Tuesday, October 4, 2011

ರಾಜ್ಯದಲ್ಲೂ ಆಘೋರಿಗಳಿದ್ದಾರಾ?


ರಾಜ್ಯದಲ್ಲೂ ಆಘೋರಿಗಳಿದ್ದಾರಾ?

 ದಯವಿಟ್ಟು,  ಅಸಹ್ಯ ಪಟ್ಟು ಕೊಳ್ಳದ ಗಟ್ಟಿ ಹೃದಯದವರಿಗೆ ಮಾತ್ರ.
ಇದು ಪರಮ ಸತ್ಯ ಆದರೂ ಮನುಷ್ಯ ಮಾತ್ರದವರು ನಂಬಲು ಅಸಾದ್ಯ. ಬೇಜಾರು ಮಾಡಿಕೊಳ್ಳಬೇಡಿ, ಕಸಿವಿಸಿ ಮಾಡಿ ಕೊಳ್ಳಬೇಡಿ. ಬರೆಯಬೇಕಾದ್ದು ಅವಶ್ಯಕ ಮತ್ತು ಅನಿವಾರ್ಯ ಕೂಡ. ವರದಿ ಓದಿದ ಮೇಲೆ ನೀವೇ ಉದ್ಘರಿಸುತ್ತೀರಿ ಹೀಗೂ ಉಂಟೆ ಎಂದು. ನಂತರ ಮನಸ್ಸಿಗೆ ಕಸಿವಿಸಿಯಾದರೆ ನಮ್ಮನ್ನು ಕ್ಷಮಿಸಿ, ಇದು ನಮ್ಮ ತಪ್ಪಲ್ಲ.
 
ಇಲ್ಲೊಬ್ಬ ಸುಮಾರು ೯೫ ವರ್ಷದ ಮುದುಕ ವಿಚಿತ್ರವಾಗಿ ವರ್ತಿಸುತ್ತಾನೆ. ಅಘೋರಿಗಳ ತರಹ. ಮನುಷ್ಯ ಮಾತ್ರದವರು ಮಾಡಲಾರದ ಕೆಲಸ ಮಾಡಿ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಜೊತೆಗೆ ಭಯ ಮತ್ತು ಗೊಂದಲಕ್ಕೀಡು ಮಾಡುತ್ತಾನೆ. ಇವನ ವರ್ತನೆ ವಿಜ್ಞಾನ ಮತ್ತು ವೈಧ್ಯ ಕ್ಷೇತ್ರಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಸ್ಪತ್ರೆಗೆ ಹೋಗಿಯೂ ಸಹ ವಾಸಿಯಾಗದೇ ನಿಮ್ಮೂರಿನಲ್ಲಿ ಯಾರಿಗಾದರೂ ಕಾಲು, ಕೈ ಕೊಳೆತು ಗ್ಯಾಂಗ್ರಿನ್ ಆಗಿದ್ದರೆ, ಯಾವುದಾದರೂ ಕಾರಣಕ್ಕೆ ಗಾಯವಾಗಿ ವಾಸಿಯಾಗದೇ ರಣವಾಗಿದ್ದರೆ ಅಥವಾ ಬಾರಿ ಸುಟ್ಟ ಗಾಯವಾಗಿ ಕೀವು ರಕ್ತ ಸೋರುತ್ತಾ ಬಾಧೆ ಪಡುತ್ತಿದ್ದರೆ, ಗಾಯವಾಗಿ ಸಕ್ಕರೆ ಕಾಯಿಲೆಯ ಕಾರಣದಿಂದ ವಾಸಿಯಾಗದೇ ಅದು ಇಡೀ ಕಾಲು ವ್ಯಾಪಿಸಿ ಮತ್ತೆ ಮತ್ತೆ ಹೆಚ್ಚುತ್ತಾ ಕೊಳೆಯುವ ಸ್ಥಿತಿಗೆ ತಲುಪಿ ಹುಳ ಸಹಿತ ದುರ್ವಾಸನೆ ಬಂದಿದ್ದರೆ ಇನ್ನೂ ಮುಂದೆ ಹೆದರಬೇಕಿಲ್ಲ. ಗುಣ ಪಡಿಸಿಕೊಳ್ಳುವ ಉಪಾಯ ಇಲ್ಲಿದೆ.
