Monday, July 18, 2011

ಹುಟ್ಟಿದ ಮನೆಗೆ ಪುಣ್ಯ ಕಟ್ಟದ ಪುಣ್ಯಾನಂದ.

ಹುಟ್ಟಿದ ಮನೆಗೆ ಪುಣ್ಯ ಕಟ್ಟದ ಪುಣ್ಯಾನಂದ.  

ಪ್ರತಿಷ್ಠಿತ ಮಠದ ಮಠಾಧೀಶರಾಗಿದ್ದ ಮಗ ಅಕಾಲಿಕ ಸಾವಿಗೆ ತುತ್ತಾಗಿ ನಾಲ್ಕು ವರ್ಷ ಕಳೆದಿದ್ದು ಅವರಿಗೆ ಜನ್ಮ ನೀಡಿದ್ದ ತಂದೆ ತಾಯಿ ಮಾತ್ರ ಸಮಾಜ ನೀಡಿದ ಭರವಸೆಗಾಗಿ ಕಾಯುತ್ತಾ ಇಂದಿಗೂ ತಮ್ಮ ಶ್ರಮದಾಯಕ ಬದುಕಿಗೆ ಮಂಗಳ ಹಾಡದೇ ನಿತ್ಯಾ ಬೆವರು ನೀರು ಹರಿಸುತ್ತಿರುವುದು ಶೋಚನೀಯ. 

ಹೌದು, ಇದು ಸಮಾಜ ಹಾಗೂ ಸಮಾಜದ ಪ್ರತಿಷ್ಠಿತರಿಗಾಗಿ ತಮ್ಮ ಕೈಲಾದಷ್ಟು ಪುಣ್ಯ ಕಟ್ಟಿಟ್ಟು ಹೋದ ಪುಣ್ಯಾನಂದರ ಹೆತ್ತ ಕುಟುಂಬದ ದುರಂತ ಕಥೆ. ಇಂದಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ೨೦೦೭, ಏಪ್ರಿಲ್ ೩ ಮಂಗಳವಾರದ ದುರ್ದಿನದಂದು ಶ್ರೀ ವಾಲ್ಮಕಿ ಮಹಾ ಸಂಸ್ಥಾನ ರಾಜನಹಳ್ಳಿಯ ಮಹರ್ಷಿ ವಾಲ್ಮಿಕಿ ಗುರು ಪೀಠದ ಸ್ವಾಮಿಜಿಯಾಗಿದ್ದ ಪುಣ್ಯಾನಂದಪುರಿ ಸ್ವಾಮಿಜಿ ದಾವಣಗೆರೆ ಹೊರ ವಲಯದಲ್ಲಿ ಹಳಿ ದಾಟುವಾಗ ಅವರ ಕಾರಿಗೆ ರೈಲು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು. ಮಗನ ಸಾವಿನ ಸೂಚನೆ ಅರಿಯದ ಶ್ರೀಗಳ ತಂದೆ ತಾಯಿಗಳು ತಿಪಟೂರಿನಲ್ಲಿ ಅಂದು ಹಸಿವಿಗಾಗಿ ಬೆವರಿಳಿಸಿ ಕೂಲಿ ಮಾಡುತ್ತಿದ್ದರು. ಶ್ರೀಗಳ ಅಕಾಲಿಕ ಸಾವು ಇವರಿಗೆ ಸೂತಕವಾದರೆ ಇಡೀ ವಾಲ್ಮಿಕಿ ಸಮಾಜಕ್ಕೆ ಒಂದು ಕರಾಳ ದಿನವಾಗಿತ್ತು.

ಈ ಆಘಾತದಿಂದ ಶೋಕತಪ್ತರಾಗಿದ್ದ ಜನ ಶ್ರೀಗಳ ಕುಟುಂಬದ ದುಸ್ಥಿತಿ ಕಂಡು ಅನುಕಂಪ ತೋರಿದರು. ಸಮಾಜಕ್ಕಾಗಿ ಮಗನನ್ನು ಕೊಟ್ಟ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿದ್ದರು. ಅಂದು ಸಚಿವರಾಗಿದ್ದ ಸತೀಶ ಜಾರಕಿಹೊಳಿ ಸ್ವತಃ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು. ಶ್ರೀಗಳ ತಂಗಿಯೊಬ್ಬರ ಮದುವೆಗೆ ಕುಟುಂಬ ಮಾಡಿದ ಸಾಲ, ನಿರ್ಮಿಸಿಕೊಂಡ ಮನೆಯ ಸಾಲ ತೀರಿಸಿ ಒಂದಷ್ಟು ಹಣಕಾಸು ಸಹಾಯ ನೀಡುವುದಾಗಿ ಅಂದು ಸಮಾಜದ ಮುಂದೆ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ಟ್ರಸ್ಟ್‌ನಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಸದಸ್ಯತ್ವ ನೀಡುವ ಬಗ್ಗೆಯೂ ಸಭೆ ನಿರ್ಣಯಿಸಿತ್ತು. ಆದರೆ ಕಾಲ ಕಳೆದಂತೆ ಅನುಕಂಪದ ದಿನಗಳಲ್ಲಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಹುಸಿ ಭರವಸೆಗಳಾಗಿ ಹೋದವು. ಸಹಾಯ ಮಾಡುವುದು ಆಗಿರಲಿ ಇಡೀ ಟ್ರಸ್ಟ್ ಇವತ್ತಿಗೂ ಇತ್ತಾ ತಿರುಗಿಯೂ ನೋಡಲಿಲ್ಲ.

ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರಸ್ವಾಮಿಜಿ ಸಹ ಇವರ ಕುಟುಂಬದ ದುಸ್ಥಿತಿ ಕಂಡು ಸಹಾಯ ಮಾಡುವಂತೆ ಸತೀಶ್ ಜಾರಕಿಹೊಳಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಅದಕ್ಕೂ ಬೆಲೆ ಸಿಗಲಿಲ್ಲ. ಶ್ರೀಗಳ ಕುಟುಂಬ ಎಂದು ಗೌರವವನ್ನೂ ನೀಡಲಿಲ್ಲ. ಆದರೆ ಹೊಸಪೇಟೆಯ ಶ್ರೀಗಳ ಅಭಿಮಾನಿಗಳು ಒಂದಷ್ಟು ಚಂದಾ ಸಂಗ್ರಹಿಸಿ ಸುಮಾರು ೮೦ ಸಾವಿರ ಕುಟುಂಬಕ್ಕೆ ನೀಡಿರುವುದು ಬಿಟ್ಟರೆ ಮತ್ಯಾವುದೇ ಬಿಡಿಗಾಸು ಸಹಾಯವಾಗಿಲ್ಲ ಎಂದು ಅವರ ಸಹೋದರ ಆಟೋ ಚಾಲಕ ವಿಜಯಕುಮಾರ್ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

"ನಮ್ಮ ಕೊನೆ ಕಾಲದಲ್ಲಿ ದುಡಿಯುವ ಶಕ್ತಿ ಕಳೆದುಕೊಂಡು ನಿತ್ರಾಣರಾದಾಗ ಮಗ ನೆರವಾಗುತ್ತಾನೆಂದು ಕಷ್ಟ ಪಟ್ಟು ಸಾಕಿ, ಸಲಹಿ, ವ್ಯಾಸಂಗ ಕೊಡಿಸಿ ದೊಡ್ಡವನಾಗಿ ಮಾಡಿದೆವು. ಆದರೆ ಮಗ ನಮ್ಮ ವಿರೋಧದ ನಡುವೆಯೂ ಸನ್ಯಾಸ ಸ್ವೀಕರಿಸಿ, ನಮ್ಮ ಮನಸ್ಸು ನೋಯಿಸಿ, ದಿಕ್ಕು ತಪ್ಪಿಸಿದ್ದಾನೆ" ಎಂದು ಕುಣಿಗಲ್ ತಾಲೂಕಿನ

ಹೊನ್ನೇನಹಳ್ಳಿ ಗ್ರಾಮದ ನಿಂಗಯ್ಯ ಮತ್ತು ಗಂಗಮ್ಮ ದಂಪತಿಗಳು ತಹಸೀಲ್ದಾರರಾಗಿದ್ದ ತಮ್ಮ ಮಗ ಡಾ.ಎಚ್.ಎಲ್.ನಾಗರಾಜ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಸನ್ಯಾಸ ಸ್ವೀಕರಿಸಿದ ಸುದ್ದಿ ಕೇಳಿ ಎದೆ ಬಡಿದುಕೊಂಡು ನೊಂದ ನುಡಿಗಳಿವು. ಇಂತಹುದ್ದೇ ನೊಂದ ಮಾತುಗಳನ್ನು ಪುಣ್ಯಾನಂದಾಪುರಿ ಸ್ವಾಮಿಜಿಗಳ ದೀಕ್ಷೆ ಸಮಯದಲ್ಲಿ ಅವರ ತಂದೆ ತಾಯಿಗಳು ಕಣ್ಣೀರು ಸುರಿಸಿ ಹೇಳಿದ್ದರು. ಆದರೆ ಅವರನ್ನು ನೋಡುವುದಕ್ಕೂ ಈಗ ಸಾಧ್ಯವಾಗಿಲ್ಲದೇ ಹೋಗಿದೆ. ಅವರ ಮನೆಯಲ್ಲಿ ಪುಣ್ಯಾನಂದಾ ಕೇವಲ ಒಂದು ನೆನಪು ಮಾತ್ರ.

ಬದುಕಿಗೆ ಕೂಲಿಯೇ ದಿಕ್ಕು:

ಶ್ರೀಗಳ ತಂದೆ ರಂಗಸ್ವಾಮಿ ತಿಪಟೂರಿನಲ್ಲಿ ಅಂದು ತನ್ನ ಮತ್ತು ತನ್ನ ನಂಬಿಕೊಂಡವರ ಹಸಿವನ್ನು ಹಿಂಗಿಸಲು ನಿತ್ಯಾವೂ ಕೂಲಿ ಮಾಡ ಬೇಕಿತ್ತು. ಬಸಿಲು ಮಳೆ ಎನ್ನದೇ ಮೂಟೆಗಳನ್ನು ತುಂಬಿದ ಗಾಡಿಯನ್ನು ಮೈ ಮೂಳೆ ಮುರಿಯುವಂತೆ ಎಳೆಯ ಬೇಕಿತ್ತು. ಆಗ ಯಾರೂ ರಂಗಸ್ವಾಮಿಯನ್ನು ಅಣಕಿಸುವುದಾಗಲಿ, ಅನುಕಂಪ ತೋರುವುದಾಗಲಿ ಮಾಡುತ್ತಿರಲಿಲ್ಲ. ಶ್ರೀಗಳ ಹೆತ್ತವರು ಇವರೇ ಎಂದು ಯಾರಿಗೂ ಗೊತ್ತಿರಲಿಲ್ಲ. ರಂಗಸ್ವಾಮಿ ಸಹ ತನ್ನ ಮಗ ಮಠಾಧೀಶ ಎಂದು ಯಾರಿಗೂ ಎಲ್ಲಿಯೂ ಹೇಳಿರಲಿಲ್ಲಿ.

