Wednesday, September 14, 2011

ಮಕ್ಕಳ ಊಟಕ್ಕೆ ಅಸ್ಪೃಶ್ಯತೆಯ ಸೋಗು


ಮಕ್ಕಳ ಊಟಕ್ಕೆ ಅಸ್ಪೃಶ್ಯತೆಯ ಸೋಗು
ಶಾಸ್ತ್ರ, ಜ್ಯೋತಿಷ್ಯದಲ್ಲಿ ಹೆಸರು ಮಾಡಿದ್ದ, ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಮಾಜಿ ಸಚಿವರುಗಳನ್ನು ತನ್ನತ್ತ ಸೆಳೆದು ರಾಜ್ಯದಲ್ಲೇ ಖ್ಯಾತಿಗಳಿಸಿದ್ದ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಬುರುಡೇಘಟ್ಟದಲ್ಲಿ ಮತ್ತೊಂದು ರೀತಿಯಲ್ಲಿ ಹೆಸರು ಮಾಡಲು ಹೊರಟಿದೆ.
ಪರಿಶಿಷ್ಟ ಜಾತಿ ಮಹಿಳೆ ಅಡಿಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಇಲ್ಲಿನ ಶಾಲೆಯಲ್ಲಿ ಬಿಸಿ ಊಟ ಮಾಡಬಾರದು ಎಂದು ಪೋಷಕರು ತಮ್ಮ ಮಕ್ಕಳಿಗೆ ತಾಕೀತು ಮಾಡಿರುವ ಘಟನೆಯ ಮೂಲಕ ಸುದ್ದಿಗೆ ಗ್ರಾಸವಾಗಿರುವ ಜೊತೆಗೆ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ತಿಪಟೂರಿನ ಬುರುಡೇಘಟ್ಟ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು ೬೬ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಅವರಲ್ಲಿ ಇಂದು ಕೇವಲ ೨೫ ಮಕ್ಕಳು ಮಾತ್ರ ಮಧ್ಯಾಹ್ನದ ಬಿಸಿ ಊಟ ಮಾಡುತ್ತಾರೆ. ಉಳಿದ ೪೧ ಮಕ್ಕಳು ಮೇಲ್ಜಾತಿಯ ಕುಟುಂಬಕ್ಕೆ ಸೇರಿದ್ದು ಆ ಮಕ್ಕಳು ಶಾಲೆಯಲ್ಲಿ ಊಟ ಮಾಡಬಾರದು ಎಂದು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಿದ್ದಾರಲ್ಲದೇ ತಮ್ಮ ತಮ್ಮ ಮನೆಯಿಂದಲೇ ಊಟ ಹಾಗೂ ತಿಂಡಿಯನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಇಲ್ಲಿ ದಲಿತ ಮಹಿಳೆ ಅಡಿಗೆ ಮಾಡುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಮಕ್ಕಳು ಇಲ್ಲಿ ಊಟ ಮಾಡಲು ಪೋಷಕರು ನಿರಾಕರಿಸಿದ್ದಾರೆ.
ಈ ವಿಷಯ ಬಿಇಒ ಮನಮೋಹನ್ ಅವರ ಗಮನಕ್ಕೆ ಬಂದಿದ್ದು ಅವರ ಸೂಚನೆ ಮೇರೆಗೆ ಶಾಲೆಯಲ್ಲಿ ನಡೆಯುತ್ತಿರುವ ಈ ತಾರತಮ್ಯ ಮತ್ತು ಅಸಮಾನತೆಯ ಬಗ್ಗೆ ಶಿಕ್ಷಕರು ಪೋಷಕರ ಮತ್ತು ಮಕ್ಳಳ ಮನವೊಲಿಸುವ ಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೋಷಕರ ಕರೆಸಿ ಇದು ಶಾಲೆ ಎಲ್ಲರೂ ಇಲ್ಲಿ ಕಲಿಯುತ್ತಾರೆ, ಇಲ್ಲಿ ಎಲ್ಲರೂ ಸಮಾನರೇ ಮೇಲು ಕೀಳು ಎಂಬ ಇಬ್ಬಗೆ ನೀತಿಗೆ ಇಲ್ಲಿ ಅವಕಾಶ ಮಾಡಿಕೊಡುವಂತಿಲ್ಲ ಎಂದು ತಿಳಿಹೇಳಿದಾಗ ಅದಕ್ಕೆ ಆಕ್ರೋಶಗೊಂಡ ಪೋಕಷರು ತಮ್ಮ ಮಕ್ಕಳ ಟಿಸಿ ಕೊಟ್ಟು ಬಿಡಿ, ಇಲ್ಲ ತೆಪ್ಪಗಿರಿ ಎಂದು ತಾಕೀತು ಮಾಡಿದ್ದಾರೆ. ಇದು ಇಲ್ಲಿನ ಶಿಕ್ಷಕರಿಗೆ ಧರ್ಮ ಸಂಕಟವಾಗಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯವರು ಮಾಡುವ ಅಡಿಗೆಯನ್ನು ನಮ್ಮ ಮಕ್ಕಳು ಊಟ ಮಾಡಬಾರದು ಎಂಬ ಮನೋಭಾವ ಪೋಷಕರದ್ದು, ಅವರ ಅಪ್ಪಣೆಯಂತೆ ನಡೆಯುವ ಮನಸ್ಥಿತಿ ಮಕ್ಕಳದ್ದು.
ಶಾಲೆಯಲ್ಲಿ ಎಲ್ಲಾ ವರ್ಗದ ಮಕ್ಕಳು ಯಾವುದೇ ಬೇಧ ಭಾವವಿಲ್ಲದೇ ಓದುತ್ತಾ, ಆಡುತ್ತಾ, ನಲಿಯುತ್ತಿವೆ. ಆದರೆ ಮಧ್ಯಾಹ್ನ ಬಿಸಿ ಊಟದಲ್ಲಿ ಮಾತ್ರ ಬೇಧ ಎಣಿಸಿದ್ದು ವಿಧಿಯಿಲ್ಲದೇ ಬೇರೆಯಾಗಿ ಊಟ ಮಾಡುತ್ತಿವೆ. ಮಕ್ಕಳ ಮನಸ್ಸಿನಲ್ಲಿ ಇದ್ಯಾವುದೂ ಅರ್ಥವಾಗುತ್ತಿಲ್ಲ, ಕೇಳಿದರೆ ಅವರಿಗೆ ಏನೂ ಗೊತ್ತಾಗುವುದೂ ಇಲ್ಲ. ಎನೂ ಅರಿಯದ ಮುಗ್ಧ ಮನಸ್ಸಿನ ಮೇರೆ ಮಡಿವಂತಿಕೆ ಸಮಾಜ ಇಂತಹ ಆಚರಣೆಗಳನ್ನು ಈಗಿನಿಂದಲೇ ತುಂಬುತ್ತಿದ್ದು ಮುಂದೆ ಅದರ ದುಷ್ಪರಿಣಾಮ ಮಕ್ಕಳ ಭವಿಷ್ಯದ ಮೇಲಾಗುತ್ತದೆ.

