Tuesday, June 7, 2011

ವೃಕ್ಷಪ್ರೇಮಿ ಗ್ಯಾರಘಟ್ಟದ ಬೀರಜ್ಜ ದೇಶಕ್ಕೆ ಮಾದರಿ




ವೃಕ್ಷಪ್ರೇಮಿ ಗ್ಯಾರಘಟ್ಟದ ಬೀರಜ್ಜ ದೇಶಕ್ಕೆ ಮಾದರಿ
ಉತ್ಸಾಹ ಕುಂದದ ೭೫ರ ಇಳಿವಯಸ್ಸಿನ ಗ್ಯಾರಘಟ್ಟದ ಸಾಲು ಮರದ ಬೀರಜ್ಜ ಮತ್ತೊಮ್ಮೆ ಭೂಮಿಗೆ ಬೀಜ ಬಿತ್ತುವ ಮೂಲಕ ತನ್ನ ವೃಕ್ಷಪ್ರೇಮ ಸಾಬೀತು ಪಡಿಸಿದ್ದಾರೆ.
ವಿಶ್ವ ಪರಿಸರ ದಿನದಂದು ಬೀರಜ್ಜ ಗ್ಯಾರಘಟ್ಟದಿಂದ ಅರಸೀಕೆರೆ ಮಾರ್ಗದ ರಸ್ತೆಯುದ್ದಕ್ಕೂ ಮರವೆಲ್ಲಾ ಹೂವು ಬಿಡುವ ಟೆಕೋಮಾ, ಗೋಲ್ಡ್‌ಮಾರ್, ಪೆಲ್ಟಾ ಫಾರಂ ಸೇರಿದಂತೆ ನಾನಾ ಜಾತಿಯ ಮರಗಳ ಬೀಜಗಳನ್ನು ನೆಟ್ಟಿದ್ದಾರೆ. ಗ್ಯಾರಘಟ್ಟದ ಇದೇ ರಸ್ತೆಯಲ್ಲಿ ಕಳೆದ ೪೦-೫೦ ವರ್ಷಗಳ ಹಿಂದೆ ಸುಮಾರು ೨೦೦ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದ್ದ ಬೀರಜ್ಜನ ಶ್ರಮದಿಂದ ಸುಮಾರು ೩ ಕಿಮಿ ಉದ್ದಕ್ಕೂ ಎರಡು ಕಡೆಗಳಲ್ಲಿ ಇಂದಿಗೂ ೧೦೦ಕ್ಕೂ ಹೆಚ್ಚು ಮರಗಳು ಹುಲುಸಾಗಿ ಬೆಳೆದು ಬೀರಜ್ಜನ ವೃಕ್ಷಪ್ರೇಮದ ಕಥೆಯನ್ನು ಸಾರುತ್ತಿವೆ.

೧೯೪೫-೪೬ರ ಅವಧಿಯಲ್ಲಿ ೬ನೇ ತರಗತಿಯಲ್ಲಿ ಓದುತಿದ್ದ ಬೀರಜ್ಜ ಓದನ್ನು ಮುಂದುವರೆಸಲಾಗದೇ ವ್ಯವಸಾಯದ ಕಡೆ ನಿಂತಿದ್ದರಂತೆ. ಮುಂದೆ ಕೆಲವೇ ವರ್ಷಗಳಲ್ಲಿ ಮದುವೆಯೂ ಮಾಡಲಾಗಿತ್ತಂತೆ. ಆದರೆ ತಾವು ಓದುವಾಗ ಶಾಲೆಯಲ್ಲಿದ್ದ ಕಾಕ ಮಾಸ್ತರರ ಮಾತುಗಳು ಬೀರಜ್ಜನ ಮನದಲ್ಲಿ ಆಗಾಗ ಪ್ರತಿಧ್ವನಿಸುತ್ತಿದ್ದವಂತೆ. ಮನುಷ್ಯನ ಆಯಸ್ಸು ಕೇವಲ ನೂರು ವರ್ಷ, ಅದೇ ಆಲದ ಮರದ ಆಯಸ್ಸು ಮುನ್ನೂರು ವರ್ಷ. ಮನುಷ್ಯ ಬದುಕಿದ್ದರೆ ಯಾರಿಗೂ ಒಳಿತು ಮಾಡಲಾರ ಆದರೆ ಮರಗಳು ತಮ್ಮ ಜೀವನ ಪೂರ್ತಿ ಮೌನವಾಗಿದ್ದುಕೊಂಡೇ ಜನ, ಜಾನೂವಾರು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡುವುದಲ್ಲದೇ ಮಳೆಗೆ ಕಾರಣವಾಗುತ್ತವೆ. ಶಿಷ್ಯರು ಒಂದೊಂದು ಮರಗಳನ್ನು ನೆಟ್ಟು ಗುರು ಕಾಣಿಕೆ ನೀಡಿರಿ ಎಂದಿದ್ದರಂತೆ.

ಆಗಾಗಿ ಬೀರಜ್ಜ ತನ್ನ ಕಾಕಾ ಮಾಸ್ತರರ ಗಂಟು ಬಿದ್ದು ಅವರ ಹಳೇಬೀಡು ಊರಿನಿಂದ ಒಂದು ಆಲದ ಮರದ ಕೊಂಬೆ ತರಿಸಿಕೊಂಡು ಗ್ರಾಮದ ಮುಂದೆ ನೆಟ್ಟರಂತೆ. ಅದು ೪-೫ ವರ್ಷದಲ್ಲಿ ದೊಡ್ಡದಾಗಿ ಬೆಳೆದಂತೆಲ್ಲಾ ಅದರ ಕೊಂಬೆಗಳನ್ನು  ಕಡಿದು ರಸ್ತೆ ಉದ್ದಕ್ಕೂ ನೆಡುತ್ತಾ ಬಂದರಂತೆ. ಹೀಗೆ ನೂರಾರು ಕೊಂಬೆಗಳನ್ನು ನೆಟ್ಟು ಪೋಷಿಸಿ, ರಕ್ಷಿಸಿದ್ದಾರೆ. ಬೇಸಿಗೆ ಕಾಲದಲ್ಲಿ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಅಡ್ಡೆಯಲ್ಲಿ ನೀರನ್ನು ಹೊತ್ತು ಹಾಕಿದ್ದಾರೆ. ಅವರ ನಿಸ್ವಾರ್ಥ ಶ್ರಮದ ಫಲವಾಗಿ ಇಂದು ನೂರಕ್ಕೂ ಹೆಚ್ಚು ಮರಗಳು ಸಾಲು ಸಾಲಾಗಿ ನಿಂತು ನಿತ್ಯಾ ಬೀರಜ್ಜನಿಗೆ ನಮನ ಸಲ್ಲಿಸುತ್ತವೆ.

