Saturday, August 6, 2011

ತುತ್ತಿನ ಚೀಲ ತುಂಬಲು ಚಿಂದಿ ಹಾಯುವ ಮಕ್ಕಳು:



ತುತ್ತಿನ ಚೀಲ ತುಂಬಲು ಚಿಂದಿ ಹಾಯುವ ಮಕ್ಕಳು:

ಹಾಲು ಗಲ್ಲದ ಮಕ್ಕಳೂ ಕೊಳಚೆಯಲ್ಲಿ ಚಿಂದಿಹಾಯುವ ಸ್ಥಿತಿ: ಬದುಕಿನೊಂದಿಗೆ ಬಿಡದೇ ಅಂಟಿಕೊಂಡ ಬಡತನದ ಬೇಗೆಯಲ್ಲಿ ತುತ್ತು ಕೂಳಿಗೆ, ತುಂಡು ಬಟ್ಟೆಗೆ ನಿತ್ಯಾ ಪರದಾಡುವ ಲಕ್ಷಾಂತರ ಜನರ ದುಸ್ಥಿತಿ..  ಇದು ಇಂದಿನ ಭಾರತ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ನಮ್ಮ ಘನ ಸರಕಾರದ ಮಹತ್ತರ ಘೋಷಣೆ ನಡುವೆ ಇಂತಹ ಪರಿಸ್ಥಿತಿ ನಿಜಕ್ಕೂ ಶೋಚನೀಯ.  ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ತುತ್ತಿನ ಚೀಲ ತುಂಬಿಕೊಳ್ಳಲು ಹಸಿದ ಜನ ನಾನಾ ನಾನಾ ಮಾರ್ಗ ಅನುಸರಿಸುತ್ತಾರೆ. ಕೆಲವರು ಬಿಕ್ಷೆ ಬೇಡಿ ಜೀವನ ಸಾಗಿಸಿದರೆ, ಮತ್ತೆ ಕೆಲವರು ನಾನಾ ವೇಷ ಭೂಷಣ ತೊಡುತ್ತಾರೆ. ಒಂದಷ್ಟು ಜನ ಈ ತರಹದ ಬೀದಿ ಬೀದಿಗಳಲ್ಲಿ ಚಿಂದಿ ಆಯ್ದು ಬದುಕಿನ ಗಾಡಿ ನಡೆಸುತ್ತಾರೆ. ಇವರಲ್ಲಿ ಕುಂಟರೆಷ್ಟೋ, ಕುರುಡರೆಷ್ಟೋ, ರೋಗಿಗಳೆಷ್ಟೋ, ನಿರ್ಗತಿಕರೆಷ್ಟೋ, ವೃದ್ಧರೆಷ್ಟೋ..

ತಿಪಟೂರು ನಗರದ ಕೆಲವು ಭಾಗಗಳಲ್ಲಿ ಅನಾಥರು, ಬಿಕ್ಷಕರು, ನಿರ್ಗತಿಕರ ಸಂಖ್ಯೆ ಹೆಚ್ಚುತ್ತಿದೆ. ನಗರವಲ್ಲದೇ ಇತರೆ ನಗರಗಳು, ಪಟ್ಟಣಗಳಲ್ಲಿ ಇವರ ಸಂಖ್ಯೆಯೇನೂ ಕಡಿಮೆ ಇಲ್ಲ. ದಾರಿಯಲ್ಲಿ ಮಕ್ಕಳನ್ನು ಮಕಡೆ ಮಲಗಿಸಿ ನೋಡುಗರಿಗೆ ಕನಿಕರ ಬರುವಂತೆ ಬಿಕ್ಷೆ ಬೇಡುವವರು ಒಂದು ಕಡೆ ತಮ್ಮ ದಿನವನ್ನು ದೂಡಿದರೆ. ಮತ್ತೊಂದು ಕಡೆ  ಬೀದಿಗಳಲ್ಲಿ, ಮನೆಯ ಮುಂದೆ, ಕೊಳಚೆ ಪ್ರದೇಶದಲ್ಲಿ ಕಸದ ರಾಶಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು, ಕಬ್ಬಿಣದ ತುಂಡುಗಳು ಇತ್ಯಾದಿಗಳನ್ನು ಹೆಕ್ಕಿ ತೆಗೆದು, ಮಾರಿ ಅನ್ನ ಸಂಪಾದಿಸುವ ಈ ಜನ ತಮ್ಮ ಆ ದಿನದ ತುತ್ತಿನ ಚೀಲ ತುಂಬಿಕೊಳ್ಳುವ ಮೂಲಕ ಹಸಿವಿನ ವೇದನೆಯನ್ನು ತಣಿಸಿಕೊಳ್ಳುತ್ತಾರೆ. ಇವರೆಲ್ಲಾ ನಿರಾಶ್ರಿತರೇ. ಹಾಳು ಮನೆ, ಶಾಲೆ, ಮರಗಳ ನೆರಳೇ ಇವರಿಗೆ ಸೂರು.