ಅದು ಯಾವುದೇ ಔಷಧಿ ನೀಡದೇ, ಶಸ್ತ್ರ ಚಿಕಿತ್ಸೆ ಮಾಡದೇ, ದುಬಾರಿ ವೆಚ್ಚ ಕೇಳದೇ ಕ್ಷಣ ಮಾತ್ರದಲ್ಲಿ ನೋವನ್ನು ನೀಗಿಸುವ ಮಾಂತ್ರಿಕ ಶಕ್ತಿಯ ವಿಸ್ಮಯ ಕಥೆ ಇಲ್ಲಿದೆ. ಆತ ಸಾಮಾನ್ಯ ಸಾಧು. ರೈತ ಸಂಘದ ಹೋರಾಟಗಾರನಂತೆ ಕಾಣುವ ಆ ವ್ಯಕ್ತಿ ಇಂತಹ ಗಾಯಗಳನ್ನು ನಾಲಿಗೆಯಿಂದ ನೆಕ್ಕಿ ನೆಕ್ಕಿ ಅದನ್ನು ವಾಸಿ ಮಾಡುತ್ತಾರೆ. ಬಹಳ ದಿನಗಳಿಂದ ಅನುಭವಿಸುತ್ತಿರುವ ನೋವಿಗೆ ದೀರ್ಘ ವಿರಾಮ ನೀಡುತ್ತಾರೆ. ಗಾಯದ ಕಾರಣದಿಂದ ಕಾಲು ಅಥವಾ ಕೈ ಕತ್ತರಿಸುವ ಪ್ರಮೆಯವೇ ಇಲ್ಲ.
ಇದೇನು ಮನುಷ್ಯ ಎಲ್ಲಾದರೂ ರಕ್ತ ಕೀವು ಸೋರುವ ಗಾಯವನ್ನು ನಾಯಿಯಂತೆ ನೆಕ್ಕುವುದು ಸಾಧ್ಯವೇ? ಎಂದು ಅಚ್ಚರಿ ಪಡಬೇಡಿ. ಗಾಬರಿಯಾಗಬೇಡಿ. ಇದು ಸತ್ಯ, ನೂರಕ್ಕೆ ನೂರು.
ಅವರೇ ಸವದತ್ತಿ ತಾಲೂಕಿನ ಅಳಕಟ್ಟೆ ಗ್ರಾಮದ ೯೫ ವರ್ಷದ ಹುಟ್ಟು ಬ್ರಹ್ಮಚಾರಿ ನಾರಾಯಣಸ್ವಾಮಿ. ತನ್ನ ೧೮ನೇ ವಯಸ್ಸಿನಲ್ಲಿ ಶಕ್ತಿವಂತ ಗುರುವೊಬ್ಬರು  ಇವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರಂತೆ. ಅವರಿಂದ ದೀಕ್ಷೆ ಪಡೆದು ಸಾಧನೆ ಮಾಡಿದ ಒಂದು ವಿಶಿಷ್ಟ ಶಕ್ತಿ ಗಳಸಿಕೊಂಡು ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ. ಊರಿಂದ ಊರಿಗೆ ಬರಿಗಾಲಲ್ಲಿ ನಡೆದು ನಾಲಿಗೆಯಿಂದ ನೆಕ್ಕುವ ಮೂಲಕ ಗಾಯದ ನೋವಿನಿಂದ ನರಳುವವರಿಗೆ ಶಾಶ್ವತ ಪರಿಹಾರ ನೀಡಿ ವರದಾನವಾಗಿದ್ದಾರೆ. ಬಹಳ ಕಾಲದಿಂದ ವಾಸಿಯಾಗದೇ ಸಾಕಷ್ಟು ಆಸ್ಪತ್ರೆಗಳಿಗೆ ಸುತ್ತಿ ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ಕೈ ಸೋಸಿದವರಿಗೆ ಇವರು ಸುಲಭ ಮತ್ತು ಸರಳ ಸಿದ್ಧ ಔಷಧಿಯಾಗಿದ್ದಾರೆ. ಸೋರಿಯಾಸಿಸ್, ಗ್ಯಾಂಗ್ರಿನ್, ಸುಟ್ಟಗಾಯ ನೀರು ಇಸುಬು, ಕುಷ್ಟರೋಗ ಸೇರಿದಂತೆ ನಾನಾ ಚರ್ಮ ರೋಗಗಳನ್ನು ಗುಣ ಪಡಿಸುವ ದೇವದೂತ ಎನಿಸಿದ್ದಾರೆ.
