Thursday, August 2, 2012

ಕೊಳಕಿನಲ್ಲಿ ಕಂಡ ಅಚ್ಚರಿಯ ಬೆಳಕು:




ಅತಂತ್ರ ಮತ್ತು ಅಲೆದಾಟದ ಬದುಕಿನಿಂದ ಹೊರ ಬಂದ ಈ ಮಕ್ಕಳು ಇಂದು ಶಾಲೆಗೆ ಓಗುತ್ತಿವೆ. ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳನ್ನು ನನಸು ಮಾಡುವ ಉತ್ಸಾಹದಲ್ಲಿವೆ. ಈಗ ಕಂದಮ್ಮಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇವರು ಅದೃಷ್ಟವಂತ ಮಕ್ಕಳು ಎನಿಸಿದ್ದಾರೆ.



ಹೌದು, ನಿತ್ಯಾ ನರಕದ ಕೂಪದಲ್ಲಿ ನರಳುತ್ತಾ, ಸ್ವಚ್ಚತೆ, ಆರೈಕೆ, ಆರೋಗ್ಯ ಕಾಣದೇ ಬಾಡಿ ಹೋಗುತ್ತಿದ್ದ ಈ ಹೂವುಗಳು ಇಂದು ಚಿಣ್ಣರ ಅಂಗಳದಲ್ಲಿ ನಲಿದಾಡುತ್ತಿವೆ. ಹಿಂದೆ ಎಂದೂ ಶಾಲೆಯ ಬಾಗಿಲು ತುಳಿಯದ ಈ ಅಮಾಯಕ ಮಕ್ಕಳು ಇತರೆ ಮಕ್ಕಳೊಂದಿಗೆ ಅ,ಆ,ಇ,ಈ..ಕಲಿಕೆ ಶುರು ಮಾಡಿವೆ. ಹೊಸದಾಗಿ ಕಾಣುತಿರುವ ಎಲ್ಲವನ್ನೂ ಅಚ್ಚರಿಯಾಗಿ ನೋಡುತ್ತಿವೆ. ನೀರಸ ಮತ್ತು ವ್ಯರ್ಥವಾಗಿದ್ದ ತಮ್ಮ ಬಾಲ್ಯದ ಬದುಕಿಗೆ ಒಂದು ಅರ್ಥ ಹುಡುಕಲು ಹೊರಟಿವೆ.

ತಿಪಟೂರಿನ ಸರಕಾರಿ ಮಾದರಿ ಕನ್ನಡ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳವೇ ಈಗ ಅವರಿಗೆ ಅರಮನೆ. ಬಯಲ ಗುಡಾರದಿಂದ ಚಳಿ, ಮಳೆ, ನಾನಾ ಉಪಟಳದ ಬದುಕಿನಿಂದ ಹೊರಬಂದ ಈ ಮಕ್ಕಳು ಈಗ ತಮ್ಮ ಮನದಾಸೆಯನ್ನು ಪೊರೈಸಿಕೊಳ್ಳುವತ್ತಾ, ಹೊಸ ಬದುಕಿನತ್ತಾ ಪಯಣ ಆರಂಭಿಸಿದ್ದಾರೆ. ತಾಲೂಕು ಆಡಳಿತ ಇಂತಹ ಕಲಿಕೆ ವಂಚಿತ ಮಕ್ಕಳನ್ನು ಪತ್ತೆ ಮಾಡಿ, ಅಕ್ಷರ ಕಲಿಸುವ ತಯಾರಿ ನಡೆಸಿದೆ. ತಾಲೂಕಿನಾದ್ಯಂತ ಇರುವ ಅಲೆಮಾರಿ ಮಕ್ಕಳನ್ನು ಗುರ್ತಿಸಿ, ಶಾಲೆಗೆ ಕರೆತರುವ ಸಿದ್ಧತೆಯಲ್ಲಿದೆ. ತಹಸೀಲ್ದಾರ್ ವಿಜಯಕುಮಾರ್, ಬಿಇಒ ಮನಮೋಹನ್, ಪೌರಾಯುಕ್ತ ಡಾ.ವೆಂಕಟೇಶಯ್ಯ, ಡಾ.ರಘು, ಸಂತೋಷ್, ಸತೀಶ್ ಮತ್ತು ಸುರೇಶ್ ಮತ್ತಿತರರು ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.


ಮೊದಲಿಗೆ ತಾಲೂಕಿನ ನಾನಾ ಕಡೆ ಸುತ್ತಿ ಅಲೆಮಾರಿಗಳನ್ನು ಗುರ್ತಿಸಿದ ಈ ತಂಡ ಅವರ ಸಮಸ್ಯೆಯನ್ನು ಆಲಿಸುವ ಯತ್ನ ನಡೆಸಿದೆ. ನಂತರ ಅವರಿಗೆ ಸಿಗದ ಸವಲತ್ತುಗಳ ವಿತರಣೆಗೆ ಆಧ್ಯತೆ ನೀಡಿದೆ. ಕನಿಷ್ಟ ಮತದಾರರ ಗುರುತಿನ ಚೀಟಿ ಇಲ್ಲದ ಸ್ಥಿತಿಯನ್ನು ಗಮನಿಸಿ ಆತಂಕ ಪಟ್ಟುಕೊಂಡ ತಹಸೀಲ್ದಾರ್ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದಕ್ಕೆ ಮೊದಲು ಮುಂದಾಗಿದ್ದಾರೆ. ಈ ಅಲೆಮಾರಿ ಬದುಕಿಗೆ ಅಂತ್ಯ ಆಡಿ, ಶಾಶ್ವತವಾದ ನೆಲೆ ಹುಡುಕಿ ಎಂದು ಮನವೊಲಿಸುವ ಜೊತೆಗೆ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ನೋಂದಾವಣೆ ಮಾಡುವ ಮೂಲಕ ಅವರಿಗೆ ಮಡಿತರ ಚೀಟಿ ನೀಡುವ ವ್ಯವಸ್ಥೆಯನ್ನು ಕಲ್ಪಿಸುವ ಯತ್ನ ನಡೆದಿದೆ. ಶೈಕ್ಷಣಿಕ ಸವಲತ್ತು ಬಳಕೆ ಮಾಡಿಕೊಳ್ಳುವ ಬಗ್ಗೆ ಆವರ ಮನವೊಲಿಸಲಾಗಿದೆ.


ಇದರ ಪರಿಣಾಮ ತಿಪಟೂರು ಪಕ್ಕ ಮಂಜುನಾಥ ನಗರದ ಆಚೆ ಗುಡ್ಡದ ಪಕ್ಕದಲ್ಲಿ ಸುಮಾರು ೧೨ ವರ್ಷಗಳಿಂದ ಬಿಡಾರಗಳಲ್ಲಿ ಬದುಕುತ್ತಿರುವ ಅಲೆಮಾರಿ ಕುಟುಂಬ ಹಾಗೂ ಶಾರದಾನಗರ ರೈಲ್ವೆ ನಿಲ್ದಾಣ ಮುಂದೆ ಬಯಲಿನಲ್ಲಿ ಕೆಲ ತಿಂಗಳಿಂದ ತಾತ್ಕಾಲಿಕ ನೆಲೆಯೂರಿರುವ ಚಿಂದಿ ಆಯುವ, ಕೂದಲು, ಪ್ಲಾಸ್ಟಿಕ್ ಸಾಮಗ್ರಿ ಮಾರಾಟಗಾರರ ಮಕ್ಕಳು ಚಿಣ್ಣರ ಅಂಗಳಕ್ಕೆ ಬಂದು ನಲಿಯುತ್ತಿದ್ದಾರೆ.

ಕೊಳಕಿನಿಂದ ಬೆಳಕಿಗೆ:

ಮಂಜುನಾಥ ನಗರ ಸಮೀಪದ ಬಿಡಾರದಲ್ಲಿ ಬದುಕುತಿದ್ದ ಮಕ್ಕಳ ಸ್ಥಿತಿ ಶೋಚನೀಯವಾಗಿತ್ತು. ಪತ್ರಿಕೆಯಲ್ಲಿ ವಿವರವಾದ ವರದಿ ಬಂದಿತ್ತು. ಕೆಲವೇ ದಿನಗಳ ಹಿಂದೆ ಈ ಅಲೆಮಾರಿ ಮಕ್ಕಳು ತಮ್ಮ ಪೋಷಕರ ಜೊತೆಯಲ್ಲಿ ಬಿಸಿಲು, ಮಳೆಯಲ್ಲಿ ಹಳ್ಳಿಹಳ್ಳಿ ಸುತ್ತಿ ಕೂದಲು, ಪ್ಲಾಸ್ಟಿಕ್ ಇತರೆ ವಸ್ತುಗಳನ್ನು ಮಾರುವ ನರಕದ ಬದುಕಿನಲ್ಲಿ ಕೊಳೆಯುತ್ತಿದ್ದರು. ಧೂಳು ಹಿಡಿದು ಬಾಚದ ಉದ್ದ ಕೂದಲು, ಕೊಳಕು ಬಟ್ಟೆ ಅದರ ದುರ್ವಾಸನೆಯ ಅರಿವು ಸಹ ಅವರಿಗಿರಲಿಲ್ಲ. ನಾಗರಿಕ ಪ್ರಪಂಚದಿಂದ ದೂರ ಉಳಿದು ಇದೇ ತಮ್ಮ ಬದುಕು, ಇದೇ ಸ್ವರ್ಗ ಎಂದು ಕೊಂಡಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡಾಗ ತಾವೂ ಅವರಂತೆ ಅಂದವಾಗಿ ಸಮವಸ್ತ್ರ ಧರಿಸಿ, ಪಾಠ ಹೇಳಿಸಿಕೊಳ್ಳಬೇಕು ಎಂದು ಕನಸುತ್ತಿದ್ದರು. ಆದರೂ ತಮಗೆ ಅರಿವಿಲ್ಲದಂತೆ ಪೋಷಕರ ಜತೆ ತಾವೂ ಅಲೆದಾಡಿ ಬಾಲ್ಯವನ್ನು ದುಸ್ಥಿತಿಯಲ್ಲಿ ಕಳೆಯುತ್ತಿದ್ದರು.