ಆದರೆ ಜಗತ್ತಿನ ಪರಿವೇ ಇಲ್ಲದ ಮುಗ್ದ ಹಾಲು ಗಲ್ಲದ ತಮ್ಮ ಮಕ್ಕಳನ್ನೂ ಸಹ ಇಂತಹ ಚಿಂದಿ ಆಯುವ ಕೆಲಸಕ್ಕೆ ಹಚ್ಚುವ ದುಸ್ಥಿತಿ ನಿಜಕ್ಕೂ ಕರಣಾಜನಕ. ಇಲ್ಲಿನ ರೈಲ್ವೇ ನಿಲ್ದಾಣ ಮತ್ತಿತರ ಕಡೆ ವಾಸಿಸುವ ಬಡ ದಂಪತಿಗಳು ನಗರದ ನಾನಾ ಬಡಾವಣೆಗಳಲ್ಲಿ ನಿತ್ಯಾ ತಿರುಗುತ್ತಾ ಮನೆಯಿಂದ ಎಸೆದ ಕಸದಲ್ಲಿ ಮತ್ತು ದುರ್ವಾಸನೆಯುಕ್ತ ಕೊಳಚೆಗಳಲ್ಲಿ ಚಿಂದಿ ಆಯುವ ಕಾಯಕ ಮಾಡುತ್ತಾರೆ. ಅವರಿಗೆ ಆ ಕಾಯಕದಲ್ಲಿಯೇ ಅನ್ನ, ಬಟ್ಟೆ ಸಿಕ್ಕಿರ ಬಹುದು ಅಥವಾ ಸಿಕ್ಕದೇ ಇರಬಹುದು. ಆದರೆ ನಿಯಂತ್ರಣದ ಅರಿವಿಲ್ಲದೇ ಹುಟ್ಟಿದ ಎಲ್ಲಾ ಮಕ್ಕಳನ್ನು ಚಿಂದಿ ಹಾಯುವ ಕೆಲಸಕ್ಕೆ ಅಚ್ಚುವುದು ಎಷ್ಟು ಸರಿ? ಇದು ತಪ್ಪು ಎಂದು ಅವರ ಮನವೊಲಿಸಿ ಪನರ್ವಸತಿ ಕಲ್ಪಿಸಿಕೊಡುವವರು ಯಾರು?