ಆದರೆ ಶ್ರೀಗಳು ಅಪಘಾತದಲ್ಲಿ ಮೃತರಾದ ಸುದ್ದಿ ಜೊತೆಯೇ ಇವರ ಸುದ್ದಿ ರಾಜ್ಯದ ಜನತೆಗೆ ತಿಳಿಯುತ್ತಿದ್ದಂತೆ ಸ್ಥಳೀಯ ಜನ ಇವರ ಬಗ್ಗೆ ವಿಶೇಷ ಗೌರವ ನೀಡಲು ಆರಂಭಿಸಿದರು. ಆದರೆ ಅದು ಅವರ ಹಸಿವನ್ನು ಹಿಂಗಿಸುತ್ತಿರಲಿಲ್ಲ. ಆತ್ಮಗೌರವದಿಂದ ಬದುಕುವ ಜನ ಮುಜಗರಕ್ಕೆ ಒಳಗಾದರು. ಸಮಾಜದ ಮುಖಂಡರು, ನಾನಾ ಜನರು ನೀಡಿದ ಭರವಸೆ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದರು. ಕೂಲಿ ಬೇಡ ಬರುವ ಹಣದಲ್ಲಿ ಬೇರೆ ಏನಾದರೂ ವ್ಯಾಪಾರ ಮಾಡಿಕೋ ಎಂದು ಹೇಳುತ್ತಿದ್ದರು. ಜನ ಗೌರವ ನೀಡುತ್ತಿದ್ದರು ಆದರೆ ಕೂಲಿ ನೀಡುತ್ತಿರಲಿಲ್ಲ ಹಾಗಾಗಿ ಆರಂಭದಲ್ಲಿ ಎಷ್ಟೋ ದಿನ ಈ ಕುಟುಂಬ ಕೂಲಿಯೂ ಮಾಡದೇ ಉಪವಾಸ ಕಳೆದಿದೆಯಂತೆ. ಇಂದಿಗೂ ಅವರ ಸ್ಥಿತಿ ಶೋಚನೀಯವಾಗಿದೆ.

ರಂಗಸ್ವಾಮಿ ಮತ್ತು ಮಹಾದೇವಮ್ಮ ದಂಪತಿಗಳು ಹಿರಿಯ ಮಗಳ ಮದುವೆಗೆ ಮಾಡಿದ ಸಾಲ ಮತ್ತು ಬಡ್ಡಿ ತೀರಿಸದೇ ನಿತ್ಯಾ ಕೂಲಿ ಮಾಡುತ್ತಾರೆ. ಆಶ್ರಯ ಮನೆಗೆ ಮಾಡಿದ ಸಾಲ ತೀರಿಲ್ಲ. ಮತ್ತೊಬ್ಬಳ ಮಗಳ ವ್ಯಾಸಂಗ ಮತ್ತು ಅವಳ ಮದುವೆಗೆ ಹಣ ಹೊಂದಿಸಲು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ತಾಯಿ ತೆಂಗಿನ ಕಡ್ಡಿ ಎರೆದು ಹಾಲು, ತರಕಾರಿ ತಂದರೆ ರಂಗಸ್ವಾಮಿ ನಿತ್ಯಾ ಮೂಟೆ ಹೊತ್ತು, ಗಾಡಿ ಎಳೆದು ಗಂಜಿಗೆ ಹೊಂಚುತ್ತಾರೆ. ದುಬಾರಿ ಪೆಟ್ರೋಲ್ ದರದಲ್ಲಿ ಇಬ್ಬರು ಮಕ್ಕಳು ವಿಜಯಕುಮಾರ್ ಮತ್ತು ಮಂಜುನಾಥ್ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.

ಸಮಾಜದ ಋಣವನ್ನು ಶ್ರೀಗಳು ತೀರಿಸಿ ಹೋಗಿದ್ದಾರೆ. ಇರುವಷ್ಟು ದಿನ ಶ್ರಮ ವಹಿಸಿ ಸಾರ್ಥಕ ಎನಿಸಿಕೊಂಡಿದ್ದಾರೆ. ಆದರೆ ಸಮಾಜ ಅವರನ್ನು ಹೆತ್ತವರ ಋಣ ತೀರಿಸ ಬೇಕಲ್ಲವೇ? ನೀಡಿದ ಭರವಸೆ ಈಡೇರಿಸಬೇಕಲ್ಲವೇ? ಶ್ರೀಗಳು ಇಹಲೋಕ ತ್ಯಜಿಸ ಮಾತ್ರಕ್ಕೆ ಹೆತ್ತವರನ್ನು ಕಡೆಗಣಿಸುವುದು ಯಾವ ನ್ಯಾಯ? ಪ್ರಜ್ಞಾವಂತ ಸಮಾಜ ಇದನ್ನು ಒಪ್ಪುವುದೇ.


ಗಾಡಿ ಎಳೆದು ಜೀವನ :  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ರಾಜ್ಯದ ಒಂದು ಪ್ರತಿಷ್ಟಿತ ಮಠದ ಮಠಾಧಿಪತಿಯವರ ತಂದೆ ಎಪ್ಪತ್ತು ವರ್ಷದ ಇಳಿ ವಯಸ್ಸಿನಲ್ಲೂ ಮೂಟೆ ಹೊತ್ತು ಬದುಕು ಸಾಗಿಸುವ ವಿಜಯಕರ್ನಾಟಕದ ಸುದ್ದಿ ನನ್ನ ಮನಸ್ಸಲ್ಲಿ ತೀವ್ರತರವಾದ ನೋವುಂಟಾಗಿ ತಿಪಟೂರಿಗೆ ಬಂದು ಆ ಕುಟುಂಬಕ್ಕೆ ಸಾಂತ್ವನ ನೀಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸಂಜೆ ಇಲ್ಲಿನ ಬಸವೇಶ್ವರನಗರದ ಹೊಸಬಡಾವಣೆಯ ಪುಣ್ಯಾನಂದಪುರಿಸ್ವಾಮಿಜಿಯವರ ತಂದೆ ತಾಯಿ ವಾಸಿಸುವ ಆಶ್ರಯ ಮನೆಗೆ ಬೇಟಿ ನೀಡಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ವಾಲ್ಮಿಕಿ ಗುರು ಪೀಠದ ಶ್ರೀಪುಣ್ಯಾನಂದಪುರಿ ಸ್ವಾಮಿಜಿ ೨೦೦೭ರಲ್ಲಿ ರೈಲು ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ನಂತರ ಅವರ ಕುಟುಂಬ ತೀವ್ರ ಸಂಕಟಕ್ಕೀಡಾಗಿದ್ದು ಜೀವನ ನಿರ್ವಹಣೆಗಾಗಿ ಶ್ರೀಗಳ ತಂದೆ ತಿಪಟೂರು ನಗರದಲ್ಲಿ ಮೂಟೆ ಹೊತ್ತು ಗಾಡಿ ಎಳೆದು ಜೀವನ ಸಾಗಿಸುತ್ತಿರುವುದು ಚಿತ್ರ ವಸಹಿತ ಪ್ರಕಟವಾಗಿದ್ದು ನೋಡಿ ತಡೆದು ಕೊಳ್ಳಲಾಗಲಿಲ್ಲ. ತಕ್ಷಣ ಬಂದು ಸೀದಾ ಅವರ ಮನೆಗೆ ಹೋಗಿ ನೋಡಿದೆ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದುರಸ್ಥಿ ಇಲ್ಲದೇ ಇರುವ ಮನೆ ಸೋರುತ್ತಿದೆ. ಮದುವೆಗೆ ಬಂದ ಮಗಳಿದ್ದಾಳೆ. ಹೆಂಡತಿ, ಮಕ್ಕಳ ನಿರ್ವಹಣೆಗಾಗಿ ೭೦ ವರ್ಷದ ಶ್ರೀಗಳ ವೃದ್ಧ ತಂದೆ ದಿನ ನಿತ್ಯಾ ಮೂಟೆ ಹೊತ್ತು ಕೂಲಿ ಮಾಡಿ ಎಲ್ಲರ ಜೀವನ ನಡೆಸುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಸಮಾಜದ ಮುಖಂಡರು ಇವರ ಕುಟುಂಬಕ್ಕೆ ಒಂದು ಭರವಸೆ ಕೊಟ್ಟಿದ್ದರು ಅದನ್ನು ಮಾನವಿಯತೆ ದೃಷ್ಟಿಯಿಂದ ಈಡೇರಿಸಬೇಕಿದೆ. ನಾನು ಸಹ ಈ ಸಂದರ್ಭದಲ್ಲಿ ಅವರನ್ನೂ ಈ ಮೂಲಕ ಕೋರಿಕೊಳ್ಳುತ್ತೇನೆ ದಯಮಾಡಿ ಅವರ ಕುಟಂಬಕ್ಕೆ ಅನುಕೂಲ ಮಾಡಿಕೊಡಿ ಎಂದರು.

ಮನೆಯ ಪರಿಸ್ಥಿತಿ ನೋಡಿ ಸಧ್ಯ ಸ್ಥಳದಲ್ಲೇ ನಾನು ಒಂದು ಲಕ್ಷ ಆರ್ಥಿಕ ಸಹಾಯ ಮಾಡಿದ್ದೇನೆ. ತಾಲೂಕು ಜೆಡಿಎಸ್‌ನಿಂದ ಐದು ಸಾವಿರ, ಜೆಡಿಎಸ್ ಮುಖಂಡ ಲಿಂಗರಾಜು ೨೫ಸಾವಿರ ನಾಳೆ ಕೊಡುತ್ತಾರೆ, ಜಿಲಾ ಪಂಚಾಯಿತಿ ಸದಸ್ಯೆ ರಾಧನಾರಾಯಣ ಗೌಡ ಹತ್ತು ಸಾವಿರ ಧನ ಸಹಾಯ ಮಾಡಿದ್ದಾರೆ. ಉಳಿದಂತೆ ಅವರ ಮಗಳಿಗೆ ಹುಲಿನಾಯ್ಕರು ಅವರ ವಿದ್ಯಾ ಸಂಸ್ಥೆಯಲಿ ನಾಳೆಯೇ ಕೆಲಸ ಕೊಡುವವರಿದ್ದಾರೆ. ನಾನು ಮುಂದೆ ಅವರ ಕುಟುಂಬಕೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದರು.