ಆದರೆ ಇಂದು ಅವರ ಸ್ಥಿತಿ ಬದಲಾಗಿದೆ. ಈ ಮಕ್ಕಳು ಈಗ ಚಿಣ್ಣರ ಅಂಗಳ ಸೇರಿ ಎಲ್ಲರ ಜೊತೆ ನಲಿದಾಡುತ್ತಾ, ಅತ್ಯಂತ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆರೋಗ್ಯ, ಸ್ವಚ್ಛತೆಯ ಅರಿವು ಅವರಿಗಾಗಿದೆ. ಇಲ್ಲಿನ ಬಿಇಒ ಕಚೇರಿ ಹಿಂದಿನ ಮಾದರಿ ಕನ್ನಡ ಶಾಲೆಯಲ್ಲಿ ಏಪ್ರಿಲ್ ೫ರಿಂದ ನಡೆಯುತ್ತಿರುವ ಚಿಣ್ಣರ ಅಂಗಳದ ಆಟಪಾಟಗಳಲ್ಲಿ ತೊಡಗಿರುವ ಈ ಮಕ್ಕಳು ತಮ್ಮ ಭವಿಷ್ಯದ ಕನಸು ಕಾಣಲು ಆರಂಭಸಿದ್ದಾರೆ. ಶಾಲೆಗೆ ಸೇರಿ ಓದಬೇಕೆಂಬ ಆಸೆ ಮನದಲ್ಲಿ ಚಿಗುರೊಡೆದಿದೆ.

ಲಕ್ಷ್ಮೀ ಎಂಬ ೧೦ ವರ್ಷದ ಹುಡುಗಿಯಂತೂ ತಾನು ಓದಿ ಲಾಯರ್ ಆಗುತ್ತೇನೆಂದು ಕಣ್ಣರಳಿಸುತ್ತಾಳೆ. ಇದೇ ಕ್ಯಾಂಪಿನ ಮಕ್ಕಳಾದ ಅಣ್ಣಪ್ಪ (೯), ಕರಿಯಪ್ಪ(೮), ದಿನೇಶ್(೭) ಸೇರಿದಂತೆ ಸುಮಾರು ೧೨ಕ್ಕೂ ಹೆಚ್ಚು ಮಕ್ಕಳು ತಾವು ಇನ್ನು ಮುಂದೆ ಶಾಲೆಗೆ ಹೋಗುತ್ತೇವೆ ಎನ್ನುತ್ತಾರೆ. ಎಲ್ಲರೂ ಚಿಣ್ಣರ ಅಂಗಳದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ ಇವರಿಗೆ ಒಳ್ಳೆಯ ಊಟದ ವ್ಯವಸ್ಥೆಯಿದೆ. ಬಟ್ಟೆ ಮತ್ತು ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ಚಿಣ್ಣರ ಅಂಗಳ ಮುಗಿಸಿದ ಪ್ರಮಾಣ ಪತ್ರ ನೀಡಿ ಅವರು ನೆಲೆಯೂರುವ ಸ್ಥಳಗಳಲ್ಲಿ ಅವರವರ ವಯಸ್ಸಿಗೆ ಅನುಗುಣವಾಗಿ ಪ್ರಾಥಮಿಕ ತರಗತಿಗಳಿಗೆ ಸೇರಿಸುವ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ. ಅದಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮಕ್ಕಳಿಗೆ ಶಿಕ್ಷಕ ಜಿ.ಟಿ. ಲಕ್ಷ್ಮಯ್ಯ, ಸ್ವಯಂ ಸೇವಕರಾದ ರತ್ನಮ್ಮ, ಹನುಮಂತಪ್ಪ ಆಟಪಾಟ ಹೇಳಿಕೊಡುತ್ತಿದ್ದಾರೆ.


ಶಾಲೆ ಬಿಟ್ಟ ನಗರದ ಸುಮಾರು ೨೫ಕ್ಕೂ ಹೆಚ್ಚು ಮಕ್ಕಳನ್ನು ಚಿಣ್ಣರ ಅಂಗಳಕ್ಕೆ ಸೇರಿಸುವ ಉದ್ದೇಶ ಶಿಕ್ಷಣ ಇಲಾಖೆಗಿತ್ತು. ಆದರೆ ಪೋಷಕರು ಸಹಕಾರ ತೋರಿಲ್ಲ. ಅವರ ಮನವೊಲಿಕೆ ಯತ್ನ ಸಮಾಜದಿಂದ ಆಗಬೇಕಿದೆ. ಬೆಳೆಯುವ ಮಕ್ಕಳ ಭವಿಷ್ಯ ನಾಶ ಮಾಡುವ ಅಧಿಕಾರ ಪೋಷಕರಿಗಿಲ್ಲ. ಮಕ್ಕಳ ಹಕ್ಕು ಇಲ್ಲಿ ಮುಖ್ಯ. ಇಂತಹ ಪ್ರಯತ್ನದಿಂದ ಬೀದಿಗೆ ಬೀಳುವ ಲಕ್ಷಾಂತರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತಾ ಹೋಗಬಹುದು.





ಯಕನಾತಿ ಯಲ್ಲವ್ವಾ ಚೌಡ್ಕೆ ಚಾಮುಂಡೆವ್ವ




‘ಯಕನಾತಿ ಯಲ್ಲವ್ವಾ ಚೌಡ್ಕೆ ಚಾಮುಂಡೆವ್ವ, ರಕ್ಕಸರ ಸೊಕ್ಕ ಮುರಿದ ತಾಯೆ ಕೊಲ್ಲಾಪುರದವ್ವ, ಭಕುತೀಲಿ ಬಾಗುವೆ-ವರವನ್ನೇ ಬೇಡುವೆ, ಶಕುತೀಯ ಕೊಟ್ಟು ಕಾಪಾಡೆ, ತಾಯೆ....ಕಾಪಾಡೆ-




ವಂಶಪಾರಂಪರ‍್ಯವಾಗಿ ಬಂದ ಚೌಡಿಕೆ ಮೇಳದ ಕಲೆಯಲ್ಲೆ ತನ್ನ ಬದುಕನ್ನು ಕಂಡು ಕೊಂಡ ಯಲ್ಲಯ್ಯ ತನ್ನ ಶ್ರಮಕ್ಕೆ ತಿಚೋರಿ ತುಂಬುವಷ್ಟು ಪ್ರಶಸ್ತಿ ಮತ್ತು ಸನ್ಮಾನ ಪತ್ರ ಪಡೆದು ಹಳ್ಳಿಯಿಂದ ಡಿಲ್ಲಿಯವರೆಗೂ ಹೆಸರು ಮಾಡಿದ್ದರೂ ಸರಕಾರದ ಅವಕೃಪೆಗೆ ಒಳಗಾಗಿರುವುದು ವಿಷಾಧನೀಯ. ದರ್ಬಲ ಮತ್ತು ಆರ್ಥಿಕವಾಗಿ ಹಿನ್ನಡೆಯುಳ್ಳ ಎಂತಹ ಕಲಾವಿದರಾದರೂ ಇದೇ ಗತಿ.

ತಿಪಟೂರು ತಾಲೂಕಿನ ಬಜಗೂರು ಗ್ರಾಮ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಕಾರಣ ನಮ್ಮ ಚೌಡಿಕೆ ಮೇಳದ ಯಲ್ಲಯ್ಯ ಎಂಬುದನ್ನು ಜನ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಚೌಡಿಕೆ ಗುಡಿಕಟ್ಟಿನ ಬಡ ದಲಿತ ಕುಟುಂಬದಲ್ಲಿ ಜನಿಸಿದ ಬಜಗೂರಿನ ಚೌಡಿಕೆ ಯಲ್ಲಯ್ಯನಿಗೆ ಈಗ ೬೫, ಆದರೂ ಅವರು ಜಾನಪದ ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ.