ತನ್ನ ಹೊಲಕ್ಕೆ ಹೋಗುವಾಗ ಬೀರಜ್ಜ ತಾನು ನೆಟ್ಟಿರುವ ಮರಗಳ ಮಧ್ಯೆ ಹಾದು ಹೋಗುತ್ತಾರಂತೆ. ಆಗ ಮರಗಳು ಗಾಳಿಗೆ ಸುಯ್ಯೂ ಎನ್ನುವಾಗ ಬೀರಜ್ಜನಿಗೆ ಏನೋ ಆನಂದ ಮತ್ತು ತೃಪ್ತಿ ಉಂಟಾಗುತ್ತದೆಯಂತೆ. ಬಿಸಿಲಲ್ಲಿ, ಮಳೆಯಲ್ಲಿ ಜನ ಜಾನೂವಾರುಗಳು ಮರದ ಆಶ್ರಯ ಪಡೆದು ನಿಂತಿದ್ದಾಗ ಬೀರಜ್ಜ ಸಂತೋಷ ಪಡುತ್ತಾರಂತೆ. ತಾನು ನೆಟ್ಟ ಮರಗಳು ಇಂದು ಬೃಹತ್ತಾಗಿ ಬೆಳೆದಿದ್ದು ತಾನು ಇಲ್ಲದಿದ್ದರೂ ತನ್ನ ಹೆಸರನ್ನೂ ಮುಂದೆ ನೂರಾರು ವರ್ಷಗಳ ಕಾಲ ಈ ಮರಗಳು ಜಗತ್ತಿಗೆ ಸಾರುತ್ತಲೇ ಇರುತ್ತವೆ. ಮನುಷ್ಯನಿಗೆ ಮಾಡಿದ ಉಪಕಾರ ಕ್ಷಣಾರ್ಧದಲ್ಲಿ ಮರೆಯುತ್ತಾನೆ ಆದರೆ ಮರಗಳಿಗೆ ಮಾಡಿದ ಉಪಕಾರ ನೂರಾರು ವರ್ಷ ನೆನಪಿನಲ್ಲಿರುತ್ತದೆ. ಅಷ್ಟೇ ಸಾಕು, ನನ್ನ ಬದುಕು ಸಾರ್ಥಕ ಎನ್ನುವ ಬೀರಜ್ಜನಿಗೆ ಮನದಲ್ಲಿ ಏನೋ ಅಸಮಾಧಾನವಿದೆ. ಇಷ್ಟು ಚೆನ್ನಾಗಿ ಬೆಳೆಯುತ್ತವೆ ಎಂದಿದ್ದರೆ ಮರಗಳನ್ನು ನೆಡುವುದು ನಿಲ್ಲಿಸದೇ ಮುಂದುವರೆದಿದ್ದರೆ ಇಂದಿಗೆ ಲಕ್ಷಾಂತರ ಮರಗಳನ್ನು ನೆಡಬಹುದಿತ್ತು ಎಂದು ಬೇಸರ ಪಟ್ಟುಕೊಳ್ಳುವ ಬೀರಜ್ಜ ನಾನು ಸಾಯುವವರೆಗೂ ಮತ್ತಷ್ಟು ಸಸಿಗಳನ್ನು ನೆಡುತ್ತೇನೆ ಎಂದು ಅದೇ ಉತ್ಸಾಹದಿಂದ ಹೇಳುತ್ತಾರೆ.

ಎಲ್ಲೆಲ್ಲಿ ಖಾಲಿ ಜಾಗ ಇದಯೋ ಅಲ್ಲಿ, ಮರಗಳಿಲ್ಲದ ರಸ್ತೆಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ಸಸಿಗಳನ್ನು ನೆಡುವ ಆಸೆಯಿದೆ ಆದರೆ ಇವತ್ತೀಗೂ ಯಾರೂ ಆ ತರಹದ ಸಹಾಯವಾಗಲಿ ಅಥವಾ ಪ್ರೋತ್ಸಾಹವಾಗಲಿ ಮಾಡಲಿಲ್ಲ. ಆರ್ಥಿಕ ಸಂಕಟದಲ್ಲಿರುವ ತನಗೆ ತನ್ನ ಕನಸನ್ನು ನನಸು ಮಾಡಕೊಳ್ಳುವ ಸಾಮಾರ್ಥ್ಯವನ್ನು ಕುಗ್ಗಿಸಿದೆ ಎನ್ನುತ್ತಾರೆ. ಸರಕಾರವೂ ಸಹ ವಿಶ್ವ ಪರಸರ ದಿನಾಚರಣೆ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ, ಏನು ಸಾರ್ಥಕತೆ ಎನ್ನುವ ಬೀರಜ್ಜ ಈಗಲೂ ಹೊಲದ ಎಲ್ಲಾ ಕೆಲಸಗಳನ್ನು ಹುಡುಗರಂತೆ ಮಾಡುತ್ತಾರೆ. ಆರೋಗ್ಯವಾಗಿರುವ ಬೀರಜ್ಜ ತನ್ನ ಮನದ ಆಸೆಯನ್ನು ತಾನೇ ಈಡೇರಿಸಿಕೊಳ್ಳಲು ನಗರದಿಂದ ಬೀಜಗಳನ್ನು ತಂದು ಮಳೆ ಬಿದ್ದಾಗ ರಸ್ತೆ ಪಕ್ಕಗಳಲ್ಲಿ ಗುಂಡಿ ತೋಡಿ ನೆಡುತ್ತಿದ್ದಾರೆ. ಪರಿಸರ ಪ್ರೇಮಿಯಾದ ಬೀರಜ್ಜ ತನ್ನ ಸಾಧನೆಯ ಮೂಲಕ ಯುವ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ನೀಡಿದ್ದಾರೆ. ವಿಶ್ವ ಪರಿಸರ ಮಾಸಾಚರಣೆ ಸಂದರ್ಭದಲ್ಲಿ ಪತ್ರಿಕೆ ಬೀರಜ್ಜನ ಶ್ರಮ ಮತ್ತು ಸಾಧನೆಯನ್ನು ನೆನಪಿಸುತ್ತದೆ.


ಶೈಕ್ಷಣಿಕ ವ್ಯವಸ್ಥೆಗೆ ಒಂದು ಸವಾಲು:




