರು ಸೇರಿಕೊಂಡು ಆರಾಧನೆ ಮಾಡಿದರು. ಬೆಳಿಗ್ಗೆ ೯ಗಂಟೆಯೊಳಗೆ ಹಿಂದೂ ಸಂಪ್ರದಾಯದಂತೆ ಗುಡ್ಡೆ ಶಾಸ್ತ್ರ ಮುಗಿಸಿ, ಯಾರಿಗೂ, ಯಾವ ಪ್ರಶ್ನೆಗೂ ಆವಕಾಶ ನೀಡದಂತೆ ಊಟದ ಕಾರ್ಯ ಆರಂಭಿಸಲಾಯಿತು.
ತಾಲೂಕಿನ ಆಗಿನ ಶಾಸಕ ಕೆ.ಷಡಕ್ಷರಿ, ಮಾಜಿಶಾಸಕ ಬಿ.ನಂಜಾಮರಿ ಸೇರಿದಂತೆ ತಾಲೂಕಿನ ನಾನಾ ಗಣಾತಿಗಣ್ಯರು ಜೀವಂತ ತಿಥಿ ಕಾರ್ಯದಲ್ಲಿ ಭಾಗವಹಿಸಿ, ತಿಥಿ ಊಟ ಉಂಡು ತಮ್ಮ ಮನಸ್ಸಿಗೆ ಬಂದಂತೆ ಹರಸಿದ್ದರು ಎಂದು ಹೇಳುವಾಗ ತಿಮ್ಮಶೆಟ್ಟರು ಆತ್ಮಸಂತೋಷದಿಂದ ಬೀಗುತ್ತಿದ್ದರು. (ಏನು ಹರಸಿದ್ದರು ಎಂಬುದು, ಭಾಗವಹಿಸಿದ್ದವರಿಗೆ ಗೊತ್ತು). ಯಾರ‍್ಯಾರಿಗೆ ಯಾವ ಯಾವ ತರಹದ ಊಟ ಬೇಕೋ ಅದನ್ನೇ ಮಾಡಿಸಿದ್ದೆ. ಬೃಹತ್ ಶಾಮಿಯಾನದೊಳಗೆ ಸಸ್ಯಹಾರದವರಿಗೆ ಸಸ್ಯಹಾರ, ಮಾಂಸಹಾರದವರಿಗೆ ಕೋಳಿ, ಕುರಿ ಮತ್ತು ಹಂದಿಮಾಂಸಹಾರದ ಹೀಗೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ವಿಶಾಲವಾದ ಪ್ರತ್ಯೇಕ ಶಾಮಿಯಾನದಡಿ ಸಾವಿರಾರು ಜನರು ತಿಥಿ ಊಟ ಮಾಡಿದರು. ಕೆಲವರು ಏನು ಜೀವಂತ ತಿಥಿ ಎಂದು ತಮ್ಮ ಕುತೂಹಲದಿಂದ ಬಂದು ನೋಡಿಕೊಂಡು ಹೋದರು. ಮತ್ತೆ ಕೆಲವರು ಮಾತನಾಡಿದಸಿದರು, ಮತ್ತೆ ಕೆಲವರು ಸಮಾಧಿ ಬಳಿ ಅಚ್ಚರಿಯಿಂದ ನೋಡಿ ಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮರು ಹತ್ತು ಸಾವಿರಕ್ಕೂ ಹೆಚ್ಚು ಜನರು ಜಾತ್ರೋಪಾದಿಯಲ್ಲಿ ಬಂದು ಹೋದರು ಆಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಜೀವನ ಪೂನೀತವಾಯಿತು, ಪುನರ್ಜನ್ಮ ಬಂದಂತಾಯಿತು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಯಿತು. ಆದರೆ ಮನದ ಬಯಕೆ ಈಡೇರಿತು ಎನ್ನುತ್ತಾರೆ ತಿಮ್ಮಶೆಟ್ಟಿ.

ಜೀವಂತ ತಿಥಿ ಜೊತೆಗೆ ತನ್ನ ಹೂಳುವ ಸ್ಮಶಾನವನ್ನೇ ಉದ್ಘಾಟಿಸಿದ್ದರು:
ತಾನು ಸತ್ತ ಮೇಲೆ ಮೊದಲು ತನ್ನನ್ನೇ ಹೂಳಬೇಕು ಎಂದು ತಿಮ್ಮಶೆಟ್ಟರು ಹೆದ್ದಾರಿ ಪಕ್ಕದಲ್ಲೇ ಎರಡು ಗುಂಟೆ ಜಮೀನು ಖರೀದಿಸಿ, ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದರು. ಅದನ್ನು ತನ್ನ ಜೀವಂತ ತಿಥಿದಿನವೇ ಸ್ವತಃ ಉದ್ಘಾಟಿಸಿದ್ದರು.
ಆದರೆ ಅವರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಅವರ ಅಣ್ಣನ ಮಗ ಸತ್ತಾಗ. ಆತ ಕಳೆದ ಒಂದು ವರ್ಷದ ಮುಂಚೆ ಬೈಕ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಆಗಾಗಿ ಅವರನ್ನು ತಿಮ್ಮಶೆಟ್ಟರ ಸ್ಮಶಾನದಲ್ಲೇ ಹೂಳ ಬೇಕಾಯಿತು. ಗ್ರಾಮದಲ್ಲಿ ತುಂಬಾ ಹಿರಿಯ ಎಂದರೆ ತಿಮ್ಮಶೆಟ್ಟರೇ. ಅವರ ಸಮಾಧಿಯೇ ಮೊದಲು ಆ ಸ್ಮಶಾನದಲ್ಲಿ ಆಗಬೇಕು ಎಂದು ಅವರು ಯೋಜನೆ ರೂಪಿಸಿದ್ದರು. ಆದರೆ ಅವರ ಲೆಕ್ಕಚಾರ ತಲೆಕೆಳಗಾದ ಕಾರಣ ಆ ಕೊರಗು ತಿಮ್ಮಶೆಟ್ಟರಲ್ಲಿ ಈಗಲೂ ಇದೆ. ತನ್ನ ಅಣ್ಣನ ಮಗ ಮೃತಪಟ್ಟಿದ್ದು ದುಃಖದ ತಂದಿದ್ದಲ್ಲದೇ ಆ ಹೊಸ ಸಮಾಧಿ ಸ್ಥಳದಲ್ಲಿ ವಾಸ್ತವಾಗಿ ಹಿರಿತನ ಕೈ ತಪ್ಪದ್ದಕ್ಕೆ ಬೇಸರವಿದೆ ಎನ್ನುತ್ತಾರೆ.

ನಿಮ್ಮ ಬಳಿ ಇಂತಹ ಸುದ್ದಿಗಳಿವೆಯೇ ಕಳುಹಿಸಿ ಕೊಡಿ.

Wednesday, October 13, 2010

ತಿಪಟೂರು: ಕಲಿಯುಗದ ’ಕಲ್ಪವೃಕ್ಷ’ ಎಂದೇ ಪ್ರಸಿದ್ಧವಾದ ’ತೆಂಗು’ ನಮ್ಮ ಜನಜೀವನದ ಜೀವನಾಡಿ. ಭಕ್ತಿ ಭಾವದ ಸಂಕೇತವಾಗಿರುವ ತೆಂಗಿನಕಾಯಿ ಎಂಬ ಪದ ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇದು ಅತ್ಯಂತ ಪರಿಚಯವಿರುವ ನಿತ್ಯ ಒಂದಿಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿ ಉಚ್ಚರಿಸುವ ಪದ. ನಾವು ನಿತ್ಯಾ ಬಳಸುವ ಆಹಾರ ಪದಾರ್ಥಗಳಲ್ಲಿ ತೆಂಗು ಇಲ್ಲ ಎಂದರೆ ಅದು ರುಚಿಸುವುದೇ ಇಲ್ಲ. ಹಾಗಾಗಿ ಜಗತ್ತಿನಲ್ಲಿ ತೆಂಗಿಗೆ ಅತ್ಯಂತ ಹೆಚ್ಚಿನ ಮೌಲ್ಯ ಮತ್ತು ಮಹತ್ವವಿದೆ. ಪವಿತ್ರ ಮತ್ತು ಶುದ್ಧಕ್ಕೆ ತೆಂಗಿಗಿಂತ ಪರ್ಯಾಯ ಮತ್ತೊಂದಿಲ್ಲ.
ಪುರಾಣ ಇತಿಹಾಸಗಳಲ್ಲಿ ವಿಶೇಷವಾಗಿ ದಾಖಲಾಗಿರುವ ತೆಂಗು ಸಸ್ಯ ಜಗತ್ತಿನಲ್ಲಿ ಸುಂದರವಾದ ಮತ್ತು ಇತರೆ ಜೀವಿಗಳಿಗೆ ಅತ್ಯಂತ ಉಪಯುಕ್ತವಾದ ಗಿಡ. ಸಸ್ಯ ಶಾಸ್ತ್ರದ ಪಾರಿಭಾಷಿಕ ಹೆಸರು ’ಕೋಕಾಸ್‌ನ್ಯೂಸಿಪೆರಾ’. ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯವನ್ನು ಹೆಚ್ಚಿಸುವ ತೆಂಗು ಮನುಷ್ಯನಯುಷ್ಯನ್ನು ವೃದ್ಧಿಸುವುದಲ್ಲದೇ ಆರೋಗ್ಯದಾಯಕವೂ, ಶಕ್ತಿದಾಯಕವೂ ಮತ್ತು ಭಕ್ತಿಯ ಸಂಕೇತವೂ ಆಗಿದೆ. ಮಾನವ ಈ ಭೂಮಿಗೆ ಕಾಲಿಟ್ಟಂದಿನಿಂದ ಈ ತೆಂಗು ಆತನ ಹಸಿವನ್ನು, ಅವಶ್ಯಕತೆಯನ್ನು, ನಿರೀಕ್ಷೆಯನ್ನು ಪೋರೈಸುತ್ತಾ ಬಂದಿದೆ. ಇಂದು ಸಮಾಜಿಕವಾಗಿ, ಕೌಟುಂಬಿಕವಾಗಿ, ಧಾರ್ಮಿಕವಾಗಿ ತೆಂಗಿನ ಬಳಕೆ ಅಪಾರ. ತೆಂಗಿನ ಪ್ರತಿ ಭಾಗವೂ ಇಂದು ಮೌಲ್ಯಯುಕ್ತ ಮತ್ತು ಉಪಯುಕ್ತ. ಅದರಿಂದ ಯಾವುದೇ ಭಾಗವೂ ಉಪಯೋಗವಿಲ್ಲ ಎಂದು ಮೂದಲಿಸುವಂತಿಲ್ಲ. ಆಹಾರ, ಎಣ್ಣೆ, ಪಾನೀಯ, ಇಂಧನ, ವಸತಿ, ಮರಮುಟ್ಟು, ಅಲಂಕಾರ, ಇತರೆ ಸಸ್ಯಗಳ ಅಭೀವೃದ್ಧಿ, ಕೈಗಾರಿಕೆ ಹೀಗೆ ನಾನಾ ರೀತಿಯಲ್ಲಿ ತೆಂಗಿನ ಬಳಕೆ ಸ್ಮರಣೀಯ. ಆದರೆ ಇಂತಹ ಅತ್ಯಾಮೂಲ್ಯವಾದ ತೆಂಗಿನ ಬಗ್ಗೆ ನಡೆದಿರುವ ಸಂಶೋಧನೆಗಳು ಅತ್ಯಂತ ಕಡಿಮೆ. ಸರಕಾರಗಳು ಸಹ ಇತ್ತೀಚೆಗೆ ಈ ಕಲ್ಪವೃಕ್ಷದ ಬಗ್ಗೆ ನಿರಾಸಕ್ತಿ ಹೊಂದಿರುವುದರಿಂದ ನಾನಾ ಸಮಸ್ಯೆಗಳಿಗೆ ಸಿಲುಕಿದೆ.

ತೆಂಗು ವಿಶ್ವವ್ಯಾಪಿ:
ಜಗತ್ತಿನ ೮೦ ರಾಷ್ಟ್ರಗಳಲ್ಲಿ ತೆಂಗನ್ನು ಬೆಳೆಯುತ್ತಿದ್ದರೂ ಪಿಲಿಪೆನ್ಸ್, ಭಾರತ, ಇಂಡೋನೇಶಿಯಾ, ಶ್ರೀಲಂಕಾ, ಅಂಡಮಾನ್ ನಿಕೋಬಾರ್‌ಗಳಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ವಿಸ್ತಾರವಾಗಿ ಬೆಳೆಯುವ ಮೂಲಕ ಜಗತ್ತಿನ ಉತ್ಪಾದನೆಯಲ್ಲಿ ಶೇ.೭೫ರಷ್ಟು ಪಾಲು ಹೊಂದಿದೆ. ಭಾರತ ತೆಂಗಿನ ಬೆಳೆಯ ವಿಸ್ತೀರ್ಣದಲ್ಲಿ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶ ಎನಿಸಿದ್ದು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ. ಭಾರತದಲ್ಲಿ ಸುಮಾರು ೨೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಉತ್ಪಾದನೆ ಪ್ರಮಾಣ ೧೫೦೦೦ ಮಿಲಿಯನ್ ತೆಂಗಿನಕಾಯಿಗಳಾಗಿವೆ.
ಇತ್ತೀಚೆಗೆ ತೆಂಗಿನ ಉತ್ಪಾದನೆಗಳ ರಫ್ತು ಕಡಿಮೆಯಾಗಿದ್ದರೂ ತೆಂಗಿನ ನಾರಿನ ಉತ್ಪನ್ನಗಳು ಮತ್ತು ಇದ್ದಿಲಿನ ಉತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿವೆ. ತೆಂಗು ಆಧರಿಸಿದ ಈ ಬೃಹತ್ ಕ್ಷೇತ್ರ ಸುಮಾರು ೧೫ ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡಿರುವುದಲ್ಲದೇ ಸುಮಾರು ೮೦೦ ಕೋಟಿ ರೂಗಳ ವಿದೇಶಿ ವಿನಿಮಯ ಗಳಿಸಿಕೊಡುತ್ತಿದೆ.
ನಮ್ಮ ದೇಶದಲ್ಲಿ ಸುಮಾರು ೧೭ ರಾಜ್ಯಗಳಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದರೂ ಕೇರಳ ತೆಂಗು ಉತ್ಪಾದನೆ ಮತ್ತು ವಿಸ್ತೀರ್ಣದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನಗಳು ತಮಿಳುನಾಡು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಪಡೆದಿವೆ. ಕರ್ನಾಟಕ ರಾಜ್ಯದಲ್ಲಿ ತುಮಕೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ದ.ಕ, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಭಾಗಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರೂ ಇತ್ತೀಚೆಗೆ ಇತರೆ ಜಿಲ್ಲೆಗಳಲ್ಲೂ ತೆಂಗನ್ನು ಬೆಳೆಯಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ತೆಂಗಿನ ವಾರ್ಷಿಕ ಉತ್ಪಾದನೆ ಪ್ರಮಾಣ ಸುಮಾರು ೫೬೮೦ ಮಿಲಿಯನ್ ಕಾಯಿಗಳು. ರೋಗ ರುಜಿನಗಳು, ನುಸಿಪೀಡೆ ಸೇರಿದಂತೆ ನಾನಾ ಕಾರಣಗಳಿಂದ ಇತ್ತೀಚೆಗೆ ತೆಂಗಿನ ಸರಾಸರಿ ಉತ್ಪಾದನೆ ಕ್ಷೀಣಿಸಿದೆ.
ತೆಂಗು ನೀರಾವರಿ ಬೆಳೆ. ಇದಕ್ಕೆ ಸರಿಯಾದ ನಿರ್ವಹಣೆಯಿಲ್ಲದಿದ್ದರೆ ಮರವೂ ಕ್ಷೀಣಿಸಿ ಉತ್ಪಾದನೆ ಕಡಿಮೆಯಾಗುತ್ತದೆ. ತಮಿಳುನಾಡಿನಲ್ಲಿ ಪ್ರತಿ ಹೆಕ್ಟೇರ್‌ಗೆ ವಾರ್ಷಿಕವಾಗಿ ೧೪೦೦೦ದಿಂದ ೧೫೦೦೦ಸಾವಿರ ಕಾಯಿಗಳು ಉತ್ಪಾದನೆಗೊಂಡರೆ, ಆಂದ್ರದಲ್ಲಿ-೧೩೫೦೦ದಿಂದ ೧೪೦೦೦, ಕೇರಳದಲ್ಲಿ ೬೦೦೦-೬೫೦೦ ಆದರೆ ಕರ್ನಾಟಕದಲ್ಲಿ ೫೦೦೦ದಿಂದ ೫೫೦೦ ಉತ್ಪಾದನೆಯಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ರಾಜ್ಯದಲ್ಲಿ ಪ್ರತಿ ತೆಂಗಿನ ಮರದಿಂದ ಮೊದಲು ಸರಾಸರಿ ವಾರ್ಷಿಕ ಇಳುವರಿ ೫೨ ಎಂದೂ ನಂತರ ರಾಜ್ಯಗಳಲ್ಲಿ ೩೬ ಎಂದು ಇಲಾಖೆ ಅಂಕಿಅಂಶ ನೀಡಿದೆ.
ದೀರ್ಘ ಕಾಲಿಕ ಮತ್ತು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿರುವ ತೆಂಗನ್ನು ಏಕ ಬೆಳೆ ಪದ್ಧತಿ, ಬಹು ಅಂತಸ್ತು ಪದ್ಧತಿ ಹಾಗೂ ಸುಧಾರಿತ ಮತ್ತು ನೀರಾವರಿಯಲ್ಲಿ ಮಿಶ್ರ ಬೆಳೆ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಸಾಂಪ್ರಾದಾಯಿಕ, ಸಾವಯವ, ಶೂನ್ಯ ಬಂಡವಾಳ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ತೆಂಗು ಕೃಷಿಯನ್ನು ಮಾಡಲಾಗುತ್ತಿದೆ. ರೋಗಗಳು, ಕೀಟಗಳ ಹಾವಳಿ, ಉತ್ಪಾದನೆ, ಇಳುವರಿಯಲ್ಲಿ ತೆಂಗು ಕೃಷಿಕರಲ್ಲಿ ನಾನಾ ಗೊಂದಲಗಳಿದ್ದು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಲ್ಪವೃಕ್ಷ ತೆಂಗಿಗೂ ಶಾಪ:
ಸಕಾಲದಲ್ಲಿ ಸರಕಾರದ ನೆರವು ಮತ್ತು ತಾಂತ್ರಿಕತೆ, ಮಾಹಿತಿ ಕೊರತೆ, ನೈಸರ್ಗಿಕ ಆಕ್ರಮಣ ಹಾಗೂ ಅವಘಡಗಳ ನಿಯಂತ್ರಣ ಲಭ್ಯವಿಲ್ಲದೇ ತೆಂಗಿನ ಕೃಷಿ ಮಾಡುವ ಕುಟುಂಬಗಳು ಇಂದು ಆರ್ಥಿಕ ಸಂಕಟಕ್ಕೊಳಗಾಗಿದ್ದಾರೆ. ಮಳೆ ಅಭಾವ, ನೀರಿನ ಕೊರತೆ, ರೋಗ ಮತ್ತು ಕೀಟಗಳ ಹಾವಳಿ. ಇಳುವರಿ ಕುಸಿತ, ಸಾಲದ ಬಾಧೆ, ವಿದ್ಯುತ್ ವ್ಯತ್ಯಯ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ಕಲಬೆರಕೆ ಸೇರಿದಂತೆ ನಾನಾ ಕಾರಣಗಳಿಂದ ಬೇಸತ್ತ ರೈತ ಇಂದು ನಾಶದ ದಾರಿಯತ್ತ ಸಾಗುತ್ತಿದ್ದಾನೆ. ನೂರು ತೆಂಗಿನ ಗಿಡ ಇದ್ದರೆ ಎರಡು-ಮೂರು ಕುಟುಂಬವನ್ನು ಸುಲಭವಾಗಿ ನಿರ್ವಹಣೆ ಮಾಡುತ್ತಿದ್ದ ರೈತ ಇಂದು ಸಾವಿರ ಗಿಡ ಇದ್ದರೂ ಬೇರೆಯವರ ಬಳಿ ಕೆಲಸಕ್ಕೆ ಹೋಗಿ ಜೀವನ ಮಾಡುವ ದುಸ್ಥಿತಿ ಬಂದೊದಗಿದೆ. ತೆಂಗು ಬೆಳೆಗಾರನ ಚಿಂತಾಜನಕ ಸ್ಥಿತಿ ಎಷ್ಟಿದೆ ಎಂದರೆ ಚಿ.ನಾ.ಹಳ್ಳಿ ತಾಲೂಕು ಹಂದನಕೆರೆಯ ಕೃಷಿಕ ಹಾಗೂ ಕವಿ ಅಬ್ದುಲ್ ಹಮೀದ್ ಹೇಳುವಂತೆ ’ತೆಂಗಿನ ಬೇಸಾಯ - ಇಡೀ ಕುಟುಂಬ ಸಾಯ’ ಎನ್ನುವ ವಾಸ್ತವ ಮತ್ತು ಅನುಭವ ಮಾತುಗಳು ಸತ್ಯವಾಗುತ್ತಿವೆ.