ಮುತ್ತಜ್ಜ ದೊಡ್ಡಯಲ್ಲಯ್ಯ, ಅಜ್ಜ ರಾಮಯ್ಯ, ತಂದೆ ಪರಶುರಾಮಯ್ಯ ಎಲ್ಲರೂ ಚೌಡಿಕೆ ಕಲಾವಿದರೇ. ರೇಣುಕಾದೇವಿ ಆರಾಧಕರಾದ ಇವರ ಕುಟುಂಬದಲ್ಲಿ ಚೌಡಿಕೆ ಮೇಳ ಪಾರಂಪರಿಕವಾಗಿ ಬಂದಿದೆ. ಬಾಲ್ಯದಿಂದಲೂ ಚೌಡಿಕೆಯ ನಾದ, ಹಾಡು ಕೇಳುತ್ತಲೇ ಬೆಳೆದ ಯಲ್ಲಯ್ಯನಿಗೆ ಮುಂದೆ ಜೀವನೋಪಾಯದ ಜೊತೆಗೆ ಹೆಸರು ಮತ್ತು ಕೀರ್ತಿ ತಂದಿದ್ದು ಇದೇ ಕಲೆಯೇ. ಸಾಧನೆಯ ಆ ದಾರಿ ಯಶೋಗಾಥೆಯೇ ಸರಿ.

ಶ್ರದ್ಧಾಭಕ್ತಿಯ ಹಾಡಿನೊಂದಿಗೆ ಚೌಡಿಕೆ ಆರಂಭಿಸುವ ಯಲ್ಲಯ್ಯ ತನ್ನ ಬದುಕಿಗೂ ಸಹ ಈ ಜಾನಪದ ಪ್ರಕಾರದಿಂದ ಶಕ್ತಿ ತುಂಬಿಕೊಂಡು ಧನ್ಯತೆ ಕಂಡಿದ್ದಾರೆ. ರೇಡಿಯೋದಲ್ಲಿ ಯಾವಾಗಲಾದರೂ ಚೌಡಿಕೆ ಮೇಳ ಕೇಳಿದರೆ ಇದು ಬಜಗೂರು ಚೌಡಿಕೆ ಯಲ್ಲಯ್ಯನದೇ ಇರಬೇಕೆನ್ನುವಷ್ಟರ ಮಟ್ಟಿಗೆ ಅವರು ಆ ಜಾನಪದ ಪ್ರಕಾರದಲ್ಲಿ ಛಾಪು ಮೂಡಿಸಿದ ಅಪ್ರತಿಮ ಕಲಾವಿದ. ಜಾನಪದ ಪ್ರಕಾರಗಳು ಸೊರಗಿರುವ ಈ ಆಧುನಿಕ ಕಾಲದಲ್ಲೂ ಯಲ್ಲಯ್ಯನ ಮಕ್ಕಳಾದ ಜಗದೀಶ್, ಪ್ರಕಾಶ್, ಬಾಬು, ರವೀಶ್ ಅವರಲ್ಲಿ ಮೊದಲ ಮೂವರು ಅಪ್ಪನ ದಾರಿಯನ್ನೇ ತುಳಿದು ವಂಶದ ಕಲೆಯನ್ನು ಮುಂದುವರೆಸುತ್ತಿದ್ದಾರೆ. ಯಲ್ಲಯ್ಯ ಚೌಡಿಕೆ ಮೇಳ ಪ್ರದರ್ಶನಕ್ಕೆ ತನ್ನ ಮೂವರು ಮಕ್ಕಳನ್ನೇ ಜತೆಕಲಾವಿದರನ್ನಾಗಿ ಬಳಸಿಕೊಂಡು ಕಲಿಸಿ, ಕಲೆಗೆ ಗೌರವ ನೀಡುವ ಜೊತೆಗೆ ಅದರ ಸಂರಕ್ಷಣೆ, ಉಳಿವಿಗೆ ಕಾರಣರಾಗಿದ್ದಾರೆ.

ಬದುಕಿನ ಮಾರ್ಗ ಕಲೆ:

ಅಪರೂಪದ ಎನಿಸುವಂತ ಕಲಾವಿದರ ವಂಶಕ್ಕೆ ಬೆಳೆದು ತಿನ್ನಲು ಅಂಗೈಯಗಲ ಭೂಮಿ ಇಲ್ಲದಿರುವುದು ದುರದುಷ್ಟಕರ. ಹಿರಿಯರಿಂದ ಇಂದಿನ ಪೀಳಿಗೆಯವರೆಗೆ ಹೊಲಿದು ಬಂದದ್ದು ಚೌಡಿಕೆ ಮೇಳ ಮಾತ್ರ. ಇದೇ ಜೀವನ ಕೂಡ. ಸಂಪ್ರದಾಯ ಪ್ರಕಾರ ರೇಣುಕಾದೇವಿ ಭಕ್ತರ ಮನೆಗಳ ನಿಗದಿತ ಪೂಜೆ ನೆರವೇರಿಸುತ್ತಾ ವಾರ್ಷಿಕ ಪಡಿ ಆಧಾರದಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಕಾಲಕ್ರಮೇಣ ಕಲೆಯೇ ಕೈಹಿಡಿದಿದೆ.

ಅಂದಿನ ಬಡತನ ಮತ್ತು ಆರ್ಥಿಕ ದುಸ್ಥಿತಿ ಕಾರಣದಿಂದ ಯಲ್ಲಯ್ಯ ಕೂಲಿ ಮಠದಲ್ಲಿ ೩ನೇ ತರಗತಿ ಕಲಿತದ್ದೇ ಹೆಚ್ಚು. ಮುಂದೆ ತನ್ನ ಅನುಭವದಿಂದ ಕನ್ನಡ ಓದು ಬರಹ ಕಲಿತಿದ್ದಾರೆ. ಹಿರಿತಲೆಗಳಿಂದ ಬಂದ ಚೌಡಿಕೆ ಮೇಳಕ್ಕೆ ಮೌಖಿಕ ಸಾಹಿತ್ಯವೇ ಸಾಕೆಂದು ನಂಬಿದ ವ್ಯಕ್ತಿ ಅವರು. ಸುಮಾರು ೧೦ಕ್ಕೂ ಹೆಚ್ಚು ಕಥೆಗಳು ಇವರ ಸ್ಮೃತಿಪಟಲದಲ್ಲಿದ್ದು ಮೇಳಕ್ಕೆ ನಿಂತು ಪ್ರೇಕ್ಷಕರ ಬೇಡಿಕೆಯ ಕಥೆಯನ್ನು ನಿರಾಯಾಸವಾಗಿ ನಡೆಸಿಕೊಡುವ ಕೌಶಲ್ಯಗಳಿಸಿದ್ದಾರೆ. ಹಾಗಾಗಿ ಜಾನಪದ ವಿಧ್ವಾಂಸ ಪಿ.ಕೆ. ರಾಜಶೇಖರ್ ಅವರು ಯಲ್ಲಯ್ಯನಿಂದ ಹೊರ ಬಂದ ಕಥಾ ಸಾರವನ್ನು ‘ಚೌಡಿಕೆ ಕಾವ್ಯ ಪುಸ್ತಕದ ಮೂಲಕ ದಾಖಲಿಸಿದ್ದಾರೆ.

ಸಾಧನೆ ಮತ್ತು ಖ್ಯಾತಿ:

ಈವರೆಗೆ ಲೆಕ್ಕವಿಲ್ಲದಷ್ಟು ಪ್ರದರ್ಶನಗಳನ್ನು ಕೊಟ್ಟಿರುವ ಯಲ್ಲಯ್ಯನ ಕಲಾಸಾಮಾರ್ಥ್ಯದ ಎದುರಿಗೆ ಸಾಟಿ ಮಾಡುವವರೂ ಇಲ್ಲ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಯಲ್ಲಯ್ಯ ಪ್ರದರ್ಶನ ನೀಡಿ, ಮೆಚ್ಚಿಗೆ ಪಡೆದಿದ್ದಾರೆ. ೧೯೯೬ರಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ, ಕರ್ನಾಟಕ ಜಾನಪದ ಪರಿಷತ್, ಜಾನಪದ ಲೋಕದಿಂದ ಪ್ರದರ್ಶನಗಳನ್ನು ನೀಡಿದ್ದಾರೆ. ೧೯೯೭ರಲ್ಲಿ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಿ ಅಭಿನಂದನಾ ಪತ್ರ ಪಡೆದಿದ್ದಾರೆ. ನಾನಾ ಜಾನಪದ ಮೇಳಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡಿರುವುದು ಇವರ ಹೆಗ್ಗಳಿಕೆ. ದೂರದರ್ಶನದಲ್ಲಿ ಪ್ರಸಾರಗೊಂಡ ನಾಗೇಗೌಡರ ಜಾನಪದ ಸರಣಿ ‘ಸಿರಿಗಂಧದಲ್ಲಿ ಇವರ ಬಗ್ಗೆ ಬಿತ್ತರವಾಗಿದೆ. ಆಕಾಶವಾಣಿಯಲ್ಲಿ ಇವರ ಚೌಡಿಕೆ ಮೇಳ ಆಗಾಗ್ಗೆ ಬಿತ್ತರವಾಗುತ್ತಿದೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರ ದೀರ್ಘಾವಧಿಯ ಸಾಧನೆ ಗುರ್ತಿಸಿ ೨೦೦೫ರಲ್ಲಿ ಪ್ರಶಸ್ತಿ ನೀಡಿ, ಗೌರವಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳು ಸಿಕ್ಕಿವೆ. ಆದರೆ ನಾಡೋಜ ಗೌರವ ಪ್ರಶಸ್ತಿ ನೀಡುವ ಹಂಪಿ ವಿವಿಗಾಗಲಿ, ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗಾಗಲಿ ಈ ಜಾನಪದ ಪ್ರತಿಭೆ ಕಾಣದಿರುವುದು ವಿಷಾಧನೀಯ.