ದಲಿತ ಮಹಿಳೆ ಅಡಿಗೆ ಮಾಡದ್ದಕ್ಕೆ ಊಟ ನಿರಾಕರಣೆ:
ಇಲ್ಲಿ ಮೊದಲಿನಿಂದಲೂ ಮೂರು ಜನ ಅಡಿಗೆಯವರಿದ್ದಾರೆ. ಅವರಲ್ಲಿ ಶಿವಗಂಗಮ್ಮ ಹಾಗೂ ಸುನಂದಮ್ಮ ಇಬ್ಬರು ಸಾಮಾನ್ಯ ವರ್ಗದವರು ಹಾಗೂ ಲಕ್ಷ್ಮಿದೇವಿ ಒಬ್ಬ ಅಡಿಗೆಯವರು ಪರಿಶಿಷ್ಟಜಾತಿಯವರು. ಸಾಮಾನ್ಯ ವರ್ಗದ ಇಬ್ಬರೂ ಅಡಿಗೆ ಮಾಡುತಿದ್ದರಿಂದ ಶಾಲೆಯಲ್ಲಿ ಯಾವುದೇ ಸಮಸ್ಯೆ ತಲೆ ದೂರಿರಲಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ಶಾಲಾ ದಾಖಲಾತಿಗಳ ಅನುಸರಿಸಿ ಸರಕಾರದ ನಿಯಮದಂತೆ ಸಾಮಾನ್ಯ ವರ್ಗದ ಸುನಂದಮ್ಮಳನ್ನು ವಜಾ ಗೊಳಿಸಲಾಗಿದೆ.
ಇಬ್ಬರು ಅಡಿಗೆಯವರಲ್ಲಿ ಶಿವಗಂಗಮ್ಮ ಮುಖ್ಯ ಅಡಿಗೆಯವರಾದ್ದರಿಂದ ಕಳೆದ ಆಗಸ್ಟ್ ತಿಂಗಳಿಂದ ಪರಿಶಿಷ್ಟ ಜಾತಿಯ ಲಕ್ಷ್ಮಿದೇವಿ ಅಡಿಗೆ ಮಾಡಲು ಆರಂಭಿಸಿದರು.  ಅಂದಿನಿಂದ ಮೇಲ್ವರ್ಗದ ಸುಮಾರು ೪೧ ಮಕ್ಕಳು ಶಾಲೆಯಲ್ಲಿ ಬಿಸಿ ಊಟ ಮಾಡುತ್ತಿಲ್ಲ.

ಪ್ರತಿಕ್ರಿಯೆಗೆ: ೯೪೪೮೪೧೬೫೫೦