ಮೊನ್ನೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹಳ ದಿನಗಳಿಂದ ದಾಖಲಾಗಿದ್ದ ರೋಗಿಯೊಬ್ಬರ ವಾಸಿಯಾಗದ ಗಾಯ(ಗ್ಯಾಂಗ್ರಿನ್)ವನ್ನು ವಾಸಿ ಮಾಡಲು ಇವರನ್ನು ಬೆಳಗಾವಿಯಿಂದ ಕರೆಸಲಾಗಿತ್ತು. ಬೆಳಗಾವಿಯಲ್ಲಿ ವೃತ್ತಿ ಮಾಡುತ್ತಿರುವ ತಿಪಟೂರಿನ ಮೂಲದವರಾದ ದಂತವೈಧ್ಯ ಕೃಷ್ಣ ಎಂಬುವರು ಈ ಸಾಧು ನಾರಾಯಣಸ್ವಾಮಿಯವರನ್ನು ಕರೆತಂದಿದ್ದರು. ಆಸ್ಪತ್ರೆಯಲ್ಲಿ ಗಾಯವನ್ನು ನಾಲಿಗೆಯಿಂದ ನೆಕ್ಕಿ ವಾಸಿ ಮಾಡುವ ದೃಶ್ಯ ಕಂಡ ಕೆಲವರು ಪತ್ರಿಕೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಹೋಗಿ ಪರೀಕ್ಷಿಸಿದಾಗ ಅಚ್ಚರಿಯಾಯಿತು. ನಂತರ ಅವರು ತುರುವೇಕೆರೆ ತಾಲೂಕು ದಂಡಿನ ಶಿವರದ ರಾಮೇಗೌಡ ಎಂಬುವರಿಗೆ ಆಗಿರುವ ಗಾಯವನ್ನು ವಾಸಿ ಮಾಡಲು ಕರೆದುಕೊಂಡು ಹೋಗಲಾಯ್ತು.

ಶಕ್ತಿದಾಯಕ ವಿಭೂತಿ:
ನಾರಾಯಣಸ್ವಾಮಿ ಒಬ್ಬ ವಿಚಿತ್ರವಾದ ಸಾಧು. ಇವರು ಇದ್ದ ಕಡೆ ಇರುವುದಿಲ್ಲ. ಸದಾ ಸಂಚರಿಸುತ್ತಲೇ ಇರುತ್ತಾರೆ. ಸ್ವಂತ ಸ್ಥಳ ಎನ್ನುವುದು ಇಲ್ಲ. ತಲೆ ಮೇಲೆ ನಾನಾ ಗಿಡಮೂಲಿಕೆಗಳ ಗಂಟೊಂದನ್ನು ಇಟ್ಟು ಕೊಂಡು ಕಾಲಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ತಮ್ಮ ಮನಸ್ಸು ಬಂದ ಕಡೆ ಹೋಗುತ್ತಿರುತ್ತಾರೆ. ಯಾರಾದರೂ ಕರೆದರೆ ಶಕ್ತಿಯಿರುವ ನಾಲಿಗೆಯಿಂದ ನೆಕ್ಕುವ ಮೂಲಕ ಗುಣಪಡಿಸಿ ಒಂದು ನಯಾಪೈಸೆಯೂ ದಕ್ಷಿಣೆ ಪಡೆಯದೇ ಮರಳಿ ಹೋಗುತ್ತಾರೆ. ಆದರೆ ಇಡೀ ಚಿಕಿತ್ಸೆಗೆ ಬಳಸುವುದು ವಿಭೂತಿ ಮಾತ್ರ. ಅದೇ ಅವರ ಸಂಜಿವಿನಿ ಔಷಧ ಎಂದು ಅವರ ಬಗ್ಗೆ ವ್ಯಕ್ತಿಪರಿಚಯವನ್ನು ತೆರದಿಡುತ್ತಾರೆ ಬೆಳಗಾಂನಲ್ಲಿ ದಂತವೈಧ್ಯರಾಗಿರುವ ಕೃಷ್ಣ(೯೮೮೬೬೩೨೩೦೮).