ಕಲಾಸೇವೆ ಮತ್ತು ಸಾಧನೆ ಬ್ಗಗೆ ಸಂತೃಪ್ತಿ ಹೊಂದಿರುವ ಯಲ್ಲಯ್ಯನಿಗೆ ಸರಕಾರದ ಧೋರಣೆ ಬಗ್ಗೆ ಬೇಸರ ಮತ್ತು ನೋವು ಇದೆ. ಕಂದಾಯ ಇಲಾಖೆಯಿಂದ ೧೯೬೮ರಲ್ಲಿ ಮಂಜೂರಾಗಿದ್ದ ೧.೩೪ ಎಕರೆ ಜಮೀನನ್ನು ಇವರ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳು ಪುಸ್ತಕ ಅಥವಾ ಸಿಡಿ ರೂಪದಲ್ಲಿ ದಾಖಲಾಗುತ್ತಿರುವ ಸಮಯದಲ್ಲಿ ಛಲತೊಟ್ಟು ಮುಂದಿನ ಪೀಳಿಗೆಗೆ ಉಳಿಸುವ ಈ ಕುಟುಂಬ ಆ ಕಲೆಗಾಗಿಯೇ ಜೀವನ ಮುಡುಪಿಟ್ಟಿದೆ. ಚೌಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವ ಕುಟುಂಬಕ್ಕೆ ಸರಕಾರ ಮತ್ತು ಸಮಾಜ ತಿರುಗಿ ನೋಡುವುದೇ ?. ಕಲಾವಿದಳ ಬಾಳು ಬೆಳಗುವುದೇ?







ಶತಾಯುಷಿ ಮತ್ತು ಅಪರೂಪದ ರಾಜಕಾರಣಿ: ಟಿ.ಜಿ.ತಿಮ್ಮೇಗೌಡರು.




ತುಮಕೂರು ಜಿಲ್ಲೆಯಲ್ಲಿ ಕಲ್ಪತರು ನಾಡು ಎಂದೇ ಪ್ರಸಿದ್ಧವಾದ ತಿಪಟೂರು ತಾಲೂಕಿನ ಮಟ್ಟಿಗೆ ಒಬ್ಬ ಅಪರೂಪದ ಮತ್ತು ಮಾದರಿ ರಾಜಕಾರಣಿ ಎಂದರೆ ಅದು ಟಿ.ಜಿ.ತಿಮ್ಮೇಗೌಡರು ಮಾತ್ರ.

ಕಳೆದ ೬೦ ವರ್ಷದ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ರಾಜಕಾರಣಿಯನ್ನು ಜನತೆ ನೋಡೇ ಇಲ್ಲ. ಒಬ್ಬ ರಾಜಕಾರಣಿ ಹೇಗಿರಬೇಕು. ಅವನ ಕರ್ತವ್ಯ ಮತ್ತು ಸಮಾಜಕ್ಕೆ ಅವನ ಕೊಡುಗೆ ಏನು. ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು ಎಂಬ ನಾನಾ ಅಂಶಗಳಿಗೆ ಇಡೀ ರಾಜ್ಯಕ್ಕೆ ಮಾಜಿ ಶಾಸಕ ಟಿ.ಜಿ.ತಿಮೇಗೌಡರು ನಿಜಕ್ಕೂ ಇಂದು ಮಾದರಿ.
ರಾಜ್ಯ ವಿಧಾನ ಸಭೆಗೆ ೬೦ ವರ್ಷದ ಸಂಭ್ರಮ. ಹಾಗೆಯೇ ತಾಲೂಕಿನ ಮೊದಲ ಶಾಸಕ ೧೦೩ ವರ್ಷದ ಶತಾಯುಷಿ ಟಿ.ಜಿ.ತಿಮ್ಮೆಗೌಡರಿಗೂ ಸ್ವಾತಂತ್ರ್ಯದ ನಂತರ ತಾಲೂಕು ಆಡಳಿತದಲ್ಲಿ ಅಧಿಕಾರ ನಡೆಸಿದ ನೆನಪಿನ ೬೦ರ ಸಂಭ್ರಮ. ಇವರು ಇಂದಿನ ರಾಜಕಾರಣಿಗಳಿಗೆ ಮತ್ತು ಯುವಜನತೆಗೆ ಸ್ಪೂರ್ತಿ ಕೂಡ.
ವಿಧಾನ ಸಭೆಗೆ ೬೦ ವರ್ಷದ ತುಂಬಿರುವ ಕಾರಣ ಸರಕಾರ ಜೂನ್ ೧೮ರ ವೇಳೆಗೆ ಒಂದು ಸಮಾರಂಭ ಹಮ್ಮಿಕೊಂಡಿದ್ದು ಅಂದು ತಿಮ್ಮೇಗೌಡರನ್ನು ಗೌರವಿಸುವ ಏರ್ಪಾಡು ಮಾಡಿದೆ. ಹಾಗಾಗಿ ಅವರಿಗೆ ಗೌರವ ಸೂಚಕವಾಗಿ ಈ ಲೇಖನ.

ವಯಸ್ಸು ನೂರು ದಾಟಿದ್ದರೂ ಯುವಕರಂತೆ ಓಡಾಡಿಕೊಂಡಿರುವ ತಿಮ್ಮೇಗೌಡರು ಸ್ವಾತಂತ್ರ್ಯ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನ ಸಭೆಯ ತಾಲೂಕಿನ ಪ್ರಥಮ ಶಾಸಕರೂ ಆಗಿದ್ದಾರೆ. ೧೯೪೭ರಲ್ಲಿ ಮೈಸೂರು ರಾಜರ ಆಡಳಿತದ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ ೧೯೫೨ರವರೆಗೂ ಸೇವೆ ಮಾಡಿದ್ದ ಇವರು ೧೯೫೨ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು ೧೯೫೭ರವರೆಗೂ ಶಾಸಕರಾಗಿ ಕೆಲಸ ಮಾಡಿದ್ದಾರೆ. ನಂತರ ೧೯೫೭ರಲ್ಲಿ ನಡೆದ ಎರಡನೇ ವಿಧಾನ ಸಭಾ ಚುನಾವಣೆಯಲ್ಲಿ ಜಾತಿ ರಾಜಕಾರಣದಿಂದ ಎರಡನೇ ಬಾರಿಗೆ ಕಡಿಮೆ ಅಂತರದಿಂದ ಪರಾಭವಗೊಂಡ ಅವರು ಮತ್ತೆಂದೂ ಚುನಾವಣೆ ಕಡೆಗೆ ಮುಖ ಮಾಡಿಲ್ಲ.
ಹೆಚ್ಚು ಮಾತನಾಡದ ಯಾರಿಗೂ ತೊಂದರೆ ಕೊಡದ ತಿಮ್ಮೇಗೌಡರು ಇಂದು ತಾಲೂಕಿನಲ್ಲಿ ಪ್ರಾಮಾಣಿಕ ರಾಜಕಾರಣಿ, ಉತ್ತಮ ವರ್ತಕ, ಗೌರವಯುತ ಪತಿ, ಆದರ್ಶ ತಂದೆ, ಮಾದರಿ ತಾತಾ ಎನಿಸಿಕೊಂಡಿದ್ದು ತಮ್ಮ ಸಜ್ಜನಿಖೆ, ನಡೆ ನುಡಿಯಲ್ಲಿ ಉತ್ತಮ ಚಾರಿತ್ರ್ಯವನ್ನು ಗಳಿಸಿದ್ದಾರೆ. ಅಸೂಹೆ, ಅತೃಪ್ತಿ ಮತ್ತು ಸ್ವಾರ್ಥದ ಹತ್ತಿರವೂ ಸುಳಿಯದ ಅವರು ಸರಳವಾಗಿ ಗಾಂಧಿ ಮಾರ್ಗದಲ್ಲಿ ಬದುಕು ಸಾಗಿಸುತ್ತಾ ತೃಪ್ತಿ ಮತ್ತು ಸಂತೋಷ ಕಂಡವರು. ಇವರ ಸ್ವಂತ ಊರು ತಾಲೂಕಿನ ತಿಮ್ಲಾಪುರ ಗ್ರಾಮ, ತಂದೆ ಗಿರಿಗೌಡರ ಮೂವರು ಮಕ್ಕಳಲ್ಲಿ ಮೂರನೆವರು. ನಗರದ ಸಮೀಪದ ಗ್ರಾಮದ ಗೌರಮ್ಮ ಎಂಬುವರೊಂದಿಗೆ ವಿವಾಹವಾದ ಇವರಿಗೆ ೭ ಮಕ್ಕಳು, ೫ ಹೆಣ್ಣು, ೨ ಗಂಡು. ಗಂಡು ಮಕ್ಕಳಲ್ಲಿ ನಿರಂಜನ್ (ವರ್ತಕ) ಮತ್ತು ಕುಮಾರ್( ಕೃಷಿ) ಈಗ ೭ ಜನ ಮೊಮ್ಮಕ್ಕಳಿದ್ದು ತುಂಬೂ ಕುಟುಂಬ.