ಹೇಳಿಕೆ: ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ
ಸಮಾಜಕ್ಕೆ ಜಗದ್ಗುರು ಒಬ್ಬರನ್ನು ನೀಡಿದ ಮನೆಯನ್ನು ಕಾಯುವ ಕೆಲಸ ಆ ಸಮಾಜದ ಜವಬ್ಧಾರಿ. ಅದನ್ನು ಮರೆತಿದ್ದ ರಾಜ್ಯದ ಒಂದು ಕೋಟಿ ವಾಲ್ಮಕಿ ಜನಾಂಗದ ಕಣ್ಣು ತೆರೆಸುವ ಪುಣ್ಯ ಕೆಲಸವನ್ನು ವಿಜಯಕರ್ನಾಟಕ ಮಾಡಿದೆ. ಮೊದಲು ಪತ್ರಿಕೆಗೆ ಅಭಿನಂದನೆ ಎಂದು ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸಂಜೆ ಶ್ರೀಪುಣ್ಯಾನಂದಪುರಿಸ್ವಾಮಿಗಳ ತಂದೆ ತಾಯಿಗಳ ಇರುವ ತಿಪಟೂರಿನ ಮನೆಗೆ ಬೇಟಿ ನೀಡಿ ಮನೆಯ ಪರಿಸ್ಥಿತ ಕಣ್ಣಾರೆ ಕಂಡು ತಮ್ಮ ವಿಷಾಧವ್ಯಕ್ತ ಪಡಿಸಿದರಲ್ಲದೇ ಇರುವ ವಾಸ್ತವಾಂಶ ತೆರೆದಿಟ್ಟ ಪತ್ರಿಕೆಯ ಪ್ರಯತ್ನವನ್ನು ಮನಸಾರೆ ಕೊಂಡಾಡಿದರು.
ಹೌದು, ಸಮಾಜ ತಿಳಿಯದೇ ತಪ್ಪು ಮಾಡಿದೆ ನಿಜ ಅದರ ನೈತಿಕ ಹೊಣೆಯನ್ನು ನಾವೇ ಹೊರುತ್ತೇವೆ. ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತಾ ಮುಂದೆ ಈ ತರಹದ ಪ್ರಮಾದ ಆಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ನಾವು ಮಠದ ಮತ್ತು ಸಮಾಜದ ಭಾಂಧವರ ಮನವೊಲಿಸಿ ಸಂಕಷ್ಟದಲ್ಲಿರುವ ಶ್ರೀಗಳ ಕುಟುಂಬಕ್ಕೆ ಶಕ್ತಿ ಮೀರಿ ಸಹಾಯ ಮಾಡುವ ಭರವಸೆಯನ್ನು ಇಂದು ನಾವು ನೀಡುತ್ತಿದೇವೆ. ಅಲ್ಲದೇ ಶ್ರೀಗಳ ತಂಗಿ ಕಲ್ಪನಾಳ ಮದುವೆಗೆ ಸಹಕಾರ ನೀಡುತ್ತೇವೆ ಎಂದ ಅವರು ಸಮಾಜದ ರಾಜ್ಯದ ಎಲ್ಲಾ ನಾಯಕರು ಈ ಕೂಡಲೇ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳುವಂತೆ ಈ ಮೂಲಕ ಕೋರಿಕೊಂಡರು.
ಕುಮಾರಸ್ವಾಮಿ ಮಾನವೀಯ ಹೃದಯಕ್ಕೆ ವಂದನೆ:
ಪತ್ರಿಕೆ ವರದಿ ನೋಡಿ ತಕ್ಷಣ ತಿಪಟೂರಿಗೆ ಧಾವಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ನೀಡುವುದರ ಜೊತೆಗೆ ಒಂದು ಲಕ್ಷ ಹಣ ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೃದಯ ವೈಶಾಲ್ಯತೆ ಇಡೀ ಸಮಾಜ ಮೆಚ್ಚುವಂತಾದ್ದು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವ ಕೇಳಿದ್ದೆ ನೆನ್ನೆ ಪ್ರತ್ಯಕ್ಷ ನೋಡಿ ಹೃದಯ ತುಂಬಿ ಬಂತು ಎಂದು ಸಮಾಜದ ಪರವಾಗಿ ತಮ್ಮ ಮೆಚ್ಚಿಗೆ ವ್ಯಕ್ತ ಪಡಿಸಿದರು.

ಶ್ರೀಗಳು ಆತ್ಮಿಯರು:
ಪುಣ್ಯಾನಂದ ಪುರಿ ಸ್ವಾಮಿಜಿಗಳು ನಮ್ಮ ಆತ್ಮಿಯರು. ನಾವು ಅವರನ್ನು ಮರೆತಿದ್ದೇವು. ಆದರೆ ಪತ್ರಿಕೆಯ ವರದಿ ಅವರನ್ನು ಪುನಃ ನೆನಪಿಸಿದೆ. ಮಠಕ್ಕೆ ತಮ್ಮ ಹೆತ್ತ ತಂದೆ ತಾಯಿ ಕುಟುಂಬವನ್ನು ಬಿಟ್ಟು ಕೊಳ್ಳುತ್ತಿರಲಿಲ್ಲ. ಬಂದರೂ ಅಲ್ಲಿ ಊಟ ಮಾಡಲು ಬಿಡುತ್ತಿರಲಿಲ್ಲ. ಇದು ಸಮಜದ ಋಣ ನಿಮಗೆ ಬೇಡ ಎನ್ನುವಷ್ಟು ಪ್ರಮಾಣಿಕ ಶುದ್ಧರಾಗಿದ್ದರು. ಸಮಾಜಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಅದರಲ್ಲಿ ತಿರುಗಿ ಅವರ ಕುಟುಂಬಕ್ಕೆ ಅಲ್ಪಪ್ರಮಾಣಲ್ಲಿ ನೀಡುವುದು ತಪ್ಪಲ್ಲ ಎಂದರು.

 ಮಾನವೀಯತೆಯಿಂದ ಸಹಾಯ : ಶ್ರೀತಿರುದಾಸ
ಜಗದ್ಗರುಗಳ ಕುಟುಂಬ ಸಂಕಟದಲ್ಲಿದ್ದಾಗ ಮಾನವೀಯತೆಯಿಂದ ಸಹಾಯ ಮಾಡುವುದು ನಮ್ಮ ಧರ್ಮ ಎಂದು ಸಮಾಜ ಸೇವಕರಾದ ಶ್ರೀರಾಮನುಜ ಸೇವಾ ಟ್ರಸ್ಟ್‌ನ ಶ್ರೀತಿರುದಾಸ ಸ್ವಾಮಿಜಿ ಹೇಳಿದರು.
ಅವರು ಬುಧವಾರ ತಿಪಟೂರಿನ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಆರೈಕೆ ವಿಚಾರಿಸಿದ್ದರಲ್ಲದೇ ನಿಮ್ಮ ಮಗ ಸನ್ಯಾಸಿಯಾಗಿದ್ದು ಪುಣ್ಯದ ಕೆಲಸ. ಒಬ್ಬ ಸನ್ಯಾಸಿಯಾದರೆ ಅವರ ಕುಟುಂಬದ ೧೪ ತಲೆಮಾರು ಕಾಯುತ್ತದೆ. ಭಯ ಪಡಬೇಕಿಲ್ಲ. ಒಳ್ಳೆಕಾಲ ಬಂದಿದೆ ಎಂದ ಅವರು ಕುಟುಂಬಕ್ಕೆ ಐದು ಸಾವಿರ ರೂಗಳ ಧನ ಸಹಾಯ ಮಾಡಿದರು.
ಅಮೇರಿಕಾದ ನ್ಯೂಯಾರ್ಕ್ ಐಲ್ಯಾಂಡ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಬೆಂಗಳೂರು ಮೂಲದ ಎಂ.ಶ್ರೀನಿವಾಸ ವಿಜಯಕರ್ನಾಟಕ ಇ-ಪೇಪರ್‌ನಲ್ಲಿ ಪ್ರಕಟವಾದ ಸುದ್ದಿ ನೋಡಿ ಕುಟುಂಬಕ್ಕೆ ಸಹಾಯ ಮಾಡುವ ಆಸಕ್ತಿ ತೋರಿದ್ದಾರೆ. ಹೆಚ್ಚಿನ ಹಣಕಾಸು ಜೊತೆಗೆ ಮಗಳ ಮದುವೆಗೂ ಸಹಕಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಅವರ ಪರವಾಗಿ ಶ್ರೀತಿರು ಸ್ವಾಮಿಗಳು ಹೇಳಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಡೂರು ತಾಲೂಕು ಸಮಾಜಸೇವಕ ಬಾಲು ಉಪಸ್ಥಿತರಿದ್ದರು.

೨೦ಸಾವಿರ ಹಣ ಸಹಾಯ ಮಾಡಿದ ಕೃಷಿ ಇಲಾಖೆ ಉಪನಿರ್ದೇಶಕ:
ಯಾದಗಿರಿಯ ಕೃಷಿ ಇಲಾಖೆಯಲ್ಲಿ ಉಪನಿರ್ದೆಶಕರಾಗಿರುವ ಅಶೋಕಕುಮಾರ್ ಅವರು ಗುರುವಾರ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಸ್ವಾಮಿಗಳ ಶ್ರಮ ಹಾಗೂ ಅವರು ಸಮಾಜಕ್ಕಾಗಿ ಮಾಡಿದ ಸೇವೆಯನ್ನು ಶ್ಲಾಘಿಸಿದ ಅವರು ಶ್ರೀಗಳ ಕುಟುಂಬಕ್ಕೆ ೨೦ಸಾವಿರ ಹಣ ಸಹಾಯ ಮಾಡಿದರು.

ಪರ್ಯಾಯ ಮಠ ಸ್ಥಾಪನೆ ಅನಿವಾರ್ಯ:
ವಾಲ್ಮಿಕಿ ಸಮಾಜದ ರಾಜನಹಳ್ಳಿ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮಿಜಿ ಅವರು ಪುಣ್ಯಾನಂದ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡಿರುವುದಾಗಿ ಹೇಳುವ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆಂದು ವಿರೋಧಿಸಿ ನಾನಾ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ದಿಡೀರ್ ಪ್ರತಿಭಟನೆ ನಡೆಸಿದರು. ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಜಯಸಿಂಹ ಮತ್ತು ದೊಡ್ಡಯ್ಯ, ಶೆಡ್ಯೂಲ್ ಕ್ಯಾಸ್ಟ್ ಫಡರೇಷನ್ ಹಾಗೂ ಕ್ರಿಯಾಶೀಲ ಜಾತಿಗಳ ಒಕ್ಕೂಟದ ಸೂರ್ಯಪ್ರಕಾಶ್‌ಕೋಲಿ ಮತ್ತಿತರರು ತಿಪಟೂರಿನ ಸಿಂಗ್ರಿವೃತ್ತದಲ್ಲಿ ಸಮಾವೇಶಗೊಂಡು ಶ್ರೀಗಳು ಕುಟುಂಬದ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಮಠಲದಲ್ಲಿ ಯಾರಿಗೂ ತಾರತಮ್ಯ ಮಾಡದೇ ಸಮಾನತೆಯಿಂದ ನೋಡ ಬೇಕು. ಮಠದಲ್ಲಿ ಪುಣ್ಯಾನಂದ ಸ್ವಾಮಿಜಿಗಳ ಕುಟುಂಬಕ್ಕೆ ತಂಗಲು ಒಂದು ಮನೆ ನಿರ್ಮಿಸಬೇಕು. ವಾಲ್ಮಿಕಿ ಸಮಾಜದ ರಾಜನಹಳ್ಳಿ ಟ್ರಸ್ಟ್ ನೊಂದ ಕುಟುಂಬಕ್ಕೆ ನೀಡಿರುವ ಆಶ್ವಾಸನೆಯಂತೆ ಪರಿಹಾರ ನೀಡಬೇಕು. ಶ್ರೀಗಳ ಕುಟುಂಬಕೆ ನ್ಯಾಯ ಸಿಗದಿದ್ದರೆ ಬೀದಿಗಳಿದು ಹೋರಾಟ ಮಾಡುವ ಜೊತೆಗೆ ಪರ್ಯಾಯ ಮಠ ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.