ಕಲ್ಪತರು ನಾಡು ತಿಪಟೂರು:
ಕಲ್ಪತರು ನಾಡು, ತೆಂಗಿನ ಬೀಡು ಎಂದು ಸುಪ್ರಸಿದ್ದವಾದ ತಿಪಟೂರು ತೆಂಗಿನ ಕೊಬ್ಬರಿಗೆ ಪ್ರಖ್ಯಾತಿ. ಇಲ್ಲಿನ ಗಣಮಟ್ಟದ ಮತ್ತು ರುಚಿ ರುಚಿಯಾದ ಕೊಬ್ಬರಿಗೆ ರಾಷ್ಟ್ರದ್ಯಾದ್ಯಂತ ಮನ್ನಣೆಯಿದೆ. ಇತ್ತೀಚೆಗೆ ತಯಾರಾಗುವ ತೆಂಗಿನ ಒಣ ಪುಡಿಗೂ ದೇಶದಾದ್ಯಂತ ಬೇಡಿಕೆ ಹೆಚ್ಚಿದೆ. ತಿಪಟೂರು ತಾಲೂಕು ತೆಂಗಿನ ನಾನಾ ಉತ್ಪನ್ನಗಳ ಕಣಜ ಎನ್ನುವಂತಾಗಿದ್ದು ಸಮಗ್ರತೆ ಸಾಧಿಸುತ್ತಿದೆ. ತೆಂಗಿನ ಬಹುಪಯೋಗಿ ಉತ್ಪನ್ನವಾದ ರುಚಿಯಾದ ಕೊಬ್ಬರಿ, ಕಾಯಿ, ಎಳನೀರು, ಕೊಬ್ಬರಿಎಣ್ಣೆ, ಕಾಯಿಪುಡಿ ಅಲ್ಲದೇ ತೆಂಗಿನ ಚಿಪ್ಪು, ಚಿಪ್ಪಿನಿಂದ ತಯಾರಿಸುವ ಇದ್ದಿಲು, ಇದ್ದಿಲಿನಿಂದ ತಯಾರಿಸುವ ಆಕ್ಟಿವೇಟೆಡ್ ಕಾರ್ಬನ್, ನಾರಿನಿಂದ ತಯಾರಿಸುವ ನಾನಾ ಗೃಹಪಯೋಗಿ ಉತ್ಪನ್ನಗಳು, ನಾರಿನ ಪುಡಿಯಿಂದ ತಯಾರಿಸುವ ದೇಶ ವಿದೇಶಗಳಲ್ಲಿ ಕೃಷಿಗೆ ಬಳಸುವ ಪಿಥ್‌ಬ್ಲಾಕ್‌ಗಳು, ಉರುವಲುಗಳಿಗಾಗಿ ಬಳಸುವ ತೆಂಗಿನ ಮಟ್ಟೆ, ಶಾಕೋತ್ಪನ್ನ ಘಟಕಗಳಿಗೆ ಬಳಸುವ ತೆಂಗಿನ ಚಿಪ್ಪು, ಎಡೆಮಟ್ಟೆ ಮತ್ತು ಕುರಂಬಳೆ, ವಸತಿ ಇತರೆ ಅವಶ್ಯಕತೆಗಾಗಿ ಬಳಸುವ ಮರ ಮುಟ್ಟುಗಳು, ಸ್ವಚ್ಚತೆಗಾಗಿ ಬಳಸುವ ಪೊರಕೆಗಳು, ಅಲಂಕಾರಿಕ ಉತ್ಪನ್ನಗಳು.. ಹೀಗೇ ಎಲ್ಲಾ ಕ್ಷೇತ್ರಗಳಿಗೂ ಬೇಕಾದ ನಾನಾ ಪದಾರ್ಥಗಳು ತೆಂಗಿನಿಂದ ತಯಾರಾಗುತ್ತವೆ.
ತೆಂಗು ಒಂದು ಸರ್ವ ವಸ್ತುಗಳ ಭಂಡಾರ ಎಂದರೆ ತಪ್ಪಾಗಲಾರದು ಕಲ್ಪವೃಕ್ಷ ಎನ್ನುವ ಹೆಸರು ಸಾರ್ಥಕ ಮತ್ತು ಅನ್ವರ್ಥ. ತೆಂಗಿನ ಕಾಯಿ ಬಗ್ಗೆ ನಾವು ಎಷ್ಟು ಹೇಳಿದರೂ, ಬರೆದರೂ ಅಥವಾ ಸಂಶೋದನೆ ಮಾಡಿದರೂ ಕಡಿಮೆಯೇ. ಏಕೆಂದರೆ ಮೊದಲೇ ಹೇಳಿದಂತೆ ತೆಂಗಿನ ಮರ ಒಂದು ಕಲ್ಪವೃಕ್ಷವಿದ್ದಂತೆ. ನೀವು ಕೇಳಿರ ಬಹುದು ಪುರಾಣ ಕಥೆಗಳಲ್ಲಿ ದೇವಲೋಕದಲ್ಲಿ ಕಲ್ಪವೃಕ್ಷ ಎನ್ನುವ ಗಿಡ ಮತ್ತು ಕಾಮಧೇನು ಎನ್ನುವ ಹಸು ಇತ್ತಂತೆ, ಅವು ಕೇಳಿದ್ದೇಲ್ಲವನ್ನೂ ಕೊಡುತ್ತಿದ್ದವಂತೆ. ಹಾಗೆಯೇ ಈ ಭೂಲೋಕದಲ್ಲಿ ಈ ಕಲ್ಪವೃಕ್ಷ ಮನುಷ್ಯ ಕೇಳಿದ್ದನ್ನೆಲ್ಲಾವನ್ನೂ ಕೊಡುತ್ತಿದೆ. ಕಲ್ಪವೃಕ್ಷ, ಕಾಮಧೇನು ಕಲ್ಪನೆಯೋ, ಕಥೆಯೋ ನಮಗೆ ಅನುಭವವಿಲ್ಲ ಆದರೆ ಈ ತೆಂಗು ನಮಗೆ ಕಲ್ಪವೃಕ್ಷವೇ ಸರಿ ಎನಿಸುವಷ್ಟು ಬಹುಪಯೋಗಿಯಾಗಿದೆ.

ಬೇಡಿದ್ದು ಕೊಡುವ ತೆಂಗು:
ತೆಂಗಿನ ಮರದ ಎಲ್ಲಾ ಭಾಗಗಳು ಉಪಯುಕ್ತ ಎಂದು ಈ ಮುಂಚೆ ಹೇಳಿದ್ದೇವೆ. ತೆಂಗಿನಿಂದ ಯಾವ ಯಾವ ಪದಾರ್ಥಗಳು ಉತ್ಪಾದನೆಯಾಗುತ್ತವೆ ಎನ್ನುವುದನ್ನು ನೋಡೋಣ. ಎಳನೀರು, ತೆಂಗಿನಕಾಯಿ, ತೆಂಗಿನಕಾಯಿಒಣಪುಡಿ, ಕೊಬ್ಬರಿ, ತೆಂಗಿನಹಾಲು, ತೆಂಗಿನ ಮತ್ತು ಕೊಬ್ಬರಿ ಎಣ್ಣೆ, ತೆಂಗಿನಿಂದ ತಯಾರಿಸಿದ ಖಾದ್ಯಗಳು, ತೆಂಗಿನಮಟ್ಟೆ(ಹೊರಕವಚ), ತೆಂಗಿನ ಚಿಪ್ಪು, ತೆಂಗಿನ ನಾರು, ನಾರಿನ ಪಿಥ್(ನಾರು ತೆಗೆದು ಉಳಿಯುವ ಪುಡಿ), ಇದ್ದಿಲು, ತೆಂಗಿನಗರಿ, ತೆಂಗಿನಮರದ ಕಾಂಡ, ತೆಂಗಿನಕಡ್ಡಿ, ತೆಂಗಿನ ಎಡೆಮಟ್ಟೆ ಮತ್ತು ಅದರ ಕುರಂಬಳೆ ಇತ್ಯಾದಿ.

ಎಳನೀರು:
ಎಳನೀರನ್ನು ಆಯುರ್ವೇದದಲ್ಲಿ ’ನಾರಿ ಕೇಳ ಜಲ’ ಎಂತಲೂ ಮತ್ತೆ ಕೆಲವರು ಇದನ್ನು ’ಜೀವಜಲ’ ಎಂತಲೂ ಕರೆಯುತ್ತಾರೆ. ಗಿಡವನ್ನು ನೆಟ್ಟ ಚೆನ್ನಾಗಿ ನಿರ್ವಹಣೆ ಮಾಡಿದ ೫-೬ ವರ್ಷಗಳಲ್ಲಿ ಬರುವ ಮೊದಲ ಫಸಲನ್ನು ಎಳನೀರಾಗಿ ಉಪಯೋಗಿಸಬಹುದು. ಕಾಯಿಯಾಗಿ ಬಲಿಯುವ ಎರಡು ಮೂರು ತಿಂಗಳ ಮೊದಲು ಇಳುವರಿ ತೆಗೆದು ಸಹ ಎಳನೀರು ಉಪಯೋಗಿಸಬಹುದು. ಇಂದು ದೇಶದ್ಯಾಂತ ಎಳನೀರು ಉಪಯೋಗ ಬಹಳ ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಅಲ್ಪಾವಧಿಯಲ್ಲಿ ಲಾಭ ತರುವ ಕೆಲಸವೆಂದರೆ ಎಳನೀರು ಮಾರಾಟ ಮಾಡುವುದು. ಇಂದು ನಗರ ಪ್ರದೇಶಗಳಲ್ಲಿ ಎಳನೀರನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಎಳನೀರಿನ ಸೇವನೆ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೆಲವರು ತಲೆಕೆಟ್ಟವರು, ಎನೋ ಸಂಶೋದನೆ ಮಾಡಿದ್ದೇನೆಂದು ಹೇಳುವವರು ಎಳನೀರು ಬಗ್ಗೆ ಅಪಪ್ರಚಾರ ಮಾಡಿರಬಹುದು. ವಾಸ್ತವಾಗಿ ಎಳನೀರು ಶುದ್ಧ ಮತ್ತು ಅಮೃತಕ್ಕೆ ಸಮಾನಾದ ಪಾನೀಯ. ಇದೊಂದು ಚೈತನ್ಯದಾಯಕ ನೈಸರ್ಗಿಕವಾಗಿ ದೊರೆತ ವಿಶಿಷ್ಟವಾದ ಸ್ವಾದವುಳ್ಳ ತಂಪಿನ ನೀರು.
ಆರೋಗ್ಯದಾಯಕ ಎಳನೀರಿನಲ್ಲಿ ’ಎ’ ವಿಟಮಿನ್ ಪ್ರಮಾಣ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಹಿತಕಾರಿ. ವಿಟಮಿನ್ ’ಸಿ’ ಇರುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಿ ಮೂತ್ರ ತೊಂದರೆ ನಿಯಂತ್ರಸುವುದಲ್ಲದೇ ಮೂತ್ರಕೋಶ ಶುದ್ಧಿ ಮಾಡುತ್ತದೆ. ಬಾಯಿ ಉಣ್ಣು ಇತರೆ ಉಷ್ಣ ಸಂಬಂಧಿ ರೋಗಗಳಿಗೆ ಉತ್ತಮವಾಗಿದೆ. ಸಕ್ಕರೆ ಮತ್ತು ಖನಿಜಾಂಶಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ನೀಡಿ ಚೈತನ್ಯ ಉಂಟುಮಾಡುವ ರೆಡಿಫುಡ್ ಇದಾಗಿದೆ. ಗ್ಯಾಸ್ಟ್ರಿಕ್ ತೊಂದರೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಆಯುರ್ವೇದದಲ್ಲಿ ನಾರಿಕೇಳ ಔಷಧಿ ತಯಾರಿಸುತ್ತಾರೆ. ರೋಗ ನಿರೋಧಕ ಶಕ್ತಿಯಿರುವುದರಿಂದ ನೆಗಡಿಯಿಂದ ನಿಮೋನಿಯಾ ವರೆಗೂ ಎಳನೀರನ್ನು ಜೀವಜಲದಂತೆ ಬಳಕೆಯಲ್ಲಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಎಳನೀರು ಲಿಂಗವರ್ಧಕ ಹಾಗೂ ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುವ ಶಕ್ತಿ ಹೊಂದಿದೆ. ದಿನಕ್ಕೊಂದು ಎಳನೀರು ಕುಡಿದರೆ ನಿರೋಗಿಯಾಗಿರಬಹುದು ಎಂದು ಹಿರಿಯರು ಹೇಳುತ್ತಾರೆ.

ತೆಂಗಿನಕಾಯಿ:
ತೆಂಗಿನಕಾಯಿ ಯಾರಿಗೆ ಗೊತ್ತಿಲ್ಲ. ವಿಶಿಷ್ಟ ರುಚಿ ಹೊಂದಿರುವುದರಿಂದ ಮನೆಯಲ್ಲಿ ಮಾಡುವ ಪ್ರತಿ ಆಹಾರಕ್ಕೂ ಬಳಸುತ್ತಾರೆ. ಸಸ್ಯ ಮತ್ತು ಮಾಂಸಹಾರಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಸಾಂಬಾರು, ಪಲ್ಯ, ಚಟ್ನಿ, ಸಿಹಿತಿಂಡಿಗಳಲ್ಲದೇ ಹೋಳಿಗೆ ಇತರೆ ಆಹಾರ ಪದಾರ್ಥಗಳಲ್ಲಿ ಬಳಸುವ ತೆಂಗು ನಾರಿಮಣಿಯರ ಅಚ್ಚುಮೆಚ್ಚು. ಸಸಾರ ಜನಕ ಮತ್ತು ಕಡಿಮೆ ಪ್ರಮಾಣದಲ್ಲಿ ಅನ್ನಾಂಗಗಳು ಸೇರದಂತೆ ಹೆಚ್ಚಿನ ಪೋಷಕಾಂಶವಿರುವ ತೆಂಗು ಆರೋಗ್ಯದಾಯಕ.
ತೆಂಗಿನಒಣಪುಡಿಯನ್ನು ಚಾಕೋಲೆಟ್, ಬಿಸ್ಕತ್, ಮಿಠಾಯಿಗಳ ತಯಾರಿಕೆಯಲ್ಲಿ ಬಳಸುವುದಲ್ಲೇ ಬೇಕರಿ ತಿನಿಸುಗಳ ತಯಾರಿಕೆ, ಬೀಡಾ ಸ್ಟಾಲ್‌ಗಳಲ್ಲಿ ಮತ್ತಿತರ ಆಹಾರ ಪದಾರ್ಥಗಳ ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ.
ತೆಂಗಿನಹಾಲಿನಿಂದ ಇತ್ತೀಚೆಗೆ ನಾನಾ ಆಹಾರ ಪದಾರ್ಥಗಳನ್ನು ತಯಾರಿಸಲು ಕಂಡು ಹಿಡಿಯಲಾಗಿದೆ.

