Tuesday, March 18, 2014

ನಮ್ಮ ನಡುವಿನ ಗಾಂಧಿವಾದಿ ಕಳೆದು ಹೋಗಿದ್ದು..

 
ದಲಿತ ಶಕ್ತಿಯ ಸರ್ವೋದಯ ಟಿ. ದಾಸಪ್ಪ..



 ಕೆಳವರ್ಗದ ಬಗ್ಗೆ ಜಾತಿ ಕೀಳು ಮನೋಭಾವದಲ್ಲಿ ಅಸ್ಪೃಶ್ಯತೆ, ತಾತ್ಸರ ಮತ್ತು ಅಸಹನೆಯಿಂದ ನೋಡುತ್ತಿದ್ದ ಕಾಲಘಟ್ಟದಲ್ಲಿ ನಾಡಿನಲ್ಲಿ ದಲಿತರ ದ್ವನಿಗೆ ಒಂದು ಮಹತ್ವ ಮತ್ತು ಶಕ್ತಿ ತಂದು ಕೊಟ್ಟು, ಕೊನೆಯವೆಗೂ ದಲಿತರ ಪರವಾಗಿ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಬಸವ ಅನುಯಾಯಿ, ಶರಣ ಟಿ..ದಾಸಪ್ಪನವರ ಬದುಕು ಮತ್ತು ನಡೆ ಸಮಾಜಕ್ಕೆ ಆದರ್ಶಪ್ರಯವಾಗಿತ್ತು.. ಆದರೆ ಅವರ ಕಾಲಾನಂತರ ಅವರು ನಮ್ಮ ನಡುವೆ ಕಳೆದು ಹೋಗಿದ್ದು ಒಂದು ದುರಂತವೇ ಸರಿ..

ಹೌದು.. ಮೇಲಿನ ಮಾತನ್ನು ಅತ್ಯಂತ ದುಃಖ ಮತ್ತು ವೇದನೆಯಿಂದ ಹೇಳಲೇ ಬೇಕು..
ಈಚೆಗಷ್ಟೆ ನಮ್ಮ ನಡುವೆ ಇದ್ದ ಒಬ್ಬ ದಲಿತ ನಾಯಕ ಮತ್ತಿಹಳ್ಳಿ ದೊಡ್ಡಯ್ಯ ನಿಧನರಾದರು. ಕಳೆದ ಒಂದು ದಶಕದಲ್ಲಿ ನಾವು ಇದೇ ರೀತಿಯಲ್ಲಿ ಮೂವರು ದಲಿತ ಪರ ಹೋರಾಟಗಾರನ್ನು ಕಳೆದುಕೊಂಡಿದ್ದೇವೆ. ಇದು ದಲಿತ ಸಮಾಜಕ್ಕೆ ಆದ ಬಹು ದೊಡ್ಡ ನಷ್ಟವೆಂದರೆ ತಪ್ಪಾಗಲಾರದು.
ಸತತ ೩೦-೪೦ ವರ್ಷಗಳ ಕಾಲ ದಲಿತರ ಸಮಸ್ಯೆಗಳಿಗೆ, ನೋವುಗಳಿಗೆ ಮತ್ತು ದಲಿತರ ಹೋರಾಟಗಳಲ್ಲಿ ಭಾಗವಹಿಸಿ ತಮ್ಮ ಜೀವನ ಪೂರ್ತಿ ದಲಿತರ ಸೇವೆಯಲ್ಲೇ ತಮ್ಮ ಬದಕು ಸವೆಸಿದ ದಲಿತ ಮುಖಂಡರಾದ ಕೊಪ್ಪದ ಸಿ.ಪಾಂಡು ಆಗಲಿ ಅಥವಾ ಮತ್ತಿಹಳ್ಳಿ ದೊಡ್ಡಯ್ಯನವರಾಗಲಿ ತಮಗಾಗಿ ಏನೂ ಮಾಡಿಕೊಳ್ಳದೇ ತಮ್ಮನ್ನೇ ನಂಬಿದ ಕುಟುಂಬಕ್ಕೂ ಏನನ್ನೂ ಕೊಡದೇ ಭಗವಂತನ ಪಾದ ಸೇರಿಕೊಂಡು ಬಿಟ್ಟರು. ಇದು ಒಂದು ಸಂಕಟವಾದರೆ,