ಪ್ರಸನ್ನಾನಂದಪುರಿ ಸ್ವಾಮಿಗಳ ಹೇಳಿಕೆಗೆ ಕುಟುಂಬದ ಪ್ರತಿಕ್ರಿಯೆ:

ತಿಪಟೂರು: ವಾಲ್ಮಿಕಿ ಗುರು ಪೀಠದ ಬಗ್ಗೆ ನಮ್ಮ ವಿಶೇಷ ಗೌರವ, ಭಕ್ತಿ ಮತ್ತು ಪ್ರೀತಿ ಇದೆ. ನಾವು ಬಡವರು ನಿಜ ಆದರೆ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಶ್ರೀಗಳು ವಾಸ್ತವಾಂಶ ಮರೆ ಮಾಚಿ ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಪುಣ್ಯಾನಂದಪುರಿಸ್ವಾಮಿಜಿಗಳ ಹೆತ್ತವರು ಪ್ರತಿಕ್ರಿಯಿಸಿದ್ದಾರೆ.
ಶ್ರೀಗಳು ಗುರುವಾರ ಪತ್ರಿಕೆಗೆ ಹೇಳಿಕೆ ನೀಡಿ ಪುಣ್ಯಾನಂದಪುರಿ ಶ್ರೀಗಳ ಕುಟುಂಬವನ್ನು ನಿರ್ಲಕ್ಷಿಸಿಲ್ಲ, ಹಣಕಾಸು ನೆರವು ನೀಡಿದ್ದೇವೆ ಎಂದು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿರುವ ಅವರು ಶ್ರೀಗಳ ಬಗ್ಗೆ ನಮಗೆ ಪೂಜ್ಯಭಾವನೆ ಇದೆ, ತಿರುಗಿ ಅವರ ವಿರುದ್ಧ ಹೇಳಿಕೆ ನೀಡುವುದು ಧರ್ಮವಲ್ಲ ಆದರೆ ನಮ್ಮದು ತಪ್ಪು ಎಂದು ಕಂಡು ಬಂದರೆ ಸತ್ಯ ಹೇಳುವದು ಅನಿವಾರ್ಯವಾಗಿದೆ. ಮೊದಲು ಸಮಾಜದ ಕ್ಷಮೆ ಕೋರಿ ಹೇಳಿಕೆ ನೀಡುತ್ತಿದ್ದೇವೆ. ನಾವು ಬಡವರು. ಬಲಿಷ್ಟರಲ್ಲ. ನಮ್ಮದೇನು ನಡೆಯುವುದಿಲ್ಲ. ಹಾಗಾಗಿ ನಾವು ಯಾರೊಂದಿಗೂ ವಾದಕ್ಕಿಳಿಯುವುದಿಲ್ಲ. ಇಷ್ಟು ಮಾತ್ರ ಸತ್ಯ. ಶ್ರೀಗಳು ಹೇಳುತ್ತಿರುವುದು ಅರ್ಧ ಸತ್ಯ ಮಾತ್ರ ಎಂದು ಅವರು ಸ್ಪಷ್ಟಿಕರಿಸಿದ್ದಾರೆ.
ನಮ್ಮ ಶ್ರೀಗಳು ಅಗಲಿದ ನಂತರ ವರ್ಷಕ್ಕೆ ನಾಲ್ಕೈದು ಬಾರಿ ರಾಜನಹಳ್ಳಿಗೆ ಹೋಗಿ ಗದ್ದಿಗೆ ಪೂಜಿಸಿ, ದರ್ಶನ ಪಡೆದು ಬರುತ್ತಿದ್ದೇವು. ನಮ್ಮ ಸ್ವಾಮಿಜಿಯ ನಂತರ ಒಂದೂವರೆ ಎರಡು ವರ್ಷದ ನಂತರವಷ್ಟೇ ಅಂದರೆ ೨೦೦೮ರ ಆಗಸ್ಟ್ ೧೪ರಂದು ನೂತನ ಶ್ರೀಗಳು ಪೀಠಕ್ಕೆ ಬಂದರು. ನಂತರ ನಾವು ಗದ್ದಿಗೆಗೆ ಹೋದ ಸಂದರ್ಭದಲ್ಲಿ   ಎರಡು ಮೂರು ಬಾರಿ ಮಾತ್ರ ಶ್ರೀಗಳು ನಮಗೆ ಸಿಗುತ್ತಿದ್ದರು. ಉಳಿದಂತೆ ಹೊರಗೆ ಹೋಗಿರುತ್ತಿದ್ದರು. ನಮ್ಮನ್ನು ಕಂಡಾಗ ಅವರ ಕೈಯಲಿದ್ದ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಕೊಡುತ್ತಿದ್ದದ್ದು ನಿಜ. ಆದರೆ ಆ ಹಣ ಬಸ್ಸಿನ ಖರ್ಚಿಗೆಂದು ತಿಳಿದಿದ್ದೇವು  ಜೀವನೋಪಾಯಕ್ಕೆ ಕೊಡುತ್ತಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ಮಠದಲ್ಲಿ ನಾವು ಉಳಿದುಕೊಳ್ಳಲು ಬೇರೆ ಯಾವುದೇ ವ್ಯವಸ್ಥೆಯಿಲ್ಲ. ನಾವು ಹೋದಾಗ ಅಲ್ಲಿ ಅವರು ನಮ್ಮನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೨೦೦೭ರ ಏಪ್ರಿಲ್ ೪ರಂದು ಶ್ರೀಗಳು ಅಗಲಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜನರ  ಎದುರು ಮತ್ತು ಬೆಂಗಳೂರು ಓಂಕಾರಾಶ್ರಮದ ಶ್ರೀಶಿವಪುರಿಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ನಾಯಕರು, ಮುಖಂಡರು, ಟ್ರಸ್ಟ್‌ನವರು ನಮ್ಮ ದುಸ್ಥಿತಿಕೊಂಡು ಸಹಾಯ ಮಾಡುವ ಭರವಸೆ ನೀಡಿದ್ದರು. ಐದು ಲಕ್ಷ ಪರಿಹಾರ, ಒಂದು ಮನೆ, ನಾವು ಒಡಾಡಲು ಒಂದು ಕಾರು, ಇಬ್ಬರು ಗಂಡು ಮಕ್ಕಳ ಜೀವನೋಪಾಯಕ್ಕೆ ಎರಡು ಆಟೋ ಕೊಡಿಸಿ ಇರುವ ಮಗಳ ಮದುವೆ ಮಾಡಿಕೊಡುವ ಮಾತು ಕೊಟ್ಟಿದ್ದರು. ಇದಕ್ಕೂ ಮುಂಚಿನ ಸಭೆಯಲ್ಲಿ ಕುಟುಂಬದ ಒಬ್ಬರನ್ನು ಟ್ರಸ್ಟಿಯಾಗಿ ತೆಗೆದುಕೊಳ್ಳುವ ಮಾತನ್ನು ಹೇಳಿದ್ದರು. ಆ ದಾಖಲೆ ನಮ್ಮ ಬಳಿ ಇದೆ. ಶ್ರೀದಯಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಟ್ರಸ್ಟ್‌ನವರು ನಮ್ಮ ಮನೆ ಬಳಿಗೆ ಬಂದು ವಾಸ್ತವ ಕಂಡು ಹೆಚ್ಚಿನ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಸಹಾಯ ಮಾಡಿಲ್ಲ. ಸಹಾಯ ಕೋರಿ ಹೋದಾಗ ಶ್ರೀರಾಮುಲು ಬಳಿಗೆ ಹೋಗಿ, ಜಾರಕಿಹೊಳಿ ಬಳಿಗೆ ಹೋಗಿ ಎಂದು ಹೇಳಿ ಕಳುಹಿಸುತ್ತಿದ್ದರು. ಸಂಜೆಯವರೆಗೂ ಕಾದು ಕುಳಿತರೂ ಅವರು ಅಲ್ಲಿ ಸಿಗುತ್ತಿರಲಿಲ್ಲ ನಾವು ವಯಸ್ಸಾದವರು ಏನೋ ಪರಿಹಾರ ಸಿಗುತ್ತದೆ ಎಂದು ಎಲ್ಲಾ ಕಡೆಯೂ ಅಲೆದು ಅಲೆದು ಸಾಕಾಗಿ ನಿತ್ರಾಣರಾಗುತ್ತಿದ್ದೇವು. ಇದಕ್ಕಾಗಿಯೇ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ನಾವು ಕೂಲಿ ಮಾಡಿ ಜೀವನ ಮಾಡುವವರು ಈ ರೀತಿ ಓಡಾಡುತ್ತಾ ದುಡ್ಡು ಖರ್ಚು ಮಾಡಲು ಸಾಧ್ಯವೇ ನೀವೇ ಹೇಳಿ ಎಂದು ಮರು ಪ್ರಶ್ನಿಸಿದಾರೆ.
ಮೈಸೂರು ಭಾಗದವರು, ಚಿಂತಾಮಣಿಯವರು ಯಾವುದೇ ಹಣವನು ನಮಗೆ ನೇರವಾಗಿ ಕೊಟ್ಟಿಲ್ಲ, ಇದು ಸುಳ್ಳು. ಶ್ರೀಗಳು ಅಗಲಿದ ಸಮಯದಲ್ಲಿ ಅಂದು ಇದೇ ವಿಜಯಕರ್ನಾಟಕ ಪತ್ರಿಕೆಯಲಲಿ ಬಂದ ನಮ್ಮ ದುಸ್ಥತಿ ವರದಿ ನೋಡಿದ ನಾನಾ ಭಕ್ತರು ಅನುಕಂಪದಲ್ಲಿ ನೀಡಿದ ಹಣವನ್ನು ಟ್ರಸ್ಟಿ ಸತೀಶ್ ಜಾರಕಿಹೊಳಿ ಇಟ್ಟುಕೊಂಡು ಒಟ್ಟಿಗೆ ಕೊಡುತ್ತೇವೆ ಎಂದು ಹೇಳಿದ್ದು ಮುಂದೆ ಕೊಡಲಿಲ್ಲ. ಆದರೆ ಟ್ರಸ್ಟ್ ಹೊರತಾಗಿ ವೈಯಕ್ತಿಕವಾಗಿ ಸಹಾಯ ಮಾಡುತ್ತಿದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಎರಡು ಸಲ ೨೦ಸಾವಿರ  ಕೊಟ್ಟು, ಮನೆಯನ್ನು ಕೊಡಿಸುವ ಭರವಸೆ ನೀಡಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಮುಂದೆ ಅವರು ಸಿಗಲಿಲ್ಲ. ಅಲ್ಲದೇ ಬಳ್ಳಾರಿಯ ನಮ್ಮ ಸಮಾಜ ಭಾಂದವರು ಜಂಬಯ್ಯನಾಯಕರ ನೇತೃತ್ವದಲ್ಲಿ ಹಣ ಸಂಗ್ರಹಿಸಿ ೮೦ಸಾವಿರ ಕೊಟ್ಟಿದ್ದರು. ಇಷ್ಟು ಹಣವನ್ನು ನಮ್ಮ ಹಿರಿಯ ಮಗಳ ಮದುವೆಯಲ್ಲಿ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದು ನಿಜ ಎಂದು ಹೆತ್ತವರು ಒಪ್ಪಿಕೊಂಡಿದ್ದಾರೆ.
ನಮ್ಮ ಸ್ವಾಮಿಜಿ ಇದ್ದಾಗ ನಾವು ಮಠಕ್ಕೆ ಬರುವುದು, ಅಲ್ಲಿ ಊಟ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಸಮಾಜದ ಋಣ ನಿಮಗೆ ಬೇಡ ಎಂದು ಹೇಳುತ್ತಿದ್ದರು. ಇಂತಹ ಪ್ರಾಮಾಣಿಕ ದೈವಭಕ್ತರ ಕುಟುಂಬದವರಾದ ನಾವು ಅವರು ಇಲ್ಲದ ಸಮಯದಲ್ಲಿ ಮಠದಲ್ಲಿ ಕುಳಿತು ಪುಕ್ಕಟೆ ಊಟ ಮಾಡುವುದು ಸರಿಯೇ, ನಾವು ಬಡವರು ಸರಿ, ಆದರೆ ನಿರ್ಗತಿಕರಲ್ಲ. ನಮಗೂ ಸ್ವಾಭಿಮಾನವಿದೆ. ವಯಸ್ಸಾದರೂ ನಮ್ಮ ತೋಳು ಬಲ ಚೆನ್ನಾಗಿದೆ. ಶಕ್ತಿ ಇರುವವರೆಗೂ ದುಡಿದು ನಮ್ಮ ಹಸಿವನ್ನು ಶಮನ ಮಾಡುತ್ತೇವೆ.  ಆಗಾಗಿ ನಾವು ಮಠದಲ್ಲಿ ಇರಲು ಒಪ್ಪಲಿಲ್ಲ. ಕೊಟ್ಟ ಮಾತಿಗೆ ನಡೆದು ಕೊಳ್ಳುವ ಮನಸ್ಸು ಮತ್ತು ಪ್ರಯತ್ನ ಮಾಡದ ಟ್ರಸ್ಟ್‌ನವರು ಇಂತಹ ಮಾತುಗಳನ್ನು ಸಾಕಷ್ಟು ಸಲ ಆಡಿದ್ದಾರೆ. ಆದರೆ ನಮ್ಮ ಹಸಿವನ್ನು ಹಿಂಗಿಸುವ ಪರ್ಯಾಯ ಮಾರ್ಗ ಕಲ್ಪಿಸಿಕೊಡಲೇ ಇಲ್ಲ. ಈಗ ಮದುವೆ ಮಾಡುತ್ತೇವೆ, ಸಹಾಯ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುವವರು ಇಷ್ಟು ದಿನ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸುತ್ತಾರೆ. ಇವರ ವರ್ತನೆ ಬೇಸತ್ತು ನಾವು ಸುಮ್ಮನಿದ್ದೇವು. ಆದರೆ ಪತ್ರಿಕೆಯವರು ಬರೆದು ಪುನಃ ಇದಕ್ಕೆ ಜೀವ ತುಂಬಿದ್ದಾರೆ. ಪತ್ರಿಕೆಯವರಿಗೆ ಇರುವ ಕಾಳಜಿ, ಮಾನವೀಯತೆ ಟ್ರಸ್ಟ್‌ನವರಿಗೆ ಏಕಿಲ್ಲ ಎಂದಿದ್ದಾರೆ.       
ಅಪಘಾತ ಸುದ್ದಿ ಮುಟ್ಟಿಸದ ನಿಷ್ಕರುಣಿಗಳು:
ನಮ್ಮ ಮಗ ಸ್ವಾಮಿಗೆ ೨೦೦೭ರ ಏಪ್ರಿಲ್ ೪ರಂದು ಪೀಠಾಧಿಕಾರ ಮಾಡುವ ಸಂದರ್ಭದಲ್ಲಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹೆತ್ತವರಾದ ನಮ್ಮ ಋಣ ತೀರಿಸಿಕೊಳ್ಳುವ ಯಾವ ಅವಕಾಶವನ್ನೂ ನೀಡಲಿಲ್ಲ. ನಮ್ಮ ಸ್ವಾಮಿ ನಮ್ಮ ಸ್ವತ್ತಾಗಿತ್ತು. ಮಗ ಮನೆಯಲಿದ್ದರೆ ನಮಗೆ ಆಧಾರವಾಗುತ್ತಿದ್ದ. ಅವನನ್ನು ನಂಬಿಸಿ, ನಮಗೆ ಆಸೆ ತೋರಿಸಿ ಕರೆದುಕೊಂಡು ಹೋಗಿ ಸ್ವಾಮಿಜಿ ಮಾಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಇದು ಯಾವ ನ್ಯಾಯ? ಹೆತ್ತವರಿಗೆ ಹಕ್ಕು ಕಸಿದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಸ್ವಾಮಿ ಮಾಡುತ್ತೇವೆ ಎಂದು ನಮ್ಮ ಒಪ್ಪಿಗೆ ಪತ್ರ ಪಡೆದಿದ್ದಾರೆಯೇ? ಎಂದು ಪ್ರಶ್ನಿಸುವ ಅವರು ಸ್ವಾಮಿಯ ಪೀಠಾಧಿಕಾರದ ಸಮಯದಲ್ಲಿ ಸೌಜನ್ಯಕ್ಕಾದರೂ ಹೇಳಿ ಕಳುಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಅದಿರಲಿ, ಸ್ವಾಮಿ ಅಪಘಾತದಲ್ಲಿ ತೀರಿಕೊಂಡ ಸಂದರ್ಭದಲ್ಲೂ ನಮಗೆ ಹೇಳಿಕಳುಹಿಸುವ ಮನುಷ್ಯತ್ವ ತೋರಲಿಲ್ಲ. ಈ ಎರಡು ಸಂದರ್ಭದಲ್ಲೂ ನಮಗೆ ನೆರವಾಗಿದ್ದು ಪತ್ರಿಕೆ ಮಾತ್ರ. ಮಾಹಿತಿ ಮುಟ್ಟಿಸಿದ್ದು ಈ ಮಾಧ್ಯಮದವರೇ ಅವರಿಗೆ ನಮ್ಮ ಜೀವನ ಪೂರ್ತಿ ಋಣಿಯಾಗಿರುತ್ತೇವೆ ಎಂದಿದ್ದಾರೆ.