ಕೊಬ್ಬರಿ:
ಅತ್ಯಂತ ಹೆಚ್ಚು ಪೌಷ್ಟಿಕಾಂಶಹೊಂದಿರುವ ಕೊಬ್ಬರಿ ಡ್ರೈಫ್ರೂಟ್ ಮಾದರಿಯಲ್ಲಿ ಜನರಿಗೆ ತನ್ನ ಸ್ವಾದ ನೀಡುತ್ತದೆ. ಕೊಬ್ಬರಿಯಿಂದ ನಾನಾ ತರಹದ ತಿಂಡಿತಿನಿಸುಗಳನ್ನು ತಯಾರಿಸುವರು. ಉತ್ತರ ಭಾರತದ ಜನರಿಗೆ ಕೊಬ್ಬರಿಯೆಂದರೆ ತುಂಬಾ ಇಷ್ಟ. ರಾಜಾಸ್ಥಾನ, ಪಂಜಾಬ್, ದೆಹಲಿ, ಶೀಮ್ಲಾ ಮತ್ತಿತರ ಭಾಗಗಳಲ್ಲಿ ಗೋಡಂಬಿ, ಬಾದಾಮಿ ಮುಂತಾದ ಒಣಹಣ್ಣುಗಳ ಜೊತೆ ಕೊಬ್ಬರಿಯನ್ನು ಬಳಸುತ್ತಾರೆ. ಹಿಮಾಚಲ ಪ್ರದೇಶದ ಜನರು ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿಯನ್ನು ಬಳಸುತ್ತಾರೆ. ಕಲ್ಲುಸಕ್ಕರೆ ಕೊಬ್ಬರಿ ಒಂದು ಭಾಂಧವ್ಯದ ಸಂಕೇತ ಎನ್ನುವಂತೆ ಕೊಬ್ಬರಿಯನ್ನು ಬಳಸುತ್ತಾರೆ. ತುಂಬಾ ಶೀತ ವಲಯದಲ್ಲಿ ದೇಹದ ಉಷ್ಣತೆ ಕಾಪಾಡಲು ಸಹ ಕೊಬ್ಬರಿಯ ಬಳಕೆ ಹೆಚ್ಚಾಗಿರುತ್ತದೆ. ಅತ್ಯಂತ ಬೇಡಿಕೆಯುಳ್ಳ ತಿಪಟೂರು ಕೊಬ್ಬರಿ ದೇಶದಲ್ಲೇ ವಿಶಿಷ್ಟ ರುಚಿಕರವಾದದ್ದು. ತಿಪಟೂರಿನಿಂದ ಪ್ರತಿನಿತ್ಯಾ ಕೊಬ್ಬರಿ ತಂಬಿದ ಸುಮಾರು ೫-೬ ಲಾರಿ ಲೋಡ್‌ಗಳು ಉತ್ತರ ಭಾರತಕ್ಕೆ ರವಾನೆಯಾಗುತ್ತವೆ.
ಕೊಬ್ಬರಿ ಎಣ್ಣೆ ಅತ್ಯಂತ ಸ್ವಾದ ಮತ್ತು ಪೌಷ್ಟಿಕಾಂಶವಿರುವ ಎಣ್ಣೆ. ಕೇರಳದಲ್ಲಿ ಅಡಿಗೆಗೆ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಉಳಿದಂತೆ ತಲೆ ಕೂದಲು ಸೊಂಪಾಗಿ ಬೆಳೆಯಲು, ಮೈಗೆ ಹಚ್ಚಿ ಸ್ನಾನ ಮಾಡಲು, ಲೂಬ್ರಿಕೇಟ್ ಆಯಿಲ್ ತಯಾರಿಸಲು, ಆಯುರ್ವೇದದ ನಾನಾ ತೈಲ ಮತ್ತು ಔಷಧ ತಯಾರಿಸಲು, ಮುಖಕ್ಕೆ ಅಚ್ಚುವ ಕ್ರೀಂ ಹಾಗೂ ಚರ್ಮ ಕಾಯಿಲೆಗಳ ಮುಲಾಮು ತಯಾರಿಸಲು, ಸ್ನಾನದ ಸಾಬೂನು ತಯಾರಿಸಲು ಹೆಚ್ಚಾಗಿ ಈ ಎಣ್ಣೆ ಬಳಸುತ್ತಾರೆ.
ತೆಂಗಿನಚಿಪ್ಪು( ಹೊರಕವಚ):
ತೆಂಗಿನಚಿಪ್ಪು ಪುಡಿ ಮಾಡಿ ಅದರಿಂದ ಅತ್ಯುತ್ತಮವಾದ ಪ್ಲೇವುಡ್ ತಯಾರಿಸುತ್ತಾರೆ. ಶೆಲ್ ಪೌಡರ್, ಗೃಹಪಯೋಗಿ ಅಲಂಕಾರಿಕ ವಸ್ತುಗಳ ತಯಾರಿಕೆಗಾಗಿ ಬಳಸುತ್ತಾರೆ. ಚಿಪ್ಪಿನಿಂದ ತಯಾರಿಸುವ ಇದ್ದಿಲು (ಚಾರ್ಕೋಲ್) ನಾನಾ ಕೈಗಾರಿಕೆಗಳ ಉಪಯೋಗಕ್ಕೆ ಬರುತ್ತದೆ. ಇದ್ದಿಲಿನಿಂದ ತಯಾರಿಸುವ ಆಕ್ಟಿವೇಟೇಡ್ ಕಾರ್ಬನ್ ಇಂದು ವಿದೇಶದಲ್ಲಿ ನಾನಾ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆಯಿರುವ ವಸ್ತು. ಬ್ಯಾಟರಿಗೆ ಬಳಸುವ ಶೆಲ್ ಪೌಡರ್, ಕಾರ್ಬನ್ ತಯಾರಿಸಲು, ವಜ್ರಕ್ಕೆ ಹೊಳಪು ನೀಡಲು, ನೀರನ್ನು ಶುದ್ಧಿಕರಿಸಲು ಹೀಗೆ ನಾನಾ ಔದ್ಯೋಗಿಕ ಕ್ಷೇತ್ರದ ಅತ್ಯಂತ ಬೇಡಿಕೆಯಿರುವ ಇದ್ದಿಲು ಇಂದು ಉದ್ಯಮವಾಗಿ ಬೆಳೆಯುತ್ತಿದೆ.

ತೆಂಗಿನನಾರು:
ತೆಂಗಿನ ನಾರಿನಿಂದ ತಯಾರಿಸುವ ಉತ್ಪನ್ನಗಳಿಗೆ ವಿದೇಶದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ದೇಶಕ್ಕೆ ವಿದೇಶಿ ವಿನಿಮಯ ತಂದು ಕೊಡುವುದರಲ್ಲಿ ನಾರಿನ ಉತ್ಪನ್ನಗಳದ್ದೇ ಮೇರು ಸ್ಥಾನ. ನೆಲ ಹಾಸು ಮತ್ತು ನೆಲಹೊರಸು ಸೇರಿದಂತೆ ತೆಂಗಿನ ನಾರಿನಿಂದ ಗೃಹಬಳಕೆಯ ಮತ್ತು ಅಲಂಕಾರಿಕ ನಾನಾ ಉತ್ಪನ್ನಗಳು ತಯಾರಾಗುತ್ತವೆ. ತೆಂಗಿನ ನಾರಿ ರಬ್ಬರೈಸಡ್ ಮ್ಯಾಟ್ರಸ್ ಇಂದು ಅತ್ಯಂತ ಜನಪ್ರಿಯ. ಹಾಸುಗಳಾಗಿ, ಮೆತ್ತನೆಗಳಾಗಿ ಬಳಸುವುದಲ್ಲದೇ ತೇವಾಂಶವಿರುವ ಪ್ರದೇಶಗಳಲ್ಲಿ, ಮಣ್ಣಿನ ಸವಕಳಿ ತಡೆಯಲು, ತೋಟಗಾರಿಕೆ ಮತ್ತು ಕೃಷಿಗೂ ನಾರನ್ನು ಬಳಸುತ್ತಾರೆ.

ತೆಂಗಿನ ಮಟ್ಟೆ, ಎಡೆಮಟ್ಟೆ ಮತ್ತು ಅದರ ಕುರಂಬಳೆ:
ತೆಂಗಿನ ಮಟ್ಟೆಯಿಂದ ನಾರುನ್ನು ತೆಗೆಯ ಬಹುದಾಗಿದ್ದು ನಾರಿನ ಕೈಗಾರಿಕೆಗೆ ಕಚ್ಛಾಪದಾರ್ಥವಾಗಿ ನಾರು ಬಳಕೆಯಾಗುತ್ತದೆ. ಅಲ್ಲದೇ ಕೆಲವು ಭಾಗಗಳಲ್ಲಿ ನೀರಿನ ತೇವಾಂಶ ಕಾಪಾಡಲು ಮಟ್ಟೆಯನ್ನು ಬಳಸುತ್ತಾರೆ. ನಗರ ಪ್ರದೇಶದ ಹೋಟೇಲ್‌ಗಳು, ಲಾಡ್ಜ್‌ಗಳು, ಕಲ್ಯಾಣ ಮಂಟಪಗಳು, ವಿದ್ಯಾರ್ಥಿ ನಿಲಯಗಳಲ್ಲಿ ತೆಂಗಿನ ಮಟ್ಟೆಯನ್ನು ಉರುವಲುಗಳಾಗಿ ಬಳಸುತ್ತಾರೆ. ತೆಂಗಿನ ಮಟ್ಟೆ, ಎಡೆಮಟ್ಟೆ ಹಾಗೂ ಕುರಂಬಳೆಯನ್ನು ಉರುವಲಿಗಾಗಿ ಹಾಗೂ ಶಾಖೋತ್ಪನ್ನ ಘಟಕಗಳಲ್ಲಿ ಬಳಸುತ್ತಾರೆ.

ನಾರಿನ ಪಿಥ್(ನಾರು ತೆಗೆದು ಉಳಿಯುವ ಪುಡಿ):
ಹಿಂದೆ ನಾರಿನ ಪುಡಿ ಪಿಥ್‌ಗೆ ಯಾವುದೇ ಬೇಡಿಕೆಯಿಲ್ಲದೇ ಕೈಗಾರಿಕೆಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು. ಸ್ವಂತ ಖರ್ಚಿನಿಂದ ಹೊರಗೆ ಸಾಗಿಸಿ ಸುಟ್ಟು ಬಿಡುತ್ತಿದ್ದರು. ಕಳೆದ ೪-೫ ವರ್ಷದಿಂದ ಈ ಪಿಥ್‌ಗೂ ಅಧಿಕ ಬೇಡಿಕೆ ಬಂದಿದೆ. ಇಂದರಿಂದ ತಯಾರಿಸುವ ಪಿಥ್ ಬ್ಲಾಕ್‌ಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ನೀರನ್ನು ಸಂಗ್ರಹಿಸಿಟ್ಟುಕೊಂಡು ತೇವಾಂಶ ಕಾಪಾಡುವ ಈ ಪಿಥ್ ಬ್ಲಾಕುಗಳನ್ನು ಗ್ರೀನ್ ಹೌಸ್‌ಗಳಲ್ಲಿ ಮತ್ತು ನೀರಿನ ಕೊರತೆಯಿರುವ ಪ್ರದೇಶದಲ್ಲಿ ಕೃಷಿಗಾಗಿ ಬಳಸುತ್ತಾರೆ. ಗೊಬ್ಬರ ತಯಾರಿಸಲು ಸಹ ಇತ್ತೀಚೆಗೆ ಬಳಸಲಾಗುತ್ತಿದೆ. ಕೆಲವು ಮುಖ್ಯವಾದ ಪ್ಯಾಕಿಂಗ್‌ಗಾಗಿ ಪಿಥ್ ಬ್ಲಾಕುಗಳನ್ನು ಬಳಸುತ್ತಾರೆಂದು ತಿಳಿದು ಬಂದಿದೆ.


ತೆಂಗಿನಗರಿ:
ತೆಂಗಿನ ಗರಿಯನ್ನು ಹಿಂದೆ ಮನೆಯ ಮೇಲ್ಚಾವಣೆಗೆ ಬಳಸುತ್ತಿದ್ದರು. ಇದರಿಂದ ನಿರ್ಮಿಸುವ ಮನೆ ಸದಾ ಕಾಲ ಹವಾನಿಯಂತ್ರಣದಂತೆ ವಾತಾವರಣವನ್ನು ಕಾಪಾಡುವುದರಿಂದ ಹೆಚ್ಚಾಗಿ ಬಳಸುತ್ತಾರೆ. ಇದೀಗ ನಗರೀಕರಣವಾದಂತೆಲ್ಲಾ ಅವುಗಳನ್ನು ನಿರ್ಭಂಧಿಸಿರುವುದರಿಂದ ಬಳಕೆ ಕಡಿಮೆಯಾಗಿದೆ. ಆದರೆ ಇಂದು ಆಧುನಿಕ ವಿನ್ಯಾಸದಲ್ಲಿ ಅಂತರಾಷ್ಟ್ರೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ತಾಣಗಳಲ್ಲಿ, ಹೊರವಲಯದ ರೆಸಾರ್ಟ್‌ಗಳ ಹಟ್‌ಗಳ ತಯಾರಿಸಲು ತೆಂಗಿನ ಗರಿಗಳನ್ನು ಬಳಸುವುದರ ಜೊತೆಗೆ ಪೊರಕೆ ಕಡ್ಡಿಗಾಗಿ, ಉರುವಲು ಆಗಿ ಮತ್ತು ಪ್ಯಾಕಿಂಗ್ ಉತ್ಪನ್ನವಾಗಿ ಗರಿಯನ್ನು ಬಳಸುತ್ತಾರೆ.

ತೆಂಗಿನಕಡ್ಡಿ:
ತೆಂಗಿನ ಕಡ್ಡಿ ಬಳಕೆ ಹೆಚ್ಚಾಗಿಯೇ ಇದೆ. ನಾವು ಬಳಸುವ ಕಡ್ಡಿಪೊರಕೆ ತೆಂಗಿನ ಗರಿಯಿಂದ ತಯಾರಿಸಿದ್ದು. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು, ಸೇನಾ ನೆಲೆಗಳು, ನೇವಿ ಮುಂತಾದ ಭಾಗಗಳಲ್ಲಿ ತೆಂಗಿನ ಕಡ್ಡಿಯ ಪೊರಕೆ ಬಳಕೆ ಹೆಚ್ಚು. ಅಲ್ಲದೇ ಕೆಲವು ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಸಹ ಕಡ್ಡಿಯನ್ನು ಬಳಸುತ್ತಾರೆ.

ತೆಂಗಿನಮರದ ಕಾಂಡ:
ಅಲಂಕಾರಿಕ ವಸ್ತುಗಳಾಗಿ, ಪೀಠಗಳಾಗಿ, ಮನೆಯ ತೊಲೆಗಳಾಗಿ ಮತ್ತು ಉರುವಲು ಆಗಿ ತೆಂಗಿನಮರದ ಕಾಂಡವನ್ನು ಬಳಸುತ್ತಾರೆ. ಆನೆಯಿದ್ದರೂ ಸಾವಿರ ಸತ್ತರೂ ಸಾವಿರ ಎನ್ನುವ ನಾಣ್ಣುಡಿಯಿದೆ. ಅದರಂತೆ ತೆಂಗಿನ ಮರ ಇದ್ದರೂ ಸಾವಿರ ಸತ್ತರೂ ಸಾವಿರ.



ತೆಂಗಿನ ನಾನಾ ತಳಿಗಳು:
ತೆಂಗಿನಲ್ಲಿ ಪ್ರಮುಖವಾಗಿ ಎರಡು ತಳಿಗಳು ದೇಶದಲ್ಲಿ ಖ್ಯಾತಿಗಳಿಸಿವೆ. ಒಂದು ಎತ್ತರವಾಗಿ ಬೆಳೆಯುವ ತಳಿ ಹಾಗೂ ಗಿಡ್ಡವಾಗಿ ಬೆಳೆಯುವ ತಳಿಗಳು. ಇದರೊಂದಿಗೆ ಎತ್ತರ ಮತ್ತು ಗಿಡ್ಡನೆಯ ತಳಿಗಳ ವಿವಿಧ ಸಂಕರಣ ತಳಿಗಳು ಇವೆ. ತಿಪಟೂರು ಎತ್ತರ ತಳಿ (ತಿಪಟೂರು ಟಾಲ್) ಸುಪ್ರಸಿದ್ದ, ಜೊತೆಗೆ ಚಂದ್ರಕಲ್ಪ, ಪಶ್ಚಿಮ ಎತ್ತರ ತಳಿಗಳಿವೆ. ಇವುಗಳಲ್ಲಿ ಉತ್ಪಾದಿಸುವ ತೆಂಗಿನಕಾಯಿಯನ್ನು ಕೊಬ್ಬರಿ ಮತ್ತು ಎಣ್ಣೆಗೆ ಉಪಯೋಗಿಸುತ್ತಾರೆ.
ಗಿಡ್ಡನ ಜಾತಿಯ ತಳಿಗಳು ಚೌಘಾಟ್ ಕಿತ್ತಳೆ ಗಿಡ್ಡ ತಳಿ, ಮಲೆಯನ್ ಹಳದಿ ಗಿಡ್ಡ ತಳಿ. ಇವುಗಳಲ್ಲಿ ಮೂರು ಬಣ್ಣದ ತಳಿಗಳಿವೆ. ಹಸಿರು, ಹಳದಿ ಮತ್ತು ಕಿತ್ತಳೆ. ಈ ತಳಿಗಳನ್ನು ಹೆಚ್ಚಾಗಿ ಎಳನೀರು ಉತ್ಪಾದನೆಗೆ ಮತ್ತು ಸಂಕರಣ ತಳಿಗಳ ಉತ್ಪಾದನೆಗಾಗಿ ಉಪಯೋಗಿಸುತ್ತಾರೆ.
ನೀರಿನ ಕೊರತೆಯನ್ನು ಸಹಿಸುವ ಶಕ್ತಿಯಿರುವ ಅಲ್ಪಾವಧಿಯ ಹೈಬ್ರಿಡ್ ತಳಿಗಳೆಂದರೆ ಸಂಕರಣ ತಳಿಗಳು. ಚಂದ್ರ ಸಂಕರ, ಲಕ್ಷ ಗಂಗಾ, ಚಂದ್ರಲಕ್ಷಾ ಮತ್ತೊಂದು ಕೇರಾಶ್ರೀ.