ದಿವಾನ್ ಮಾಧವರಾವ್ ಜೊತೆ ಸೇವೆ:
೧೯೪೭ರಿಂದ ೧೯೫೨ ರವರೆಗೆ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಅಂದು ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮತ್ತು ಮಾಧವರಾವ್ ಜೊತೆ ಕೆಲಸ ಮಾಡಿದ್ದಾರೆ.
ರಾಜ್ಯದ ಮೊದಲ ವಿಧಾನನಸಭೆಯ ಮುಖ್ಯಮಂತ್ರಿ ಕೆಂಗಲ್ ಹನಮಂತಯ್ಯ ಇದ್ದಾಗ ಇವರು ಅವರೊಂದಿಗೆ ಆತ್ಮೀಯವಾಗಿದ್ದರು. ವಿಧಾನ ಸೌಧದ ನಿರ್ಮಾಣಕ್ಕೆ ಶಾಸಕರಾಗಿದ್ದುಕೊಂಡು ಅವರ ಜೊತೆ ಕೈ ಜೋಡಿಸಿದ್ದರು. ನಂತರ ಮುಖ್ಯ ಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರು ತಿಮ್ಮೇಗೌಡರ ಮನಯ ಗೃಹಪ್ರವೇಶಕ್ಕೆ ಬಂದು ಹರಸಿದ್ದರು. ಅಂದಿನ ರಾಜಕೀಯ ಮುತ್ಸದ್ದಿ ನಿಜಲಿಂಗಪ್ಪ ಅವರೊಂದಿಗೆ ವಿಶ್ವಾಸ ಬೆಳೆಸಕೊಂಡಿದ್ದ ಅವರು ತಿಪಟೂರಿನಲ್ಲಿ ಸಾರ್ವಜುನಿಕ ಆಸ್ಪತ್ರೆ ಮತ್ತು ತಿಪಟೂರು ಹೊನ್ನವಳ್ಳಿಗೆ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮುಂಜೂರಾತಿ ಪಡೆದು ಚಾಲನೆ ಕೊಟ್ಟದ್ದರು.
ಕಡದಾಳು ಮಂಜಪ್ಪ, ನಿಜಲಿಂಗಪ್ಪ, ಡಾ.ಪಟ್ಟಾಭಿರಾಮಯ್ಯ, ಹೆಚ್.ಎಂ.ಚನ್ನಬಸಪ್ಪ, ವೀರಣ್ಣಗೌಡ, ಸಿದ್ದವೀರಪ್ಪ, ತಾಳಕೆರೆ ಸುಬ್ರಮಣ್ಯಂ ತಿಮ್ಮೇಗೌಡರ ಆತ್ಮೀಯರು ಜೊತೆಗೆ ತಿಪಟೂರಿನ ವಿಎಲ್‌ಶಿವಪ್ಪ, ಎಂ.ಆರ್.ರಂಗಪ್ಪ, ಎಂ.ಚನ್ನಬಸಪ್ಪ ಮತ್ತಿತರರು ಗೆಳೆಯರಾಗಿದ್ದುಕೊಂಡು ರಾಜಕಾರಣದಲ್ಲಿ ಸಹಕಾರ ನೀಡಿದ್ದರು.

೧೦೩ ವರ್ಷದ ಚಿರ ಯುವಕ:
ತಿಮ್ಮೇಗೌಡರಿಗೆ ೧೦೩ ವರ್ಷ ತುಂಬಿದ್ದರೂ ಯಾವುದೇ ಕಾಯಿಲೆ ಇಲ್ಲದೇ ಇಂದಿಗೂ ಆರೋಗ್ಯವಾಗಿದ್ದಾರೆ. ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರನ್ನೂ ಅವಲಂಬಿಸಿಲ್ಲ, ಎಲ್ಲಾ ಕೆಲಸವನ್ನೂ ಅವರೇ ಮಾಡಿಕೊಳ್ಳುತ್ತಾರೆ. ಕಣ್ಣು ಚೆನ್ನಾಗಿ ಕಾಣುತ್ತವೆ. ಈಗಲೂ ಮುದ್ದಾಗಿ ಬರೆಯುತ್ತಾರೆ. ಓದುತ್ತಾರೆ. ಚೆನ್ನಾಗಿ ಓಡಾಡುತ್ತಾರೆ, ಸದಾ ಆರೋಗ್ಯವಾಗಿರುವ ಅವರ ಆಯುಷ್ಯದ ಗುಟ್ಟು ಚೆನ್ನಾಗಿ ಊಟ ಮಾಡುವುದು ಮತ್ತು ನಿದ್ದೆ ಮಾಡುವುದು, ಶಾಂತ ಸ್ವಭಾವ, ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಗಾಧ ನೆನಪಿನ ಶಕ್ತಿ, ಸ್ವಚ್ಚತೆಗೆ ಹೆಚ್ಚು ಆಧ್ಯತೆ. ಇವರ ನಡತೆ ಮನೆಯವರ ಅಚ್ಚು ಮೆಚ್ಚು,

ಪ್ರಸ್ತುತ ರಾಜಕೀಯಕ್ಕೆ ಬೇಸರ:
ಸರಕಾರ ಜನರ ಸೇವೆಗಾಗಿ ಇರೋದು. ಈಗ ಸ್ವಾರ್ಥ ಮತ್ತು ಮೋಸದ ರಾಜಕಾರಣವೇ ವೈಭವೀಕರಿಸುತ್ತಿದೆ. ಹಿಂದೆ ಎಂದೂ ಕಾಣದಂತಹ ಕೆಟ್ಟ ರಾಜಕಾರಣದ ವಾತಾವರಣ ರಾಜ್ಯದಲ್ಲಿ ಕೇಳಿತ್ತಿದ್ದು ಮನನೊಂದಿದೆ. ಯಡಿಯೂರಪ್ಪ ಮಾಡ ಬಾರದನ್ನು ಮಾಡಿದರು. ಇನ್ನೂ ಮನಸ್ಸು ಪರಿವರ್ತನೆಯಾಗಿಲ್ಲ. ಜಾತಿ ರಾಜಕಾರಣ ಬೇಡ. ಇದು ಸಮಾಜಕ್ಕೆ ಮಾರಕ ಎಂಬ ತಮ್ಮ ಅಭಿಪ್ರಾಯವನ್ನು ತಿಮ್ಮೇಗೌಡರು ವ್ಯಕ್ತಪಡಿಸುತ್ತಾರೆ.
ಹಿಂದಿನ ಮತ್ತು ಇವತ್ತಿನ ಸರಕಾರದ ಆಡಳಿತ ವ್ಯವಸ್ಥೆ ವ್ಯತ್ಯಾಸ ಹೇಳಲು ಬರೋದಿಲ್ಲ. ಆಗ ಜನ ಸೇವೆಯೇ ಮುಖ್ಯವಾಗಿತ್ತು. ಜನರು ತಮ್ಮ ಪ್ರತಿನಿಧಿಗಳನ್ನು ಗೌರವವಾಗಿ ಕಾಣುತ್ತಿದ್ದರು. ಹಣ ಇತರೆ ಕೆಟ್ಟದನ್ನು ಬಯಸುತ್ತಿರಲಿಲ್ಲ. ಅಂದು ನಾನು ಚುನಾವಣೆಗೆ ಕೇವಲ ೨೫-೩೦ಸಾವಿರ ಖರ್ಚು ಮಾಡಿದ್ದೆ. ಅದು ಪ್ರಚಾರ, ಓಡಾಟಕ್ಕೆ ಮಾತ್ರ, ಜನರಿಗೆ ಒಂದಾಣಿ ಕೊಟ್ಟಿಲ್ಲ. ಈಗ ಕೋಟಿ ಗಟ್ಟಲೆ ಹಣ ಬೇಕು ಎಲ್ಲಿಂದ ತರೋದು. ಇದು ಭ್ರಷ್ಟಾಚಾರಕ್ಕೆ ನಾಂದಿ. ಜನರ ಮನಸ್ಥಿತಿ ಬದಲಾಗಬೇಕು ಎಂದು ಸಲಹೆ ನೀಡುತ್ತಾರೆ ಅವರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ. ಇದು ಅಪಾಯದ ಸಂಕೇತ. ಜನ ಕ್ಷಮಿಸಲ್ಲ, ಇಂದು ಸಮಾಜ ರಾಜಕಾರಣಿಗಳಿಂದ ಹೊಲಸಾಗಿದೆ. ಚುನಾವಣೆ ಮತ್ತು ಸಮಾರಂಭಗಳಿಗೆ ಅನೈತಿಕವಾಗಿ ಸಂಪಾದಿಸಿದ್ದ ದುಡ್ಡು ಚೆಲ್ಲುತ್ತಾರೆ, ನಂತರ ಲಂಚ ಪಡೆಯುತ್ತಾರೆ. ಇದು ವ್ಯಾಪಾರವಾಗಿದೆ. ಆದರ್ಶವಿಲ್ಲ ಮೌಲ್ಯಗಳಿಲ್ಲ. ಮೋಸವೇ ತುಂಬಿದೆ. ಇದು ಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಸೇವೆ:
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ವಿಧಾನ ಸೌಧ ನಿರ್ಮಾಣದಲಿ ಸಹಾಯ, ಅಂದಿನ ಮೈಸೂರು ರಾಜ್ಯದ ನಾನಾ ಪ್ರಮುಖ ಸಂಘಗಳ ಸದಸ್ಯರಾಗಿ ಸೇವೆ, ಅಂದಿನ ಮೈಸೂರು ಅಸೆಂಬ್ಲಿಯಿಂದ ಸತತ ೩ ಬಾರಿ ಹೌಸ್ ಕಮಿಟಿ ಸದಸ್ಯರಾಗಿ ಸೇವೆ. ಬೆಂಗಳೂರು ಇಂಜಿನಿಯರಿಂಗ್ ಇನ್ಸಿಟ್ಯೂಟ್ ಸದಸ್ಯರಾಗಿ ಎರಡು ವರ್ಷ ಸೇವೆ. ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಸದಸ್ಯರಾಗಿ ಸೇವೆ, ತುಮಕೂರು ಜಿಲ್ಲಾ ಬೋರ‍್ಡ್ ಸದಸ್ಯರಾಗಿ, ಡಿಸಿಸಿ ಬ್ಯಾಂಕ್ ಸದಸ್ಯರಾಗಿ ಹಾಗೂ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಂಟು ವರ್ಷದ ಸೇವೆ ಸಲ್ಲಿಸಿ ಹೆಸರು ಮಾಡಿದ್ದಾರೆ.