ನಿಮ್ಮ ಅನಿಸಿಕೆಗಾಗಿ ಕರೆ ಮಾಡಿ:೯೪೪೮೪೧೬೫೫೦

 


Tuesday, July 12, 2011

ಛಲವೊಂದೇ ಯಶಸ್ಸಿನ ಗುಟ್ಟು:

ಛಲವೊಂದೇ ಯಶಸ್ಸಿನ ಗುಟ್ಟು:ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಹಿರಿಯರ ನಾಣ್ಣುಡಿಯಂತೆ ಹೆಚ್ಚು ವಿದ್ಯೆ ಕಲಿಯದ ತಂದೆ, ಮಗ ಇಬ್ಬರೂ ಸೇರಿ ಇಲ್ಲಿ ತೀರಾ ಬೇಡಿಕೆಯಿರುವ ತೆಂಗಿನಕಾಯಿಯ ಸಿಪ್ಪೆ ತೆಗೆಯುವ ಯಂತ್ರವನ್ನು ಕಂಡು ಹಿಡಿದು ಅಚ್ಚರಿ ಮೂಡಿಸಿದ್ದಾರೆ.
ತಿಪಟೂರು ತಾಲೂಕಿನಲ್ಲಿರುವ ಸುಮಾರು ೫೦ಕ್ಕೂ ಹೆಚ್ಚು ತೆಂಗಿನ ಕಾಯಿ ಒಣ ಪುಡಿ ತಯಾರಿಕಾ ಘಟಕಗಳಿಗೆ ಕೆಲಸಗಾರರದ್ದೇ ತಲೇ ನೋವು. ಚೆನ್ನಾಗಿ ಕೆಲಸ ಮಾಡುವವರು ಕಾರ್ಖಾನೆ ಮಾಲೀಕರಿಂದ ಮುಂಗಡ ಪಡೆದು ಹೋದರೆ ಮತ್ತೆ ಅವರನ್ನು ಕರೆತಂದು ಕೆಲಸ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಕೈಗಾರಿಕೆಗಳಲ್ಲಿ ತೆಂಗಿನಕಾಯಿಯ ಒಳಭಾಗದ ಉಂಡೆಯ ಮೇಲಿನ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಕಷ್ಟದ ಕೆಲಸ. ಅದನ್ನು ಯಂತ್ರದಿಂದ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಕೆಲಸಗಾರರೇ ಮಾಡಬೇಕು. ಅವರು ಸಣ್ಣ ತಗಡಿನ ಸಾಧನದಿಂದ ಮೇಲಿನ ಸಿಪ್ಪೆ ಎರೆಯುತ್ತಾರೆ. ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಕಾಯಿ ತುರಿದುಹೋಗುತ್ತದೆ. ಮುಂದೆ ಇದು ಕೌಟಾಗಿ ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ.
ಕಾಯಿಯ ಮೇಲ್ಭಾಗದ ಚಿಪ್ಪು ತೆಗೆಯುವುದು ಮತ್ತು ಒಳಗಿರುವ ಉಂಡೆಯ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಮಾತ್ರ ಮಾನವ ಕೆಲಸಗಾರರರು ಮಾಡಬೇಕು ಉಳಿದಂತೆ ಎಲ್ಲಾ ಯಂತ್ರದಿಂದಲೇ ನಡೆಯುತ್ತದೆ. ಈಗ ಸಿಪ್ಪೆ ತೆಗೆಯುವುದಕ್ಕೂ ಒಂದು ಯಂತ್ರ ಕಂಡು ಹಿಡಿಯಲಾಗಿದೆ ಎಂಬ ವಿಚಾರ ತಿಳಿಯುತ್ತಿದಂತೆ ಕಾರ್ಖಾನೆಗಳ ಮಾಲೀಕರು ಆಶ್ಚರ್ಯದ ಜೊತೆಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಲ್ಲಿ ಓಡಾಡಿಕೊಂಡಿರುವ ಜಯರಾಂ ಎಂಬ ವ್ಯಕ್ತಿ ಎಲ್ಲರಿಗೂ ಪರಿಚಯ. ಆದರೆ ಅವರು ಯಾವುದೇ ಕೈಗಾರಿಕೆ ನಡೆಸದಿದ್ದರೂ ಆಗಾಗ ತಾಲೂಕಿನಲ್ಲೇ ಹೆಚ್ಚಾಗಿರುವ ತೆಂಗಿನ ಮತ್ತು ನಾರಿನ ಕೈಗಾರಿಕಗಳಿಗೆ ಬೇಟಿ ನೀಡುವುದು ಅಲ್ಲಿನ ಯಂತ್ರಗಳ ಕಾರ್ಯವೈಖರಿಯನ್ನು ನೋಡುವುದು, ಯಂತ್ರದ ಬಗ್ಗೆ ತಮ್ಮಲ್ಲೇ ಏನೋ ಲೆಕ್ಕಹಾಕುವುದು ಮಾಡುತ್ತಾ ತಿರುಗುತ್ತಾರೆ. ಹಾಗೆಯೇ ಜಿಲ್ಲೆ, ರಾಜ್ಯ ಅಲ್ಲದೇ ಹೊರ ರಾಜ್ಯಕ್ಕೂ ಆಗಾಗ ಹೋಗಿ ಬರುತ್ತಾರೆ. ತೆಂಗಿನ ಉತ್ಪನ್ನಗಳನ್ನು ಕಚ್ಚಾಪದಾರ್ಥವಾಗಿ ಉಪಯೋಗಿಸಲ್ಪಡುವ ನಾನಾ ಕೈಗಾರಿಕೆಗಳನ್ನು ಸುತ್ತಿಬಂದಿರುವ ಅವರು ಕೈಗಾರಿಕಾ ಘಟಕಗಳ ನಾನಾ ಸಮಸ್ಯೆಗಳನ್ನು ಪಟ್ಟಿಮಾಡಿಟ್ಟುಕೊಂಡಿದ್ದಾರೆ.
ಕೇವಲ ಏಳನೇ ತರಗತಿಯವರೆಗೆ ಮಾತ್ರ ಓದಿರುವ ಜಯರಾಂ ಕೈಗಾರಿಕೆಗಳ ಬಗ್ಗೆ ಅವರಲ್ಲಿರುವ ಜ್ಞಾನ ಒಂದು ಪ್ರಭಂಧ ಬರೆದು ಪಿಹೆಚ್‌ಡಿ ಮಾಡಬಹುದು. ಹಾಗಾಗಿ ಅವರು ತೆಂಗಿನ ನಾರಿನ ಕೈಗಾರಿಕೆಗಳಿಗೆ ಬರುವ ನಾನಾ ಸುಧಾರಿತ ಯಂತ್ರಗಳನ್ನು ಮಾಡಿಕೊಟ್ಟಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಪ್ರಭಲರಲ್ಲದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಏನನ್ನೂ ಮಾಡಲಾಗಿಲ್ಲ. ಆದರೆ ಇದೂವರೆಗೂ ನಾನಾ ಯಂತ್ರಗಳನ್ನು ಪ್ರಾಯೋಗಿಕವಾಗಿ ಮಾಡಲು ಲಕ್ಷಾಂತರ ರೂಗಳನ್ನು ಕಳೆದುಕೊಂಡಿರುವುದಂತೂ ಸತ್ಯ. ಇವರು ಸಂಶೋಧೀಸಿ ಮಾಡಿರುವ ಯಂತ್ರಗಳು ನಾನಾ ತೆಂಗಿನ ನಾರಿನ ಕೈಗಾರಿಕಾ ಘಟಕದಲ್ಲಿ ಈಗಲೂ ಯಶಸ್ವಿಯಾಗಿ ಚಾಲನೆಯಲ್ಲಿಯಂತೆ.
ತಂದೆಯ ನಡೆಯನ್ನೇ ಅನುಸರಿಸಿರುವ ಮಗ ಕೃಷ್ಣಮೂರ್ತಿ ಈ ಹೊಸ ಯಂತ್ರದ ಜನಕ. ಕೇವಲ ಎಸ್‌ಎಸ್‌ಎಲ್‌ಸಿಯನ್ನೂ ಪೂರ್ಣಗೊಳಿಸದ ಈತ ಈಗ ತೆಂಗಿನ ಕಾಯಿ ತುರಿ ಕೈಗಾರಿಕಾ ಘಟಕಗಳಿಗೆ ನಾನಾ ಮಾಧರಿಯ ಯಂತ್ರಗಳನ್ನು ತಯಾರಿಸಿಕೊಡುವ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ತಂದೆ, ಮಗನ ಬಳಿ ಯಾವ ತಾಂತ್ರಿಕತೆಯ ಪ್ರಮಾಣ ಪತ್ರವಾಗಲಿ ಅಥವಾ ಪಧವಿಯಾಗಲಿ ಇಲ್ಲದಿದ್ದರೂ ಅನುಭವ ಮಾತ್ರ ಅವರ ಉತ್ಸಾಹವನ್ನು ಹಿಮ್ಮಡಿಗೊಳಿಸಿ, ಸತತ ಪ್ರಯತ್ನಕ್ಕೆ ಅಣಿಗೊಳಿಸೆ. ಸ್ವಂತ ಖರ್ಚಿನಲ್ಲಿ ಹೊಸ ಹೊಸ ಯಂತ್ರಗಳನ್ನು ಕಂಡು ಹಿಡಿಯುವ ಇವರಿಗೆ ಇವರೇ ಮಾರ್ಗದರ್ಶಕರು ಮತ್ತು ಪ್ರೋತ್ಸಾಹಕರು.