ಸಮಸ್ಯೆಗಳು:
ತೆಂಗು ಬೆಳೆಗೆ ನಾನಾ ರೋಗಗಳ ಕಾಟದ ಜೊತೆಗೆ ತಕ್ಕುದಾದ ಮಾರುಕಟ್ಟೆಯ ವ್ಯವಸ್ಥೆಯಿಲ್ಲದಿರುವುದು ರೈತನ ಅದೋಗತಿಗೆ ಕಾರಣ. ಸರಕಾರಗಳ ಉದಾಸೀನತೆ ಮತ್ತು ಬೇಜವಾಬ್ದಾರಿತನದಿಂದ ಉತೃಷ್ಟವಾದ ತೆಂಗು ಇಂದು ಶಾಪಗ್ರಸ್ಥ ಬೆಳೆಯಾಗಿದೆ.
ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ, ತೆಂಗು ಸಂಶೋಧನಾ ಕೇಂದ್ರಗಳು, ತೋಟಗಾರಿಕೆ ಇಲಾಖೆಗಳು ಸೇರಿದಂತೆ ನಾನಾ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ತಮ್ಮ ತಮ್ಮ ಕೊಠಡಿಗಳ ಒಳಗೆ ಕುಳಿತು ಆವಿಷ್ಕಾರ ಮಾಡುತ್ತಾ, ಹಳೇ ಪುಟ ತಿರುಗಿಸುತ್ತಾ ತಮ್ಮ ಸಮಯವನ್ನು ಕಳೆಯಲು, ಜೀವನ ಸಾಗಿಸಲು ಹುಡುಕಿಕೊಂಡ ಉದ್ಯೋಗದಂತೆ ವರ್ತಿಸುತ್ತಿವೆ.
ಒಬ್ಬ ಬಡ ರೈತನ ಸಂಕಟಗಳನ್ನು ಕೇಳುವ ತಾಳ್ಮೆ, ಸಹನೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ನೀಡುವ ಮನಸ್ಥಿತಿ ಸರಕಾರಿ ಅಧಿಕಾರಿಗಳಲ್ಲಿ ಇಲ್ಲ. ಎಲ್ಲರೂ ಹಣ ಮಾಡುವ ಉದ್ದೇಶದಿಂದ ಸೇವೆ ಮಾಡುತ್ತಿದ್ದಾರೆ ವಿನಃ ಪ್ರಮಾಣೀಕವಾದ ಸೇವೆ ಮಾಡುವ ಯಾವೊಬ್ಬ ವ್ಯಕ್ತಿಯೂ ರೈತನ ಕಣ್ಣಿಗೆ ಬಿದ್ದಿಲ್ಲ.
ತೆಂಗಿಗೆ ಸುಳಿಕೊರೆಯುವ ದುಂಬಿಗಳ ಕಾಟ, ಎಲೆ ತಿನ್ನುವ ಹುಳುವಿನ ಬಾಧೆ, ಕೆಂಪು ಮೂತಿ ಹುಳುವಿನ ಬಾಧೆ, ಕಪ್ಪು ತಲೆ ಹುಳದ ಕಾಟ, ಸುಳಿ ಕೊಳೆ ರೋಗ, ಕಾಂಡ ಸೋರುವ ರೋಗ, ಬೇರು ಸೋರುವ ರೋಗ, ಅಣಬೆ ರೋಗ, ಎಲೆ ಚುಕ್ಕೆ ರೋಗ, ನುಸಿ ಪೀಡೆ ಹೀಗೆ ಹತ್ತು ಹನ್ನೋಂದು ರೋಗಗಳು ಸಾಲುಗಟ್ಟಿ ಬರುತ್ತಲೇ ಇದ್ದರೂ ನಿಯಂತ್ರಣ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.
ಇಲಾಖೆಗಳು ಕ್ಷೇತ್ರ ಪರ್ಯಟನೆ ಮಾಡದೇ ಕಛೇರಿಯಲ್ಲಿ ಕುಳಿತು ಸಮಸ್ಯೆಗೆ ಪರಿಹಾರ ಹುಡುಕುವ ವ್ಯರ್ಥ ಸಾಹಸ ಮಾಡುತ್ತಿವೆ. ಅಧ್ಯಯನ ಮತ್ತು ಸಂಶೋಧನೆಗಳ ಕೊರತೆ ಸಮಸೈಗಳ ಉಲ್ಫಣಕ್ಕೆ ಮೂಲ ಕಾರಣವಾಗಿದೆ. ತೆಂಗು ಬೆಳೆಯುವ ಪ್ರದೇಶಗಳಲ್ಲಿ ಒಂದು ಪ್ರತ್ಯೇಕಮವಾದ ತೆಂಗು ಸಂಶೋಧನಾ ಕೇಂದ್ರ ತೆರೆಯ ಬೇಕು. ಸಮೀಪ ಸುತ್ತಾಡಿ ಮಾಹಿತಿ ಸಂಗ್ರಹಿಸಲು ಮೋಬೈಲ್ ಘಟಕಗಳನ್ನು ನೀಡಬೇಕು. ನೂತನ ತಂತ್ರಜ್ಞಾನ ಅಳವಡಿಸಲು ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಸಮಾರೋಪಾದಯಲ್ಲಿ ನಡೆಯಬೇಕು.

ವ್ಯಾಪಾರಿಗಳ ತಂತ್ರ ಬೆಲೆಕುಸಿತ:
ತೆಂಗಿನ ಉತ್ಪನ್ನಗಳ ತಯಾರಿಕೆ ದೀರ್ಘಾವಧಿಯಾಗಿದೆ. ಮರದಿಂದ ತೆಂಗಿನ ಕಾಯಿ ಉತ್ಪಾದನೆಯಾಗಲು ೧೨ ತಿಂಗಳು ಕಾಲಾವಕಾಶ ಬೇಕು. ತೆಂಗಿನ ಕಾಯಿ ಕೊಬ್ಬರಿಯಾಗಿ ತಯಾರಾಗಲು ಪುನಃ ೧೦ ತಿಂಗಳಿನಿಂದ ಒಂದು ವರ್ಷ ಬೇಕು. ರೈತನ ಕೈಗೆ ಕೊಬ್ಬರಿಯಾಗಿ ಸಿಗಬೇಕಾದರೆ ಎರಡು ವರ್ಷ ಬೇಕೆ ಬೇಕು. ಪ್ರತಿನಿತ್ಯಾ ಮಕ್ಕಳಂತೆ ಆರೈಕೆ ಮಾಡುವ ರೈತ ಸತತ ಎರಡು ವರ್ಷ ನಿದೆಗೆಟ್ಟು ಕಾಪಾಡುವ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಆರು ಕಾಸಿನ ಪದಾರ್ಥಕ್ಕೆ ಮೂರು ಕಾಸು ಬೆಲೆ ಕಟ್ಟುತ್ತಾರೆ. ಆಗ ರೈತನಿಗೆ ಉಳಿಯುವ ಮಾರ್ಗ ನೇಣು.
ಬಲಿತ ತೆಂಗಿನ ಕಾಯಿಯನ್ನು ಒಟ್ಟಾಗಿ ಸಂಗ್ರಹಿಸಿ ಸಾಮಾನ್ಯ ಉಷ್ಣತೆಯಲ್ಲಿ ನೈಸರ್ಗಿಕವಾಗಿ ಒಣಗಿಸಬೇಕು. ತೆಂಗಿನಕಾಯಿಯಲ್ಲಿರುವ ನೀರು ಆವಿಯಾಗಿ ಕೊಬ್ಬರಿ ಹದವಾಗಿ ಒಣಗಿದಾಗ ಕೊಬ್ಬರಿಯಾಗಿ ಉಪಯೋಗಕ್ಕೆ ಸಿದ್ಧವಾಗುತ್ತದೆ. ಇದನ್ನು ಸುಮಾರು ೫-೬ ತಿಂಗಳು ಸಂಗ್ರಹಿಸಿಟ್ಟು ಉಪಯೋಗಿಸಬಹುದು. ಕೆಟ್ಟು ಹೋದ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆ ತಯಾರಿಸಿ ಅದನ್ನು ಸೋಪು ತಯಾರಿಸುವ ಕೈಗಾರಿಕೆಗಳಿಗೆ ಕಳುಹಿಸುತ್ತಾರೆ.

ರೈತನ ಹಿತಕಾಯದ ತಿಪಟೂರು ಎಪಿಎಂಸಿಯ ಕೊಬ್ಬರಿ ಮಾರುಕಟ್ಟೆ:
ರಾಜ್ಯದಲ್ಲೇ ಕೊಬ್ಬರಿಗೆ ಅತಿ ದೊಡ್ಡ ಮಾರುಕಟ್ಟೆ ತಿಪಟೂರಿನಲ್ಲಿದೆ. ತಾಲೂಕು ಆಡಳಿತ ವರ್ತಕರ ಕೈಯಲ್ಲಿರುವುದರಿಂದ ಈ ಮಾರುಕಟ್ಟೆ ರೈತನಿಗೆ ನ್ಯಾಯಯುತವಾದ ಬೆಲೆ ಇಂದಿಗೂ ಸಿಕ್ಕಿಲ್ಲ. ಕೊಬ್ಬರಿ ಉತ್ಪಾದನೆ, ನಿರ್ವಹಣೆ, ಅವಧಿ, ಉಪಚಾರ ಲೆಕ್ಕಹಾಕಿದರೆ ವೈಜ್ಞಾನಿಕವಾಗಿ ರೈತನ ಶ್ರಮಕ್ಕೆ ತಕ್ಕಂತೆ ಪ್ರತಿ ಕ್ವಿಂಟಾಲ್‌ಗೆ ೧೨ಸಾವಿರ ಬೆಲೆ ಬರಬೇಕು.
೧೯ರ ದಶಕದಲ್ಲಿ ಧಾರಣೆ ೮ ಸಾವಿರ ತಲುಪಿತ್ತು. ಆದರೆ ಕಳೆದ ೧೦ ವರ್ಷಗಳಿಂದ ಧಾರಣೆ ಪ್ರತಿ ಕ್ವಿಂಟಾಲ್‌ಗೆ ೬ ಸಾವಿರ ಗಡಿ ದಾಟಿಲ್ಲ.
ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಕಳೆದ ೧೦ ವರ್ಷಗಳಲ್ಲಿ ಐದರಿಂದ ಹತ್ತು ಪಟ್ಟು ಹೆಚ್ಚಿದೆ. ಆದರೆ ಕೊಬ್ಬರಿಯ ಧಾರಣೆ ಮಾತ್ರ ದಿನೇ ದಿನೇ ಕ್ಷೀಣಿಸುತ್ತಿದೆ. ಇಲ್ಲಿನ ವ್ಯಾಪಾರಿಗಳ ಲಾಭಿ, ದುರಾಸೆ, ವಂಚನೆ, ಅಕ್ರಮ ವ್ಯವಹಾರಗಳಿಂದ ರೈತನ ಮಾರಣ ಹೋಮ ನಡೆಯುತ್ತಿದೆ. ಎಪಿಎಂಸಿ ಸಮಿತಿ ಕೇವಲ ರೈತನ ವ್ಯಾಪಾರದಿಂದ ಬರುವ ಲಾಭವನ್ನಷ್ಟೆ ನೋಡುತ್ತಿದೆ ಆದರೆ ರೈತನ ಹಿತ ಕಾಯುವಲ್ಲಿ ವಿಫಲವಾಗಿದೆ.
ಇಲ್ಲಿನ ವರ್ತಕರು ರೈತರೇ ಆಗಿದ್ದರೂ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ವರ್ತಕರು ಮತ್ತು ರವಾನೆದಾರರು ತೆರಿಗೆ ವಂಚನೆ, ಮಾರುಕಟ್ಟೆಯ ಲಾಭಿಯಿಂದ ಹೇರಳ ಆದಾಯಗಳಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಕೊಬ್ಬರಿಗೆ ಬೇಡಿಕೆಯಿದ್ದರೂ ವಿನಾ ಕಾರಣ ಬೇಡಿಕೆಯಿಲ್ಲ ಎಂಬ ವಾತಾವರಣ ಸೃಷ್ಟಿ ಮಾಡುವುದು. ಅಧಿಕೃತವಾಗಿ ಬಿಲ್ಲುಗಳ ಮೂಲಕ ರವಾನೆ ಮಾಡದೇ ಕಳ್ಳದಾರಿಯಲ್ಲಿ (ನಂ.೨) ಸಾಗಿಸಿ ತೆರಿಗೆ ಹಣವನ್ನು ತಮ್ಮ ಲಾಭಕ್ಕೆ ಸೇರಿಸಿಕೊಳ್ಳುವುದು, ತೂಕದಲ್ಲಿ ಮೋಸ ಮಾಡುವುದು ನಾನಾ ತರಹದ ಶೋಷಣೆ ನಿರಂತರವಾಗಿ ನಡೆಯುತ್ತಿದೆ.
ರೈತನಿಗೆ ಶೋಷಣೆಯಾಗದಂತೆ ತಡೆಯುವುದು, ರೈತ ಮಾರುಕಟ್ಟೆಗೆ ಬಂದು ಹೋಗಲು ಅನುಕೂಲಕರ ವಾತಾವರಣ ಸೃಷ್ಟಿಸುವುದು, ಬೆಲೆ ಅಸಮನಾಂತರ ವ್ಯತ್ಯಾಯ ಆಗದಂತೆ ನಿಯಂತ್ರಿಸುವುದು, ರೈತ ಮತ್ತು ರೈತ ಬಳಸುವ ಯಾವುದೇ ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ಕ್ರಮ ವಹಿಸುವುದು ಮುಂತಾದ ನಾನಾ ಜವಾಬ್ಧಾರಿಗಳು ಎಪಿಎಂಸಿಯ ಸಮಿತಿ ಮೇಲಿದ್ದರೂ ಯಾವುದೇ ಪರಿಣಾಮಕಾರಿ ಕೆಲಸಮಾಡದೇ ನಿರ್ಲಿಪ್ತವಾಗಿದೆ.

ನ್ಯಾಫೆಡ್ ಖರೀದಿ ಕೇಂದ್ರ:
ಕೇಂದ್ರ ಸರಕಾರದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ತೆಂಗಿನ ಕೊಬ್ಬರಿಗೂ ಬೆಂಬಲ ಬೆಲೆ ಘೋಷಿಸಿದೆ. ದಶಕಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ೨೭೦೦ ರೂ ಇದ್ದದ್ದು ನಂತರದ ದಿನಗಳಲ್ಲಿ ಕ್ರಮೇಣ ಬೆಲೆಯನ್ನು ಹೆಚ್ಚಿಸಿದೆ. ಇಂದು ಕೇಂದ್ರ ಕೊಬ್ಬರಿಗೆ ೪೭೦೦ ರೂಗಳನ್ನು ನಿಗಧಿ ಮಾಡಿದೆ.
ಕರ್ನಾಟಕ ವ್ಯವಸಾಯೋತ್ಪನ್ನಗಳ ಮಾರಾಟ ಮಾಹ ಮಂಡಳಿಯ ಉಸ್ತುವಾರಿಯಲ್ಲಿ ಕೇಂದ್ರದ ನ್ಯಾಫೆಡ್ ಸಂಸ್ಥೆಯೂ ರೈತರಿಂದ ಕೇಂದ್ರದ ಬೆಂಬಲ ಬೆಲೆ ೪೭೦೦ಕ್ಕೆ ಕೊಬ್ಬರಿಯನ್ನು ಖರೀದಿಸುತ್ತದೆ. ರಾಜ್ಯದ ತಿಪಟೂರು, ತುಮಕೂರು, ಗುಬ್ಬಿ, ಚಿ.ನಾ.ಹಳ್ಳಿ, ತುರುವೇಕೆರೆ ಸೇರಿದಂತೆ ಕೊಬ್ಬರಿ ಮಾರುಕಟ್ಟೆಯಿರುವ ಸ್ಥಳಗಳಲ್ಲಿ ನ್ಯಾಫೆಡ್ ಖರೀಧಿ ಕೇಂದ್ರ ಸ್ಥಾಪನೆಗೊಂಡಿವೆ.
ಮಾರುಕಟ್ಟೆಯಲ್ಲಿ ವರ್ತಕರು ರೈತರನ್ನು ಶೋಷಿಸಲು ಕೊಬ್ಬರಿಯ ಬೆಲೆಯನ್ನು ಇಳಿಸಿದಾಗ ಬೆಲೆ ನಿಯಂತ್ರಿಸಲು ಬೆಂಬಲ ಬೆಲೆ ಸಹಾಯಕ್ಕೆ ಬರುತ್ತದೆ. ಆದರೆ ರಾಜ್ಯ ರೈತ ಸಂಘ ಈ ಬೆಲೆ ಅವೈಜ್ಞಾನಿಕವಾಗಿದ್ದು ೯ ಸಾವಿರ ಬೆಂಬಲ ಬಲೆ ಘೋಷಿಸಬೇಕು ಎಂದು ಹೋರಾಡುತ್ತಿದೆ. ತಾತ್ಕಲಿಕವಾಗಿ ಕನಿಷ್ಟ ೬ ಸಾವಿರ ಘೋಷಿಸಬೇಕು ಎಂದು ಪಟ್ಟು ಹಿಡಿದು ಒತ್ತಾಯಿಸುತ್ತಿದೆ. ರಾಜಕೀಯ ಹಸ್ತಕ್ಷೇಪ, ಪರಿಣಾಮಕಾರಿಯಾದ ಹೋರಾಟ, ಮುಖಂಡರ ಗಡಸುತನದ ಕೊರತೆ, ಸಂಘಟನೆಯ ತೀವ್ರತೆ ಕೇಂದ್ರದ ಮೇಲೆ ಪ್ರಭಾವ ಬೀರದ ಕಾರಣ. ರೈತನ ಕೂಗು ಅವರ ತೋಟಗಳಿಂದ ಆಚೆಗೂ ಹೋಗಿಲ್ಲ.
ಕಳೆದ ಎರಡು ವರ್ಷದಿಂದ ರಾಜ್ಯ ಸರಕಾರ ತೆಂಗು ಬೆಳೆಗಾರನ ದುಸ್ಥಿತಿ ನೋಡಿ ಸಹಾಯ ಧನ ಘೋಷಿಸಿ, ನೀಡುತ್ತಿದೆ. ಕಳೆದ ಬಾರಿ ಪ್ರತಿ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ರೈತನಿಗೆ ೬೦೦ರೂ ಸಹಾಯ ಧನ ಘೋಷಿಸಿತ್ತು. ಈ ಬಾರಿ ಆರಂಭದಲ್ಲಿ ೩೦೦ರೂ. ಘೋಷಿಸಿದ್ದು ಈಗ ಪುನಃ ೬೦೦ರೂಗಳಿಗೆ ಹೆಚ್ಚಿಸಿದೆ. ನಿಜಕ್ಕೂ ಸರಕಾರದ ರೈತ ಪರ ಹಿತಾಸಕ್ತಿ ಇದರಿಂದ ವ್ಯಕ್ತವಾಗಿದೆ.
ಆದರೆ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಯಕ್ಕೆ ಕಾರಣ ವರ್ತಕರು ಮತ್ತು ರವಾನೆದಾರರು ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇಲ್ಲಿನ ದುರಾಸೆಯ ವರ್ತಕರು ನ್ಯಾಯಯುತವಾದ ವ್ಯಾಪಾರ ಮಾಡುತ್ತಿಲ್ಲ. ಅಕ್ರಮ ದಂಧೆಗಾಗಿ ಇಡೀ ಮಾರುಕಟ್ಟೆಯನ್ನೇ ಹಾಳು ಮಾಡುತ್ತಿದ್ದಾರೆ. ಮಾಜಿ ಶಾಸಕರಾದವರೂ ಸಹ ಇಂತಹ ದಂಧೆಯಲ್ಲಿ ನಿರತರಾಗಿದ್ದು ನಿಯಂತ್ರಣ ಕಷ್ಟ ಸಾಧ್ಯವಾಗಿದೆ.