ಎಂತದ್ದೇ ರಣಗಾಯವಾಗಿದ್ದರೂ ಅದು ಹುಳ ಬಿದ್ದಿದ್ದರೂ ಅದರ ಮೇಲೆ ಮೊದಲು ವಿಭೂತಿ ಹಾಕಿ ನಂತರ ತಮ್ಮ ನಾಲಿಗೆಯಿಂದ ನೆಕ್ಕಲು ಶುರು ಮಾಡುತ್ತಾರೆ. ನೆಕ್ಕಿದ ನಂತರ ಅದನ್ನು ಹೊರಗೇ ಉಗಿಯದೇ ಎಲ್ಲವನ್ನೂ ಒಳಗೆ ನುಂಗಿ ಬಿಡುತ್ತಾರೆ. ಗಾಯದಲ್ಲಿರುವ ಕೀವು, ರಕ್ತವನ್ನು ಸಂಪೂರ್ಣವಾಗಿ ಹೀರಿದ ನಂತರ ಪುನಃ ಅದರ ಮೇಲೆ ವಿಭೂತಿ ಹಾಕಿ, ಸ್ವಲ್ಪ ವಿಭೂತಿಯನ್ನು ರೋಗಿಗೆ ನೀಡಿ ಒಂದು ವಾರ ಗಾಯದ ಮೇಲೆ ಹಾಕಲು ಹೇಳುತ್ತಾರೆ. ಯಾವುದೇ ಪಥ್ಯ ಹೇಳದಿದ್ದರೂ ಗಾಯ ವಾಸಿಯಾಗುವವರೆಗೂ ಭಗವಂತನನನ್ನು ಚಿತ್ತ ಮನಸ್ಸಿನಿಂದ ಧ್ಯಾನಿಸಲು ಹೇಳುತ್ತಾರೆ. ಇದಲ್ಲದೇ ಗುಡ್ಡಗಾಡುಗಳನ್ನು ಸುತ್ತಿ ತಮ್ಮ ಬಳಿಯಿಟ್ಟುಕೊಂಡಿರುವ ಗಿಡಮೂಲಿಕೆಗಳಿಂದ ನಾನಾ ತರಹದ ರೋಗಗಳನ್ನೂ ಸಹ ಗುಣಪಡಿಸುತ್ತಾರಂತೆ ಎಂದು ಮತ್ತಷ್ಟು ಅವರ ಬಗ್ಗೆ ವಿವರ ನೀಡುತ್ತಾರೆ.
ಮೊಬೈಲ್ ಬಳಸಲ್ಲ: 
ಸಾಧು ನಾರಾಯಣಸ್ವಾಮಿ ಹತ್ತಿರ ಯಾವುದೇ ಸಂಪರ್ಕ ಸಾಧನಗಳಿಲ್ಲ. ತಮ್ಮ ವಿಳಾಸ ಹೇಳಲ್ಲ. ಮೊಬೈಲ್‌ನಂತೂ ಅವರು ಮುಟ್ಟುವುದೂ ಇಲ್ಲ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ, ಅದೂ ಸರಳ ಸಸ್ಯಹಾರ. ವಾರಕ್ಕೊಮ್ಮೆ ಬಹಿರ್ದಿಷೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುವ ಅವರು ಯಾರಿಗಾದರೂ ಚಿಕಿತ್ಸೆ ನೀಡಿದ (ನಾಲಿಗೆಯಿಂದ ನೆಕ್ಕಿದ) ನಂತರ ಎರಡು ಮೂರು ದಿನ ಊಟ ಮಾಡುವುದಿಲ್ಲವಂತೆ.
ಸ್ಪರ್ಶಕ್ಕೆ ನೋವು ಮಾಯ:
ದಂಡಿನಶಿವರದ ರಾಮೇಗೌಡ ಗಾಯ ಮಾಡಿಕೊಂಡು ಅದು ಕೊಳೆತು ಬಾಧೆ ಕೊಡುತ್ತಿತ್ತಂತೆ. ಸಾಧು ನಾರಾಯಣಸ್ವಾಮಿ ಗಾಯವನ್ನು ಸ್ಪರ್ಶಿಸುತ್ತಿದ್ದಂತೆ ಹಿತವೆನಿಸಿ, ನೆಕ್ಕಲು ಶುರು ಮಾಡುತ್ತಿದ್ದಂತೆ ಅವರಿಗೆ ಅದೆನೋ ಆನಂದವಾಯಿತಂತೆ. ವಾರದಿಂದ ಜೀವ ಹಿಂಡುತ್ತಿದ್ದ ನೋವು ತಕ್ಷಣ ಮಾಯ. ಇದು ಪವಾಡವೇ ಸರಿ.  ಈಗ ಗಾಯವೂ ವಾಸಿಯಾಗುತ್ತಾ ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಮೂರು ದಿನ ಊಟ, ತಿಂಡಿ ಮರೆತಿದ್ದ ದೃಶ್ಯ ಮಾಧ್ಯಮ ತಂಡ:
ಕಳೆದ ಆರೇಳು ತಿಂಗಳ ಹಿಂದೆ ಸುದ್ದಿ ತಿಳಿದ ಸ್ನೇಹಿತ ದಂಡಿನಶಿವರ ತಿಮ್ಮೇಗೌಡ, ಬಾಲಕೃಷ್ಣ ಕಾಕತ್ಕರ್ ಮತ್ತು ತಂಡ ನಾರಾಯಣಸ್ವಾಮಿ ಬೆನ್ನು ಹತ್ತಿ ಶುದ್ಧ ಹಸಿ ಹಸಿ ದೃಶ್ಯಗಳನ್ನು ಸೆರೆ ಹಿಡಿದ ಜೊತೆಗೆ ಉತ್ತಮ ಸುದ್ದಿ ಮಾಡಿತ್ತು. ಇದೊಂದು ಬೊಂಬಾಟ್ ಹಾಟ್ ಸುದ್ದಿ ಎಂದು ಎಡಿಟಿಂಗ್‌ಗೆ ಕಳುಹಿಸಿತ್ತು. ಆದರೆ ಆಗಿದ್ದೇ ಬೇರೆ. ವಿಡಿಯೋ ಎಡಿಟ್ ಮಾಡುವ ಆಸಾಮಿ ದೃಶ್ಯಗಳನ್ನು ನೋಡಿ ಬಕಾ ಬಕಾ ಅಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಪ್ರಸಾರ ಸ್ಟುಡಿಯೋದ ಸಿಬ್ಬಂಧಿ ಜಮಾಯಿಸಿ ವೀಕ್ಷಿಸುತ್ತಿದ್ದಂತೆ ಹಲವಾರು ಮಂದಿ ವಾಂತಿ ಮಾಡಿಕೊಂಡಿದ್ದಾರೆ. ಕೆಲವರಂತೂ ಮೂರು ನಾಲ್ಕು ದಿನ ಊಟವನ್ನೇ ತೊರೆದಿದ್ದರಂತೆ. ಅಯ್ಯೋ ಈ ಎಪಿಸೋಡ್ ಪ್ರಸಾರ ಮಾಡಿದರೆ ನಾವು ದೊಡ್ಡ ಪಾಪಿಷ್ಟರಾಗುತ್ತೇವೆ. ನಾಡಿನ ವೀಕ್ಷಕರ ಊಟ ಕಿತ್ತುಕೊಂಡು ನರಕಕ್ಕೆ ಹೋಗುತ್ತೇವೆ. ಎಂದು ಬಾರಿ ಚಿಂತನೆ ನಡೆಸಿದ ಚಾನಲೆ ಕೊನೆಗೆ ಅದನ್ನು ಪ್ರಸಾರ ಮಾಡದಂತೆ ರದ್ದು ಪಡಿಸಿತಂತೆ.


ಸಾಧಕಿಯ ಯಶೋಗಾಥೆ: "ಒಲೆಯಮ್ಮ"  
ಓದಿಲ್ಲ, ಬರೆದಿಲ್ಲ ಅಕ್ಷರ ಜ್ಞಾನ ಮೊದಲೇ ಇಲ್ಲ. ಆದರೂ ಮನಸ್ಸಿದ್ದರೆ ಮಾರ್ಗ ಎನ್ನುವ ಪ್ರೋತ್ಸಾಹ ನುಡಿಯ ಬೆನ್ನು ಹತ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿಗೆ ಕೀರ್ತಿತಂದಿರುವ "ಒಲೆಯಮ್ಮ" ಹೊಸ ದಾಖಲೆ ಮಾಡಿ ಮತ್ತೊಮ್ಮೆ ದೇಶದ ಗಮನ ಸೆಳೆಯಲು ಹೊರಟಿದ್ದಾರೆ.
ನಮ್ಮ ಹಳ್ಳಿ ಅಡಿಗೆ ಮನೆ ಸಮಸ್ಯೆಯಲ್ಲಿ ಮಹಿಳೆಯರ ಉಸಿರುಗಟ್ಟಿಸಿ, ಕಣ್ಣಿನಲ್ಲಿ ನೀರು ಬರಿಸುವ ಹೊಗೆಯ ಉಪಟಳ ಸಹಿಸಲಸಾಧ್ಯ. ಸಮಸ್ಯೆಗೆ ಪರಿಹಾರ ಹುಡುಕಿ ಹೊಗೆ ರಹಿತ ಸುಲಭ ಮತ್ತು ಸರಳ ಅಸ್ತ್ರ ಒಲೆ ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಮಹಿಳೆಯರ ಸಮಸ್ಯೆಗೆ ಮುಕ್ತಿ ಕಾಣಿಸಿ ಅವರ ಅಚ್ಚುಮೆಚ್ಚಿನವರಾಗಿ "ಒಲೆಯಮ್ಮ" ಎಂದೇ ಪ್ರಸಿದ್ಧರಾಗಿರುವ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಮುದ್ದೇನಹಳ್ಳಿ ತಾಂಡ್ಯದ ಲಲಿತಾಬಾಯಿಯ ಯಶೋಗಾಥೆ ಇದು.