ಸಿಪ್ಪೆ ತೆಗೆಯುವ ಯಂತ್ರ ಆವಿಷ್ಕಾರ:
ಮೇಲಿನ ಮಟ್ಟೆ ತೆಗೆದ ನಂತರ ಒಳಗೆ ಉಳಿಯುವ ಚಿಪ್ಪಿನಿಂದ ಆವರಿಸಿರುವ ತೆಂಗಿನಕಾಯಿಯನ್ನು ಕಾರ್ಖಾನೆಯಲ್ಲಿರುವ ನಿಪುಣ ಕೆಲಸಗಾರರು ಚೂಪಾದ ಸಣ್ಣ ಕೊಡಲಿಗಳಿಂದ ಗಟ್ಟಿಯಾದ ಚಿಪ್ಪನ್ನು ತೆಗೆದು ಹಾಕುತ್ತಾರೆ. ಪುನಃ ಕಂದು ಬಣ್ಣದ ತೆಳುವಾದ ಚಿಪ್ಪೆ ಕಾಯಿಯ ಉಂಡೆಯ ಮೇಲೆ ಉಳಿದಿರುತ್ತದೆ. ಕಾರ್ಖಾನೆಯ ಮಹಿಳಾ ಕೆಲಸಗಾರರು ಚೂಪಾದ ಚಾಕುವಿನಿಂದ ಅಥವಾ ಚೂಪಾದ ಬ್ಲೇಡ್‌ಯಿರುವ ಸಾಧನದಿಂದ ಉಂಡೆಯ ಮೇಲಿರುವ ಕಂದು ಬಣ್ಣದ ಸಿಪ್ಪೆಯನ್ನು ಎರೆದು ಬಿಳಿ ಉಂಡೆ ಮಾಡಿ ಅದನ್ನು ಪುಡಿ ಮಾಡುವ ಅಥವಾ ತುರಿಯುವ ಯಂತ್ರಕ್ಕೆ ಕೊಡುತ್ತಾರೆ.
ಆದರೆ ಹೀಗೆ ಚಿಪ್ಪು ತೆಗೆಯುವಾಗ ಕೆಲವೊಮ್ಮೆ ಉಂಡೆ ಸಲೀಸಾಗಿ ಬರದೆ ಚಿಪ್ಪಿಗೆ ಅಂಟಿಕೊಂಡ ಚೂರು ಬರುವುದು ಸಹಜ. ಅಂತಹ ಚೂರನ್ನು ಚಿಪ್ಪಿನಿಂದ ಬೇರ್ಪಡಿಸಿದರೂ ಮೇಲಿನ ಕಂದು ಬಣ್ಣದ ಸಿಪ್ಪೆಯನ್ನು ಕೈಯಿಂದ ತೆಗೆಯುವುದು ಅಷ್ಟು ಸುಲಭವಲ್ಲ. ತೆಗೆದರೂ ಸಮಯ ಹಿಡಿಯುವುದರಿಂದ ಇದರಿಂದ ಮಾಲೀಕರಿಗೆ ನಷ್ಟವೇ ಹೊರತು ಲಾಭವಿಲ್ಲ. ಹಾಗಾಗಿ ಅಂತಹ ಚೂರಿನ ಕಂದು ಸಿಪ್ಪೆ ತೆಗೆಸುವ ಗೋಜಿಗೆ ಹೋಗದೆ ಒಣಗಿಸಿ ಕೌಟು ಲೆಕ್ಕಕ್ಕೆ ಮಾರಾಟ ಮಾಡುತ್ತಾರೆ. ಈಗ ಅದನ್ನು ಸಹ ಈ ಹೊಸ ಯಂತ್ರದಿಂದ ತೆಗೆಯಬಹುದು
ಇಂತಹ ಪುಟ್ಟ ಯಂತ್ರವನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುತ್ತಿದ್ದಾರೆ. ಆ ಯಂತ್ರಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ತಮ್ಮ ತಂತ್ರಜ್ಞಾವನ್ನು ಯಾರೂ ಕದಿಯಲು ಸಾಧ್ಯವೇ ಇಲ್ಲ. ಎಲ್ಲಾ ಬಿಡಿ ಭಾಗಗಳನ್ನು ಬೆಂಗಳೂರಿನಲ್ಲಿ ತಯಾರಿಸಿ ತಂದು ಇಲ್ಲಿನ ವರ್ಕ್ ಶಾಪ್ ಒಂದರಲ್ಲಿ ಜೋಡಿಸುತ್ತೇವೆ ಎನ್ನುತ್ತಾರೆ ಕೃಷ್ಣಮೂರ್ತಿ. ಗಂಟೆಗೆ ೬೦ ಕಿಲೋ ಕಾಯಿ ಚೂರು ಸಿಪ್ಪೆ ಎರೆಯುವ ಇದರಿಂದ ಕಾರ್ಖಾನೆ ಮಾಲೀಕರಿಗೆ ತುಂಬಾ ಅನುಕೂಲವಾಗಿದೆ. ಚೂರನ್ನು ಒಣಗಿಸಿ ಕಡಿಮೆ ಬೆಲೆಗೆ ಕೌಟಿಗೆ ಮಾರುತ್ತಿದ್ದ ಅವರಿಗೆ ಆಗುತ್ತಿದ್ದ ನಷ್ಟವೂ ತಪ್ಪಿದೆ. ಇದರಿಂದ ಮಾಲೀಕರಿಗೆ ಕನಿಷ್ಠ ಕೆಜಿಗೆ ೫೦ ರೂಪಾಯಿ ಹೆಚ್ಚು ಹಣ ಸಿಗುತ್ತಿದೆ. ಹೆಚ್ಚು ಅನುಕೂಲವೂ ಆಗಿದೆ. ಪ್ರಾತ್ಯಕ್ಷಿತೆ ನೋಡಿದ ಮಾಲೀಕರಿಂದ ಯಂತ್ರಗಳಿಗೆ ಬೇಡಿಕೆಯೂ ಬರುತ್ತಿದೆ ಎಂದು ತಮ್ಮ ನೂತನ ಆವಿಷ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೃಷ್ಣಮೂರ್ತಿ(೯೬೩೨೯೧೫೫೪೧).

ಕಾನ್ವೆಂಟ್‌ಗಳ ಹಾವಳಿಗೆ ಸವಾಲು:

ಕಾನ್ವೆಂಟ್‌ಗಳ ಹಾವಳಿಗೆ ಸವಾಲು: ಖಾಸಗಿ ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿ ಮತ್ತು ಮಕ್ಕಳ ಕೊರತೆಯ ಕಾರಣದಿಂದ ಪ್ರತಿವರ್ಷ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವ ಆತಂಕದ ನಡುವೆಯೂ ತಿಪಟೂರು ತಾಲೂಕಿನ ಕೆಲವು ಸರಕಾರಿ ಶಾಲೆಗಳು ಕಾನ್ವೆಂಟ್‌ಗಳ ವ್ಯವಸ್ಥೆಗೆ ಸಡ್ಡು ಹೊಡೆದು ಪ್ರಗತಿಯತ್ತ ಸಾಗುತ್ತಿರುವುದು ಸಮಾಧಾನ ಉಂಟು ಮಾಡಿದೆ. 
ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಕಳೆದ ವರ್ಷದಿಂದ ಸುಮಾರು ೧೦ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿದ್ದು ಖಾಸಗಿ ಕಾನ್ವೆಂಟ್‌ಗಳ ಅಬ್ಬರ ಮತ್ತು ಲಾಭಿಯಲ್ಲಿ ಸುಮಾರು ೯೫ ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ ಮತ್ತು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ತಾಲೂಕಿನ ಜಾಬಘಟ್ಟ, ಆಲೂರು, ಅಂಚೆಕೊಪ್ಪಲು, ಬಿದರೆಗುಡಿ, ತಿಮ್ಲಾಪುರ, ಕುರುಬರಹಳ್ಳಿ ಹಾಗೂ ನಗರದ ಕಂಚಾಘಟ್ಟ ಸೇರಿದಂತೆ ಹತ್ತಾರು ಶಾಲೆಗಳು ಇಂದಿಗೂ ಜನಮನದಿಂದ ದೂರ ಉಳಿದಿಲ್ಲ.
ಗ್ರಾಮಸ್ಥರ ವಿಶ್ವಾಸ ಗಳಿಸಿ ಶಾಲೆಯನ್ನು ಆಕರ್ಷಣೆಗೊಳಿಸಿರುವುದಲ್ಲದೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಕಾನ್ವೆಂಟ್ ವ್ಯವಸ್ಥೆಗೆ ಸವಾಲೆಸೆದಿರುವ ಶಾಲೆಗಳಲ್ಲಿ ಕುರುಬರಹಳ್ಳಿ ಪ್ರಾಥಮಿಕ ಪಾಠಶಾಲೆಯೂ ಒಂದು. ಶಿಕ್ಷಕರ ಸತತ ಪರಿಶ್ರಮ, ಗ್ರಾಮಸ್ಥರ ಸಹಕಾರದಿಂದ ಇಲ್ಲಿನ ಶೈಕ್ಷಣಿಲ ವಾತಾವರಣದ ಯಾವ ಇಂಗ್ಲೀಷ್ ಕಾನ್ವೆಂಟ್ ಶಾಲೆಗೂ ಕಡಿಮೆ ಇಲ್ಲ. ಇದೊಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದು ಉಳಿದ ಶಾಲೆಗಳಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. 
ಪುಟ್ಟ ಗ್ರಾಮದಲ್ಲಿ ಮಾದರಿ ಶಾಲೆ:ನಗರಕ್ಕೆ ಸಮೀಪ ಇರುವ ಕುರುಬರಹಳ್ಳಿ ೧೨೦ ಮನೆಗಳಿರುವ ಪುಟ್ಟ ಗ್ರಾಮ. ಆದರೆ ಇಲ್ಲಿರುವ ಸರಕಾರಿ ಶಾಲೆಗೆ ಯಾರಾದರೂ ಹೊದರೆ ಅವರು ಮೊದಲು ಅಚ್ಚರಿ ಪಡುವುದು ಶಾಲಾ ವಾತವಾರಣ, ಮಕ್ಕಳ ಶಿಸ್ತು ಬದ್ಧ ಸಮವಸ್ತ್ರ ಮತ್ತು ನಡತೆ.
ಶಾಲೆಯ ಒಟ್ಟು ಮಕ್ಕಳ ಸಂಖ್ಯೆ ಈ ಬಾರಿ ೪೫ಕ್ಕೆ ಏರಿದೆ. ಗ್ರಾಮದಿಂದ ನಗರದ ಕಾನ್ವೆಂಟ್‌ಗಳಿಗೆ ಹೋಗುತ್ತಿದ್ದ ಹಲವಾರು ಮಕ್ಕಳು ಈ ಸರಕಾರಿ ಶಾಲೆಗಳ ಕಡೆ ಮುಖ ಮಾಡಿ, ಇಲ್ಲಿಯೇ ತಮ್ಮ ಕಲಿಕೆ ಆರಂಭಿಸಿವೆ. ನಗರಕ್ಕೆ ಹತ್ತಿರದಲ್ಲಿದ್ದು, ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿರುವ ಗ್ರಾಮದ ಮಕ್ಕಳು ಮತ್ತು ಪೋಷಕರು ಕಾನ್ವೆಂಟ್‌ಗಳ ಕಡೆ ಆಕರ್ಷಿತರಾಗದಂತೆ ನೋಡಿಕೊಳ್ಳುವಲ್ಲಿ ಈ ಶಾಲೆಯ ವ್ಯವಸ್ಥೆ ಯಶಸ್ವಿಯಾಗಿದೆ.
ಇಲ್ಲಿನ ಶಿಕ್ಷಕರ ಪ್ರಾಮಾಣಿಕತೆ, ಪ್ರಯೋಗಶೀಲತೆ, ಶ್ರಮದ ಫಲವಾಗಿ ಶಾಲೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು ಗ್ರಾಮದ ಸರಕಾರಿ ಶಾಲೆಯೇ ಉತ್ತಮ ಶಿಕ್ಷಣ ನೀಡುವಾಗ ನಮಗೇಕೆ ಕಾನ್ವೆಂಟ್‌ಗಳ ಉಸಾಬರಿ ಎನ್ನುವ ಗ್ರಾಮಸ್ಥರು ತಮ್ಮೂರಿನ ಶಾಲೆಯ ವಿಶಿಷ್ಟತೆ ಕಂಡು ಅಭಿಮಾನ ಮೆರೆದಿದ್ದಾರೆ. ಆರ್ಥಿಕವಾಗಿ ಅಷ್ಟು ಸಬರಲ್ಲದ ಗ್ರಾಮದಲ್ಲಿ ಕೆಲವು ಮಕ್ಕಳು ಬೇರೆ ಊರುಗಳಿಂದ ಬಂದವರಾಗಿದ್ದುಕೊಂಡು ಇಲ್ಲಿಯೇ ಅಜ್ಜಿ, ತಾತನ ಮನೆಯಲ್ಲಿದ್ದು ಓದುತ್ತಿದ್ದಾರೆ ಎನ್ನುವದು ಇಲಿನ ವಿಶೇಷ.
ಇಲ್ಲಿನ ಮಕ್ಕಳು ಕಾನ್ವೆಂಟ್ ಮಕ್ಕಳನ್ನೂ ಮೀರಿಸುವಂತೆ ಇಂಗ್ಲಿಷ್, ಸಾಮಾನ್ಯ ಜ್ಞಾನ ಸೇರಿದಂತೆ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಮಕ್ಕಳ ಪ್ರವೇಶ ಹೆಚ್ಚುತಿರುವ ಕಾರಣ ಶಿಕ್ಷಣ ಇಲಾಖೆ ಶಾಲೆಗೆ ಹೆಚ್ಚಿನ ನಿಗಾ ವಹಿಸಿದೆ. ಶಾಲೆಯ ಶಿಕ್ಷಕರಾದ ಎಸ್. ಚಿದಾನಂದಸ್ವಾಮಿ, ಪಂಚಾಕ್ಷರಿ ಮತ್ತು ಮೀನಾಕ್ಷಮ್ಮ ಸರಳ ಮತ್ತು ವಿಶಿಷ್ಟ ಬೋಧನೆ ಕ್ರಮದ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪಂಚಾಕ್ಷರಿ ಅವರು ತಾವೇ ಅನ್ವೇಷಿಸಿ ತಯಾರಿಸಿದ ಸೂತ್ರಗಳಿಂದ ಮಕ್ಕಳ ಸಾಮಾನ್ಯ ಜ್ಞಾನ ಮತ್ತು ಇಂಗ್ಲಿಷ್, ಗಣಿತ ಕಲಿಕೆ ಅಚ್ಚರಿ ಪಡುವಂತಿದೆ. ರಾಜ್ಯಗಳು, ಜಿಲ್ಲೆಗಳು, ನದಿಗಳು, ಪ್ರವಾಸಿ ಕ್ಷೇತ್ರಗಳು, ಸಮಾಜ ಸುಧಾರಕರು, ವಿಜ್ಞಾನಿಗಳು, ಸಚಿವರು, ಪಕ್ಷಿದಾಮ ಮತ್ತಿತರ ಮಾಹಿತಿಗಳನ್ನು ಮಕ್ಕಳು ಸುಲಭವಾಗಿ ಹೇಳುವಂತೆ ಸೂತ್ರದ ಮೂಲಕ ಕಲಿಸಲಾಗುತ್ತಿದೆ.
ಇಂಗ್ಲಿಷ್ ಕಲಿಕೆಗೂ ಇಂಥದ್ದೇ ಸೂತ್ರ ಅನುಸರಿಸಿದ್ದರಿಂದ ದಾಖಲಾಗಿ ಒಂದೇ ತಿಂಗಳಾಗಿರುವ ಒಂದನೇ ತರಗತಿ ಮಕ್ಕಳು ಕೂಡ ಅಕ್ಷರ, ರೈಮ್ಸ್‌ಗಳನ್ನು ಸುಲಭವಾಗಿ ಹೇಳುತ್ತಾರೆ. ೪ ಮತ್ತು ೫ನೇ ತರಗತಿ ಮಕ್ಕಳು ಇಂಗ್ಲಿಷ್‌ನಲ್ಲಿ ವಾಕ್ಯ ರಚಿಸುವಷ್ಟು ಕಲಿಕೆಯಲ್ಲಿದ್ದಾರೆ. ಇವೆಲ್ಲಾ ಕಾರಣದಿಂದ ಈ ಮಕ್ಕಳು ಎಲ್ಲದರಲ್ಲೂ ಕಾನ್ವೆಂಟ್‌ನವರಿಗಿಂತ ಮುಂದಿರುವುದರಿಂದ ಪೋಷಕರು ಸಹಜವಾಗಿ ಆಕರ್ಷಿಕರಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಶಾಲೆಯ ಸತ್ಕಾರ್ಯಗಳಿಗೆ ಕೈಜೋಡಿಸುತ್ತಾ ಬಂದಿದೆ. ತಾವು ಬೆಳೆದ ತರಕಾರಿಯಲ್ಲಿ ಸ್ವಲ್ಪ ಪಾಲನ್ನು ಶಾಲೆಯ ಬಿಸಿಯೂಟಕ್ಕೆ ನೀಡುವ ಪರಿಪಾಠ ಈ ಗ್ರಾಮಸ್ಥರಲ್ಲಿ ಬೆಳೆದಿದೆ. ಕೈತೋಟ, ಮರಗಿಡಗಳ ಉತ್ತಮ ಪರಿಸರವೂ ಇಲ್ಲಿದೆ. ಜನಮೆಚ್ಚಿದ ಶಿಕ್ಷಕ, ಅತ್ಯುತ್ತಮ ಶಾಲೆ, ಅತ್ಯುತ್ತಮ ಎಸ್‌ಡಿಎಂಸಿ ಮತ್ತಿತರ ಪ್ರಶಸ್ತಿ ಮತ್ತು ಪುರಸ್ಕಾರಗಳು ಈ ಶಾಲೆಗೆ ಹಾಗೂ ಶಿಕ್ಷಕರಿಗೆ ಲಭಿಸಿದ್ದು ಶಾಲೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಶಿಕ್ಷಣ ಇಲಾಖೆಯ ಸಮಾಧಾನ:ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಮತ್ತು ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿಯಿಂದ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಪುನಶ್ಚೇತನಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಬಿಇಒ ಮನಮೋಹನ್ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಸಾಕಷ್ಟು ಶಾಲೆಗಳನ್ನು ಮುಚ್ಚಿದ್ದು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿರುವ ಕಾರಣದಿಂದ ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗ್ರಾಮಸ್ಥರ ಸಹಕಾರದಲ್ಲಿ ಒಂದು ತಂಡ ರಚಿಸಿ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಗ್ರಾಮದಲ್ಲಿ ಪೋಷಕರ ಮನವೋಲಿಸುವ ಪ್ರಯತ್ನ ನಡೆಸಲಾಗಿದೆ.
ಜುಲೈ-೨೦ ವೀಶೇಷ ದಾಖಲಾತಿಯ ಅಂತಿಮ ದಿನವಾಗಿದ್ದು ಈಗಾಗಲೇ ತಂಡ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಪರಿಣಾಮವಾಗಿ  ಮುಚಿರುವ ಶಾಲೆಗಳ ಪೈಕಿ ಅಯ್ಯನಪಾಳ್ಯ ಮತ್ತು ಕೆ.ಎಂ.ಗೊಲ್ಲರಹಟ್ಟಿ ಶಾಲೆಗಳನ್ನು ಪುನಃ ತೆರೆಯಲಾಗಿದೆ. ಮುಂದೆ ಕಾರೇಕುರ್ಚಿ, ಕೋಡಿಕೊಪ್ಪಲು, ಹುಚ್ಚಗೊಂಡನಹಳ್ಳಿ, ಹರಚನ ಹಳ್ಳಿ ಸೇರಿದಂತೆ ಇತರೆ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಯತ್ನಿಸಲಾಗುತಿದೆ ಎಂದಿದ್ದಾರೆ.
ಸರಕಾರಿ ಶಾಲೆಗಳು ಮುಚ್ಚದಂತೆ ಸಹಕಾರ ನೀಡುವುದರಲ್ಲಿ ಗ್ರಾಮಸ್ಥರ ಸಹಕಾರ ಅಮೂಲ್ಯವಾಗಿರುತ್ತದೆ. ಅದು ಆ ಊರಿಗೆ ಶೋಭೆ ಕೂಡ.