ತಿಪಟೂರು ಗಣಪತಿ

ತಿಪಟೂರು ಗಣಪತಿ
ಕಲ್ಪತರು ನಾಡೆಂದೇ ಸುಪ್ರಸಿದ್ದವಾದ ತಿಪಟೂರು ಗಣಪತಿ ಮತ್ತು ಕೊಬ್ಬರಿಗೆ ಪ್ರಖ್ಯಾತಿ. ಇಲ್ಲಿನ ಕೊಬ್ಬರಿಗೆ ರಾಷ್ಟ್ರದ್ಯಾದ್ಯಂತ ಮನ್ನಣೆಯಿದ್ದರೆ, ಗಣಪತಿ ಮಹೋತ್ಸವಕ್ಕೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.
ಬೆಂಗಳೂರು ಕರಗ, ಮೈಸೂರು ದಸರಾದಷ್ಟೇ ಇಲ್ಲಿನ ತಿಪಟೂರಿನ ಗಣಪತಿ ಉತ್ಸವ ವಿಶೇಷವಾಗಿದೆ. ನಗರದ ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಕಾರ್ಯಕರ್ತರು ಗಣೇಶ ಚತುರ್ಥಿಯಂದು ಶ್ರೀಗಳನ್ನು ಇಲ್ಲಿನ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿ ಸುಮಾರು ೭೫ರಿಂದ ೮೬ ದಿನಗಳವರೆಗೆ ಪೂಜಿಸುತ್ತಾರೆ. ಪ್ರತಿನಿತ್ಯಾ ನಿರಂತರವಾಗಿ ಹರಿಕಥೆ, ಸಂಗೀತಾ, ಯಕ್ಷಗಾನ, ಆರ್ಕೆಷ್ಟ್ರಾ, ನೃತ್ಯ ಹೀಗೇ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಈ ಅವಧಿಯಲ್ಲಿ ಸಾಂಸ್ಕೃತಿಕ ಹಬ್ಬವೇ ನಡೆಯುತ್ತದೆ.
ಸಮಿತಿಯೂ ನಾಡಿನ ಮೂಲೆ ಮೂಲೆಯಿಂದ ನಾನಾ ಪ್ರಸಿದ್ದ ಕಲಾವಿದರನ್ನು ಕರೆಸಿ ಪ್ರದರ್ಶನ ನೀಡಿ ಜನರಿಗೆ ಪರಿಚಯಿಸುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಕಲಾಶ್ರೀಮಂತಿಕೆಯನ್ನು ಮೆರೆಸುವ ವೇದಿಕೆಯಾಗಿಯೂ ಆಗಿದೆ. ನಿತ್ಯಾ ಇಲ್ಲಿ ನಡೆಯುವ ಅಭಿಷೇಕ, ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗ ವಿಶಿಷ್ಟವಾದದು. ಅಲ್ಲದೇ ವಾರಕ್ಕೊಮ್ಮೆ ವಿಶೇಷ ಪೂಜೆ, ಪ್ರದೂಷ ಪೂಜೆ, ಶ್ರೀಸಂಕಷ್ಟಹರ ಗಣಪತಿ ವ್ರತ, ಅಂಗಾರಕ ಸಂಕಷ್ಟಹರ ಗಣಪತಿ ವ್ರತ, ಸತ್ಯನಾರಾಯನ ಪೂಜಾ, ಸಹಸ್ರಮೋದಕ ಗಣಪತಿ ಹೋಮ ಹೀಗೆ ವಿಶೇಷ ಧಾರ್ಮಿಕ ಪೂಜಾ ವಿಧಾನಗಳು ನಿರಂತರವಾಗಿ ನಡೆಯುವ ಮೂಲಕ ಆಸ್ಥಿಕರನ್ನು ತನ್ನಡೆಗೆ ಸೆಳೆದಿದೆ.
ನಿತ್ಯಾ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆಗಾಗ ನಾಡಿನ ಹೆಸರಾಂತ ಕಲಾವಿದರು, ಕಲಾತಂಡಗಳ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಕಲಾರಸಿಕರ ತಣಿಸುವ ಏಕೈಕ ತಾಣ ಇದಾಗಿದೆ. ಸಂಗೀತಾ ರಸಮಂಜರಿ ಕಾರ್ಯಕ್ರಮ, ನಾಟಕ, ನೃತ್ಯ, ಅಭಿನಯ, ಜಾದೂ, ಮಿಮಿಕ್ರಿ, ಹಾಸ್ಯ ಸೇರಿದಂತೆ ನಾನಾ ವಿಶಿಷ್ಟ ಕಾರ್ಯಕ್ರಮಗಳು ಜರುಗುವುದರಿಂದ ಸುತ್ತಾಮುತ್ತಲ ತಾಲೂಕಿಗಳಿಂದ ಸಾವಿರಾರು ಜನರು ಆಕರ್ಷಿತರಾಗಿದ್ದಾರೆ. ಎಂ.ಎಸ್. ಸುಬ್ಬಲಕ್ಷ್ಮಿ, ಕೆ. ವೈದ್ಯನಾಥನ್, ಜೇಸುದಾಸ್, ಪಿ. ಕಾಳಿಂಗರಾವ್ ಮತ್ತಿತರ ಮಹಾನ್ ಕಲಾವಿದರು ಕಾರ್ಯಕ್ರಮ ನೀಡಿದ ಹೆಚ್ಚುಗಾರಿಕೆ ಇದೆ ಎಂದರೆ ತಪ್ಪಾಗಲಾರದು.
ಕೊನೆಯಲ್ಲಿ ಕಾರ್ಯಕ್ರಮಗಳ ಭರಾಟೆ ತೀವ್ರಗೊಳ್ಳುತ್ತೆ. ಮಹಾಮಂಗಳಾರತಿ, ಅನ್ನದಾನ, ವಿಸರ್ಜನಾ ಮಹೋತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ವಿಶೇಷಗಳಲ್ಲಿ ವಿಶೇಷ. ಮಹಾಮಂಗಳಾರತಿಯಲ್ಲಿ ನಗರದ ಎಲ್ಲಾ ಮಹಿಳೆಯರೂ ಭಯ ಭಕ್ಯಿಯಿಂದ ಪಾಲ್ಗೊಂಡರೆ ಸಿಡಿಮದ್ದು ಪ್ರದರ್ಶನ ಹಾಗೂ ಅನ್ನದಾನದಲ್ಲಿ ಲಿಂಗ ಬೇದ ಮತ್ತು ವರ್ಗ ಬೇದ ಮರೆತು ಎಲ್ಲರೂ ಸಾಮರಸ್ಯದಿಂದ ಭಾಗವಹಿಸುತ್ತಾರೆ. ವಿಸರ್ಜನಾ ಮಹೋತ್ಸವ ಎರಡು ಹಗಲು ಮತ್ತು ಒಂದು ರಾತ್ರಿ ನಡೆಯುತ್ತದೆ ಆಗ ಸುಮಾರು ೨೫ ಸಾವಿರಕ್ಕೂ ಅದಿಕ ಸಂಖ್ಯೆಯಲ್ಲಿ ಜನರು ಹಾಜರಿದ್ದು ಭಕ್ತಿ ಜೊತೆಗೆ ಮನರಂಜೆನಯನ್ನು ಪಡೆಯುತ್ತಾರೆ.
ವಿಸರ್ಜನಾ ಮಹೋತ್ಸವದ ಮುನ್ನ ದಿನ ನಡೆಯುವ ರಾತ್ರಿ ಉತ್ಸವ ನಿಜಕ್ಕೂ ಆಕರ್ಷಕ ಮತ್ತು ಮನರಂಜನಾತ್ಮಕವಾದುದು. ರಾತ್ರಿ ಪ್ರಸಿದ್ಧ ಕಂಪನಿಗಳು ಲಾರಿಗಳಲ್ಲಿ ದೀಪಾಲಂಕಾರದೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾರೆ. ನಂದಿಧ್ವಜ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ತಮಟೆ, ಕೇರಳದ ವಾದ್ಯ, ಕೋಲಾಟ ಸೇರಿದಂತೆ ನಾನಾ ಕಲಾತಂಡಗಳು ಇಡೀ ರಾತ್ರಿ ಆಯಾಸವಿಲ್ಲದಂತೆ ಸ್ಪರ್ದೆಯ ರೀತಿಯಲ್ಲಿ ಪ್ರದರ್ಶನ ನಿಡುತ್ತಾರೆ. ನಾಡಿನ ಮೂಲೆ ಮೂಲೆಯಿಂದ ಬರುವ ಭಕ್ತರು ಅಂದಿನ ರಾತ್ರಿ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಕಲಾಪ್ರದರ್ಶನಗಳ ಸವಿಯನ್ನು ಉಣ್ಣುತ್ತಾರೆ. ಯುವಕ ಯುವತಿಯರು ಕೈ ಕೈ ಹಿಡಿದು ಇಡೀ ನಗರದಲ್ಲೆಲ್ಲಾ ನಡೆಯುವ ಉತ್ಸವದಲ್ಲಿ ಆನಂದದಿಂದ ಭಾಗವಹಿಸುತ್ತಾರೆ. ಮಧ್ಯೆ ರಾತ್ರಿ ನಡೆಯುವ ವಿಶೇಷ ಆಕರ್ಷಕ ಸಿಡಿಮದ್ದಿನ ಬಾಣ, ಬಿರುಸು ಪ್ರದರ್ಶನ ನೋಡುವುದೇ ಒಂದು ಆನಂದ.
ತಿಪಟೂರಿನ ಗಣೇಶ ವಿಶೇಷ ಮತ್ತು ಹೆಚು ಆಕರ್ಷಕ. ಸುಮಾರು ಆರುಕ್ಕಾಲು (೬.೨೫)ಅಡಿಯ ಇಲ್ಲಿನ ಮೂರ್ತಿಯನ್ನು ವಿಶೇಷ ಭಾವ ಸಂಯೋಜನೆಯಲ್ಲಿ ಸಿದ್ಧಪಡಿಸಲಾಗುತ್ತದೆ. ಮೂರ್ತಿಯ ನೋಟ ವಿಶಿಷ್ಟವಾಗಿದ್ದು, ದರ್ಶನ ಮಾಡಿದವರಲ್ಲಿ ಭಕ್ತಿತೀವ್ರತೆ ಉಂಟು ಮಾಡುತ್ತದೆ. ಮೂರ್ತಿಯನ್ನು ಸತತ ೫೦ ವರ್ಷ ತಯಾರಿಸಿಕೊಟ್ಟ ಕೀರ್ತಿ ತಿಪಟೂರು ಸಮೀಪದ ಕೊಪ್ಪದ ನಂಜಪ್ಪ ಶೆಟ್ಟರಿಗೆ ಸಲ್ಲುತ್ತದೆ. ಅವರು ನಿಧನರಾದ ನಂತರ ಅವರ ತಮ್ಮನ ಮಗ ಯೋಗಾನಂದ್ ಸುಮಾರು ೨೨ ವರ್ಷದಿಂದ ಮೂರ್ತಿಯನ್ನು ಸಿದ್ಧಪಡಿಸಿಕೊಡುತ್ತಿದ್ದಾರೆ.

ಪ್ರತಿಷ್ಠಾಪನೆಗೊಂಡಂದಿನಿಂದ ೭೦-೮೦ ದಿನಗಳ ಕಾಲ ನಿರಂತರವಾಗಿ ತಿಪಟೂರು ಜನತೆಗೆ ಸಾಂಸ್ಕೃತಿಕ ರಸದೌತಣ ನೀಡುವ ಗಣಪತಿ ಮಹೋತ್ಸವ ಈ ರೀತಿಯಲ್ಲಿ ಸುಪ್ರಸಿದ್ಧವಾಗಿದೆ. ೧೯೩೦ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರು ರಾಷ್ಟ್ರ ಮಟ್ಟದಲ್ಲಿ ಗಣಪತಿ ಮಹೋತ್ಸವಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ತಿಪಟೂರಿನಲ್ಲೂ ಗಣಪತಿ ಪ್ರತಿಷ್ಠಾಪನೆ ಮತ್ತು ಉತ್ಸವ ಆಚರಣೆಗೆ ಬಂತು. ಅಂದು ಬೆಂಗಳೂರಿನ ತಿಮ್ಮಪ್ಪ ಎಂಬುವರು ಇಲ್ಲಿನ ದಿವಾನ್ ನರಸಿಂಹಯ್ಯನವರ ಛತ್ರದಲ್ಲಿ ಶ್ರೀಸತ್ಯಗಣಪತಿಯನ್ನು ಪ್ರತಿಷ್ಟಾಪಿಸಿ ಪೂಜೆ ಆರಂಭಿಸಿದ್ದರು. ಅಂದಿನಿಂದ ಇದೂವರೆಗೂ ಯಾವುದೇ ವಿಘ್ನವಿಲ್ಲದಂತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಇಂದು ತನ್ನ ಸ್ವಂತ ನೆಲದಲ್ಲಿ ಸುಮಾರು ೨ಕೋಟಿಯ ಆಸ್ತಿಯನ್ನು ಹೊಂದಿರುವ ಶ್ರೀಗಣಪತಿಯ ಯಶಸ್ವಿಗೆ ಕಾರಣ ಈಗಿನ ಟ್ರಸ್ಟ್.
ಹಲವು ಗಣ್ಯಮಾನ್ಯರ ಸಹಕಾರದಿಂದ ದಿ.ಬಿ.ಎಸ್.ಚಂದ್ರಶೇಖರಯ್ಯನವರ ನೇತೃತ್ವದಲ್ಲಿ ಬಲಗೊಂಡ ಶ್ರೀ ಸತ್ಯಗಣಪತಿ ಸೇವಾ ಸಂಘವನ್ನು ೧೯೭೬ರಲ್ಲಿ ಟ್ರಸ್ಟ್ ಆಗಿ ಪರಿವರ್ತಿಸಲಾಯಿತು. ಟ್ರಸ್ಟ್‌ನ ಸತತ ಪರಿಶ್ರಮದಿಂದ ಸಕಲ ಭಕ್ತರ ಸಹಕಾರದಿಂದ ಶಾಶ್ವತ ಭವ್ಯ ಆಸ್ಥಾನ ಮಂಟಪ ಮತ್ತು ಪ್ರತತಿಷ್ಠಾಪನೆಯ ನೆನಪಿಗಾಗಿ ಸುವರ್ಣ ಮಹೋತ್ಸವ ಭವನ ನಿರ್ಮಾಣಗೊಂಡವು. ಚಂದ್ರಶೇಖರಯ್ಯನವರ ನಿದನ ನಂತರ ಅವರ ಪುತ್ರ ಬಿ.ಸಿ. ರವಿಶಂಕರ್ ಅವರು ಟ್ರಸ್ಟ್ ಅಧ್ಯಕ್ಷರಾಗಿದ್ದು ಮೊದಲಿಗರು ಹಾಕಿಕೊಟ್ಟ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಧಾರ್ಮಿಕ ಸ್ಥಳವನ್ನು ಈಗ ಸಾಮಾಜಿಕ ಸೇವೆಗೂ ವಿಸ್ತರಿಸಿಕೊಂಡ ಟ್ರಸ್ಟ್ ತಾಲೂಕಿನ ಸಮಸ್ತರ ಪ್ರೀತಿ ಮತ್ತು ವಿಶ್ವಾಸದ ಕೇಂದ್ರವಾಗಿದೆ.
ಭಕ್ತರು ನೀಡುವ ದೇಣಿಗೆ ಹಾಗೂ ಹಿಂದಿನಿಂದ ನಿರಂರವಾಗಿ ನಡೆದುಕೊಂಡು ಬಂದ ಬಹುಮಾನ ಯೋಜನೆಯಿಂದ ಬಂದ ಹಣದಲ್ಲಿ ಶ್ರೀಗಣೇಶನಿಗಾಗಿ ಭವ್ಯ ಆಸ್ಥಾನ ಮಂಟಪ ಹಾಗೂ ಪಕ್ಕದಲ್ಲೇ ಸುವರ್ಣ ಮಹೋತ್ಸವ ಭವನ ನಿರ್ಮಾಣವಾಗಿದೆ. ಭವನವನ್ನು ಕಡಿಮೆ ದರದಲ್ಲಿ ಶುಭಕಾರ್ಯಗಳಿಗೆ ಭವನವನ್ನು ನೀಡುವುದರಿಂದ ಬರುವ ಆದಾಯದಿಂದ ಆದಾಯದಿಂದ ಪ್ರತಿ ತಿಂಗಳು ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. ಈವರೆಗೆ ೫೦೦೦ಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆದು ಧನ್ಯರೆನೆಸಿದ್ದಾರೆ. ಒಂದು ಧಾರ್ಮಿಕ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ಸಮಾಜದ ನಾನಾ ಆಯಾಮಗಳತ್ತ ಕೆಲಸಮಾಡುವಲ್ಲಿ ಪ್ರಮಾಣಿಕತೆ, ಶ್ರದ್ಧೆ ಹಾಗೂ ನಿಷ್ಠೆ ಅತ್ಯಗತ್ಯ ಎಂಬುದನ್ನು ಟ್ರಸ್ಟ್ ಮಾಡಿ ತೋರಿಸುವ ಮೂಲಕ ಮಾದರಿ ಎನಿಸಿದೆ.

Friday, October 8, 2010

ನಿಮಗಾಗಿ ನಮ್ಮನ್ನು ಬದುಕಲು ಬಿಡಿ..