ಸವಲತ್ತುಗಳಿಂದ ವಂಚಿತರು:
ಮಾಜಿ ಶಾಸಕರ ವೇತನ ಬಿಟ್ಟರೆ ಬೇರೆ ಯಾವುದೇ ಸರಕಾರದಿಂದ ಬರುವ ಸವಲತ್ತುಗಳನ್ನು ಪಡೆಯುತ್ತಿಲ್ಲ.

ಸಂದೇಶ:
ಇಂದಿನ ಪೀಳಿಗೆ ಹಿರಿಯರಾದ ನಮ್ಮ ಮಾತು ಯಾರೂ ಕೇಳಲ್ಲ. ಹೊಸ ಜನರೇಷನ್ ಕಾಲ ಬದಲಾಗಿದೆ ಎನುತ್ತಾರೆ. ಆದರೂ ಒಂದು ಮಾತು ಹೇಳುತ್ತೇನೆ. ಬೇಡ ಹಣದ ವ್ಯಾಮೋಹ ಸರಿಯಲ್ಲ. ನಾನು ದಡ್ಡ ಶಾಸಕನಾಗಿದ್ದೆ. ಹಣ ಮಾಡಲಿಲ್ಲ. ಅಕ್ರಮ ಆಸ್ತಿ ಸಂಪಾದಿಸಲಿಲ್ಲ. ಆದರೆ ಭಗವಂತ ಕೋಟ್ಯಾಂತರ ಬೆಲೆ ಬಾಳುವ ಆಯುಷ್ಯ ಮತ್ತು ಆರೋಗ್ಯ ಕೊಟ್ಟ. ವ್ಯಾಪಾರ ಮಾಡಿದೆ, ಲಾಭ ಮತ್ತು ನಷ್ಟ ಎರಡೂ ಆಗಿದೆ. ಆದರೆ ನೆಮ್ಮದಿ ಹಾಳಾಗಿಲ್ಲ.
ಮುಂದಿನ ಯುವ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಚಾರ ದೇಶದಲ್ಲಿ ಬೇಡ. ಇದರ ವಿರುದ್ಧ ಹೋರಾಡುತ್ತಿರುವ ಅಣ್ಣಾಹಜಾರೆಗೆ ನನ್ನ ಬೆಂಬಲವಿದೆ. ಮನುಷ್ಯರ ನಡುವಿನ ಭಾವನೆ ಮತ್ತು ಸಂಬಂಧಗಳು ಅನ್ಯಾಯ, ಅಕ್ರಮ ಭ್ರಷಟಚಾರದಿಂದ ನಾಶವಾಗುತ್ತಿದೆ. ಇದು ಅಪಾಯ.
ಇಗಾಗಲೇ ನಾನಾ ಸಂಘ ಸಂಸ್ಥೆಗಳು ಅವರನ್ನು ಗುರ್ತಿಸಿ ಗೌರವಿಸಿವೆ. ರಾಜ್ಯ ವಿಧಾನ ಸಭೆಯ ೬೦ರ ಸಂಭ್ರಮಕ್ಕೆ ಶುಭ ಹಾರೈಸಿದ್ದಾರೆ. ರಾಜ್ಯದ ಜನತೆಗೆ ಆಶೀರ್ವಚಿಸಿ ಉತ್ತಮ ಮಳೆ ಬೆಳೆ ಬಂದು ಉತ್ತಮ ಸರಕಾರ ಜನರ ಪಾಲಿಗೆ ಬರಲಿ ಎಂದಿದ್ದಾರೆ.


ಸ್ವಾತಂತ್ರ್ಯದ ನಂತರ ರಚನೆಯಾದ ರಾಜ್ಯದ ಮೊದಲ ಶಾಸಕಾಂಗ ಸಭೆಯ ಶಾಸಕರು ಮತ್ತು ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರೊಂದಿಗೆ ತಿಪಟೂರಿನ ಅಂದಿನ ಶಾಸಕ ಟಿ.ಜಿ.ತಿಮ್ಮೇಗೌಡರು (ವಿಧಾನ ಸೌಧದ ಮುಂದೆ ತೆಗೆದ ಚಿತ್ರ ೧೯೫೬)

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!




ತನ್ನ ಬದುಕಿನ ಉದ್ದಕ್ಕೂ ಕುಟುಂಬದಿಂದಲೇ ಮಾನಸಿಕ ಒತ್ತಡ, ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ಸವೆಸಿದ ತುಮಕುರು ಜಿಲ್ಲೆ, ತಿಪಟೂರು ತಾಲೂಕು ಅರಳುಗುಪ್ಪೆಯ ಆಶಾ (೨೬) ಕೊನೆಗೂ ಮನದಾಳದ ನೂರಾರು ಕನಸುಗಳನ್ನು ಹೊತ್ತುಕೊಂಡೇ ೨೦೧೨ರ ಜುಲೈ ೧೧ರಂದು ಕೊನೆ ಉಸಿರು ಎಳೆದು, ಈ ಲೋಕ ಬಿಟ್ಟು ಬಾರದ ಲೋಕಕ್ಕೆ ಹೋಗಿ ಬಿಟ್ಟಳು.

ತಿಪಟೂರು ತಾಲೂಕು ಅರಳುಗಪ್ಪೆ ವಾಸಿ ನಿವೃತ್ತ ಶಿಕ್ಷಕ ಪುಟ್ಟಶಾಮಯ್ಯನವರ ಕೊನೆ ಪತ್ರಿ ಆಶಾ ತನ್ನ ೨೧ರ ಹರೆಯದಲ್ಲಿ ತನ್ನ ಸಹಪಾಟಿ ಗೆಳೆತಿಯರಂತೆ ನೂರು ಕನಸು ಕಟ್ಟಿ ಪುಟಿಯುವ ಕಾಲದಲ್ಲೇ ಮನೆಯ ಮೂಲೆಯ ಕತ್ತಲೆಯ ಕೋಣೆಯಲ್ಲಿ ಯಾತನಮಯ ಜೀವನ ನಡೆಸುತ್ತಿದ್ದಳು. ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಮತ್ತು ವಿಕ ಸಹಕಾರದಿಂದ ಆಕೆಯನ್ನು ನರಕಕೂಪದಿಂದ ಬಿಡುಗಡೆಗೊಳಿಸಿ, ತಕ್ಷಣ ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ತಂದೆಯಿಂದ ಮಗಳ ಕತ್ತಲಕೊಣೆಯ ಬಂಧನ, ಮಾನಸಿಕ ಹಿಂಸೆ ಬಗ್ಗೆ ವಿಜಯಕರ್ನಾಟಕದಲ್ಲಿ ಸಮಗ್ರವಾಗಿ ವರದಿ ಮಾಡಿ ಬೆಳಕು ಚೆಲ್ಲಲಾಗಿತ್ತು.