ಶೈಕ್ಷಣಿಕ ವ್ಯವಸ್ಥೆಗೆ ಒಂದು ಸವಾಲು:
ಮನೆಯಲ್ಲೇ ಶಾಲಾ ಶಿಕ್ಷಣದ ಪ್ರಯೋಗ. 
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ಮತ್ತು ಅತೃಪ್ತಿ ವ್ಯಕ್ತಪಡಿಸಿರುವ ವಿದ್ಯಾವಂತ ದಂಪತಿಗಳು ತಮ್ಮ ಮಗುವಿಗೆ ಮನೆಯಲ್ಲೇ ಪಾಠ ಹೇಳಿಕೊಡುವ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ತಂದೆ ಶಶಿಕುಮಾರ್ ವಿಪ್ರೋ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಸ್ವ ಇಚ್ಚೆಯಿಂದ ನಿವೃತ್ತಿಹೊಂದಿದ್ದು ಈಗ ತಿಪಟೂರು ತಾಲೂಕಿನಲ್ಲಿ ನಡೆಯುತ್ತಿರುವ ಭೈಫ್ ರೆಡ್ಡಿಯವರ ಕಲ್ಪಗಂಗಾ ಎಂಬ ಸಾವಯವ ಡೈರಿ ಯೋಜನೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶಿಲ್ಪಾ ಜಿ. ಎಂಟೆಕ್ ಪಧವಿಧರೆಯಾಗಿದ್ದು ಮನೆಯ ಕೆಲಸ ಮತ್ತು ಮಗನ ಆರೈಕೆಯಲ್ಲಿ ತೊಡಗಿದ್ದಾರೆ.
ಈ ಇಬ್ಬರು ದಂಪತಿಗಳ ಪ್ರಯೋಗಕ್ಕೆ ಸಿದ್ಧನಾಗಿರುವ ಸಿದ್ಧನಾಗಿರುವ ಮಗ ಶ್ರೇಯಸ್ ಎಸ್. (೮) ಶಾಲೆಗೆ ಹೋಗದೇ ತಂದೆ ತಾಯಿಗಳ ಜೊತೆಯಲ್ಲೇ ಜೀವನದ ಶಿಕ್ಷಣ ಪಡೆಯಲು ಆರಂಭಿಸಿದ್ದಾನೆ. ಮೂಲತಃ ತೆಲುಗು ಮಾತೃ ಭಾಷೆಯಾದರೂ ಈಗಾಗಲೇ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡಲು, ಓದಲು, ಬರೆಯಲು    ಶುರುವಿಟ್ಟಿದ್ದಾನೆ. ತನ್ನ ಭವಿಷ್ಯವನ್ನು ತನ್ನ ತಂದೆ ತಾಯಿಗಳೇ ಹೋಂ ಸ್ಕೂಲ್ ಎಂಬ ಪರೀಕ್ಷಗೆ ಒಡ್ಡಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿರುವ ಶ್ರೇಯಸ್ ಸ್ವತಂತ್ರವಾಗಿ ಆಡುತ್ತಾ, ನಲಿಯುತ್ತಾ, ಸಂತೋಷವಾಗಿ ಎಲ್ಲವನ್ನೂ ಕಲಿಯುತ್ತಿದ್ದಾನೆ.
ಕಂಪ್ಯೂಟರ್ ಜ್ಞಾನ ಹೊಂದಿರುವ ಶ್ರೇಯಸ್ ಈಗಾಗಲೇ ಅಂತರಜಾಲದಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ತಂದೆಗೆ ಬಿಡುವಿದ್ದಾಗ ಅವರೊಂದಿಗೆ ತನಗೆ ಬಂದ ನಾನಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ಪಡೆದು ಪಟ್ಟಿ ಮಾಡಿಕೊಳ್ಳುತ್ತಾನೆ. ಮನೆಗೆ ಬಂದವರ ಹೋದವರ ವಿವರ ಪಡೆಯುತ್ತಾನೆ. ತಂದೆ ಹೊರಗೆ ಹೋಗುವಾಗ ಅವರೊಂದಿಗೆ ಹೋಗಿ ಸಮಾಜದ ಎಲ್ಲಾ ಸಂಪರ್ಕಗಳನ್ನು, ವ್ಯವಹಾರವನ್ನೂ ತಿಳಿದುಕೊಳ್ಳುತ್ತಿದ್ದಾನೆ. ಯಾವ ಅಡ್ಡಿ ಆತಂಕವಿಲ್ಲದೇ ಮನಸ್ಸಿಗೆ ಬಂದಂತೆ ಓದುವಾಗ ಓದುತ್ತಾನೆ, ಬರೆಯುತ್ತಾನೆ, ಆಡುತ್ತಾನೆ, ಕಂಪ್ಯೂಟರ್ ಹೀಗೆ ಯಾವ ನಿರ್ಭಂಧ ಮತ್ತು ಭಯವಿಲ್ಲದೇ ಸರ್ವ ಸ್ವತಂತ್ರವಾಗಿ ಬದುಕಿನ ಪಾಠ ಕಲಿಯುತ್ತಿದ್ದಾನೆ.
ಸದಾ ಶಾಂತ ಚಿತ್ತದಿಂದ ಹಸನ್ಮುಖಿಯಾಗಿ ಎಲ್ಲವನ್ನೂ ಗಮನಿಸುವ ಶ್ರೇಯಸ್ ತಾನು ಶಾಲೆಗೆ ಹೋಗುತ್ತಿಲ್ಲ, ಇತರೆ ಗೆಳೆಯರೊಂದಿಗೆ ಬೆರೆಯುತ್ತಿಲ್ಲ, ಗುಂಪು ಗೂಡಿ ನಲಿಯುತ್ತಿಲ್ಲ, ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲಿ ಸಾಮೂಹಿಕವಾಗಿ ಇತರೆ ಮಕ್ಕಳೊಂದಿಗೆ ಸೇರಿ ತನ್ನ ಪ್ರತಿಭೆ ಗುರ್ತಿಸಿ ಕೊಳ್ಳುತ್ತಿಲ್ಲ ಎಂಬ ಯಾವುದೇ ಆತಂಕವಾಗಲಿ, ಬಯಕೆಯಾಗಲಿ ಇಟ್ಟುಕೊಂಡಿಲ್ಲ. ಶಾಲೆಗೇ ಹೋಗಿ ಕಲಿಯಬೇಕೇ ಮನೆಯಲ್ಲಿ ಯಾಕೆ ಕಲಿಯಲು ಸಾಧ್ಯವಿಲ್ಲ ಎಂದು ಮುಗ್ಧತನದಿಂದ ಪ್ರಶ್ನಿಸುವ ಹಿಂದೆ ಅವನ ಶಾಲೆಯ ಅನುಭವಗಳು ಸ್ಫೂಟವಾಗುತ್ತವೆ.
ಶಾಲೆಯಲ್ಲಿ ಏನಿದೆ? ಅಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಎಲ್ಲರಿಗೂ ಒಂದೇ ಪಾಠ. ನಮ್ಮ ಇಷ್ಟ ಕೇಳುವವರಿಲ್ಲ. ಅವರ ಶೈಕ್ಷಣಿಕ ಕಲ್ಪನೆಯನ್ನು ನಮ್ಮ ಮೇಲೆ ತುರುಕುತ್ತಾರೆ. ಸಾಮೂಹಿಕವಾಗಿ ಹೇಳಿ ಕೊಡುವುದರಿಂದ ನಾವು ಎಷ್ಟರ ಮಟ್ಟಿಗೆ ಕಲಿತ್ತಿದ್ದೇವೆ ಎಂದು ಗಮನಿಸುವುದಿಲ್ಲ. ನಮ್ಮ ಸಾಮಾರ್ಥ್ಯವನ್ನು ಪರೀಕ್ಷೆಗೆ ಒಡ್ಡುತ್ತಾರೆ. ಮನುಷ್ಯರಂತೆ ನಡೆಸಿಕೊಳ್ಳದೇ ಬಾಯಿಗೆ ಬಂದಂತೆ ಬೈಯುವುದು ಮತ್ತು ಒಡೆಯುವುದು ಮಾಡುತ್ತಾರೆ. ಪ್ರಶ್ನಗಳಿಗೆ ಅವಕಾಶ ನೀಡದೇ ಅವರ ಮಾನಸಿಕ ಸ್ಥಿತಿಗೆ ತಕ್ಕಂತೆ ನಮ್ಮನ್ನು ಕರೆದೊಯ್ಯುತ್ತಾರೆ. ಜಾತಿ, ವರ್ಗ ಬೇಧ ಭಾವ ಮಾಡುತ್ತಾರೆ. ಜಾನುವಾರುಗಳ ದೊಡ್ಡಿಯಂತಿರುವ ಶಾಲಾ ವಾತಾವರಣದಲ್ಲಿ ನಾನು ಕಲಿಯಲು ಸಾಧ್ಯವೇ ಇಲ್ಲ ಎಂದು ಕಡಾಕಂಡಿತವಾಗಿ ಹೇಳುವ ಶ್ರೇಯಸ್ ವಯಸ್ಸಿಗೆ ಮೀರಿದ ಮಾನಸಿಕ ಬೆಳವಣಿಗೆ ಹೊಂದಿದ್ದಾನೆ.
ತಮ್ಮ ಅನುಭವ ಮತ್ತು ಕಲ್ಪನೆಗೆ ಮಗನ ಭವಿಷ್ಯವನ್ನು ಹೋಂ ಸ್ಕೂಲ್ ಎಂಬ ಪ್ರಯೋಗಕ್ಕೆ ಒಡ್ಡಿ ಆತನ ಭವಿಷ್ಯದೊಂದಿಗೆ ಆಟ ಆಡುವುದು ಸರಿಯೇ ಎಂಬ ಪ್ರಶ್ನೆಗೆ ದಂಪತಿಗಳ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿ, ಪುನಃ ಪ್ರಶ್ನಾರ್ತಕವಾಗಿಯೇ ನಿಲ್ಲಿಸುತ್ತದೆ. ವೇದಿಕ್ ಶಾಸ್ತ್ರದ ಪಂಡಿತರಾಗಿರುವ ಸುಧಾಕರ್ ಶಾಸ್ತ್ರಿಗಳ ಹೋಂ ಸ್ಕೂಲಿಂಗ್ ಯಶಸ್ಸಿನಿಂದ ಸ್ಪೂರ್ತಿಗೊಂಡು ತಾವು ತಮ್ಮ ಮಗನಿಗೆ ಮನೆಯ ಒಳಗೆ ಮತ್ತು ಹೊರಗೆ ಬದುಕಿನ ಪಾಠ ಕಲಿಸಲು ನಿರ್ಧರಿಸಿದ್ದೇವೆ ಎಂದು ಉತ್ತರಿಸುತ್ತಾರೆ.
ಥಾಮಸ್ ಆಲ್ವಾ ಎಡಿಸನ್ ಸೇರಿದಂತೆ ನಾನಾ ವಿಜ್ಞಾನಿಗಳು, ಜ್ಞಾನಿಗಳು, ಮಹಾನ್ ವ್ಯಕ್ತಿಗಳ ಜೀವನದ ಸಂಘರ್ಷವನ್ನು ಸಾಕ್ಷಿಯಾಗಿ ಕೊಡುವ ಶಶಿಕುಮಾರ್ ಇಂದಿನ ಶೈಕ್ಷಣಿಕ ವ್ಯವಸ್ಥೆಯಿಂದ ವಿದ್ಯಾವಂತರಾಗಿ ಹೊರ ಬರುವ ಶೇ.೮೦ರಷ್ಟು ವ್ಯಕ್ತಿಗಳು ಮನಷ್ಯನಾಗಿ ಉಳಿದಿರುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಅವರೆಲ್ಲಾ ಯಾಂತ್ರಿಕೃತ ಜೀವನದ ದುಡಿಯುವ ಸಾಧನಗಳಷ್ಟೆ. ನಾಲ್ಕು ಗೋಡೆಗಳ ಮಧ್ಯೆ ಕೃತಕ ಪರಿಸರದಲ್ಲಿ ಕಲಿಯುವ ಅಂಕಾಧಾರಿತ ಶಿಕ್ಷಣದಿಂದ ಬದುಕು ಪೂರ್ಣಗೊಳ್ಳುವುದಿಲ್ಲ. ಪ್ರತಿಭೆಗೆ ವಿರುದ್ಧವಾದ ಬದುಕು ಅವರದ್ದಾಗಿರುತ್ತದೆ. ಎಲ್ಲವನ್ನೂ ಕಳೆದುಕೊಂಡ ಅವರು ಮಾನಸಿಕವಾಗಿ ಅನಾರೋಗ್ಯದಿಂದಿರುತ್ತಾರೆ. ಓದುವುದು ಒಂದನ್ನು ಬಿಟ್ಟು ಬೇರೆ ಯಾವುದೇ ವಿಷಯದಲ್ಲಿ ಅರೆಜ್ಞಾನಿಗಳಾಗಿರುತ್ತಾರೆ. ಪ್ರತಿಭೆ ಮತ್ತು ಕ್ರೀಯಾಶೀಲತೆಗೆ ಮಾನ್ಯತೆ ಇಲ್ಲದ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೊಂದು ಬೆಂದು ಬಂದ ನಾನು ನನ್ನ ಮಗನನ್ನು ಈ ಕೆಟ್ಟ ಶೈಕ್ಷಣಿಕ ವ್ಯವಸ್ಥೆಗೆ ತಳ್ಳಿ ಆತನ ಬದುಕನ್ನು ನರಕವಾಗಿಸಲಾರೆ ಎಂದು ತಂದೆ ಶಶಿಕುಮಾರ್ ತನ್ನ ಮತ್ತು ತನ್ನ ಮಡದಿಯ ನಿರ್ಧಾರವೇ ಸರಿ ಎಂದು ನಾನಾ ಉದಾಹರಣೆಗಳ ಮೂಲಕ ಸ್ಪಷ್ಟ ಪಡಿಸುತ್ತಾರೆ.
ಅವನು ಯಾವುದನ್ನೂ, ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುವುದಿಲ್ಲ. ಆದರೆ ಬಾಲ್ಯದಲ್ಲಿ ಸುಪ್ತವಾಗಿರುವ ಪ್ರತಭೆಯನ್ನು ಈಗಲೇ ಬೆಳಕಿಗೆ ತಂದು ಕೊಂಡು ಪೋಷಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತೇವೆ. ನನ್ನ ಇರುವ ಒಬ್ಬನೇ ಮಗ ನಮ್ಮ ಮನೆಯ ಒಳಗೆ ಮತ್ತು ಹೊರಗೆ ಕಲಿಯುತ್ತಾನೆ. ನಿತ್ಯಾ ನಡೆಯುವ ಬದುಕಿನ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಅನುಮಾನ ಮತ್ತು ಸಮಸ್ಯೆಗಳನ್ನು ಪ್ರಶ್ನಿಸುವ ಮೂಲಕ ಪರಿಹಾರ ಕಂಡು ಕೊಳ್ಳುತ್ತಾನೆ. ಎಲ್ಲಾ ಸ್ವಾತಂತ್ರ್ಯವನ್ನೂ ಅವನಿಗೆ ನೀಡಿದ್ದು ಉತ್ಸಾಹ, ಆನಂದ ಮತ್ತು ಲವಲವಿಕೆಯಿಂದ ಸದಾ ಇರುತ್ತಾನೆ ಎನ್ನುವ ಅವರು ಅವನು ಇಷ್ಟ ಪಟ್ಟರೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕಟ್ಟಿಸುತ್ತೇವೆ, ನಂತರ ಕಾಲೇಜು ಶಿಕ್ಷಣ ಮಾಡಿಸುತ್ತೇವೆ ಎನ್ನುತ್ತಾರೆ.
ಎಲ್ಲಾ ವಿಷಯಗಳನ್ನೂ ಮೊದಲಿಗೆ ಅರ್ಥ ಮಾಡಿಸುತ್ತೇವೆ, ನಂತರ ಆತನಿಂದ ಅರ್ಥ ಮಾಡಿಕೊಂಡಿದ್ದನ್ನು ಹೇಳುವುದನ್ನು ಕಲಿಸುತ್ತೇವೆ. ಹತ್ತನೇ ವಯಸ್ಸಿನವರೆಗೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡಲು ಕಲಿಸುತ್ತೇವೆ, ನಂತರ ಬರೆಯವುದು ಕಲಿಸುತ್ತೇವೆ. ಎಂದಿಗೂ ಬಾಯಿ ಪಾಠ ಮಾಡುವ ಕೆಟ್ಟ ಸಂಪ್ರದಾಯವನ್ನು ಬೆಳೆಸುವುದಿಲ್ಲ ಎನ್ನುವ ಅವರು ಬೇರೆಯವರ ದೃಷ್ಟಿಯಲ್ಲಿ ಇದು ಸರಿಕಾಣದೇ ವೈಫಲ್ಯವಾಗಬಹುದು ಆದರೆ ನಮ್ಮ ದೃಷ್ಟಿಯಲ್ಲಿ ಇದು ಸರಿಯಾದ ಕ್ರಮ. ಯಶಸ್ಸು ಅಥವಾ ವಿಫಲತೆ ನಮ್ಮ ಉದ್ದೇಶವಲ್ಲ ಎಂದು ಬಹಳ ದೃಡತೆಯಿಂದ ಹೇಳುತ್ತಾರೆ.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬದಲಾಗಬೇಕು. ಆದರೆ ಸಧ್ಯದಲ್ಲಿ ಅದು ಸಾಧ್ಯವಿಲ್ಲ. ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದು ಹೇಳುವ ಅವರ ನಿರ್ಧಾರವನ್ನು ನಮ್ಮ ಸಮಾಜದ ಜನ ಅರಗಿಸಿಕೊಳ್ಳುವುದು ಕಷ್ಟ ಅಲ್ಲವೇ? ಇದಕ್ಕೆ ನಮ್ಮ ಶಿಕ್ಷಣ ಇಲಾಖೆ ಮತ್ತು ತಜ್ಞರು ಏನೆನ್ನುತ್ತಾರೆ.