ನಾಡಿನ ಬಹುದೊಡ್ಡ ದಲಿತರ ವಿದ್ಯಾ ಸಂಸ್ಥೆಯಾಗಿ ಬೆಳೆಯುತ್ತದೆ ಗ್ರಾಮೀಣ ದಲಿತ ಮಕ್ಕಳ ಜ್ಞಾನ ದಾಹ ತಣಿಸಿ, ಸಾವಿರಾರು ದಲಿತ ಕುಟುಂಬಗಳ ಮನೆಯ ಬೆಳಗುತ್ತದೆ ಎಂದುಕೊಂಡಿದ್ದ ಸ್ವತಃ ದಾಸಪ್ಪನವರೇ ಕಟ್ಟಿ ಬೆಳೆಸಿದ ಸರ್ವೋದಯ ವಿದ್ಯಾ ಸಂಸ್ಥೆ ಕೂಡ ಅವರು ಹೋದ ಹಾದಿಯಲ್ಲೇ ಅಳಿದು ಹೋಗುತ್ತಿರುವುದು ಒಂದು ವಿಪರ್ಯಾಸವೇ..

ದಲಿತರ ದೇವಾಲಯ ಪ್ರವೇಶವನ್ನು ನಿರಾಕರಿಸಿದ ಅಂದಿನ ದಿನಗಳಲ್ಲಿ ಬಲಿಷ್ಠ ಮೇಲ್ವರ್ಗದ ವಿರುದ್ಧ ಸಡ್ಡು ಹೊಡೆದು ತಮ್ಮ ಹಕ್ಕು ಚಲಾಯಿಸಿದ ದಾಸಪ್ಪ ಅಂದು ನಾಡಿನ ಮನೆ ಮನೆ ಮಾತಾಗಿದ್ದರು. ಮುಂದೆ ಅವರು ಜೀವನದಲ್ಲಿ ತಿರುಗಿ ನೋಡದೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರ್ತಿಸಿಕೊಂಡರು. ಜಾತ್ಯಾತೀತ ನಿಲುವಿನ ದಾಸಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೈಲು ವಾಸ ಅನುಭವಿಸಿದ್ದರು. ನಂತರ ಸತ್ಯಾಗ್ರಹ, ಚಳುವಳಿ, ಅಹಿಂಸೆಯ ಪ್ರತಿಪಾದನೆ ಮೂಲಕ ದೇಶದ ಮನಗೆದ್ದಿದ್ದ ಗಾಂಧಿಯವರಿಂದ ಪ್ರಭಾವಿತರಾಗಿ ಅವರ ಅನುಯಾಯಿ ಆದರು.
೧೨ನೇ ಶತಮಾನದಲ್ಲಿ ಜಾತ್ಯಾತೀತ ನಿಲುವು ಮೂಲಕ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದ ಬಸವಣ್ಣವರ ಆದರ್ಶಗಳಿಂದಲೂ ಪ್ರಭಾವಿತರಾದ ದಾಸಪ್ಪವರು ದೀಕ್ಷೆ ಪಡೆದು ಶರಣರಾದರು. ಮಾಂಸ ಮತ್ತು ಮಧ್ಯ ತ್ಯಜಿಸಿದ ಅವರು ಇದರ ವಿರುದ್ಧ ಹಲವಾರು ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ೧೯೬೮ರಿಂದ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿ ಬಡವರ, ದೀನ ದಲಿತರ, ಅನಾಥ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದರು. ತುಮಕೂರಿನಲ್ಲಿ ಗಂಗಾಧರಯ್ಯ ಸಿದ್ಧಾರ್ಥ ವಿದ್ಯಾ ಸಂಸ್ಥೆ ಹುಟ್ಟು ಹಾಕಿದ್ದ ಕಾಲದಲ್ಲಿ ತಿಪಟೂರಿನಲ್ಲಿ ದಾಸಪ್ಪನವರು ನಾನಾ ಕನಸು ಕಂಡು ಶೈಕ್ಷಣಿಕ ಸೇವೆಗೆ ಮುಂದಾಗಿದ್ದರು. ಈಗಾಗಿ ಇಂದು ಲಕ್ಷಾಂತರ ಮಂದಿ ಹೊರಗೆ ಅವರ ಹೆಸರು ಹೇಳಿಕೊಂಡು ಅನ್ನದ ದಾರಿ ಕಂಡು ಕೊಂಡಿದ್ದಾರೆ..