ತನ್ನ ಅವಿರತ ಶ್ರಮದಿಂದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಈಗಾಗಲೇ ೧೪ಸಾವಿರಕ್ಕೂ ಹೆಚ್ಚು ಒಲೆಗಳನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ೨೦ಸಾವಿರ ಒಲೆ ನಿರ್ಮಿಸುವ ಅತ್ಯುತ್ಸಾಹದಲ್ಲಿದ್ದಾರೆ. ವಯಸ್ಸು ೪೯ ಆದರೂ ಅವರ ಉತ್ಸಾಹ ಒಂದಿಷ್ಟೂ ಕುಗ್ಗಿಲ್ಲ. ಹಾಗಾಗಿ ಒಬ್ಬ ಮಾದರಿ ಯಶಸ್ವಿ ಗೃಹಿಣಿ ಎನಿಸಿದ್ದಾರೆ.
ಟೈಡ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಸಿಗುವ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಒಲೆಗಳನ್ನು ಕೇವಲ ೨೦೦-೩೦೦ರೂಗಳಲ್ಲಿ ಸರಳ, ಸುಲಭ ಅಸ್ತ್ರಒಲೆಯನ್ನು ತಯಾರಿಸಿ ಕೊಡುವ ಇವರು ಸ್ಥಳೀಯ ಮಟ್ಟದ ಉದ್ಯಮವಾಗಿಸಿಕೊಂಡು ಶ್ರಮವಹಿಸಿ, ನ್ಯಾಯವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಒಲೆಗಳಿಗಿಂಥ ವಿಭಿನ್ನ ಹಾಗೂ ಗ್ರಾಮೀಣ ಪರಿಸರಕ್ಕೆ ಸೂಕ್ತವಾಗಿ ಹೊಂದುವಂತಹ ಈ ಒಲೆಗಳು ಇಂಧನ ಮಿತವ್ಯಯಿ ಕೂಡ. ಗ್ರಾಮೀಣ ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲೂ ಇದು ಉತ್ತಮ ಎನಿಸಿದೆ. ಸಾಂಪ್ರದಾಯಿಕ ಒಲೆಗಳಿಗಿಂತ ಅರ್ಧ ಪಟ್ಟು ಕಡಿಮೆ ಕಟ್ಟಿಗೆಯಿಂದ ಅತ್ಯಂತ ಹೆಚ್ಚಿನ ಶಾಖ ನೀಡುವ ಈ ಒಲೆ ಹೊಗೆ ರಹಿತವಾಗಿದ್ದು ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚು ಎನಿಸಿದೆ.
ಭ್ಯೆಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನರ್ಸರಿ ತರಬೇತಿಯನ್ನೂ ಪಡೆದಿರುವ ಇವರು ತಮ್ಮ ಗ್ರಾಮದಲ್ಲಿ ಔಷಧ ಗಿಡಗಳನ್ನು ನೆಟ್ಟು ಜನರಿಗೆ ಉಪಕಾರಿಯಾದರು. ಹೋದ ಕಡೆಯಲ್ಲಿ ತನ್ನ ಕಾಯಕದ ಜೊತೆಗೆ  ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ, ಬಾಯಿ ಮಾತಿನ ಪ್ರಚಾರ ಮಾಡುವ ಸಾಮಾಜಿಕ ಸೇವಕಿ ಎನಿಸಿದ್ದಾರೆ.