ತಿಪಟೂರು: ಅಯ್ಯ! ನಾವೇನು ತಪ್ಪು ಮಾಡಿದ್ದೇವೆ ಅಂಥಾ ನಮಗೆ ಈ ಶಿಕ್ಷೆ.. ನಿತ್ಯಾ ನಡೆಯುವ ಈ ಹಿಂಸೆ, ದೌರ್ಜನ್ಯ, ಕೊಲೆಯಿಂದ ನಮ್ಮ ವಂಶ ನಿರ್ವಂಶವಾಗುತ್ತಿದೆ.. ಸಾಕು ನಿಲ್ಲಿಸಿ..
ಅಯ್ಯೋ, ಮನುಷ್ಯರೇ! ನಿಮ್ಮ ಕೈ ಮುಗಿದು ಕೇಳಿ ಕೊಳ್ಳುತ್ತೇವೆ. ನಮ್ಮ ಕೈ, ಕಾಲು, ಶಿರ, ಹೊಟ್ಟೆಯನ್ನು ಕತ್ತರಿಸಬೇಡಿ.. ನಿಮ್ಮ ಪ್ರತಿಯೊಂದು ಏಟು ನಮ್ಮ ಜೀವ ತೆಗೆಯುವಷ್ಟು ನೋಯುತ್ತದೆ.. ನಮ್ಮ ನೋವು ಕೇಳಿಸಿದರೂ ಕೇಳದಂತೆ ಇರುವ ನೀವೇಷ್ಟು ನಿಷ್ಕರಣಿಗಳು..
ಅಣ್ಣಂದಿರಾ! ನಮಗೂ ನಿಮ್ಮಂಥೆ ಜೀವವಿದೆ, ನಾವೂ ಉಸಿರಾಡುತ್ತೇವೆ. ಈ ಲೋಕದ ಒಳ್ಳೆಯದು, ಕೆಟ್ಟದ್ದು ತಿಳಿಯುತ್ತದೆ. ಹತ್ತಾರು ನೂರಾರು ವರ್ಷದಿಂದ ನಾವು ನಿಮಗೆ ಹಗಲಿರುಳೆನ್ನದೇ, ಮಳೆ, ಬಿಸಿಲು, ಚಳಿ ಎನ್ನದೇ ನಿರಂತರ ಸೇವೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಆ ಕೃತಜ್ಞತೆ ಮರೆತು ನೀವು ನಮ್ಮನ್ನು ನಮ್ಮ ವಂಶವನ್ನು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ, ಕತ್ತರಿಸಿ ಹಾಕುತ್ತಿದ್ದೀರಿ, ನಿಮಗೆ ಕರುಣೆ ಇಲ್ಲವೇ. ನಮ್ಮ ನೋವು ಆಕ್ರಂದನ ನಿಮಗೆ ಕೇಳುವುದಿಲ್ಲವೇ. ನಿಮಗೆ ಹೃದಯವಿಲ್ಲವೇ..
ನೀವು ನಿತ್ಯಾ ನಮ್ಮ ನೂರಾರು ಸಾವಿರಾರು ಸಹೋದರ ಸಹೋದರಿಯರನ್ನ ಕೊಲೆ ಮಾಡುತ್ತಿದ್ದೀರಿ. ನಿಮಗೆ ನಮ್ಮನ್ನು ನಾಶ ಮಾಡಲು ಅಧಿಕಾರ ಕೊಟ್ಟವರು ಯಾರು?. ನಿತ್ಯಾ ನಡೆಯುವ ಕಗ್ಗೊಲೆ ನಿಲ್ಲವುದು ಯಾವಾಗ. ನಮ್ಮ ಅಂತ್ಯ ಬಯಸಿದ ನಿಮ್ಮ ಅಂತ್ಯವಾಗುವುದಿಲ್ಲವೇ?.
ನಾವು ಇಲ್ಲದಿದ್ದರೆ, ನೀವೂ ಒಂದು ಅರೇ ಕ್ಷಣ ಈ ಭೂಮಿ ಮೇಲೆ ಬದುಕಿ ಉಳಿಯಲಾರಿರಿ. ನಾವಿಲ್ಲದಿದ್ದರೆ ಯಾವ ಜೀವ ರಾಶಿಯೂ ಬದುಕಿ ಉಳಿಯಲು ಸಾಧ್ಯವೇ ಇಲ್ಲ. ಎಲ್ಲವೂ ಬಟಬಯಲಾಗಿ ಮರಳು ಭೂಮಿಯಾಗುತ್ತದೆ. ಮರುಭೂಮಿಯಲ್ಲಿ ಯಾವ ಪ್ರಾಣಿ ತಾನೇ ಬದುಕಿ ಉಳಿಯಲು ಸಾಧ್ಯ?
ಬನ್ನೀ, ನಿಮ್ಮಂಥೆ ನಮ್ಮನ್ನು ಪ್ರೀತಿಸಿ. ನಮ್ಮೊಂದಿಗೆ ಮಾತನಾಡಿ, ನಮ್ಮ ಆಸೆ, ಬಯಕೆ, ಕನಸುಗಳನ್ನು ಕೇಳಿ. ಕೇವಲ ಒಂದು ಮೌನ ಪ್ರೀತಿ ತೋರಿಸಿರಿ ಸಾಕು ನಾವು ಮನದಲ್ಲೇ ಪುಳಕಗೊಳ್ಳುತ್ತೇವೆ. ಈ ಭೂಮಿಗೆ ನಿಮಗಿಂಥ ಮೊದಲು ಬಂದವರು ನಾವು. ನಿಮ್ಮ ಜೀವವಿರುವುದು ನಮ್ಮ ಕೈಯಲ್ಲಿ. ನಿಮ್ಮಂಥೆ ನಾವು ಉಸಿರಾಡುತ್ತೇವೆ, ನಮ್ಮಲ್ಲೂ ರಕ್ತದ ಮಾದರಿ ಜೀವ ರಸ ಹರಿಯುತ್ತದೆ. ನಾವು ನಿಮ್ಮಂಥೆ ಆಹಾರ ಸೇವಿಸುತ್ತೇವೆ. ಕಷ್ಟ ಬಂದಾಗ ದುಃಖಿಸುತ್ತೇವೆ. ಸಂತೋಷವಾದಾಗ ನಗುತ್ತೇವೆ. ಆದರೆ ಎಂದಿಗೂ ನಮ್ಮಿಂದ ಬೇರೆಯವರಿಗೆ ತೊಂದರೆ ಕೊಟ್ಟಿಲ್ಲ. ನೀವೇಕೆ ವಿನಾ ಕಾರಣ ನಮಗೆ ತೊಂದರೆ ಕೊಡುತ್ತೀರಿ? ನಮ್ಮ ರಕ್ಷಣೆಗಾಗಿ ಯಾರನ್ನು ಮೊರೆಯಿಡಬೇಕು.
ನಿಮಗಾದರೆ, ನೀವೇ ನಿಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡ ಸಂವಿಧಾನ ಬದ್ಧ ಹಕ್ಕುಗಳಿವೆ. ಮಾನವ ಹಕ್ಕು ಎಂದು ನೀವು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ರಂಪ ಮಾಡುತ್ತೀರಿ. ಮೂಕ ಜೀವಿಗಳಿಗಾಗಿ ಪ್ರಾಣಿ ದಯೆ ಸಂಘಗಳಿವೆ. ಜಗತ್ತಿನ ಪ್ರತಿಯೊಂದು ವಿಚಾರಕ್ಕೂ ಹೋರಾಟಗಳು ನಡೆಯುತ್ತೀವೆ. ನೂರಾರು ವರ್ಷಗಳ ಹಿಂದೆ ಕಟ್ಟಿ ಹಾಳಾದ ಕಟ್ಟಡಗಳು, ಸ್ಮಾರಕಗಳ ರಕ್ಷಣೆಗಾಗಿ ನೀವೇ ನಾನಾ ಇಲಾಖೆಗಳನ್ನು ಮಾಡಿಕೊಂಡು ದುರ್ವರ್ತನೆ ಮಾಡುವವರ ವಿರುದ್ಧ ದಾವೆ ಹೂಡಿ ಶಿಕ್ಷಿಸುತ್ತಿದ್ದೀರಿ. ನಿರ್ಜಿವವಾದ ಕಲ್ಲು ಬಂಡೆಗಳನ್ನು ರಕ್ಷಿಸುತ್ತೀರಿ. ನಮ್ಮ ಮೇಲೆ ನಿಮಗೇಕೆ ವೈರತ್ವ. ನೀವೇಕೆ ನಮ್ಮ ಬಗ್ಗೆ ಚಿಂತಿಸುತ್ತಿಲ್ಲ.
ನಾವಿಲ್ಲದೇ ಇದ್ದರೆ ಒಂದು ಹನಿ ನೀರೂ ಈ ಭೂಮಿ ಮೇಲೆ ಬೀಳಲು ಸಾಧ್ಯವಿಲ್ಲ. ನಾವಿಲ್ಲದಿದ್ದರೆ ಒಂದು ಯಾವ ಜೀವಿಯೂ ಉಸಿರಾಡಲು ಸಾಧ್ಯವೂ ಇಲ್ಲ. ನಾವಿಲ್ಲದಿದ್ದರೆ ಈ ಭೂಮಿಯ ಮೇಲೆ ಯಾವ ಸೌಂದರ್ಯವೂ ಉಳಿಯುವುದಿಲ್ಲ. ಇಡೀ ಸಕಲ ಜೀವ ರಾಶಿಗಳಿಗೆ ಅತ್ಯಾಮೂಲ್ಯವಾದ ನಮ್ಮ ಬದುಕಿಗೇ ಕೊಡಲಿ ಹಾಕುತ್ತೀರಿ ಏಕೆ? ನಿತ್ಯಾ ನಮ್ಮ ಜನರನ್ನು ಕೊಲೆ ಮಾಡಿ ಜೀವಂತ ಸಾಯಿಸುತ್ತೀರಿ?..
ಎಲೇ, ಮಾನವರೇ! ನಾವು ಯಾರೆಂದು ನಿಮಗೆ ತಿಳಿಯಲಿಲ್ಲವೇ. ಹೇಗೆ ತಾನೇ ತಿಳಿದೀತು. ಮಾಡಿದ ಉಪಕಾರವನ್ನು ಸ್ಮರಿಸದೇ ಅಪಕಾರ ಮಾಡುವ ಪ್ರವೃತ್ತಿಯವರಾದ ನಿಮಗೆ ನಮ್ಮ ನೆನಪಾದರೂ ಹೇಗಾದೀತು? ನಿಮ್ಮ ದೇಹದ ಜೀವ ಚೈತನ್ಯಕ್ಕೆ ಕಾರಣರಾದ ನಾವೇ ನಿರ್ಭಾಗ್ಯ ಮರಗಳು. ದೌರ್ಭಾಗ್ಯ ನೊಂದ ಗಿಡಗಳು.
ಬದುಕು ಎಂಥಾ ನಾಟಕ ನೋಡಿ! ಈ ಜಗತ್ತು ಎಷ್ಟು ಸ್ವಾರ್ಥ, ಅವಕಾಶವಾದಿತನದಿಂದ ತುಂಬಿದೆ. ತಮ್ಮ ಪಾಪದ ಕೊಡವನ್ನು ಭರ್ತಿ ಮಾಡಿಕೊಂಡ ಎಷ್ಟೋ ಮಂದಿ ತಾವು ಈ ಭೂಮಿ ಮೇಲೆ ಶಾಶ್ವತ ಎಂಬಂತೆ ದರ್ಪ ತೋರಿದ ಅರೆಗಳಿಗೆಯಲ್ಲಿ ತಮ್ಮ ತೊಗಲನ್ನು ಕಳಚಿದ್ದಾರೆ. ಈ ಸತ್ಯ ನೋಡಿಯೂ ಬುದ್ಧಿ ಕಲಿಯದ ಮತ್ತಷ್ಟು ಅವರ ಉತ್ತರಾಧಿಕಾರಿಗಳು ಅವರ ದಾರಿಯನ್ನೇ ಹಿಡಿದಿದ್ದಾರೆ. ಇದೆಂಥಾ ಮಾಯೆ?
ಈ ಸ್ವಾರ್ಥ ಜನರು ನಮ್ಮ ಸಂರಕ್ಷಣೆಗಾಗಿ ಪ್ರತಿವರ್ಷ ವಿಶ್ವಪರಿಸರ ಸಂರಕ್ಷಣೆ ದಿನ ಎಂದು ಆಚರಿಸುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಮನೆ ಮಠ ಗಟ್ಟಿ ಮಾಡಿಕೊಳ್ಳುತ್ತಾರೆ. ಅಂದೇ ನಮ್ಮ ಸಾವಿರಾರು ಕುಟುಂಬಗಳ ಮಾರಣ ಹೋಮವಾದರೂ ಅತ್ತ ತಿರುಗಿಯೂ ನೋಡಲ್ಲ. ಅಯ್ಯಾ! ನಮ್ಮ ಉಳಿಸಿ, ಕಾಪಾಡಿ ಎಂಬ ನೋವಿನ ಆಕ್ರಂದನ ಸಹ ಅವರಿಗೆ ಕೇಳುವುದಿಲ್ಲ. ಇದೆಂಥಾ ವಿಚಿತ್ರ.
ಅದ್ಯಾವ ಪರಿಸರ ಇಲಾಖೆ, ಅದ್ಯಾವ ಅರಣ್ಯ ಇಲಾಖೆ, ಅದ್ಯಾವ ಮಾಲಿನ್ಯ ನಿಯಂತ್ರಣ ಮಂಡಳಿ..ಅದೆಲ್ಲಿಯ ಪರಿಸರ ವಾದಿಗಳು. ಇವರಿಗ್ಯಾರಿಗೂ ನಮ್ಮ ಚೀರಾಟ, ಗೋಳಾಟ, ನರಳಾಟ ಕೇಳಿಲ್ಲವೇ? ಇವರ ಕಿವಿಗಳಿಗೆ ಕಾದ ಕಂಚನ್ನು ಬಿಡಲಾಗಿದೆಯೇ. ಕಣ್ಣುಗಳಿಗೆ ಕಾರದ ಪುಡಿ ಹಾಕಿದ್ದಾರೆಯೇ. ಮನಸ್ಸು ಕಲ್ಲಾಗಿದೆಯೇ..
ಮಳೆಗಾಲದಲ್ಲಿ ಅದ್ಯಾರೋ ಆಗಾಗ ಅಲ್ಲಲ್ಲಿ ಸಾವಿರ ಎರಡು ಸಾವಿರ ಗಿಡಗಳನ್ನು ನೆಡುತ್ತಾರೆ. ಮತ್ತೇಲ್ಲೋ ಲಕ್ಷಾಂತರ ಮರಗಳನ್ನು ಕಡಿಯುತ್ತಾರೆ. ಬರ ಬರುತ್ತಾ ನಮ್ಮ ವಂಶ ಬರಿದಾಗುತ್ತಿದೆ. ನೂರಾರು ವರ್ಷಗಳ ನಮ್ಮ ಬದುಕು ಗಳಿಗೆಯಲ್ಲಿ ಬೂದಿಯಾಗುತ್ತದೆ. ಈಗ ನೆಟ್ಟ ಕೆಲವೇ ಗಿಡಗಳು ಬೆಳೆಯಲು ಇನ್ನೂ ಹತ್ತಾರು ವರ್ಷಗಳು ಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಗಾದೆಯಂತಾಗಿದೆ ನಮ್ಮ ಬದುಕು.
ಉದಾಹರಣೆಗೆ ಬನ್ನಿ ತಿಪಟೂರಿಗೆ. ಈ ತಾಲೂಕಿನಲ್ಲಿ ಸುಮಾರು ೬೫ಕ್ಕೂ ಹೆಚ್ಚು ತೆಂಗಿನ ಒಣ ಪುಡಿ ತಯಾರಿಕ(ಚಿತೆಗಳಿವೆ) ಘಟಕಗಳಿವೆ. ೫೦ಕ್ಕೂ ಹೆಚ್ಚು (ಕಸಾಯಿಖಾನೆಗಳಿವೆ) ಸಾಮಿಲ್‌ಗಳಿವೆ. ನಮ್ಮ ಸಹೋದರ ಸಹೋದರಯರನ್ನ ಕತ್ತರಿಸಿ ಕೊಲ್ಲುವ ನೂರಾರು (ಮರ ಕೊಯ್ಯುವವರು) ಕೊಲೆಗಡುಕರಿದ್ದಾರೆ. ನಿತ್ಯಾ ಸುಮಾರು ೨೦೦ ಹೆಚ್ಚು ಮರಗಳನ್ನು ಕತ್ತರಿಸುತ್ತಾರೆ.
ಇಲ್ಲಿಯೂ ಅರಣ್ಯ ಇಲಾಖೆಯಿದೆ. ಪರಿಸರ ವಾದಿಗಳಿದ್ದಾರೆ. ಹೃದಯವಂತರಿದ್ದಾರೆ. ಧರ್ಮ ರಕ್ಷಣೆಯ ಸ್ವಾಮಿಜಿಗಳಿದ್ದಾರೆ. ಗುರು ಹಿರಿಯರಿದ್ದಾರೆ. ಆದರೂ ನಿತ್ಯಾ ನಮ್ಮ ಮಾರಣ ಹೋಮ ನಿರ್ವಿಘ್ನವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಯಾರೂ ನಮ್ಮನ್ನು ರಕ್ಷಿಸುವುದಿಲ್ಲ. ಅರಣ್ಯ ಇಲಾಖೆಯ ಕಾನೂನಿನಂತೆ ಒಂದು ಮರ ಕತ್ತರಿಸಬೇಕಾದರೂ ಅನುಮತಿ ಪಡೆಯಬೇಕು. ಆದರೆ ಹಾಡು ಹಗಲೇ ರಾಜಾರೋಷವಾಗಿ ನೂರಾರು ಮರಗಳನ್ನು ಕಡಿದು ಕಾರ್ಖಾನೆಗಳಿಗೆ ಸಾಗಿಸಿದರೂ ಕೇಳುವ ಧಾತರಿಲ್ಲ.
ಒಂದು ಅಂದಾಜಿನಂತೆ ದಿನಕ್ಕೆ ೬೦-೭೦ ಕೈಗಾರಿಕಾ ಘಟಕಗಳಿಗೆ ಸುಮಾರು ೨೦೦ ಮರಗಳ ಕಟಾವು ನಡೆಯುತ್ತದೆ. ದಿನಕ್ಕೆ ೨೦೦ ಮರಗಳಾದರೆ, ಆದರೆ ವರ್ಷದ ೩೦೦ ದಿನಕ್ಕೆ ಸುಮಾರು ೬೦ ಸಾವಿರ ಮರಗಳು ಕತ್ತರಿಸಲ್ಪಟ್ಟಿವೆ. ೨೦ ವರ್ಷಕ್ಕೆ ಸುಮಾರು ೧೨ ಲಕ್ಷ ಮರಗಳು ಕತ್ತರಿಸಲ್ಪಟ್ಟಿವೆ. ನಿವೇ ಲೆಕ್ಕ ಹಾಕಿರಿ, ಇಷ್ಟು ಮರಗಳನ್ನು ಪುನಃ ನೆಟ್ಟು ಬೆಳೆಸಲು ಸಾದ್ಯವೇ? ಇದು ಒಂದು ತಾಲೂಕಿನ ಕಥೆಯಾದರೆ ದೇಶದ ಕಥೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇಷ್ಟು ಮರಗಳ ನಾಶದಿಂದ ವಾತಾವರಣದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಕಡಿಮೆಯಾಗಿದೆ. ಇಂಗಾಲದ ಡೈ ಆಕ್ಸೈಡ್ ಎಷ್ಟು ಉತ್ಪತ್ತಿಯಾಗಿದೆ. ಇತರೆ ಆಮ್ಲಯುಕ್ತ ವಸ್ತುಗಳು ಹೆಚ್ಚಾಗಿವೆ. ಭೂಮಿಯ ಸಾರ ಎಷ್ಟು ಕಡಿಮೆಯಾಗಿದೆ. ಮಳೆಯ ಪ್ರಮಾಣ ಏರು ಪೇರಾಗಿದೆ. ಎಷ್ಟು ಪ್ರಮಾಣದಲ್ಲಿ ಪ್ರಾಣಿ, ಪಕ್ಷಿಗಳು ಆಶ್ರಯ ತಪ್ಪಿ ನಾಶಗೊಂಡಿವೆ. ಇದನ್ನು ಯಾರಾದರೂ ಅಂದಾಜು ಮಾಡಿದ್ದಾರೆಯೇ?
ಬೇಕಿಲ್ಲ. ಅದರಿಂದ ಅವರಿಗೇನು ಲಾಭ. ಅವರಿಗೆ ಬೇಕಿರುವುದು ಪಾಪದ ಹಣ. ಅಕ್ರಮವಾಗಲಿ, ಅನ್ಯಾಯವಾಗಲಿ, ಕೊಲೆಯಾಗಲಿ, ತಮ್ಮ ಸ್ವಾರ್ಥದ ಜೇಬು ತುಂಬಿದರೆ ಸಾಕು. ಇದು ಎಲ್ಲಿಯವರೆಗೆ, ಮಾನವನ ಅಂತ್ಯದವರೆಗೆ.
ಸಾಕು ಮಾಡಿ. ಎಲ್ಲದಕ್ಕೂ ಮಿತಿಯಿರುತ್ತದೆ. ನಮ್ಮ ಮೌನ ಆಕ್ರಂದನ ನಿಮ್ಮನ್ನು ಸುಟ್ಟು ಹಾಕೀತು. ಇಡೀ ಮಾನವ ಕುಲಾ ನಾಶ ವಾಗುವ ಮುನ್ನ ಎಚ್ಚೆತ್ತುಕೊಳ್ಳಿ. ನಿಮ್ಮ ಜೀವ ಚೈತನ್ಯವಾಗಿರುವ ನಮ್ಮನ್ನು ಉಳಿಸಿ, ನಾವು ನಿಮ್ಮನ್ನು ಉಳಿಸುತ್ತೇವೆ. ಇನ್ನಾದರೂ ನಮ್ಮ ಜೀವಕ್ಕೆ ಕೊಡಲಿ ಹಾಕ ಬೇಡಿ. ಪರಿ ಪರಿಯಾಗಿ ಕೇಳಿ ಕೊಳ್ಳುತ್ತೇವೆ. ನಮಗೂ ನಿಮ್ಮಂಥೆಯೇ ಜೀವವಿದೆ.