ಸರ್ವರ ಹಿತದ ಸರ್ವೋದಯ ಉದಯ:     
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಯರಾಂ, ಮಾರನಗೆರೆ ರಂಗಪ್ಪ, ವಿಶ್ವನಾಥಶೆಟ್ಟರು, ಟಿ..ದಾಸಪ್ಪ ಸೇರಿದಂತೆ ಸಮಾನ ಮನಸ್ಥಿತಿಯ ಎಂಟು ಹತ್ತು ಜನ ಅಂದು ಗ್ರಾಮೀಣ ಬಡಜನತೆಯ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಒಂದು ಸಂಸ್ಥೆ ಹುಟ್ಟು ಹಾಕಿದರು. ಸರ್ವರ ಉದಯದ ಸಂಕೇತವಾಗಿ ಸರ್ವೋದಯ ಎಂದು ಹೆಸರಿನಲ್ಲಿ ಸಂಸ್ಥೆ ಆರಂಭಿಸಿದರು. ಜಾತಿಯಲ್ಲಿ ಮೇಲ್ವರ್ಗವಾಗಿದ್ದರೂ ವಿಶ್ವನಾಥಶೆಟ್ಟರು ದಲಿತರ ಪರವಾಗಿ ದ್ವನಿ ಎತ್ತಿದ್ದ ಮೊದಲ ವ್ಯಕ್ತಿಯಾಗಿದ್ದರು. ನಂತರ ಅವರು ಸಂಸ್ಥೆಯ ಉದ್ಧಾರಕ್ಕೆ ಸಾಕಷ್ಟು ಶ್ರಮಿಸಿದ್ದರು.
ಅವರು ಅಧ್ಯಕ್ಷರಾಗಿ ಟಿ..ದಾಸಪ್ಪ ಕಾರ್ಯದರ್ಶಿಯಾಗಿ ಸಂಸ್ಥೆ ೧೯೯೦ರವರೆಗೂ ಅದ್ಭತವಾಗಿ ಬೆಳದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತಿ ಪಡೆದಿತ್ತು. ನರ್ಸರಿಯಿಂದ ಹಿಡಿದು ಪದವಿ ಪೂರ್ವ ಮಟ್ಟದವರೆಗೂ, ಟೈಪಿಂಗ್, ವೃತ್ತಿ ಶಿಕ್ಷಣ ತರಬೇತಿಯವರೆಗೂ ಇಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಸಿಗುತ್ತಿತ್ತು. ಸಾವಿರಾರು ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡುತ್ತಿದ್ದ ಹೆಮ್ಮೆಯ ಶಿಕ್ಷಣ ಸಂಸ್ಥೆ ಇದಾಗಿತ್ತು. ಹತ್ತಾರು ಹಸುಗಳು ಇಲ್ಲಿ ಹಾಲು ಕಡೆಯುತ್ತಿದ್ದವು. ನಿತ್ಯಾ ಇಲ್ಲಿ ಪ್ರಾಥಃ ಕಾಲದ ಪ್ರಾರ್ಥನೆಯೊಂದಿಗೆ ಸಾವಿರಾರು ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಕಲಿಯುತಿದ್ದವು. ಸಂಸ್ಥೆಯ ಅದೀನದಲ್ಲಿ ಶಿರಸಿ ಮತ್ತು ತುಮಕೂರಿನಲ್ಲಿಯೂ ನಾನಾ ಶಾಲೆಗಳು ಶೈಕ್ಷಣಿಕ ಸೇವೆ ಆರಂಭಿಸಿದ್ದವು..

ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ನಾನಾ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಕ್ರೀಡೆಯಲ್ಲೂ ಮಕ್ಕಳು ಇತರೆ ಶಾಲೆಗಳೊಂದಿಗೆ ಪೈಪೋಟಿ ನಡೆಸುತ್ತಿದ್ದರು. ಇಲ್ಲಿನ ಮಕ್ಕಳು ಜಿಲ್ಲೆ, ಅಂತರ ಜಿಲ್ಲೆ, ರಾಜ್ಯ ಮತ್ತು ಅಂತರ ರಾಜ್ಯ ಮಟ್ಟದಲ್ಲೂ ಸಂಸ್ಥೆಗೆ ಕೀರ್ತಿ ತಂದ ನಾನಾ ಉದಾಹರಣೆಗಳುಂಟು. ಇಂದು ದೇಶದ ಮೂಲೆ ಮೂಲೆಯಲ್ಲೂ ಸಂಸ್ಥೆಯಲ್ಲಿ ಓದಿದ್ದವರು ಉತ್ತಮ ವೃತ್ತಿಯಲ್ಲಿದ್ದಾರೆ. ವೈಧ್ಯರಿದ್ದಾರೆ, ಶಿಕ್ಷಕರಿದ್ದಾರೆ, ಇಂಜಿನಿಯರ್ಸ್, ಪತ್ರಕರ್ತರು, ಉಪನ್ಯಾಸಕರು, ಕಲಾವಿದರು, ಹೋರಾಟಗಾರರು..ಇದ್ದಾರೆ.
ಮುಂದೆ ಒಂದು ದಿನ ಇಲ್ಲಿ ವಿಜ್ಞಾನ, ತಾಂತ್ರಿಕ ಮತ್ತು ವೈಧ್ಯಕೀಯ ಶಿಕ್ಷಣ ದೊರೆಯುವ ಮಟ್ಟಕ್ಕೆ ಬೆಳೆಯುತ್ತದೆ ಎಂದು ಸಮಾಜದ ನಾನಾ ವ್ಯಕ್ತಿಗಳು ಆಶಾವಾದ ವ್ಯಕ್ತ ಪಡಿಸಿದ್ದರು. ಇತರೆ ಶಿಕ್ಷಣ ಸಂಸ್ಥೆಗಳೂ ಸಹ ಇದೇ ನಿಲುವು ತಾಳಿದ್ದರು.