-ಕರೆ ಮಾಡಿ:೯೪೪೮೪೧೬೫೫೦

ಸರಕಾರಿ ಶಾಲೆಗಳ ದುಸ್ಥಿತಿ:

ಸರಕಾರಿ ಶಾಲೆಗಳ ದುಸ್ಥಿತಿ:ಕಾನ್ವೆಂಟ್‌ಗಳ ಹಾವಳಿ, ಗ್ರಾಮಸ್ಥರ ಇಂಗ್ಲೀಷ್ ವ್ಯಾಮೋಹ ಮತ್ತು ಅವರು ಸರಕಾರಿ ಶಾಲೆಗಳ ಬಗ್ಗೆ ತಾಳಿರುವ ಅಸಹಕಾರದಿಂದ ತಾಲೂಕಿನ ಮಾವಿನಹಳ್ಳಿಯಲ್ಲಿ ಅಭಿವೃದ್ಧಿಗೊಂಡಿದ್ದ ಸುಂದರ ಹಳೆಯ ಶಾಲೆಯೊಂದು ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ.
ಸರಕಾರದ ಧೋರಣೆ ಮತ್ತು ಶಿಕ್ಷಣ ವ್ಯಾಪಾರಿಗಳ ಲಾಭಿಯಿಂದ ಆಕರ್ಷಣೆ ಕಳೆದುಕೊಳ್ಳುತ್ತಿರುವ ಸರಕಾರಿ ಶಾಲೆಗಳು ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಂಡು ಕೊನೆಯ ದಿನಗಳನ್ನು ಎಣಿಸುತ್ತಿವೆ. ಉದಾಹರಣಗೆ ಕಳೆದ ವರ್ಷ ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಎಂಟು ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಅದು ಈ ವರ್ಷವೂ ಮುಂದುವರೆದಿದ್ದು ಈ ಬಾರಿ ಶಿಕ್ಷಣ ಇಲಾಖೆ ಒಂಬತ್ತು ಶಾಲೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲಿದೆ. ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಬೇಡಿ ನಮ್ಮ ಸರಕಾರಿ ಶಾಲೆಗೆ ಕಳುಹಿಸಿ ಎಂದು ನಾನಾ ರೀತಿಯಲ್ಲಿ ಆಂದೋಲನ ನಡೆಸಿ ಜಾಗೃತಿ ಉಂಟು ಮಾಡುತ್ತಿರುವ ಶಿಕ್ಷಣ ಇಲಾಖೆ ಈಗಾಗಲೇ ಕಾರೇಕುರ್ಚಿ, ಅಯ್ಯನಪಾಳ್ಯ, ಕೆ.ಎಂ.ಗೊಲ್ಲಹಟ್ಟಿ, ಮತ್ತು ಹುಚ್ಚಗೊಂಡನಹಳ್ಳಿಯ ನಾಲ್ಕು ಶಾಲೆಗಳನ್ನು ಮುಚ್ಚುನ ಮೂಲಕ ಖಾಸಗೀ ಸವಾಲಿನಲ್ಲಿ ಹಿನ್ನಡೆ ಸಾಧಿಸಿದೆ.
ತಾಲೂಕಿನಲ್ಲಿ ೧೦೨ ಹಿರಿಯ ಪ್ರಾಥಮಿಕ ಪಾಠ ಶಾಲೆಗಳು ಹಾಗೂ ೧೮೬ ಕಿರಿಯ ಪ್ರಾಥಮಿಕ ಪಾಠ ಶಾಲೆಗಳಿವೆ. ಈ ಪೈಕಿ ವಿಠಲಾಪುರ, ಮೂಗುತಿಹಳ್ಳಿಹೊಸೂರು, ಕೋಡಿಕೊಪ್ಪಲು, ಹರಚನಹಳ್ಳಿ, ಬಿಳಿಗೆರೆಪಾಳ್ಯ, ಮತ್ತು ಮಾವಿನಹಳ್ಳಿ ಶಾಲೆಗಳು ಮಕ್ಕಳ ಕೊರತೆ ಕಾರಣದಿಂದ ಮುಚ್ಚಲು ದಿನಗಳನ್ನು ಎಣಿಸುತ್ತಿವೆ. ಕನಿಷ್ಟ ಹತ್ತು ಮಕ್ಕಳಿರುವ ಶಾಲೆಗಳನ್ನು ಮುಚ್ಚಬಾರದು ಎಂದು ಸರಕಾರ ನಿಯಮ ರೂಪಿಸಿದೆ ಆದರೆ ಖಾಸಗೀ ಕಾನ್ವೆಂಟ್‌ಗಳ ಹಾವಳಿಯಿಂದ ಕೆಲವು ಗ್ರಾಮಗಳಲ್ಲಿ ಸರಕಾರಿ ಶಾಲೆಗೆ ಮೂರು-ನಾಲ್ಕು ಮಕ್ಕಳು ಸಿಗುತ್ತಿಲ್ಲ ಎಂದು ಇಲಾಖೆಯ ಅಳಲು. ಮಕ್ಕಳನ್ನು ದುಡಿಯಲು ಕಳುಹಿಸದೇ ಶಾಲೆಗೆ ಕಳುಹಿಸಿ, ಮರಳಿ ಶಾಲೆಗೆ ಬಾ ಈ ರೀತಿ ನಾನಾ ಘೋಷಣೆ ಕೂಗುತ್ತಾ ಶಿಕ್ಷಣ ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿಕೊಂಡು ಶೈಕ್ಷಣಿಕ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿವೆ.
ಖಾಸಗೀ ಕಾನ್ವೆಂಟ್‌ಗಳು ಪೈಪೋಟಿ ನಡೆಸುತ್ತಾ ಸರಕಾರಿ ಶಾಲೆಗಳಿಗೆ ಸವಾಲೊಡ್ಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಹಾಕಿ ತಮ್ಮ ತಮ್ಮ ವಾಹನ ಸೌಲಭ್ಯಗಳಿಂದ ಎರಡು ಮೂರು ಮಕ್ಕಳನ್ನು ಬಿಡದೇ ಬಾಚಿಕೊಳ್ಳುತ್ತಿವೆ. 
ದೇಶದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸರಕಾರ ಸರ್ವ ಶಿಕ್ಷ ಅಭಿಯಾನದಲ್ಲಿ ಸಾವಿರಾರು ಕೋಟಿ ರೂಗಳನ್ನು ವ್ಯಹಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹಣವೂ ನೀರಿನಂತೆ ಖರ್ಚಾಗುತ್ತಿದೆ ಆದರೆ ಖಾಸಗಿ ವಲಯಕ್ಕೆ ಕಡಿವಾಣ ಹಾಕದೇ ನಿರ್ಲಕ್ಷ್ಯ ತೋರಿದ ಸರಕಾರದಿಂದಲೇ ಸರಕಾರದ ಶಾಲೆಗಳು ಇಂದು ಇಂತಹ ದುಸ್ಥಿಗೆ ಬರಲು ಕಾರಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುದೊಂದು ದಿನ ಎಲ್ಲಾ ಭಾಗದಲ್ಲೂ ಸರಕಾರಿ ಶಾಲೆಗಳು ಮುಚ್ಚಿ ಎಲ್ಲವನ್ನೂ ಖಾಸಗೀಯವರಿಗೆ ಬಿಟ್ಟು ಕೊಡಬೇಕಾಗುತ್ತದೆ.

ಮಾವಿನಹಳ್ಳಿ ಶಾಲೆಯ ದುಸ್ಥತಿ:ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಾವಿನಹಳ್ಳಿ ಕಿರಿಯ ಪ್ರಾಥಮಿಕ ಪಾಠಶಾಲೆಯಿಂದ ಕಲಿತು ಹೋದ ಅನೇಕರು ಇಂದು ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಶಿಕ್ಷಕರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಗೊಂಡಿದ್ದ ಈ ಶಾಲೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದುಕೊಂಡಿತ್ತು ಆದರೆ ಇಂದು ಈ ಶಾಲೆಯನ್ನೂ ಮುಚ್ಚಲಾಗುತ್ತಿದೆ.
ವಿಪರ್ಯಾಸ ಎಂದರೆ ಇದೇ ಶಾಲೆಯಲ್ಲಿ ಓದಿದ್ದ ಶಿಕ್ಷಕಿಯೊಬ್ಬರು ಕಳೆದ ನಾಲ್ಕು ವರ್ಷದಿಂದ ಇಲ್ಲೇ ಸೇವೆ ಸಲ್ಲಿಸುತ್ತಿದ್ದು ಇಂದು ತಾವು ಓದಿದ ಶಾಲೆಯನ್ನೇ ಮುಚ್ಚುವಂತ ದುಸ್ಥಿತಿ ಎದುರಿಸುತ್ತಿದ್ದಾರೆ. ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂದು ಈ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳಿವೆ. ಅಚ್ಚರಿ ಎಂದರೆ ಅವರಲ್ಲಿ ಅದೇ ಶಾಲೆಯ ಶಿಕ್ಷಕರ ಮಗ ಒಬ್ಬ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ವರ್ಷ ಓದುತ್ತಿದ್ದ ಎಂಟು ಮಕ್ಕಳಲ್ಲಿ ಇದೇ ಶಿಕ್ಷಕಿಯ ಮತ್ತೊಬ್ಬ ಮಗಳು ಓದುತ್ತಿದ್ದಳು. ಊರಿಗೆ ನಗರದ ಕಾನ್ವೆಂಟ್ ಒಂದರ ಬಸ್ ಬಂದು ಹೋಗುವ  ಕಾರಣ ಮತ್ತು ತಮ್ಮ ಪೋಷಕರ ಒತ್ತಾಯದಿಂದ ಇಲ್ಲಿನ ಎಂಟು ಹತ್ತು ಮಕ್ಕಳು ಈ ಶಾಲೆ ತೊರೆದು ಕಾನ್ವೆಂಟ್ ಕಡೆ ಮುಖ ಮಾಡಿದ್ದಾರೆ.
ಹತ್ತಿರವೇ ಮತ್ತೊಂದು ಶಾಲೆ:ಈ ಗ್ರಾಮದ ಹತ್ತಿರವೇ ಇರುವ ಗೊಲ್ಲರಹಟ್ಟಿಯಲ್ಲಿ ಒಂದು ಶಾಲೆ ತೆರೆದ ಕಾರಣ ಅಲ್ಲಿಂದ ಬರುತ್ತಿದ್ದ ಮಕ್ಕಳು ಇಲ್ಲಿಗೆ ಬರದೇ ಇಂದು ಈ ಶಾಲೆ ಅಂತ್ಯ ಕಂಡು ಇತಿಹಾಸ ಸೇರುತ್ತಿದೆ. ಸರಕಾರದ ಅವೈಜ್ಞಾನಿಕ ನೀತಿಗಳು ಇಂತಹ ದುರಾವಸ್ಥೆಗೆ ನೇರ ಉದಾಹರಣೆಗಳು. ಅಲ್ಲಲ್ಲಿ ಹೊಸ ಶಾಲೆಗಳನ್ನು ತೆರೆದು ಹಳೆಯ ಶಾಲೆಗಳನ್ನು ಮುಚ್ಚುವ ಸಂಪ್ರದಾಯವನ್ನು ಪ್ರಜ್ಞಾವಂತ ನಾಗರೀಕರು ಹುಚ್ಚುತನ ಎಂದು ಹೇಳುತ್ತಿದ್ದಾರೆ. ಗ್ರಾಮಪಂಚಾಯಿತಿ ವ್ಯಾಪ್ತಿಗೆ ಕೇಂದ್ರಿಯ ವಿದ್ಯಾಲಯ ಮಾದರಿಯಲ್ಲಿ ಸಕಲ ಸೌಲಭ್ಯವಿರುವ ವ್ಯವಸ್ಥಿತ ಒಂದೋ ಎರಡೋ ಶಾಲೆಗಳನ್ನು ತೆರದರೆ ಇಂತಹ ದುರಾವಸ್ಥೆಗಳು ನಿಯಂತ್ರಣಗೊಳ್ಳಬಹುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.