ಸತತ ಐದು ವರ್ಷದ ವೈಧ್ಯಕೀಯ ಆರೈಕೆಯಲಿ ಮಾನಸಿಕ ಅನಾರೋಗ್ಯದಿಂದ ಹೊರಬಂದ ಆಶಾ ಕತ್ತಲ ಕೋಣೆಯಲ್ಲಿ ಅಂಟಿಕೊಂಡ ನಾನಾ ರೋಗಗಳಿಂದ ಹೊರ ಬರಲಾಗಲಿಲ್ಲ. ಎಂಟು ತಿಂಗಳ ನಿಮಾನ್ಸ್‌ನ ಚಿಕಿತ್ಸೆಯ ನಂತರ ಎರಡು ತಿಂಗಳು ಫಿಜಿಯೋಥೆರಪಿಗೆ ಒಳಪಡಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಬೆಂಗಳೂರಿನ ಫ್ರೀಡಂ ಫೌಂಡೇಶನ್ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿ, ಎರಡು ವರ್ಷಗಳ ಕಾಲ ಆರೈಕೆಯಲ್ಲಿಡಲಾಗಿತ್ತು. ಈ ಮಧ್ಯೆ ಆಕೆಯಲ್ಲಿ ಉಲ್ಪಣಗೊಳ್ಳುತ್ತಿದ್ದ ಕ್ಷಯ, ಅನಿಮಿಯಾ ಮತ್ತಿತರ ರೋಗಗಳ ಗುಣಪಡಿಸಲು ಹಾಸನ ಇತರೆ ಆಸ್ಪತ್ರೆಯ ತಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದುಷ್ಟವಶಾತ್ ಆಕೆ ತನ್ನ ಬರ್ಬರ ಬದುಕಿಗೆ ವಿದಾಯ ಹೇಳಿ ಬಿಟ್ಟಳು. ಅಷ್ಟು ವರ್ಷಗಳ ಕಾಲ ಆಕೆಯ ಜೀವ ಮತ್ತು ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಮಾನವೀಯ ವೈಧ್ಯರು ಹನಿ ಕಣ್ಣೀರು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬದುಕುವ ಉತ್ಕಟವಾದ ಆಸೆಯಿಟ್ಟುಕೊಂಡಿದ್ದ ಆಶಾ ೨೬ನೇ ವಯಸ್ಸಿನಲ್ಲಿ ತನ್ನ ಎಲ್ಲಾ ನೋವು, ವೇದನೆಗಳಿಗೆ ಅಂತ್ಯ ಹಾಡಿದ್ದು ಮಾತ್ರ ವಿಷಾಧನಿಯ. ಸಾವಿನ ಕಾಲದವರೆಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಕೆ ತನ್ನದಲ್ಲದ ತಪ್ಪಿಗೆ ಗುಣವಾಗದ ನಾನಾ ರೋಗಗಳ ಹಾವಳಿಗೆ ಹೆದರಿ ಬಸವಳಿದು ಸಾವನ್ನು ಅಪ್ಪಿಕೊಳ್ಳಬೇಕಾಗಿತ್ತು. ಜೀವನೋತ್ಸವದ ಯಾವ ಸುಖವನ್ನು ಕಾಣದ ಮುಗ್ದ ಹುಡುಗಿ ತಂದೆಯಿಂದ ಬಂದ ಬದುಕಿನ ಬರ್ಬರತೆಗೆ ಹೆದರಿ ತತ್ತರಿಸಿ ಹೋಗಿದ್ದಳು. ಕೊನೆಗೆ ಸಾವು ಮಾತ್ರ ಆಕೆಗೆ ಶಾಶ್ವತ ಸುಖನೀಡಿತ್ತು.

ಹಿನ್ನಲೆ:
೨೦೦೬ರಲ್ಲಿ ತಂದೆ ಪುಟ್ಟಶಾಮಯ್ಯ ಮಗಳು ಆಶಾಳನ್ನು ಅರಳುಗುಪ್ಪೆಯ ತನ್ನ ಮನೆಯ ಕೊಠಡಿಯೊಂದರಲ್ಲಿ ಬಂಧಿಸಿ, ಹೊರ ಪ್ರಪಂಚದಿಂದ ಬೇರೆ ಇಡುವ ಮೂಲಕ ತನ್ನ ಪೈಶಾಚಿಕ ವರ್ತನೆ ತೋರಿದ್ದ. ೨೦೦೭ರ ಮಾರ್ಚ್ ೧೪ರಂದು ಗ್ರಾಮದ ಎ.ಟಿ.ಪ್ರಸಾದ್ ಈ ವಿಷಯ ಬಯಲಾಗಿತ್ತು. ಮಾಹಿತಿ ಮೇರೆಗೆ ವಿಕ ವರದಿಗಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಎಸ್.ನಟರಾಜು ಅವರೊಂದಿಗೆ ಸ್ಥಳಕೆ ಬೇಟಿ ನೀಡಿ ಈ ಘೋರ ಘಟನೆಯನ್ನು ಬಯಲು ಮಾಡಿ, ಕತ್ತಲ ಕೋಣೆಯ ನರಕದಲ್ಲಿ ದುರ್ವಾಸನೆ ಬೀರುತ್ತಾ ಕೊಳೆಯುತ್ತಿದ್ದ ಆಶಾಳ ಬಿಡುಗಡೆಗೊಳಿಸಲಾಗಿತ್ತು.

ಸ್ಥಳದಲ್ಲಿ ಇದ್ದ ಎಸಿಡಿಪಿಒ ಸುಂದರಮ್ಮ, ಮೇಲ್ವಿಚಾರಕಿ ಪ್ರೇಮಾ, ಸ್ತ್ರಿಶಕ್ತಿ ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ತಕ್ಷಣ ಆಶಾಳನ್ನು ಸ್ವಚ್ಚಗೊಳಿಸಿ, ಬೆಂಗಳೂರಿನ ನಿಮಾನ್ಸ್‌ಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆಗೆ ಏರ್ಪಾಡು ಮಾಡಲಾಗಿತ್ತು. ಕೆಲವು ತಿಂಗಳ ನಂತರ ಅಲ್ಲಿ ಆಕೆಯ ಆರೋಗ್ಯ ಚೇತರಿಕೆ ಕಂಡು ಬಂದಿತ್ತು. ಒಬ್ಬಳೆ ಕೂರುವುದು, ಮಾತನಾಡುವುದು, ತಿರುಗಾಡುವುದು ಮತ್ತು ಪತ್ರಿಕೆಯನ್ನು ಓದುವುದು ಮಾಡುತ್ತಾ ಆರೋಗ್ಯ ಸುಧಾರಣೆ ಕಂಡು ಬಂದಿತ್ತು. ಆದರೆ ಆಕೆಯನ್ನು ವಿಧಿ ಬಿಡದೇ ಕರೆದೊಯ್ದು ಬಿಟ್ಟಿದ್ದಾನೆ. ಆಕೆಯ ಬದುಕಿಗಾಗಿ ಮಾಡಿದ ಎಲ್ಲರ ಶ್ರಮ ವ್ಯರ್ಥವಾಯಿತು.

ನತದೃಷ್ಟೆ ಆಶಾ ನರಕದ ಬಾಗಿಲಿಗೆ:
ಆಶಾಳ ತಂದೆ ಪಟ್ಟುಶಾಮಯ್ಯ ನಿವೃತ್ತ ಶಿಕ್ಷಕ. ಇವರೂ ಕಳೆದ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಗಳನ್ನು ಒಂದೂವರೆ ವರ್ಷದ ಕಾಲ ಕತ್ತಲ ಕೊಣೆಯಲ್ಲಿ ಕೂಡಿ ಹಾಕಿ ಆಕೆಯ ಬದುಕನ್ನು ನರಕವಾಗಿಸಿದ ಎಂಬ ಆರೋಪ ಹೊತ್ತುಕೊಂಡೇ ಅವರು ತನ್ನ ಬದುಕಿಗೂ ವಿದಾಯ ಹೇಳಿದ್ದರು. ತಾಯಿ ಜಯಲಕ್ಷ್ಮಮ್ಮ, ದೊಡ್ಡ ಅಕ್ಕ ರೂಪ, ಅಣ್ಣ ಶಿವು, ಎರಡನೇ ಅಣ್ಣ ರಾಜಣ್ಣ ಮತ್ತು ನಾಲ್ಕನೇ ಅಣ್ಣ ಮಧುಸೂಧನ್ ಕೊನೆಗೆ ಹುಟ್ಟಿದವಳೇ ನತದೃಷ್ಟೆ ಆಶಾ.

ಹತ್ತನೇ ತರಗತಿಯವರೆಗೂ ಚೆನ್ನಾಗಿ ಓದಿಕೊಂಡಿದ್ದ ಆಶಾ ಮನೆಯ ಪರಿಸ್ಥಿತಿಯನ್ನು ಸಹಜವಾಗಿ ತೆಗೆದುಕೊಂಡು ಸ್ಪುರದ್ರೂಪಿಯಾಗಿ ಬೆಳೆದವಳು. ನೋಡಲು ಅಂದವಾಗಿ ಮುದ್ದಾಗಿ ಕಾಣುತ್ತಿದ್ದ ಆಕೆ ಅಕ್ಕಪಕ್ಕದವರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಳು. ನಡತೆ ಮತ್ತು ಸ್ವಭಾದಲ್ಲಿಯೂ ಸರಳತೆ ಎದ್ದು ಕಾಣುತ್ತಿತ್ತು. ಆದರೆ ಇಡೀ ಕುಟುಂಬವನು ಕಾಡುತ್ತಿರುವ ವಿಧಿ ಈಕೆಯ ಬಾಳಿನಲ್ಲೂ ಅಪ್ಪನ ರೂಪದಲ್ಲಿ ೨೦೦೧ರಲಿಯೇ ಕಾಲಿಟ್ಟು ಬಿಟ್ಟಿದ್ದ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಆಕೆಯನ್ನು ೨೦೦೨, ೨೦೦೪ ಮತ್ತು ೨೦೦೬ರಲ್ಲಿ ಕೆಲವು ಕಾಲ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಗುಣಮುಖಳಾಗುತ್ತಿದ್ದ ಆಕೆ ಚೆನ್ನಾಗಿ ಓಡಾಡಿಕೊಂಡಿದ್ದಳು. ಆದರೆ ೨೦೦೬ ಆಗಸ್ಟ್ ನಂತರ ಆಕೆ ಎಲ್ಲಿಯೂ ಕಾಣಲಿಲ್ಲ. ಊರಿನವರು ಪುನಃ ನಿಮಾನ್ಸ್‌ಗೆ ಕರೆದುಕೊಂಡು ಹೋಗಿರಬೇಕು ಎಂದು ಸುಮ್ಮನಾಗಿದ್ದರು. ಆದರೆ ಆಕೆ ಆಗಲೇ ತಂದೆಯ ದೌರ್ಜನ್ಯಕ್ಕೆ ಬಲಿಯಾಗಿ, ಮನೆಯೆಂಬ ಜೈಲಿನ ಕತ್ತಲ ಕೋಣೆಯ ಖೈಧಿಯಾಗಿ ಹೊರಗಿನ ಲೋಕದ ಸಂಪರ್ಕ ಕಡಿದುಕೊಂಡು ನರಳುತ್ತಿದ್ದಳು. ಪುಟ್ಟಶಾಮಯ್ಯನವರಿಗೆ ಹೆದರಿ ತಾಯಿ ಮತ್ತು ಅಣ್ಣಂದಿರು ಯಾವುದೇ ಸಹಾಯ ಮಾಡದೇ ವೇದನೆ ಅನುಭವಿಸುತ್ತಿದ್ದರು.