ನೆಲ ಕನಸು, ಹಾಳಾದ ಸಂಸ್ಥೆ:

ಸರ್ವರ ಹಿತದ ಸರ್ವೋದಯ ಉದಯವಾಗಿ ಸುಮಾರು ೩೦ ವರ್ಷಗಳಲ್ಲೇ ಬಹು ಎತ್ತರಕ್ಕೆ ಬೆಳೆದು ಅಷ್ಟೇ ವೇಗವಾಗಿ ಕುಸಿದು ಬಿತ್ತು. ಸಂಸ್ಥಾಪಕರ ಆದರ್ಶಗಳು ಕಾಣೆಯಾದವು. ಅವರ ಕನಸು ನನಸಾಗುವ ಸಮಯದಲ್ಲೆ ನಾನಾ ಅಪಸ್ವರಗಳು ಕೇಳಿ ಬಂದವು. ಸಾತ್ವಿ ಮನೋಭಾವದ ದಾಸಪ್ಪನವರು ಸ್ವಾರ್ಥ ಮತ್ತು ಅವಕಾಶವಾದಿಗಳ ಕುಯುಕ್ತಿಗೆ ಬಲಿಯಾದರು. ಹಾಲಿನಂತೆ ಬೆಳೆಯುತ್ತಿದ್ದ ಸಂಸ್ಥೆಯೊಳಗೆ ಆಗಲೇ ವಿಷಬೀಜ ಬಿತ್ತಿರುವ ವಿಚಾರ ತಿಳಿದು, ಆಕ್ರೋಶಗೊಂಡರು ಕಾಲ ಮಿಂಚಿದ್ದರಿಂದ ಏನೂ ಮಾಡಲಾಗದೇ ಸುಮ್ಮನಾದರು. ತಾವು ಕಟ್ಟಿ ಬೆಳೆಸಿದ ಸಂಸ್ಥೆ ಕಣ್ಣಾ ಮುಂದೆಯೇ ಪರರ ದುಷ್ಟತನದಿಂದ ಹಾಳಾಗಿ ಹೋಗುತ್ತಿದ್ದರೂ ಮೌನವಾಗಿಯೇ ಕಣ್ಣೀರು ಹಾಕಿದರು. ನೊಂದರು, ಬೆಂದರೂ ಯಾರೂ ಅವರ ಸಹಾಯಕ್ಕೆ ಬರಲಿಲ್ಲ.
ತಾವು ಕರೆದುಕೊಂಡು ಬಂದು ಅನ್ನ ಹಾಕಿದ ವ್ಯಕ್ತಿಗಳೇ ದಾಸಪಪ್ನವರ ವಿರುದ್ಧ ತಿರುಗಿ ಬಿದ್ದು ಇಡೀ ಸಂಸ್ಥೆಯ ಹಿಡಿತ ಸಾಧಿಸಿದರು. ಎಲ್ಲಾ ಆಡಳಿತಾಧಿಕಾರ ಪಡೆದು ಶಾಂತಿಯ ನಂದನವನವಾಗಿದ್ದ ಸಂಸ್ಥೆಯ ವಾತಾವರಣದಲ್ಲಿ ಅಸಹನೆ, ದ್ವೇಷ, ಅಸೂಹೆಯ, ಪರಸ್ಪರ ಕಿತ್ತಾಟ, ಗುದ್ದಾಟದ ಗೂಡು ಮಾಡಿದರು. ಮನನೊಂದ ದಾಸಪ್ಪನವರು ಬೆಂಗಳೂರಿನ ಗಾಂ ಧಿಭವನದಲಿ ವಾಸ ಮಾಡಲು ಶುರು ಮಾಡಿದರು. ಇಲ್ಲಿ ಆಡಳಿತ ದಿಕ್ಕು ತಪ್ಪಿತು.