ಕಲ್ಪನೆಯ ಮನೆ ಕಟ್ಟಿ ಕೊಳ್ಳಿ!


ಕಲ್ಪನೆಯ ಮನೆ ಕಟ್ಟಿ ಕೊಳ್ಳಿ!
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹಿರಿಯರು ಹಿಂದೆ ಹೇಳುವ ಮಾತೊಂದು ಇತ್ತು. ಆದರೆ ಇಂದು ಚೆಂದದ ಮನೆ ಕಟ್ಟುವುದು, ಒಳ್ಳೆ ಮದುವೆ ಮಾಡುವುದು ಎರಡೂ ದುಭಾರಿಯಾಗಿ ಬಿಟ್ಟಿದೆ. ನೋಟಿನ ಬೆಲೆ ಕಳೆದುಕೊಂಡ ಮೇಲಂತೂ ಇವೆರಡೂ ಬಡವರಿಗೆ ಕಬ್ಬಿಣದ ಕಡಲೆಯಂತೆಯೇ ಸರಿ. ಬಡವರು, ಆರ್ಥಿಕವಾಗಿ ಹಿಂದುಳಿದ ಜನ ಇಂದು ಮನೆ ಕಟ್ಟುವುದು ಇರಲಿ ಒಂದು ಸ್ವಂತ ಸೈಟ್ ಕೊಂಡು ಕೊಳ್ಳುವುದು ಸಾಧ್ಯವಿಲ್ಲದ ಸ್ಥಿತಿಯಿದೆ. ಆದರೆ ತಿಪಟೂರಿನ ಭೈಫ್ ರೆಡ್ಡಿ ಅವರು ಕನಸಿನ ಮನೆಯನ್ನು ಅತ್ಯಲ್ಪ ವೆಚ್ಚದಲ್ಲಿ ಹೇಗೆ ಕಟ್ಟುವುದು ಎಂದು ಸ್ವತಃ ತೋರಿಸಿಕೊಟ್ಟಿದ್ದಾರೆ.