Tuesday, August 3, 2010

ಬದುಕು ಕಳೆದುಕೊಂಡ ಸಂಗೀತಾ...

ನಮ್ಮೂರಿನಲ್ಲಿ ನಡೆದಿರುವ  ಘಟನೆ. ಅದು ಒಂದು ಹೆಣ್ಣಿನ ಮೇಲೆ ನಡೆದ ಘೋರ ಆಕ್ರಮಣದ ಸತ್ಯ ಘಟನೆಯ ಮನಕರಗುವ ವರದಿ.
ಈ ಪುರಷ ಪ್ರಧಾನ ಸಮಾಜ ಕೆಲವರಲ್ಲಿ ಇನ್ನೂ ನರರಾಕ್ಷಸರಿದ್ದಾರೆ ಅನ್ನೋದಕ್ಕೆ ಈ ಘಟನೆಯೂ ಒಂದು ಸಾಕ್ಷಿ. ವರದಕ್ಷಿಣೆ ಎಂಬ ಪೀಡುಗು ಇನ್ನೂ ನಮ್ಮ ಸಮಾಜದಿಂದ ನಾಶವಾಗದೇ ಅದೆಷ್ಟು ಹೆಣ್ಣು ಮಕ್ಕಳು ನಿತ್ಯಾ ನರಕ ಜೀವನ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿಯದ ವಿಚಾರ.
ಆದರೆ ನಮ್ಮ ಮುಂದೆ ನಡೆಯುವ ಇಂತಹ ಘಟನೆಯನ್ನು ಎಷ್ಟರ ಮಟ್ಟಿಗೆ ರಕ್ಷಿಸ ಬಲ್ಲೆವು ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹರೆಯದಲ್ಲಿ ನಾನಾ ಕನಸುಗಳನ್ನು ಹೊತ್ತುಕೊಂಡ 21ರ ಯುವತಿಯೊಬ್ಬಳು ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ನಂಬಲಾಗದಂತಹ, ಮನುಷ್ಯ ಮಾತ್ರದವರು ಸಹಿಸಲಾರದಂತಹ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಇಂದು ಜೀವವಿರುವ ಮೂಳೆ ಮಾಂಸದ ಹೊದಿಕೆಯಾಗಿದ್ದಾಳೆ ಎಂದರೆ ಅದನ್ನು ಆಚಾರವಂತ ಸಮಾಜ ಎಂದು ಹೇಳುವ ನಾವು ನಂಬುವುದಾದರೂ ಹೇಗೆ? ಸಹಿಸಿಕೊಳ್ಳುವುದಾದರೂ ಹೇಗೆ?
ಇಂತಹ ಸತ್ಯ ಘಟನೆ ನನ್ನ ಕಿವಿಗೆ ಬಿದ್ದ ತಕ್ಷಣ ಆ ಧಾರುಣ ಕಥೆಯನ್ನು ಆಕೆಯ ಮಾತುಗಳಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ಪ್ರಕಟಿಸುವ ಕೃಪೆ ಮಾಡಬೇಕು. ಕಾರಣ, ಈಗಿನ ಆಕೆಯ ಪರಿಸ್ಥಿತಿಯಲ್ಲಿ ತಂದೆ ತಾಯಿಯೂ ಸಹ ಆಕೆಯೊಂದಿಗೆ ಜೀವಿಸಲಾರರು. ಆಕೆಗೆ ಚಿಕಿತ್ಸೆ ಬೇಕಾಗಿದೆ. ಕನಿಷ್ಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೆ ಮುಖ ಮುಚ್ಚಿಕೊಂಡು ಹೇಗೋ ಬದುಕಿ ಉಳಿಯ ಬಹುದು. ಒಂದು ಸಾಂತ್ವನಕ್ಕಿಂತ ಸಹಾಯ ಮುಖ್ಯ. ಅಯ್ಯೋ ಪಾಪ! ಅನ್ನುವುದಕ್ಕಿಂತ ಕೈಲಾದ ಸಹಕಾರ ನೀಡಿದಲ್ಲಿ ಒಂದು ಅಸಹಾಯಕ ಹೆಣ್ಣಿನ ಕಣ್ಣೀರು ಹೊರೆಸಿದಂತಾಗುತ್ತದೆ. ಎಂದು ನನ್ನ ನಂಬಿಕೆ. ಆತ್ಮಹತ್ಯೆ ಆದ ಮೇಲೆ ಮಾತಾಡುವುದಕ್ಕಿಂತ ಅದು ಆಗದಂತೆ ತಡೆಯುವುದು ಮಾನವ ಧರ್ಮವಲ್ಲವೇ?

-------------------
"ನಾನು ಹುಟ್ಟಿದ್ದೇ ಪಾಪ. ನರರಾಕ್ಷಸರ ಈ ಸಮಾಜದಲ್ಲಿ ಹೆಣ್ಣು ಎಷ್ಟು ನಿಕೃಷ್ಟಳು, ಅಸಹಾಯಕಳು ಎಂಬುದಕ್ಕೆ ನನ್ನ ಮೇಲೆ ನಡೆದಿರುವ ಈ ದೌರ್ಜನ್ಯವೇ ಸಾಕಿ.್ಷ ನನ್ನ ಪೋಟೋ ನೋಡಿದರೆ ನಿಮಗೆ ಅರ್ಥವಾಗ ಬಹುದು ನಾನು ಯಾವ ರೀತಿಯಲ್ಲಿ ನರಕ ಜೀವನ ಅನುಭವಿಸಿದ್ದೇನೆಂದು.." ಎಂದು ಗಂಡನ ಮನೆಯ ಹಿಂಸೆಗೊಳಗಾಗಿ ನೊಂದಿರುವ ಸಂಗೀತಾಳ ಕರಣಾಜನಕ ಕಥೆಯ ಕಣ್ಣೀರ ನುಡಿಗಳು ಇವು.

ನಿಜ ಹೇಳಬೇಕೆಂದರೆ ಆಕೆ ಅತ್ತರೂ ಕಣ್ಣೀರು ಬರದಂತೆ ಹಿಂಗಿ ಹೋಗಿವೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದ ಆಕೆಗೆ ನಿದ್ರೆಯೇ ವೈರಿಯಾಗಿದೆ. ಎಡ ಕಣ್ಣು ಮುಚ್ಚುವಂತಿಲ್ಲ. ತುಟಿ ಸೇರಿಸುವಂತಿಲ್ಲ. ಎರಡು ಕಿವಿಗಳು, ಎಡ ಕಣ್ಣು, ತಲೆ ಕೂದಲು ಬೆಂಕಿಯ ಕೆನ್ನಾಲಿಗೆಗೆ ಕರಗಿ ಹೋಗಿವೆ. ಮುಖ ನೋಡದಂತೆ ವಿಚಿತ್ರವಾಗಿದೆ. ಕತ್ತಿನ ಚರ್ಮ ಕೆಳದುಟಿಗೆ ಅಂಟಿಕೊಂಡು ತುಟಿ ಮುಚ್ಚದಂತಾಗಿದೆ. ಎರಡು ಕೈಗಳು ಸುಟ್ಟು ಅಂಟಿಕೊಂಡಿವೆ.... ಪಾಪಿಗಳು ಆಕೆಯ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ಇಂದು ಬದುಕಿ ಸತ್ತಂತಿದ್ದಾಳೆ. ಅಂತೂ ನೋಡುವುದಕ್ಕೆ ಆಗದಷ್ಟು ವಿಕಾರವಾಗಿರುವ ದೃಶ್ಯ ಈಕೆಯದು.

ಇಲ್ಲಿನ ನಾನು ಓದಿರುವ ಸವರ್ೋದಯ ಪ್ರೌಡಶಾಲೆಯ ಶಿಕ್ಷಕರಾದ ಎಲ್.ಲಕ್ಷ್ಮೀಪ್ರಸಾದ್ ನನಗೆ ಕರೆಮಾಡಿ ನನ್ನ ಶಿಷ್ಯೆ ಒಬ್ಬಳು ದುಷ್ಟರ ದೌರ್ಜನ್ಯಕ್ಕೊಳಗಾಗಿ ದಿಕ್ಕಿಲ್ಲದ ಸ್ಥಿತಿಯಲ್ಲಿ ಜೀವಂತ ನರಕ ಹಿಂಸೆ ಅನುಭವಿಸುತ್ತಿದ್ದಾಳೆ. ದಯವಿಟ್ಟು ಸಹಾಯ ಮಾಡಿ ಎಂದು ಕೋರಿಕೊಂಡರು. ನನ್ನ ಗುರುವಿನ ಮಾತು ಕೇಳಿ, ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಭಯವಾಯಿತು. ಘಟನೆಯ ವಿವರ ಪಡೆದಾಗ ಇಡೀ ಪ್ರಕರಣ ಬಯಲಾಯಿತು.
ಹೆಸರು ಸಂಗೀತಾ, ವಯಸ್ಸು 22. ಪಟ್ಟಣದ ಗಾಂದೀನಗರದ 5ನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದು, ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕಣ್ಣಪ್ಪ ಒಡೆಯರ್ ಮತ್ತು ಗೋವಿಂದಮ್ಮ ದಂಪತಿಗಳ ಎರಡನೇ ಪುತ್ರಿ ಈಕೆ. ಅಣ್ಣ ರಮೇಶ ಗಾರೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಿದೆ. ಅಕ್ಕನಿಗೂ ಮದುವೆ ಆಗಿದ್ದು ತಮಿಳುನಾಡಿನಲ್ಲಿದ್ದಾರೆ.
ಇಲ್ಲಿನ ಸವರ್ೋದಯ ಪ್ರೌಡಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿರುವ ಸಂಗೀತಾ ಎಲ್ಲರಂತೆ ನಗುನಗುತ್ತಾ ತನ್ನದೇ ಬದುಕಿನ ನಾನಾ ಕನಸುಗಳನ್ನು ಕಟ್ಟಿಕೊಂಡವಳು. ಸೆಪ್ಟೆಂಬರ್ 2,2009 ರಂದು ತಂದೆ ತಾಯಿ ಓಪ್ಪಿದ ಮುಂಬಾಯಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ವಡಿವೇಲು ಎಂಬುವರಿಗೆ ಈಕೆಯ ವಿವಾಹವಾದಾಗ ನೂರಾರು ಆಸೆಗಳನ್ನು ಇಟ್ಟುಕೊಂಡೇ ಬಾಂಬೆಗೆ ಹಾರಿದ್ದಳು. ಕಷ್ಟ ಪಟ್ಟು ದುಡಿಯುವ ಕಣ್ಣಪ್ಪ ಮತ್ತು ಗೋವಿಂದಮ್ಮ ತನ್ನ ಮಗಳು ಚೆನ್ನಾಗಿರಲಿ ಎಂದು ವರನಿಗೆ 25ಸಾವಿರ ಹಣವನ್ನು, 90 ಗ್ರಾಂ ಬಂಗಾರದ ವಡವೆಯನ್ನು ಮಾಡಿಸಿಕೊಟ್ಟು ಚಿಕ್ಕಂದಿನಿಂದ ಮುದ್ದನಿಂದ ಸಾಕಿದ್ದೇವೆ ನೋಯಿಸದಂತೆ ನೋಡಿಕೊಳ್ಳಪ್ಪ ಎಂದು ಇಬ್ಬರನ್ನೂ ಹರಸಿದ್ದರು.
ಆದರೆ ವಿಧಿಯ ಆಟವೋ, ಆಕೆಯ ಹಣೆ ಬರಹವೋ ಅಥವಾ ಹಣದ ಹಿಂದೆ ಬಿದ್ದ ನರಭಕ್ಷಕರ ಅಟ್ಟಹಾಸವೋ ಎಲ್ಲಾ ಎಳೆಯ ಕನಸುಗಳೆಲ್ಲಾ ಕೇವಲ ನಾಲ್ಕು ತಿಂಗಳಲ್ಲಿ ಕಮರಿಹೋಗಿ ನಿಜವಾದ ನರಕಜೀವನ ದೃಶ್ಯವನ್ನು ಜೀವಂತವಾಗಿ ಕಾಣುವ ದೌಭರ್ಾಗ್ಯ ಅವಳಾದಾಗಿದೆ. ತನ್ನ ಸುಖ, ಸಂತೋಷ, ನಲಿವುಗಳನ್ನು ಕಳೆದುಕೊಂಡ ಆಕೆ ಇಂದು ಕೇವಲ ಒಂದು ಮಾಂಸದ ಮುದ್ದೆಯಂತಾಗಿದ್ದಾಳೆ.
ಕರಣಾಜನಕ ಕಥೆಯನ್ನು ಆಕೆಯಿಂದಲೇ ಕೇಳಿ: ನಾನು ಓದು ಮುಗಿಸಿ ಮನೆಯಲ್ಲಿ ಸಂತೋಷವಾಗಿದ್ದೆ. ಪರಿಚಯಸ್ಥರ ಸಂಬಂಧ ಕುದುರಿ ನನಗೆ ಬಾಂಬೆಯ ಮುನಿಯಮ್ಮ ಎಂಬುವರ ಮಗ ವಡೀವೇಲು ಎಂಬುವರಿಗೆ ಕಳೆದ ವರ್ಷ ಕೊಟ್ಟು ಮದುವೆ ಮಾಡಿದರು. ಅವರು ಆಗ ಬಾಂಬೆಯ ಅಂದೇರಿ ಭಾಗದ ಡಿ.ಎನ್.ನಗರದ ಅಪ್ನಾ ಬಜಾರ್ ಸಮೀಪ ಸ್ವಂತ ಮನೆಯಲ್ಲಿ ವಾಸವಾಗಿದ್ದರು.
ಮದುವೆಯ ಮೊದಲ ದಿನಗಳಲ್ಲಿ ಗಂಡ ನನಗೆ ಸ್ವರ್ಗವನ್ನೇ ತೋರಿಸಿದ. ನಾನೆಂಥ ಸುಖಿ ಎಂದುಕೊಂಡು ನನ್ನ ಮನೆಯ ಕಡೆ ಮರೆತೇ ಬಿಟ್ಟೆ. ಎರಡು ತಿಂಗಳು ಕಳೆಯುತ್ತಿದ್ದಂತೆ ಗಂಡನ ಪ್ರೀತಿ ಕಡಿಮೆಯಾಯಿತು, ಅತ್ತೆ ಮೊದಲಿನಿಂದಲೂ ಸಿಡುಕುತ್ತಿದ್ದಳು, ಗದರುತ್ತಿದ್ದಳು. ವರದಕ್ಷಣೆ ಸಾಲದು, ಇಲ್ಲಿ ಸಾಲ ಇದೆ ಮತ್ತಷ್ಟು ತರಲು ನಿಮ್ಮಪ್ಪನಿಗೆ ಹೇಳು ಎಂದೆಲ್ಲಾ ಒತ್ತಾಯಿಸುತ್ತಿದ್ದರು. ಆಗ ನನಗೆ ಮನೆಯ ಕಡೆ ಮನಸ್ಸು ಬರತೊಡಗಿತು. ಪ್ರತಿನಿತ್ಯಾ ಹಿಂಸೆ ನೀಡುತ್ತಿದ್ದರು. ನಾನು ದೀಪಾವಳಿಗೆ ತಿಪಟೂರಿಗೆ ಬಂದುಹೋದೆ. ಬರಿಕೈಯಲ್ಲಿ ಬಂದಿರುವೆ ಎಂದು ಚೆನ್ನಾಗಿ ಹೊಡೆದರು. ಅಂದಿನಿಂದ ನನ್ನ ನರಕ ಜೀವನ ಶುರುವಾಯಿತು.

ಜನವರಿ 22, 2010ರ ಸಂಜೆ 6ಗಂಟೆ ಸಮಯ ನಾನು ಮಾಮುಲಿನಂತೆ ಮುಖ ತೊಳೆದುಕೊಂಡು, ಬೊಟ್ಟು ಇಟ್ಟಕೊಂಡು ಅಂದವಾಗಿ ಎರಡು ಮೂರು ಬಾರಿ ನೋಡಿಕೊಂಡೆ. ಅಷ್ಟರಲ್ಲಿ ಅತ್ತೆ ಜುಟ್ಟು ಹಿಡಿದು ಅಡಿಗೆ ಮನೆಗೆ ಎಳೆದುಕೊಂಡು ಹೋದರು. ಗಂಡ ಹೀಯಾಳಿಸುತ್ತಾ ಒದೆಯುತ್ತಿದ್ದ ಇಬ್ಬರೂ ಸೇರಿ ಮುಖಕ್ಕೆ ಸೀಮೆ ಎಣ್ಣೆ ಸುರಿದರು. ಮುಂದೆ ಎನಾಗುತ್ತದೆ ಎಂದು ನೋಡುವುದರ ಒಳಗೆ ಬೆಂಕಿಯಿಟ್ಟರು. ಉರಿಯಿಂದ ಕೂಗಿ ಕೊಂಡೆ. ಕತ್ತಲಾಯಿತು.
ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಸಾಯುವಷ್ಟು ಉರಿ ಮತ್ತು ನೋವು. ಏನೂ ಕಾಣುತ್ತಿಲ್ಲ. ಯಾರೂ ಬರುತ್ತಿಲ್ಲ. ಉಸಿರಾಡಲು ಆಗುತ್ತಿಲ್ಲ... ಬೇಡ ಸಾರ್ ಆ ನೋವು, ಹಿಂಸೆ ಬೇಡ. ಆ ದೃಶ್ಯವೂ ಬೇಡ.
ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ. ನಂತರ ನನಗೆ ತಿಪಟೂರಿಗೆ ಕಳಹಿಸಿದರು. ಮನೆಯಲ್ಲಿ ಏನೇನೋ ಹೇಳಿದರು ಅದ್ಯಾವುದೂ ನನಗೆ ಗೊತ್ತಿಲ್ಲ. ನಾನೇ ಬೆಂಕಿಯಿಟ್ಟುಕೊಂಡೆ ಎಂದು ಹೇಳಿದರು. ನಾನೇ ಪೋಲೀಸರಿಗೆ ಬರೆದುಕೊಟ್ಟದ್ದೇನೆಂದು ನಂಬಿಸಿದರು. ಅದೂ ನನಗೆ ಗೊತ್ತಿಲ್ಲ. ಆದರೆ ಆಗಿರುವುದಿಷ್ಟು ನಾನು ಸುಟ್ಟ ಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನನ್ನ ಕೈ ಮತ್ತು ಕಾಲು ಬೆರಳಿನ ಮುದ್ರೆ ಪಡೆದು ಅವರೇ ಬರೆದುಕೊಂಡಿದ್ದಾರೆ. ನಾನು ಓದಿದ್ದೇನೆ ಚೆನ್ನಾಗಿರುವಾಗ ಹೇಳಿಕೆ ಪಡೆದು ಸಹಿ ಪಡೆಯಬಹುದಿತ್ತು. ಎಲ್ಲಾ ಮೋಸ. ಹಣದಲ್ಲಿ ನ್ಯಾಯ ಮುಚ್ಚಿಹೋಗಿದೆ. ಅನ್ಯಾಯಕ್ಕೊಳಗಾದ ಹೆಣ್ಣಿಗೆ ಖಂಡಿತ ನ್ಯಾಯ ಸಿಗುವುದಿಲ್ಲ. ನೋಡಿ ನನ್ನ ಸ್ಥಿತಿ ನಾನು ಎನು ಕರ್ಮ ಮಾಡಿ ಹುಟ್ಟಿದ್ದೇನೆಯೇ ? ಎಂದು ಬಿಕ್ಕಳಿಸುತ್ತಾಳೆ.
ಸಮಾಜ ಹೆಣ್ಣನ್ನು ಯಾಕೆ ಈರೀತಿಯಾಗಿ ನೋಡುತ್ತದೆ. ಹೆಣ್ಣಿನಿಂದ ಸಕಲವನ್ನೂ ಪಡೆಯುವ ಪುರುಷ ಪ್ರತಿಯಾಗಿ ನೀಡುವುದು ಇದೇನಾ. ಕನಿಷ್ಟ ಕನಿಕರವೂ ಇಲ್ಲದಂತೆ ವತರ್ಿಸುವುದೇಕೆ. ಅಸಹಾಯಕ ನಿಷ್ಪಾಪಿಗಳನ್ನು ಜೀವಂತ ನರಕಕ್ಕೆ ತಳ್ಳುವುದರಿಂದ ಸಾಧಿಸುವುದಾದರೂ ಏನನ್ನ?
ಯಾರದೋ ಸ್ವಾರ್ಥದ ಸಾಧನೆಗಾಗಿ ತನ್ನದಲ್ಲದ ತಪ್ಪಿಗೆ ಸುಂದರ ಬದುಕನ್ನು ಹಾಳುಮಾಡಿಕೊಂಡ ಸಂಗೀತಾ ನಮ್ಮಂಥೆ ಬದುಕಲಾರಳೇ?
ಅಥವಾ ಆಕೆಯೂ ಎಲ್ಲರಂತೆ ಬದುಕಿಸಲು ನಾವೆಲ್ಲಾ ಏಕೆ ಪ್ರಯತ್ನಿಸಬಾರದು?