ತರಬೇತಿಯಿಂದ ಏನಾದೀತು ಎಂದು ಗ್ರಾಮದ ಕೆಲವು ಜನರು ಹೀಯಾಳಿಸಿದ್ದರು. ಸೌದೆ, ಸೀಮೆಎಣ್ಣೆ, ವಿದ್ಯುತ್ ಹಾಗೂ ಆಧನಿಕ ಗ್ಯಾಸ್ ಸ್ಟೌಗಳ ಭರಾಟೆಯಲ್ಲಿ ಲಲಿತಾಬಾಯಿಯ ಅಸ್ತ್ರ ಒಲೆ ಉಳಿಯುತ್ತಾ ಎಂದು ಜನರಾಡಿ ಕೊಳ್ಳುವಾಗಲೇ ತನ್ನ ನಿಷ್ಟೆ, ಶ್ರದ್ದೆ ಮತ್ತು ಅಚಲ ವಿಶ್ವಾಸದಿಂದ ಮುನ್ನುಗಿದ್ದ ಅವರು ಎರಡು ವರ್ಷ ಕಳೆಯುವುದರ ಒಳಗೆ ೨೦೦೭ ಸಾಲಿನ ಸಿಐಐ-ಭಾರತಿ ಆದರ್ಶ ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗಿ ಆಗದು ಎಂದು ಕೈ ಹೊತ್ತು ಕುಳಿತ ಮಂದಿಯ ಎದುರು ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಟೆಲಿಕಾಂ ವಲಯದ ಏರ್‌ಟೆಲ್ ಭಾರತದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಹಸಿ ಉದ್ಯಮಿ ಎಂದು ಗುರ್ತಿಸಿಕೊಂಡು ಒಂದು ಲಕ್ಷ ನಗದು ಪುರಸ್ಕಾರ, ಪ್ರಶಸ್ತಿ ಹಾಗೂ ಪದಕದೊಂದಿಗೆ ದೆಹಲಿಯ ಅಂದಿನ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರಿಂದ ಬೆನ್ನುತಟ್ಟಿಸಿಕೊಂಡ ಹೆಮೆಯ ಮಹಿಳೆ ಎನಿಸಿದ್ದರು. ಈಗ ಹತ್ತಾರು ಸನ್ಮಾನಗಳು ಅಅರನ್ನು ಅರಸಿ ಬಂದಿವೆ.
ಸಾಧಕಿಯ ಯಶೋಗಾಥೆ:  

ತಿಪಟೂರು ತಾಲೂಕಿನ ಹಿಂದುಳಿದ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಅತ್ಯಂತ ಬಡತನದ ಶಾಪದಲ್ಲಿ ಕನಸ್ಸುಗಳನ್ನು ಗಂಟು ಕಟ್ಟಿ ಮೂಲೆಗೆಸೆದು ಗಂಡನೊಂದಿಗೆ ಬದುಕಿನ ಬಂಡಿ ನೆಡಸಲು ಹೆಗಲು ಕೊಟ್ಟಿದ್ದ ಲಿಲಿತಾಬಾಯಿ, ಹಸಿದ ಹೊಟ್ಟೆಯ ತಣಿಸಲು ಗಾರೆ ಕೆಲಸ, ಜಲ್ಲಿ ಹೊಡೆಯುವ ಕೆಲಸ, ಸೌದೆ ಹೊರುವ ಕೆಲಸ ಮಾಡಿ ಹೇಗೋ ಸಂಜೆಯ ವೇಳೆಗೆ ೨೦-೩೦ರೂ ದುಡಿಯುತ್ತಿದ್ದ ಲಲಿತಾಬಾಯಿ ಮುಂದೆ ತಾನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿ, ಆರ್ಥಿಕವಾಗಿ ಉತ್ತಮ ಜೀವನ ನಡೆಸುತ್ತೇನೆ ಎನ್ನುವ ಕಲ್ಪನೆಯೂ ಸಹ ಇರಲಿಲ್ಲ. ಕಿತ್ತು ತಿನ್ನುವ ಬಡತನದಲ್ಲಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರ ಭವಿಷ್ಯ ನಿರ್ಮಿಸುವ ಕನಸನ್ನೂ ಕಾಣದ ಸ್ಥಿತಿಯಲ್ಲಿ ಲಲಿತಾಬಾಯಿಗೆ ಕೈಹಿಡಿದಿದ್ದು ಟೈಡ್( ಟೆಕ್ನಾಲಜಿ ಇನ್ಫೋಮೆಟ್ರಿಕ್ ಡಿಸೈನ್ ಎಂಡೀವರ್) ಸಂಸ್ಥೆ.