ಒಂದು ಸ್ವಂತ ನಿವೇಶನ ಕೊಂಡುಕೊಳ್ಳಬೇಕು, ಅಲ್ಲಿ ಒಂದು ತಮ್ಮದೇ ಕಲ್ಪನೆಯ ಸುಂದರ ಮನೆ ಕಟ್ಟಬೇಕು, ಟಿವಿ, ಪ್ರಿಡ್ಜ್, ಕಾರು ಕೊಳ್ಳಬೇಕು.. ಏನೆಲ್ಲಾ ಪ್ರತಿಯೊಬ್ಬರೂ ನಿತ್ಯಾ ಕಾಣುವ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಕನಸು ಕೊನೆಯವರೆಗೂ ಕನಸಾಗಿಯೇ ಉಳಿದು ಬಿಡುತ್ತದೆ. ಅಂತಹವರಿಗೆ ಜಿ.ಎನ್.ಎಸ್.ರೆಡ್ಡಿಯವರು ಆತ್ಮಸ್ಥೈರ್ಯ ಮತ್ತು ದೈರ್ಯ ತುಂಬುತ್ತಾರೆ ಅಲ್ಲದೇ ಮನೆ ಕಟ್ಟುವ ಕನಸಿಗೆ ಶಕ್ತಿ ತುಂಬಿ ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆ ಕಟ್ಟಿ ಕೊಳ್ಳುವ ಉಪಾಯ ಹೇಳಿ ಕೊಡುತ್ತಾರೆ.
ಸ್ವತಃ ಅವರು ತಿಪಟೂರಿನ ಶಾರದ ನಗರದಲ್ಲಿ ಕೇವಲ ೩೩ ಅಡಿ ಉದ್ದ ಮತ್ತು ೩೩ ಅಡಿ ಅಗಲದ ವಿಸ್ತೀರ್ಣದಲ್ಲಿ ಒಂದು ಸುಂದರ ಮತ್ತು ಆಕರ್ಷಕ ಮನೆ ನಿರ್ಮಿಸಿದ್ದಾರೆ. ಅವರ ಕಲ್ಪನೆಗೆ ತಕ್ಕಂತೆ ನಾನಾ ಪ್ರದೇಶಗಳನ್ನು ಸುತ್ತಿ ತಮ್ಮದೇ ವಿನ್ಯಾಸದಲ್ಲಿ ನಿರ್ಮಿಸಿರುವ ಮನೆಯನ್ನು ನೋಡಲು ನಿತ್ಯಾ ಹತ್ತಾರು ಜನ ಬಂದು ಹೋಗುತ್ತಾರೆ.
ಸ್ಥಳೀಯವಾಗಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನೇ ತಮ್ಮ ಮನೆ ನಿರ್ಮಾಣಕ್ಕೆ ಬಳಸಿದ್ದಾರೆ. ಸರಳ ಮತ್ತು ಸುಲಭವಾದ ವಿನ್ಯಾಸದಿಂದ ನಿರ್ಮಿಸಿರುವ ಈ ಮನೆ ಹಲವು ವಿಶೇಷಗಳಿಂದ ಕೂಡಿದೆ. ಕಡಿಮೆ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ಕಟ್ಟಿರುವ ಈ ಎರಡು ಅಂತಸ್ತಿನ ಮನೆ ಪರಿಸರ ಸ್ನೇಹಿಯಾಗಿದ್ದು ನೋಡುಗರಿಗೆ ಒಂದು ಭವ್ಯ ಭಂಗಲೆಯಂತೆ ಕಾಣುತ್ತದೆ. ತಮ್ಮದೇ ಕಲ್ಪನೆಯ ಮನೆ ಕಟ್ಟುತ್ತೇವೆ ಎನ್ನುವವರಿಗೆ ರೆಡ್ಡಿ ಮಾದರಿಯಾಗಿದ್ದಾರೆ.

ಇಂಜಿಯರ್, ಆರ್ಕಿಟೆಕ್ಟ್ ಸೇರಿದಂತೆ ಯಾರ ಯಾರದೋ ಕಲ್ಪನೆಗೆ ಲಕ್ಷಾಂತರ ರೂಪಾಯಿ ಹಣ ಸುರಿದು ಮನೆ ಕಟ್ಟುವ ಜನ ಮತ್ತೊಂದು ಅದ್ಭುತ ಮನೆ ನೋಡಿದಾಗ ಅಯ್ಯೋ ನಾವು ಅವಸರ ಮಾಡಿದೇವು, ತಡವಾಗಿದ್ದರೆ ಇಂತಹ ಮನೆ ಕಟ್ಟಬಹುದಿತ್ತು ಎಂದು ನೊಂದು ಕೊಳ್ಳುತ್ತಾರೆ. ಆಸೆ ಎನ್ನುವುದು ಎಂದಿಗೂ ಕಡಿಮೆಯಾಗುವುದಿಲ್ಲ. ಮನುಷ್ಯನ ಗುಣವೇ ಅಷ್ಟು, ತನ್ನ ಹತ್ತಿರ ಇರುವುದಕ್ಕೆ ತೃಪ್ತಿ ಪಟ್ಟುಕೊಳ್ಳದೇ ಪರರ ಬಳಿ ಇರುವುದಕ್ಕೆ ಹಂಬಲಿಸುವುದು ಹೆಚ್ಚು. ಈ ರೀತಿ ಕೊನೆಗೂ ತೃಪ್ತಿಯಿಲ್ಲದೇ ಹುಡುಕಾಟ ನಡೆಸುವುದಕ್ಕಿಂತ ನಮ್ಮದೇ ವ್ಯಕ್ತಿತ್ವ ಪ್ರತಿನಿಧಿಸುವಂತ, ತಮ್ಮ ಕಲ್ಪನೆಗೆ ನಿಲುಕುವಂತಹ ಮನೆಯನ್ನು ನಿರ್ಮಿಸಿಕೊಂಡಾಗ ಆಗುವ