( ಕಾನೂನು ಸಮಸ್ಯೆ: ಮುಂಬಾಯಿಯಿಂದ ಬಂದು ತಿಪಟೂರಿನ ತಂದೆ ತಾಯಿಯರ ಜೊತೆ ಪ್ರಾಣಿಯಂತೆ ಬದುಕುತ್ತಾ ನೊಂದಿರುವ ಸಂಗೀತಾ ನ್ಯಾಯಕ್ಕಾಗಿ ಪೋಲೀಸ್ ಮೊರೆ ಹೋಗುವಂತಿಲ್ಲ. ಘಟನೆ ನಮ್ಮ ಸರಹದ್ದಿನಲ್ಲಿ ನಡೆದಿಲ್ಲ. ನ್ಯಾಯ ಬೇಕಾದರೆ ಮುಂಬಾಯಿಯಲ್ಲಿ ಪ್ರಕರಣ ದಾಖಲಿಸಬೇಕು ಎನ್ನುತ್ತಾರೆ ನಮ್ಮ ಕಾನೂನು ರಕ್ಷಕರು.
ಮುಂಬಾಯಿಯಿಗೆ ಹೋಗಿ ಅಲ್ಲಿ ದೂರು ಕೊಟ್ಟು ನ್ಯಾಯ ಕೇಳುವಷ್ಟು ಬುದ್ದಿ, ವಿದ್ಯೆ, ಹಣ, ಮತ್ತು ಭಾಷೆ ಈ ಅಮಾಯಕರಿಗೆ ಗೊತ್ತಿಲ್ಲ. ಅಕಸ್ಮಾತ್ ಅಲ್ಲಿ ದೂರು ಕೊಟ್ಟರೂ ಹಣ ಖಚರ್ು ಮಾಡಿ ಅಲೆದಾಡುವ ಶಕ್ತಿ ಅವರಿಗಿಲ್ಲ. ಹಾಗಾದರೆ ಇದ್ದಕ್ಕೆ ಪರಿಹಾರ ಏನು ಎಂಬುದಕ್ಕೆ ನಮ್ಮ ಕನರ್ಾಟಕ ಪೋಲೀಸ್ನಲ್ಲಿ ಉತ್ತರವಿಲ್ಲ.
ನ್ಯಾಯ ಮತ್ತು ಸಹಾಯ ಕೋರಿ ರಾಜ್ಯಪಾಲರಿಂದ ಹಿಡಿದು ಜಿಲ್ಲಾಧಿಕಾರಿಯವರಗೆ ನಾನಾ ಪತ್ರ ಬರೆದರೂ ಯಾರೂ ಗಮನಿಸಿಲ್ಲ. ಇದೆಂಥಾ ನ್ಯಾಯ? ಇದೆಂಥಾ ವ್ಯವಸ್ಥೆ?)

ಸಂಗೀತಾಳ ಮೋಬೈಲ್ ಸಂಖ್ಯೆ: 7760731907

Monday, August 2, 2010

ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?

ತನ್ನ ಗರ್ಭದಲ್ಲಿ ಅಪಾರ ಸಂಪತ್ತನ್ನು ತುಂಬಿಕೊಂಡಿರುವ ನಮ್ಮ ಚೆಲುವ ಕನ್ನಡನಾಡಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ, ನಿರ್ಭಯವಾಗಿ ಹಾಗೂ ನಿರಾತಂಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ರಾಜ್ಯದಲ್ಲಿರುವ ರೈತರ ಕೃಷಿ ಭೂಮಿ, ಕಂದಾಯ ಭೂಮಿ, ಗೋಮಾಳ, ಖರಾಬು, ಸಾಮಾಜಿಕ ಹಾಗೂ ಮೀಸಲು ಅರಣ್ಯ ಪ್ರದೇಶಗಳು ಹಾಡು ಹಗಲೇ ಲೂಟಿಯಾದರೂ, ಆಗುತ್ತಿದ್ದರೂ ನಮ್ಮ ಪರಿಸರವಾದಿಗಳು, ಹಿತಚಿಂತಕರು, ಸಾಹಿತಿಗಳು, ರೈತ ಮುಖಂಡರು, ರಾಜಕಾರಣಿಗಳು, ಅಧಿಕಾರಿಗಳು ಕೊನೆಗೆ ಪತ್ರಕರ್ತರೂ ತೆಪ್ಪಗಿದ್ದು ಬಿಟ್ಟರು.


ರಾಜ್ಯದ ಹಕ್ಕುದಾರ ಕನ್ನಡಿಗ ಒಬ್ಬ ರೈತ ಗಾಡಿಯ ನೇಗಿಲಿಗೋ, ಮನೆಯ ತೊಲೆಗೋ ಒಂದು ಮರಕಡಿದರೆ ಗಂಡಸರಂತೆ ಮೀಸೆ ತಿರುವಿ ಆತನ ಮೇಲೆ ಅರಣ್ಯ ಖಾಯಿದೆಯಡಿ ಪ್ರಕರಣ ದಾಖಲಿಸಿ, ಕಟಕಟೆ ಹತ್ತಿಸುವ ಅಧಿಕಾರಿಗಳು ತಮ್ಮ ಎದುರಿಗೇ ನೂರಾರು ಮರಗಳನ್ನು ಕಡಿದು ನಿರ್ಭಯವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ ಮೂಖರಂತೆ ನಿಂತು, ಅಸಹಾಯಕತೆ ತೋರುತ್ತಿದ್ದಾರೆ.



ಇತ್ತೀಚೆಗೆ ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ಬಗ್ಗೆ ಭಾರೀ ಚರ್ಚೆಗಳು, ವಾದ ವಿವಾದಗಳು, ಗಲಭೆಗಳು ನಡೆಯುತ್ತಿದ್ದರೂ ಯಾವುದೇ ಪರಿಣಾಮ ಉಂಟಾಗಿಲ್ಲ. ಬಳ್ಳಾರಿ, ಸೊಂಡೂರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ ಮತ್ತು ಚಿ.ನಾ.ಹಳ್ಳಿ ತಾಲೂಕುಗಳಲ್ಲಿ ನಿರಾತಂಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಕಳೆದ 8 ವರ್ಷಗಳಿಂದ ಗಣಿಗಾರಿಕೆಯ ಕೂಸು ಹುಟ್ಟು ಹಾಕಿದ ಪಕ್ಷಗಳಿಗೆ ಈಗ ಲಾಭವಿಲ್ಲ. ಹಾಗಾಗಿ ಕೋಟಿ ಕೋಟಿ ಉಡುಗೊರೆ ಸಿಗುವ ಗಣಿಗಾರಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುವ ಕನ್ನಡದ ಗಂಡುಗಳು ಹುಟ್ಟಿಲ್ಲ ಎಂಬ ನೋವು ಮನಸ್ಸಿನಲ್ಲಿದೆ. ಎಲ್ಲವನ್ನೂ ತಿಂದು ಮುಗಿಸಿರುವ ವಿರೋಧ ಪಕ್ಷಗಳು ಈ ಒಂದು ವಿಷಯವನ್ನೇ ಪ್ರಧಾನ ಮಾಡಿಕೊಂಡು ಈಗ ಪ್ರತಿಭಟನೆಗೆ ಮುಂದಾಗಿವೆ. ಕಳೆದ ವಾರ ನಡೆದ ವಿಧಾನ ಸಭಾ ಕಾರ್ಯಕಲಾಪಗಳ ಸಮಯವೆಲ್ಲಾ ಅದಕ್ಕಾಗಿಯೇ ವ್ಯಯವಾಗಿದೆ. ಆದರೆ ಸರಕಾರದ ಇಲಾಖೆಗಳು ಅಕ್ರಮ ಗಣಿಗಾರಿಕೆ ಕೂಡಲೇ ನಿಯಂತ್ರಿಸುವ ಬದಲು ಈ ಸಮಯದಲ್ಲೇ ಹೆಚ್ಚಿನ ಅಕ್ರಮ ನಡೆಯಲು ಸಹಕಾರ ಮತ್ತು ಅವಕಾಶ ನೀಡುತ್ತಿವೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಇಡೀ ಆಡಳಿತ ವ್ಯವಸ್ಥೆ ಚುನಾವಣೆಯ ಒತ್ತಡದಲ್ಲಿದ್ದರೆ ಸಮಯದ ಸದುಪಯೋಗ ಪಡಿಸಿಕೊಂಡ ಅದಿರುಕೋರರು ಹಗಲು ರಾತ್ರಿ ಎನ್ನದೇ ಕೋಟ್ಯಂತರ ರೂಪಾಯಿ ಅದಿರನ್ನು ಲೂಟಿ ಮಾಡಿದರು. ಸರಕಾರ ಮತ್ತು ಅಧಿಕಾರಿಗಳ ದೌರ್ಬಲ್ಯ ಅರಿತ ಇವರು ನಿತ್ಯ ಸಾವಿರಾರು ಲಾರಿಗಳಲ್ಲಿ ಅದಿರನ್ನು ಸಾಗಿಸಿ ಹಣ ಮಾಡಿಕೊಂಡರು.



ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಅದಿರು ಕ್ರಷಿಂಗ್

ಸರಕಾರಿ ಜಮೀನು, ರೈತರ ಪಟ್ಟಾ ಜಮೀನು ಹಾಗೂ ಸಾಮಾಜಿಕ ಅರಣ್ಯ ಮತ್ತು ಮೀಸಲು ಅರಣ್ಯದಲ್ಲಿ ಪ್ರದೇಶಗಳಲ್ಲಿ ಅದಿರನ್ನು ತೆಗೆದು ಸಂಗ್ರಹಿಸಿ ಮಧ್ಯರಾತ್ರಿ ವೇಳೆ ಅದಿರನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ಈ ತರಹದಲ್ಲಿ ಸಂಗ್ರಹಿಸಿದ ಕಬ್ಬಿಣದ ಅದಿರನ್ನು ತಿಪಟೂರು ತಾಲೂಕು ಹತ್ಯಾಳು ಗೇಟ್ ಬಳಿಯಿರುವ ರಸ್ತೆ ಬದಿಯ ಸ್ಟಾಕ್ ಯಾರ್ಡ್ ಹಾಗೂ ಜಯಂತಿ ಗ್ರಾಮದ ಬಳಿಯಿರುವ ಸ್ಟಾಕ್ ಯಾರ್ಡ್ ಗಳಲ್ಲಿ ಸಂಗ್ರಹಿಸಿ ಅಲ್ಲಿಯೇ ಬಹಿರಂಗವಾಗಿ ಸ್ಕ್ರೀನಿಂಗ್ ಮಾಡಿ ಸಾಗಿಸಲಾಗುತ್ತಿದೆ. ಈ ಎಲ್ಲಾ ವಿದ್ಯಮಾನಗಳು ತಿಪಟೂರು ತಾಲೂಕು ಆಡಳಿತಕ್ಕೆ ಗೊತ್ತಿದ್ದರೂ ಜಾಣ ಮೌನ ವಹಿಸಿದೆ.

ಈ ಅಕ್ರಮ ಗಣಿಗಾರಿಕೆ ಮತ್ತು ಸಂಗ್ರಹದ ಬಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಬಗ್ಗೆ ಸಾರ್ವಜನಿಕರು ಹತ್ತಾರು ಬಾರಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು ಗಣನೆಗೆ ತೆಗೆದುಕೊಳ್ಳದೇ ನಿರ್ಲಿಪ್ತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ತೆಪ್ಪಗಿರಲು ತಾಕೀತು ಮಾಡಿದ್ದಾರೆಂದು ಕೆಲವು ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಿಯಮಗಳಿವೆ, ಕಾನೂನಿದೆ ಹಾಗೂ ಅಧಿಕಾರವಿದೆ ಆದರೆ ಉನ್ನತಾಧಿಕಾರಿಗಳ ಭಯದಿಂದ ಉಪಯೋಗಿಸುವಂತಿಲ್ಲ ಎಂಬ ಅಳಲು ತಾಲೂಕಿನ ಕೆಲ ಅಧಿಕಾರಿಗಳದ್ದು.

ಸರಕಾರಿ ಜಮೀನುಗಳು, ರೈತರ ಜಮೀನು ಹಾಗೂ ರಸ್ತೆ ಬದಿಯಲ್ಲೇ ಕಾನೂನುಬಾಹಿರವಾಗಿ ಕಬ್ಬಿಣದ ಅದಿರಿನ ಸ್ಟಾಕ್ ಯಾರ್ಡ್ ಗಳನ್ನು ಮಾಡಿಕೊಂಡು ರಾತ್ರೋರಾತ್ರಿ ಅಕ್ರಮ ಅದಿರನ್ನು ತಂದು ಸಂಗ್ರಹಿಸಿ ಸಾಗಾಣಿಕೆ ಮಾಡಲಾಗುತ್ತಿದೆ. ಇದು ಆಯಾ ಜಿಲ್ಲಾಡಳಿತ, ತಾಲೂಕು ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿರುವ ಬಹಿರಂಗ ಸತ್ಯ.


ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ, ಅರಣ್ಯವನ್ನು ರಾತ್ರಿ ವೇಳೆ ಲೂಟಿ ಮಾಡುವವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅದಿರು ಸಾಗಿಸುವ ಪರ್ಮಿಟ್ ಗಳು ಸುಲಭವಾಗಿ ಸಿಗುತ್ತಿರುವುದೇ ಪರಮಾಶ್ಚರ್ಯವಾಗಿದೆ ಎಂದರೆ ಇದನ್ನು ಜನಸಾಮಾನ್ಯರಿಂದ ನಿಯಂತ್ರಿಸಲು ಸಾಧ್ಯವೇ? ಅಧಿಕಾರಿಗಳು ಮತ್ತು ಅಕ್ರಮ ಗಣಿಗಾರಿಕೆಯವರ ಈ ವ್ಯವಹಾರದ ರಹಸ್ಯವನ್ನು ಕಂಡು ಹಿಡಿಯಲಾದೀತೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.


ಪುರಾತನ ದೇವಾಲಯಕ್ಕೆ ಸಂಚಕಾರ

ಚಿ.ನಾ.ಹಳ್ಳಿಯ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸರ್ವೇ ನಂ.130ರಲ್ಲಿನ ಅಬ್ಬಿಗೆ ಶ್ರೀಮಲ್ಲೇಶ್ವರ ದೇವಾಲಯದ ಸುತ್ತಾಮುತ್ತಲ 2. ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿ ಸೋಮಶೇಖರ್ 3.8.2008ರಂದು ಆದೇಶಿಸಿ ದೇವಾಲಯದ ವ್ಯಾಪ್ತಿಯ 200 ಮೀ. ವ್ಯಾಪ್ತಿಯ ಗಣಿಗಾರಿಕೆಯನ್ನು ರದ್ದುಪಡಿಸಿದ್ದಾರೆ. ಆದರೆ ಪುರಾತನ ಹಿಂದೂ ದೇವಾಲಯ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಇರುವ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದು ನಿರಂತರವಾಗಿ ಗಣಿಗಾರಿಕೆ ನಡೆಸುತ್ತಾ ದೇವಾಲಯದ ಬೆಟ್ಟಕ್ಕೆ ಹಾನಿಯಾಗುವ ಸಂಭವವಿದ್ದರೂ ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.



1991ರಿಂದ 2007 ರವರೆಗೆ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯ ಹಾಗೂ ಅರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಕಂದಾಯ ಇಲಾಖೆ, ಉಪವಿಭಾಗಾಧಿಕಾರಿಗಳು, ಅರಣ್ಯ ಇಲಾಖೆ ಪದೇ ಪದೇ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಈ ಅಕ್ರಮಗಳಿಗೆ ಪ್ರಮುಖ ಕಾರಣಕರ್ತರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಳ್ಳವರ ಪರ ವಕಾಲತ್ತು ವಹಿಸಿ ಗಣಿಗುತ್ತಿಗೆ ನೀಡುವ ಪ್ರಯತ್ನ ನಡೆಸಿದ್ದಾರೆ. ಆ ನಂತರ ಗಣಿಗುತ್ತಿಗೆಯನ್ನು ರದ್ದುಪಡಿಸಲು ನಡೆದ ನಾನಾ ಪ್ರಯತ್ನಗಳಿಗೆ ಗಣಿ ಇಲಾಖೆ ಸೊಪ್ಪುಹಾಕದೇ ಅರಣ್ಯ ಹಾಗೂ ದೇವಾಲಯ ವ್ಯಾಪ್ತಿಯಲ್ಲಿ ಅದಿರು ಲೂಟಿಗೆ ಪರೋಕ್ಷವಾಗಿ ಸಹಕಾರ ನೀಡಿದೆ


ಆದರೆ ಯಾರೂ ಈ ಕುರಿತು ಏನೂ ಮಾತನಾಡುತ್ತಿಲ್ಲ!.