ದಿನೇ ದಿನೇ ಶಾಲೆಯ ಬೆಳೆವಣಿಗೆ ಕುಂಠಿತಗೊಂಡು ಹೀನಾಯ ಸ್ಥಿತಿ ತಲುಪಿತು. ಇಂದು ಸ್ಮಾರಕದಂತೆ ಕಾಣುತ್ತಿದೆ. ಬನ್ನಿ ನೋಡಿ ಇದು ಸತ್ಯ. ಒಂದು ಕಾಲದಲ್ಲಿ ಸಾವಿರಾರು ಮಕ್ಕಳು, ಹತ್ತಾರು ಹಸು ಕರುಗಳು, ಹಾಲು, ಮೊಸರು ಮಜ್ಜಿಗೆಯಿಂದ ನಂದನವನದಂತೆ ಕಣ್ಣು ಕುಕ್ಕುತ್ತಿದ್ದ ಸರ್ವೋದಯ ಸಂಸ್ಥೆ ಈಗ ಹಾಳೂರಿನಂತೆ ಕಾಣೂತ್ತಿದೆ. ಈಗ ಕೇವಲ ಪ್ರೌಢಶಾಲೆ ಮಾತ್ರ ನಡೆಯುತಿದೆ. ಸಾವಿರಾರು ಬದಲಿಗೆ ಅವರ ಸಂಖ್ಯೆ ೪೦-೫೦ಕ್ಕೆ ಇಳಿದಿದೆ. ಇರುವ ಕಟ್ಟಡಗಳು ಉದುರಿ ಹೋಗುತ್ತಿವೆ. ಎಲ್ಲವೂ ಅಳಿದು ಹೋದ ಸ್ಮಾರಕದಂತೆ ಕಾಣುತ್ತಿದೆ.
ಮಧ್ಯೆ ಎರಡು ಗುಂಪುಗಳು ಇರುವ ಕೋಟ್ಯಾಂತರ ರೂಪಾಯಿಯ ಆಸ್ತಿ ಕಬಳಿಸಲು ಇಲ್ಲದ ಸಂಚು ನಡೆಸಿ, ಸಂಸ್ಥೆಯನ್ನು ಗುಡಿಸಿ ಗುಂಡಾಂತರ ಮಾಡಲು ಹವಣಿಸುತ್ತಿವೆ. ಎಲ್ಲಾ ಅಕ್ರಮಗಳ ನಡುವೆ ಬಲಿಷ್ಟಶಕ್ತಿಗಳ ಅಟ್ಟಹಾಸ ಸಂಸ್ಥೆಯ ಮೇಲೆ ಬಿದ್ದಿದೆ. ಈಗಾಗಲೇ ಬೇರೆ ಕಡೆಯಿದ್ದ ಕೋಟ್ಯಾಂತರ ರೂಗಳ ಆಸ್ತಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ.
ಸರ್ಕಾರ, ಇಲಾಖೆಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದರೆ ನಾಡಿನ ದಲಿತವರ್ಗ ಮತ್ತು ಶಿಕ್ಷಿತ ವರ್ಗ ಜಾಣ ಮೌನ ವಹಿಸಿವೆ. ಹಳೆಯ ವಿದ್ಯಾರ್ಥಿಗಳ್ಯಾರೂ ಹಾಳಾದ ತಮ್ಮ ಸಂಸ್ಥೆ ತಿರುಗಿಯೂ ನೋಡಿಲ್ಲ
ಇದನ್ನೆಲ್ಲಾ ಕಣ್ಣಾರೆ ಕಂಡ ದಾಸಪನವರ ಆತ್ಮ ಮಾತ್ರ ಅಲ್ಲೇ ಮೌನವಾಗಿದ್ದುಕೊಂಡು ತನ್ನೊಳಗೆ ನೊಂದು ಕೊಂಡು ಆಕ್ರಂದನ ಮಾಡುತ್ತಾ ಸುತ್ತುತ್ತಾ ಕಂಡ ಕಂಡವರಿಗೆ ಅರಿವಾಗದಂತೆ ಸಂಸ್ಥೆಯ ಉಳಿಸಿ ಎಂದು ಗೋಗರೆಯುತ್ತಿದೆ.. ಪ್ರಲಾಪಿಸುತ್ತಿದೆ..