ಆತ್ಮತೃಪ್ತಿ, ಸಂತೋಷ ಅರಮನೆಯಲ್ಲಿದ್ದರೂ ಬರುವುದಿಲ್ಲ. ನಮ್ಮ ಕನಸು ಮತ್ತು ಕಲ್ಪನೆಯ ಮನೆ ಪರಿಸರಕ್ಕೆ ನಮ್ಮ ಬದುಕು ಹೊಂದಿಕೊಳ್ಳುವಂತಿರ ಬೇಕು. ಆರೋಗ್ಯಕರ, ಆಹ್ಲಾದಕರ ಮತ್ತು ತೃಪ್ತಿಕರವಾಗಿ ವಾಸಿಸಲು ಯೋಗ್ಯವಾಗಿರಬೇಕು ಎನ್ನುವ ರೆಡ್ಡಿ ಅವರು ಮರ ಮುಟ್ಟುಗಳನ್ನು ಬಳಸಲು ಪ್ರಕೃತಿ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎನ್ನುತ್ತಾರೆ. ನಮ್ಮ ಚೆಂದದ ಮನೆಗಾಗಿ ಪರಿಸರದ ಮೇಲೆ ಧಾಳಿ ಮಾಡಿ ನಾಶ ಮಾಡಿದರೆ ಭವಿಷ್ಯದಲ್ಲಿ ಬಾರೀ ಅಪಾಯ ಎದುರಿಸಬೇಕಾದೀತು ನಮನ್ನು ಕಾಯುವ ಈ ಸುಂದರ ಪ್ರಕೃರ್ತಿಯನ್ನು ಮುಂದಿನ ಪೀಳಿಗೆಗಾಗಿ ನಾವು ಸದಾ ಕಾಯಬೇಕು ಎಂದು ಎಚ್ಚರಿಸುತ್ತಾರೆ.
೭೮ ವರ್ಷಗಳ ಹಿಂದೆಯೇ ಗಾಂಧಿಜಿಯವರು ಮನೆ ಕಟ್ಟಲು ಒಂದು ಸರಳ ಸೂತ್ರ ನೀಡಿದ್ದರು. ಅವರ ಸಲಹೆಯಂತೆ ಮನೆ ಕಟ್ಟಲು ಉದ್ದೇಶಿಸಿರುವ ಪ್ರದೇಶಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಮನೆ ಕಟ್ಟುವ ಸ್ಥಳದ ೫ ಕಿಮಿ ವ್ಯಾಪ್ತಿಯೊಳಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನು ಬಳಸಬೇಕು. ಮನೆ ಪರಿಸರ ಸ್ನೇಹಿಯಾಗಿದ್ದು ಸ್ಥಳೀಯ ವಾತಾವರಣದ ಬದಲಾವಣೆಗೆ ಹೊಂದಿಕೊಳ್ಳುವಂತಹ ವಿನ್ಯಾಸ ಹೊಂದಿರಬೇಕು. ನಮ್ಮ ಮನಸ್ಸಿಗೆ ಒಪ್ಪುವ ಸುಂದರ ಮತ್ತು ವಿಶಾಲವಾದ  ಮನೆಯನ್ನು ಮಿತವ್ಯಯದಲ್ಲಿ ನಿರ್ಮಿಸುವುದು ಒಂದು ದೊಡ್ಡ ಸಾಧನೆ ಮತ್ತು ಪ್ರತಿಷ್ಟೆಯೇ ಸರಿ. ಒಂದು ಸುಂದರ ಆಲೋಚನೆ, ತಾಳ್ಮೆ, ಕಲ್ಪನೆ ಇಷ್ಟಿದ್ದರೆ ಸಾಕು ಒಂದು ಭವ್ಯ ಮನೆ ಸಿದ್ಧ.
ಸ್ಥಳೀಯವಾಗಿ ಸಿಗುವ ಇಟ್ಟಿಗೆ, ಮಣ್ಣು, ಇತ್ಯಾದಿ ವಸ್ತುಗಳನ್ನೇ ಬಳಸಿ ಸ್ಥಳೀಯ ವಿನ್ಯಾಸಕ್ಕನುಗುಣವಾಗಿ ಸ್ಥಳೀಯ ಕಾರ್ಮಿಕರಿಂದ ಮನಸ್ಸಿಗೆ ಒಪ್ಪುವ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ರೆಡ್ಡಿಯವರು ಇಂಜಿನಿಯರ್ ಹೇಳಿದರು ಎಂದು ದುಂದುವೆಚ್ಚಮಾಡಿ ಮನಸ್ಸಿಗೆ ಬಂದಂತೆ ಕಬ್ಬಿಣ, ಸಿಮೆಂಟ್, ಮರ ಮಟ್ಟುಗಳನ್ನು ಬಳಸಿ ಅತಿ ಭಾರದ ಮನೆ ನಿರ್ಮಾಣ ಮಾಡಬಾರದು ಎಂದು ಸಲಹೆ ನೀಡುತ್ತಾರೆ.

ಆರ್ಕಿಟೆಕ್ಟರ್‌ಗಳ ಕಲ್ಪನೆಗೆ ತಕ್ಕಂತೆ ಒಂದೊಂದು ಮನೆ ನಿರ್ಮಾಣ ವೆಚ್ಚ ಲಕ್ಷ, ಕೋಟಿಗಳನ್ನೂ ದಾಟುತ್ತವೆ. ಆದರೆ ಅಲ್ಲಿ ಎಲ್ಲಾ ಒಂದೇ ಮಾದರಿಯ ತದ್ರೂಪ ವ್ಯವಸ್ಥೆಗಳಿರುತ್ತವೆ. ಒಂದು ಮನೆ ನೋಡಿದರೆ ಮತ್ತೊಂದು ಮನೆ ನೋಡುವಂತಿಲ್ಲ. ಅಲ್ಲಿ ವಿಶೇಷ ಏನೂ ಇರುವುದಿಲ್ಲ. ಒಂದು ಕಿಚನ್, ಎರಡು ಬೆಡ್ ರೂಂ, ಒಂದು ಹಾಲ್, ಬಾತ್ ರೂಂ, ಪೋರ್ಟಿಕೋ ಹಾಗೂ ಒಂದು ಕಾರ್ ಶೆಡ್ ಮುಗಿದು ಹೋಯಿತು, ನೀವು ನೂರು ಅಲ್ಲ ಸಾವಿರ ಮನೆ ಸುತ್ತಿದರೂ, ಯಾವ ಮನೆ ನೋಡಿದರೂ ಇದೇ ವಿನ್ಯಾಸ. ಬೇರೆ ಹೊಸ ವಿಶೇಷ ಇರೋದಿಲ್ಲ. ಜೊತೆಗೆ ರಾಜಾಸ್ಥಾನ್ ಮಾರ್ಬಲ್, ಇಟಾಲಿಯನ್ ಮಾರ್ಬಲ್, ಚೈನೀಸ್ ಕಿಚನ್, ಹೀಗೆ ನಾನಾ ತರಹದ ನಾನಾ ಐಷರಾಮಿ ವಿನ್ಯಾಸದಿಂದ ದುಬಾರಿ ವೆಚ್ಚದಲ್ಲಿ ಅಲಂಕರಿಸಿ, ಕ್ಷಣಿಕ ತೃಪ್ತಿ ಪಟ್ಟು ಕೊಳ್ಳುತ್ತಾರೆ. ಆದರೆ ಮತ್ತೆ ಇದಕ್ಕಿಂತ ಭಿನ್ನ ವಿನ್ಯಾಸ ನೋಡಿದಾಗ ಖಿನ್ನರಾಗುತ್ತಾರೆ. ಇಷ್ಟೆಲ್ಲಾ ಕೋಟಿ ಗಟ್ಟಲೆ ಹಣ ಕರ್ಚು ಮಾಡಿ ಕಟ್ಟಿರುವ ಮನೆಯಲ್ಲಿ ಗಾಳಿಗಾಗಿ ವಿದ್ಯುತ್ ಫ್ಯಾನು, ಬೆಳಕಿಗಾಗಿ ವಿದ್ಯುತ್ ದೀಪ, ವಾತಾವರಣ ನಿಯಂತ್ರಣಕ್ಕಾಗಿ ಏರ್‌ಕಂಡಿಶನ್ ವ್ಯವಸ್ಥೆ, ಮರ ಮುಟ್ಟುಗಳ ರಕ್ಷಣೆಗಾಗಿ ನಾನಾ ಕೀಟ ನಾಶಕಗಳ ಬಳಕೆ, ನಾನಾ ಕೊಠಡಿಗಳ ನಿರ್ವಹಣೆಗಾಗಿ ಮಾನವಯಂತ್ರ ನಿಯೋಜನೆ  ಹೀಗೆ ತಾವು ಮಾಡಿಕೊಂಡ ವ್ಯವಸ್ಥೆಯ ನಿರ್ವಹಣೆಗಾಗಿ ಪುನಃ ಮಿತಿ ಮೀರಿದ ವೆಚ್ಚವನ್ನು ನಿರಂತರವಾಗಿ ಮಾಡುತ್ತಾ ಹೋಗುತ್ತಾರೆ. ಒಂದು ದಿನ ನಿರ್ವಹಣೆ ನಿಂತರೆ ಆಗ ಅದು ಭೂತ ಭಂಗಲೆಯಂತೆ ಕಾಣುತ್ತದೆ. ಮನೆ ಕಟ್ಟಿದಾಗ ಈ ರೀತಿ ಆಗ ಬಾರದು.