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸುಸ್ಥಿರ ತಂತ್ರಜ್ಞಾನ ಕೇಂದ್ರ ಸರಳ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ ಸೌದೆ ಆಧಾರಿತ ಉರಿಯುವ ಒಲೆಯನ್ನು ನಿರ್ಮಿಸುವ ತರಬೇತಿಯನ್ನು ಎಲ್ಲರಂತೆ ಮುಗಿಸಿದ ಲಲಿತಾಬಾಯಿ ಇದರಲ್ಲೇ ತನ್ನ ಭವಿಷ್ಯವನ್ನು ಕನಸಿಕೊಂಡು ಅದಕ್ಕೊಂದು ರೂಪ ಮತ್ತು ಶಕ್ತಿ ಕೊಟ್ಟರು. ಕಲಿತದ್ದು ಈಕೆಯ ಕೈ ಹಿಡಿದ ಪರಿಣಾಮ ಇಂದು ಅತ್ಯಂತ ಬೇಡಿಕೆಯ ಸ್ವಯಂ ವೃತ್ತಿ ಮಹಿಳೆಯಾಗಿದ್ದಾರೆ. ತನ್ನ ೪೫ರ ವಯಸ್ಸಿನಲ್ಲಿ ದಿಕ್ಕು ಕಾಣದ ದಿನಗಳಲ್ಲಿ ತೆಗೆದುಕೊಂಡ ದೃಡ ನಿರ್ಧಾರ ಇಂದು ಆಕೆಯ ಭವಿಷ್ಯವನ್ನೇ ಬದಲಿಸಿದೆ. ಸಾಧಕಿ ಲಿಲತಾಬಾಯಿಯ ಛಲ ಮತ್ತು ಪರಿಶ್ರಮ ಆಕೆಗೆ ಗೌರವ, ಕೀರ್ತಿ, ಹಣ ಹಾಗೂ ತೃಪ್ತಿಯನ್ನು ನೀಡಿದೆ. ತನ್ನ ಮಗಳಿಗೆ ಟಿಸಿಹೆಚ್ ಓದಿಸಿ ಕೆಲಸ ಕೊಡಿಸಿದ್ದಾರೆ. ಮಗನಿಗೆ ಐಟಿಐ ತರಬೇತಿ ಕೊಡಿಸಿದ್ದಾರೆ. ತನ್ನ ನಿಷ್ಠೆ, ನಿಸ್ವಾರ್ಥ ಮತ್ತು ಅರ್ಪಣಾ ಮನೋಭಾವ ಕಾಯಕಕ್ಕೆ ದಿನಕ್ಕೆ ಕನಿಷ್ಟ ಐದು ನೂರು ದುಡಿಯುತ್ತಾ ಅದರಲ್ಲೇ ಸಂತೃಪ್ತಿ ಪಡುತ್ತಾರೆ. ಸಂಕಟದ ಬದುಕಿನ ತೀವ್ರತೆ ಅರಿತಿರುವ ಲಲಿತಾಬಾಯಿ ಕಷ್ಟ ಎಂದು ಬಂದ ಮಹಿಳೆಯರಿಗೆ ಬದುಕುವ ಮಾರ್ಗವನ್ನು ಹೇಳಿಕೊಡುತ್ತಾರೆ ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿ, ಪ್ರೋತ್ಸಾಹಿಸುತ್ತಿದ್ದಾರೆ. ಅವರೂ ಸ್ವ ಉದ್ಯೋಗ ಮಾಡುವಂತೆ ಹುರಿದುಂಬಿಸಿ, ಮಾರ್ಗದರ್ಶನ ನೀಡುತ್ತಾ ಪರಿಪೂರ್ಣ ಮಹಿಳೆ ಎನಿಸಿರುವ ಆಕೆಯನ್ನು ನಾನಾ ಸಂಘಟನೆಗಳು ಗುರ್ತಿಸಿ, ಹೆಮ್ಮೆಯಿಂದ ಅಭಿನಂದಿಸಿವೆ. ತಾಲೂಕು ಆಡಳಿತದ ನಾನಾ ಇಲಾಖೆಗಳು ಸನ್ಮಾನಿಸಿ, ಪುರಸ್ಕರಿಸಿವೆ.
ಬೆನ್ನ ಹಿಂದೆ ಬಿದ್ದು ಅಂಗಲಾಚಿ ಬೇಡುವ ಹುಂಬರಿಗೆ, ಹೊಗಳುವ ನಿರರ್ಥಕರಿಗೆ, ಸ್ವಾರ್ಥ ಪ್ರಚಾರ ಪ್ರಿಯರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಸರಕಾರ ಕೂಡಲೇ ಕೈಬಿಟ್ಟು ಇಂತಹ ನಿಸ್ವಾರ್ಥ ಶ್ರಮ ಜೀವಿಗಳನ್ನು ಗುರ್ತಿಸಿ, ಪುರಸ್ಕರಿಸಿದರೆ ಸಾರ್ಥಕ್ಯ ಎನಿಸುತ್ತದೆ.