ದಿನಗಳು, ತಿಂಗಳುಗಳು ಕಳೆದಂತೆ ಗಾಳಿ ಬೆಳಕಿನ ಸಂಪರ್ಕವಿಲ್ಲದೇ ಕತ್ತಲಕೊಣೆಯ ಬದುಕಿನಲ್ಲಿ ಜೀವನ ಚೈತನ್ಯ ಕಳೆದುಕೊಂಡ ಆಶಾ ರಕ್ತ ಮಾಂಸದ ಮುದ್ದೆಯಾಗಿದ್ದಳು. ಕುಳಿತ ಜಾಗದಲ್ಲಿ ಒಂದು ಸಣ್ಣ ಬೆಳಕಿನ ಕಿಂಡಿಯನ್ನೆ ನೋಡುತ್ತಾ ಕುಳಿತುಕೊಳ್ಳುವುದೇ ಆಕೆಗೆ ಒಲಿದು ಬಂದ ಭಾಗ್ಯವಾಗಿತ್ತು. ಹೊರಗೆ ಬರದಂತೆ ಮಲ ಮೂತ್ರವನ್ನೂ ಅಲ್ಲೆ ಮಾಡಿಕೊಳ್ಳುವ ದುಸ್ಥಿತಿ. ಅಂಡಮಾನ್ ಜೈಲಿನಲ್ಲಿ ಖೈದಿಗಳಿಗೆ ನೀಡುವಂತೆ ಒಂದು ಅಲ್ಯೂಮಿನಿಯಂ ತಟ್ಟೆಯಲ್ಲಿ ಯಾವಾಗಲೋ ಊಟ ತಿಂಡಿ ನೀರು ಬರುತ್ತಿತ್ತು. ಅದರ ಬಗ್ಗೆ ಆಸಕ್ತಿ ಕಳೆದುಕೊಂಡ ಆಕೆ ತನಗೆ ಬೇಕಾದಾಗ ತಿಂದು ಅಲ್ಲೇ ಇದ್ದ ಹಳೇಯ ಹರಿದ ಗೋಣಿಚೀಲದ ಮೇಲೆ ಮಲಗುತ್ತಿದ್ದಳು.

ಕುಳಿತಲ್ಲೇ ಬೆನ್ನು ಬಾಗಿ ಹೋಗಿತ್ತು. ಮೈಗೆ ನೀರು ಸೋಕದಿದ್ದರೂ ಮೈ ಬೆಳ್ಳಗೆ ಬಿಳಿಚಿಕೊಂಡಿತ್ತು. ಗೇಣುದ್ದದ ಉಗುರುಗಳು ಅವಳ ಬದುಕಿನ ಬರ್ಬರತೆಯನ್ನು ಸಾರುತ್ತಿದ್ದವು. ಕೋಣೆಯ ತುಂಬಾ ಮನಷ್ಯ ಮಾತ್ರದವರು ವಾಸಿಸದಷ್ಟು ದುರ್ವಾಸನೆ. ಯಾವಾಗಲೋ ಒಮ್ಮೆ ತಾಯಿ ಒಳಬಂದು ಹೊಲಸನ್ನು ತೆಗೆದು ಹಾಕುತ್ತಿದ್ದಳು. ನಂತರದ ದಿನಗಳಲ್ಲಿ ಬಾಗಿಲು ತೆರೆದರೂ ಹೊರಗೆ ಹೋಗದಷ್ಟು ನಿತ್ರಾಣಳಾದ ಆಶಾ ಹಾಗೆಯೇ ಬಾಗಿಕೊಂಡು ಚೀರುತ್ತಿದ್ದಳು. ಅವಳಿಗೆ ಆಗ ಹೊರಿಗಿನ ಬೆಳಕು ಕಂಡರೆ ಭಯ ಆವರಿಸಿಕೊಂಡು ಬಿಟ್ಟಿತ್ತು. ಕತ್ತಲೆಯ ಪ್ರಪಂಚ ಆಕೆಗೆ ಅಪ್ಯಾಯಮಾನವಾಗಿತ್ತು. ನಿಜಕ್ಕೂ ಯಾವುದೇ ದುಷ್ಟ ಹೃದಯದವರೂ ಕಂಡರೂ ಕರಗಿ ಕಣ್ಣೀರು ಹಾಕುವಂತ ದೃಶ್ಯ ಅದು. ಅಂತಹ ಯಾತನೆಯ ಬದುಕನ್ನು ಆಕೆ ಕಳೆದಿದ್ದು ಬರೋಬ್ಬರಿ ಒಂದೂವರೆ ವರ್ಷ. ಕೊನೆಗೊಮ್ಮೆ ಆಪದ್ಭಾಂದವರಂತೆ ಆಕೆಗೆ ಆಗ ಒಲಿದು ಬಂದವರು ಸಿಡಿಪಿಒ ಎಸ್.ನಟರಾಜು, ಸ್ಥಳೀಯ ಎ.ಟಿ.ಪ್ರಸಾದ್ ಮತ್ತು ವಿಕ ಪತ್ರಿಕೆ.


ಹೊರಗೆ ಬರುವ ಸಮಯದಲ್ಲಿ ಆಶಾ ಭಯದಿಂದ ತತ್ತರಿಸಿ ಚೀರುತ್ತಿದ್ದಳು. ಎಷ್ಟು ಸಮಾಧಾನ ಮಾಡಿದರೂ ತಿರುಗಿ ತಿರುಗಿ ತನ್ನ ಕೋಣೆಗೆ ಹೋಗುತ್ತಾ ತನ್ನ ಜಾಗದಲ್ಲಿ ಮುದುರಿಕೊಂಡು ಕೂರುತ್ತಿದ್ದಳು. ನಡುಗುತ್ತಿದ್ದಳು. ಎಸಿಡಿಪಿಒ ಸುಂದರಮ್ಮ, ಸಹಾಯಕಿ ಪ್ರೇಮಾ, ಸ್ಥಳೀಯ ಅಂಗನವಾಡಿ ಕಾಯಕರ್ತೆಯರು ಮತ್ತು ಸ್ತ್ರೀಶಕ್ತಿ ಮಹಿಳೆಯರು ಜೊತೆಗೆ ಆಕೆಯ ತಾಯಿ ಜಯಲಕ್ಷ್ಮಮ್ಮ ಸೇರಿಕೊಂಡು ಮೆಲ್ಲಗೇ ಮಾತಾಡಿಸಿ ದೈರ್ಯ ತುಂಬಿದರು. ತಕ್ಷಣ ಉಗುರು ಬೆಚ್ಚಗಿನ ಬಿಸಿ ನೀರು ಹಾಕಿ ಮೈ ತೊಳೆದರು. ಮೈ ಯಿಂದ ಹುಂಡೆ ಹುಂಡೆ ಗಾತ್ರದ ಕೊಳೆಯೂ ನೀರಿನಲ್ಲಿ ಹರಿದು ಹೋಯಿತು. ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಕರೆದುಕೊಂಡು ಬಿಟ್ಟಾಗ ಹಕ್ಕಿಯಂತೆ ದಾರಿ ತುಂಬಾ ನಡೆದಾಡಿದಳು ಆಶಾ. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ವತಂತ್ರ ಪಡೆದವಳಂತೆ ಇದ್ದ ಬದ್ದ ಶಕ್ತಿ ಉಪಯೋಗಿಸಿ, ಉತ್ಸಾಹ ತುಂಬಿಕೊಂಡು ನಗುತ್ತಿದ್ದಳು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಅಲ್ಲಿದ್ದ ಅಷ್ಟು ಮಂದಿಗೆ ಕಣ್ಣಿನಲ್ಲಿ ನೀರು ತೊಟ್ಟಿಕ್ಕಿದವು.

-

ನಿಮ್ಮ ಅನಿಸಿಕೆ ತಿಳಿಸಿ: ೯೪೪೮೪೧೬೫೫೦,

e-mಚಿiಟ:ಣiಠಿಣuಡಿಞಡಿishಟಿಚಿ_ಟಿeತಿs@ಥಿಚಿhoo.ಛಿo.iಟಿ