ನಮ್ಮ ಕಲ್ಪನೆಯ ಮನೆ ಕಟ್ಟಿದಾಗ ಅಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಮತ್ತು ಆರೋಗ್ಯದ ವಾತಾವರಣ ನಿರ್ಮಾಣವಾಗಬೇಕು. ಗಾಳಿ, ಬೆಳಕು ನೈಸರ್ಗಿಕವಾಗಿ ಬರುವಂತಿರಬೇಕು. ಅತಿಯಾದ ಗೋಡೆಗಳನ್ನು ಬಳಸದೇ ಎಲ್ಲರೂ ಕೂಡಿ ಬದುಕುವಂತೆ, ಮನೆಯ ಸದಸ್ಯರೊಂದಿಗೆ ಮಾನವೀಯ ಸಂಬಂಧ ಗಟ್ಟಿಗೊಳಿಸುವ ವಾತಾವರಣ ಸೃಷ್ಟಿಯಾಗಬೇಕು. ವಿಶಾಲ ಜಾಗದಲ್ಲಿ ಮಧ್ಯೆ ಮಧ್ಯೆ ಗೋಡೆಗಳನ್ನು ಹಾಕುವ ಮೂಲಕ ಮನೆಯವರನ್ನೇ ಭಾಗ ಮಾಡಿ, ಮನಸ್ಸನ್ನು ಬೇರ್ಪಡಿಸಿ, ಬಂಧಿಸಿಡುವ ಆಧುನಿಕ ಗೃಹ ನಿರ್ಮಾಣ ಪದ್ಧತಿ ಸರಿಯಲ್ಲ ಎನ್ನುವ ರೆಡ್ಡಿ ಅವರ ಕಲ್ಪನೆಯ ಮನೆಯಲ್ಲಿ ಮಧ್ಯೆ ಗೋಡೆ ಮತ್ತು ಬಾಗಿಲುಗಳನ್ನೇ ಇಟ್ಟಿಲ್ಲ,
ಹುಚ್ಚು ಪ್ರತಿಷ್ಟೆಗೆಂದು ಎಷ್ಟು ದುಬಾರಿ ಮನೆ ಕಟ್ಟುತ್ತೇವೆಯೋ ಅಷ್ಟು ಹಣ ಪರರ ಪಾಲಾಗುತ್ತದೆ. ಮನೆ ಕಟ್ಟುವುದು ನಾವು, ಆದರೆ ಅದರ ಲಾಭ ಎಲ್ಲರಿಗೂ ಸಿಗುತ್ತದೆ. ಮೊದಲಿಗೆ ಮನೆ ವಿನ್ಯಾಸದ ಇಂಜಿನಿಯರ್‌ನಿಂದ ಶುರುವಾಗಿ, ಆರ್ಕಿಟೆಕ್ಟ್, ಗುತ್ತಿಗೆದಾರ, ಗಾರೆಯವರು, ಬಣ್ಣಗಾರರು, ಬಡಗಿ, ನಾನಾ ವ್ಯಾಪಾರಿಗಳೂ ಸೇರಿದಂತೆ ಹಲವು ಮಂದಿಗೆ ಮನೆ ಕಟ್ಟುವ ನೆಪದಲ್ಲಿ ಹೇರಳವಾಗಿ ಹಣ ಸುರಿಯುತ್ತೇವೆ.   ಮನೆ ನಿರ್ಮಾಣ ಮಾಡುವ ವೆಚ್ಚ ಹೆಚ್ಚಿದಂತೆಲ್ಲಾ ಅದು ದುಬಾರಿಯಾಗುತ್ತದೆ. ಆಗ ಹಣವೆಲ್ಲಾ ನಿರ್ಮಾಣ ಮಾಡುವ ಹಂತದ ಭಾಗಿದಾರರಿಗೆ ಹಂಚಿ ಹೋಗುತ್ತದೆ. ಒಂದು ಮನೆ ನಿರ್ಮಾಣ ಮಾಡುವಾಗ ಶೇ.೫೦-೬೦ರಷ್ಟು ಹಣ ವಿನಾ ಕಾರಣ ಪರರ ಪಾಲಾಗುತ್ತದೆ ಎನ್ನುವ ರೆಡ್ಡಿಯವರು ನಾವು ನಮ್ಮ ಪುರಾತನರ ಕಲ್ಪನಗೆ ತಕ್ಕಂತೆ ಕಡಿಮೆ ವೆಚ್ಚದಲ್ಲಿ ಒಂದು ಸುಂದರ ಮನೆ ಕಟ್ಟಿಕೊಳ್ಳಬಹುದು.
ಡೆಸಾರ್ಟ್ ಆರ್ಕಿಟೆಕ್ಚರ್, ಹೈದರಾಬಾದ್‌ನ ಗೋಲ್ಕಂಡ ಪೋರ್ಟ್ ಸಮೀಪ ಸಿಗುವ ಕೆಲವು ಮಾದರಿಗಳ ಸ್ಪೂರ್ತಿಯಿಂದ ಈ ನಮ್ಮ ಮನೆ ನಿರ್ಮಾಣ ಮಾಡಲು ಸಾಧ್ಯವಾಯಿತು. ಚಿಂತನೆ, ಅಧ್ಯಯನ, ಮಾಹಿತಿ ಸಂಗ್ರಹ ಸೇರಿದಂತೆ ಯೋಜನೆ ರೂಪಿಸಿ ಮನೆ ಕಟ್ಟಲು ತೆಗೆದುಕೊಂಡ ಅವಧಿ ನಾಲ್ಕು ವರ್ಷಗಳಾದರೂ ನನ್ನ ಕನಸಿನ ಮನೆ ನನ್ನ ಕಣ್ಣ ಮುಂದೆ ಇದೆ ಎಂದು ತಾವು ನಿರ್ಮಿಸಿರುವ ಮನೆಯತ್ತ ಬೊಟ್ಟು ಮಾಡುತ್ತಾರೆ ರೆಡ್ಡಿಯವರು.

ಮನೆಯ ವೈಶಿಷ್ಟ್ಯ: 
೩೩*೩೩ ಅಡಿಗಳ ನಿವೇಶನದಲ್ಲಿ ಒಟ್ಟು ೨೨ ಚದರಡಿಯ ಮನೆ ನಿರ್ಮಾಣ ಮಾಡಲಾಗಿದೆ. ವೈಜ್ಞಾನಿಕವಾಗಿ ಮತ್ತು ಸಂಪ್ರದಾಯವಾಗಿ ನಿವೇಶನದ ಮಧ್ಯೆ ಭಾಗದಲ್ಲಿ ೧೧*೧೧ ಅಡಿಗಳಲ್ಲಿ ಒಂದು ತೊಟ್ಟಿಯನ್ನು ನಿರ್ಮಿಸಿ, ಮನೆಯ ಎಲ್ಲರ ಬದುಕು ಮತ್ತು ವ್ಯಕ್ತಿತ್ವ ಈ ತೊಟ್ಟಿಯ ಸುತ್ತಲೂ ನಿರ್ಮಾಣವಾಗಬೇಕು. ಇದು ಮನೆಯ ಬ್ರಹ್ಮ ಸ್ಥಳ ಎನ್ನುತ್ತಾರೆ ರೆಡ್ಡಿ.

ಈ ತೊಟ್ಟಿಯೂ ಒಂದು ಸುಂದರ ಆಕರ್ಷಕ ಸ್ಥಳವಲ್ಲದೇ ಆಧ್ಯಾತ್ಮಿಕತೆಯ ಮಹತ್ವವುಳ್ಳ ಕೇಂದ್ರವೂ ಆಗಿದೆ. ಬಾಗಿಲು ಇಲ್ಲದೇ ತೆರೆದಿಟ್ಟ ಸ್ಥಳದಲ್ಲಿ ಪೀಠದಲ್ಲಿ ಮನೆ ದೇವರನ್ನು ಪ್ರತಿಷ್ಠಾಪಿಸಿದ್ದು ಎಲ್ಲರೂ ಪೂಜೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅದು ಇದರ ಸುತ್ತಲೂ ಎಲ್ಲಾ ಕೊಠಡಿಗಳು ನಿರ್ಮಾಣವಾಗುತ್ತವೆ. ಬರುವವರು, ಹೋಗುವವರು, ಮನೆಯವರೆಲ್ಲಾ ಎಲ್ಲರಿಗೂ ಗೋಚರಿಸುತ್ತಾರೆ.    
ಈ ತೊಟ್ಟಿಯ ಸುತ್ತಾಲೂ ಆಗ್ನೆಯಕ್ಕೆ ಅಡಿಗೆ ಮನೆ ೧೧*೧೧ ಅಳತೆ. ದಕ್ಷಿಣಕ್ಕಿರುವ ವಿಶ್ರಾಂತಿ ಕೊಠಡಿ ೧೧*೧೧, ಬಾತ್ ರೂಂ ೧೧*೧೧, ಹೀಗೆ ಒಟ್ಟು ಇತರೆ ಎಂಟು ಕೊಠಡಿಗಳು ತಲಾ ೧೧*೧೧ ಅಳತೆಯಲ್ಲಿವೆ. ಅದೇ ಮಾದರಿಯಲ್ಲಿ ಮೊದಲ ಅಂತಸ್ಥಿನಲ್ಲೂ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಯಾವ ಕೊಠಡಿಗೂ ಬಾಗಿಲುಗಳಿಲ್ಲ ಮತ್ತು ಗೋಡೆಗಳಿಲ್ಲ. ಇಲ್ಲಿ ಓಪನ್ ಕಿಚನ್ ಇದೆ, ಗಾಳಿ, ಬೆಳಕು ಸರಾಗಿ ಬರುವಂತಹ ತಾಂತ್ರಿಕ ವ್ಯವಸ್ಥೆ ಮನೆಯಲ್ಲಿದೆ. ಮಧ್ಯೆ ಭಾಗದಲ್ಲಿರುವ ಮೇಲ್ಚಾವಣಿಯಲ್ಲಿ ತೆರೆದುಕೊಂಡ ಭಾಗದಿಂದ ಮನೆಯ ಬಿಸಿ ಗಾಳಿ ಹೊರ ಹೋದರೆ ಮನೆಯ ನಾನಾ ಕಡೆ ನಿರ್ಮಿಸಿರುವ ಪಿಲ್ಲರ್‌ಗಳಲ್ಲಿರುವ ತಂಪಾದ ಶುದ್ಧಗಾಳಿ ರಂಧ್ರದ ಮೂಲಕ ಒಳಗೆ ಬರುತ್ತದೆ ಇದು ಯಾಂತ್ರಿಕೃತವಾಗಿ ನಡೆಯುವುದರಿಂದ ಇಲ್ಲಿ ಯಾವ ಕೊಠಡಿಗೂ ಫ್ಯಾನುಗಳಿಲ್ಲ.
ಮನೆಯಲ್ಲಿ ಎಲ್ಲೂ ಮರಗಳನ್ನು ಬಳಸಿ ಮಾಡಿದ ಮಂಚ, ಬಾಗಿಲು, ಕಿಟಕಿ,  ಸೆಲ್ಫ್‌ಗಳಿಲ್ಲ. ಇರುವ ಸೆಲ್ಫ್ ಮತ್ತು ಪುಸ್ತಕ ರ‍್ಯಾಕ್‌ಗಳನ್ನು ಕಡಪ ಕಲ್ಲು ಮತ್ತು ಬಿದರಿನ ಕಡ್ಡಿಗಳಿಂದ ಮಾಡಲಾಗಿದೆ. ಮನೆಯ ಮಧ್ಯೆ ಇರುವ ತೊಟ್ಟಿಯ ಮಧ್ಯೆ ನೇತು ಹಾಕಿರುವ ಒಂದು ವಿದ್ಯುತ್ ದೀಪ ಇಡೀ ಕೆಳಗಿನ ಮತ್ತು ಮೇಲಿನ ಎಂಟು ಕೊಠಡಿಗೆ ಬೆಳಕು ನೀಡುತ್ತದೆ, ಅದೂ ರಾತ್ರಿ ವೇಳೆ ಮಾತ್ರ. ಹಾಗಾಗಿ ಮನೆಯಲ್ಲಿ ಎಲ್ಲೂ ಹೆಚಿನ ದೀಪದ ಅವಶ್ಯತೆಯಿರುವುದಿಲ್ಲ.
ಕೊಠಡಿಗಳಲ್ಲಿರುವ ಮಂಚಗಳೂ ಸಹ ಇಟ್ಟಿಗೆ ಮತ್ತು ಕಡಪ ಕಲ್ಲಿನಿಂದ ಮಾಡಲಾಗಿದ್ದು ಅರಾಮದಾಯಕ ಮತ್ತು ಆರೋಗ್ಯದಾಯಕವಾಗಿದೆ. ಮನೆಯಲ್ಲಿ ಮುಂಭಾಗಿಲು ಬಿಟ್ಟರೆ ಉಳಿದಂತೆ ಬಾಗಿಲು, ಕಿಟಕಿಗಳಿಲ್ಲದ್ದರಿಂದ ಮರಗಳನ್ನು ಬಳಸಿಲ್ಲ. ಅವಶ್ಯತೆ ಇರುವ ಕಡೆಗಳಲ್ಲಿ ಸಿಂಥಟಿಕ್ ಬಾಗಿಲುಗಳನ್ನು ಬಳಸಲಾಗಿದೆ. ಕಟ್ಟಡಕ್ಕೆ ಹಾಲೋ ಬ್ರಿಕ್ಸ್ ಬಳಸಿರುವುದರಿಂದ ಮನೆಯ ತುಂಬಾನೇ ಹಗುರವಾಗಿದೆ. ನೆಲ್ಕಕೆಲ್ಲಾ ಟೆರಾಕೋಟ ಟೈಲ್ಸ್ ಬಳಸಿದ್ದು ಅತ್ಯಂತ ಸುಂದರವಾಗಿದೆ.
ಮುಂಭಾಗ ಮತ್ತು ಒಳ ಭಾಗದ ಮುಖ್ಯ ಭಾಗಗಳಲ್ಲಿ ಗ್ರಾನೈಟ್ ಕಂಪನಿಗಳಲ್ಲಿ ಬಳಸಿ ಬಿಸಾಡಿದ ನಿರುಪಯುಕ್ತ ಗ್ರಾನೈಟ್ ಕಲ್ಲುಗಳನ್ನು ತಂದು ಬಳಸಿದ್ದು ಅತ್ಯಂತ ಸುಂದರವಾಗಿ ಕಾಣುತ್ತಿದ್ದು ಕಸದಿಂದ ರಸವಾಗಿದೆ. ಮನೆಯ ಮುಂಬಾಗದ ಗೇಟ್ ಬಳಿ ಹಾಗೂ ಕಾಂಪೌಂಡ್ ಗೋಡೆಗಳಿಗೆ ಕಾಡು ಕಲ್ಲುಗಳನ್ನು ಬಳಸಿದ್ದು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಅಂದರೆ ಮನೆ ಕಟ್ಟುವವರು ಒಮ್ಮೆ ರೆಡ್ಡಿಯವರನ್ನು ಸಂಪರ್ಕಿಸಿದರೆ ಹೊಸ ಕಲ್ಪನೆ, ಹೊಸ ವಿಚಾರ ಹಾಗೂ ಒಂದು ಹೊಸ ಆಲೋಚನೆ ಸಿಗುತ್ತದೆ.
ರೆಡ್ಡಿಯವರ  ನಿರ್ಮಿಸಿರುವ ಮನೆ ನಗರದಲ್ಲೇ ವಿಶಿಷ್ಟ ಮತು ವಿಶೇಷವಾಗಿದ್ದು ಭವ್ಯ ಭಂಗಲೆಯತೆ ಕಾಣುತ್ತದೆ. ಆದರೆ ಅದರ ಒಟ್ಟು ವೆಚ್ಚ ಕೇವಲ ೧೦-೧೨ ಲಕ್ಷ ಮಾತ್ರ. ನೋಡುಗರಿಗೆ ಈ ಮನೆ ನಿರ್ಮಾಣ ಕಡಿಮೆ ಎಂದರೂ ೪೦-೫೦ಲಕ್ಷ ಎಂದು ಭಾಸವಾಗುತ್ತದೆ.