೨೮ ವರ್ಷದ ಈ ಮಹಿಳೆಗೆ ೩೫ ವರ್ಷದ ಗಂಡನಿದ್ದಾನೆ. ಅವನು ಒಂದು ಕಡೆ ಚಿಂದಿ ಆಯುತ್ತಾನೆ. ಈಕೆಗೆ ಸುಮಾರು ಐದು ವರ್ಷದ ಒಂದು ಹೆಣ್ಣು ಮಗುವಿದೆ, ಮೂರು ವರ್ಷದ ಒಂದು ಗಂಡು ಮಗು ಜೊತೆಯಲ್ಲಿ ಹಾಲು ಕುಡಿಯುವ ಒಂದು ವರ್ಷದ ಗಂಡು ಮಗು ಜೊತೆಗೆ ವಯಸ್ಸಾದ ತಾಯಿ ಇದ್ದಾರೆ. ನಗರದ ಬೀದಿ ಬೀದಿಯಲ್ಲಿ ಚಿಂದಿ ಆಯಲು ತನ್ನ ಮೂರು ಮಕ್ಕಳನ್ನು ಕರೆದುಕೊಂಡು ಹೋಗುವ ಈ ಮಹಿಳೆಗೆ ಬಡತನವೇ ದೊಡ್ಡ ಶಾಪವಾಗಿದೆ. ನಾನಾ ಸುಂದರ ಕನಸುಗಳನ್ನು ಕಟ್ಟಿಕೊಂಡು ಎಲ್ಲಾ ಮಕ್ಕಳಂತೆ ಕುಣಿದು ನಲಿಯಬೇಕಾದ ಹೆಣ್ಣು ಮಗು ಚೀಲ ಹಿಡಿದು ಕೊಳಚೆಯಲ್ಲಿ ಚಿಂದಿ ಆಯುವ ಪರಿ ನೋಡಿದರೆ ಕಲ್ಲು ಹೃದಯವೂ ಹಿಂಡುವಂತಾದ್ದು. ತಾಯಿ ಅವಸರದಲ್ಲಿ ಮುಂದೆ ಮುಂದೆ ಚಿಂದಿಗಳನ್ನು ಹೆಕ್ಕಿ ತೆಗೆದು ಹೋಗುತ್ತಿದ್ದರೆ ಮಕ್ಕಳು ಅಳುತ್ತಾ ಅವರನ್ನು ಹಿಂಬಾಲಿಸುತ್ತವೆ. ಒಂದೊಂದು ಸಲ ಆಕೆ ಹಾಲು ಕುಡಿಯುವ ಮಗುವನ್ನು ಸೊಂಟಕ್ಕೆ ಕುಳ್ಳಿರಿಸಿಕೊಂಡು ಮತ್ತೊಂದು ಬಗಲಲ್ಲಿ ಆಯ್ದ ಚಿಂದಿಯ ಮೂಟೆ ಇಟ್ಟುಕೊಂಡು ತನ್ನ ಕಾಯಕ ಮುಂದುವರಸುತ್ತಾಳೆ. ಸುಸ್ತಾದರೆ ಎಲ್ಲೆಂದರಲ್ಲಿ ಕಸದ ನಡುವೆ ಮಗುವನ್ನು ಕೆಳಗೆ ಕೂರಿಸಿ, ಆ ಕಸದಲ್ಲಿಯೇ ಅನ್ನ ಹುಡುಕುವ ಕಾಯಕ ಮಾಡುತ್ತಾಳೆ. ಸಂಜೆಯವರೆಗೂ ಸುಮಾರು ಚಿಂದಿ ಸಂಗ್ರಹಿಸಿ ಬೇರ್ಪಡಿಸಿ, ಮಾರಾಟ ಮಾಡುತ್ತಾರೆ. ಹಳೇ ಪ್ಲಾಸ್ಟಿಕ್, ಹಾಲಿನ ಕವರ್, ಸಣ್ಣ ಪುಟ್ಟ ಕಬ್ಬಿಣ ಹಾಗೂ ತಗಡಿನ ತುಂಡುಗಳನ್ನು ಕೊಳ್ಳುವ ವ್ಯಾಪಾರಿಗಳಿದು ಅವರ ಬಳಿ ಮಾರಿ ಗಂಜಿಗೆ ಹಣ ಸಂಪಾದಿಸುತ್ತಾರೆ. ಬಯಲಲ್ಲೇ ಅಡಿಗೆ ಮಾಡಿ ಹಸಿದ ಹೊಟ್ಟೆಯ ತುಂಬಿಸಿ, ಆಕಾಶ ನೋಡುತ್ತಾ ಮಲಗಿ ನಿದ್ರಿಸುತ್ತಾರೆ. ಪುನಃ ಬೆಳಿಗ್ಗೆ ಅದೇ ಕಾಯಕ.

ಹೌದು, ಹಸಿವಿನ ಬಾಧೆಯನ್ನು ಕಂಡವರಿಗೆ ಗೊತ್ತು ಅದರ ಸಂಕಟ. ನಿತ್ಯಾ ಕಾಟ ಕೊಡುವ ಹೊಟ್ಟೆಯ ವೇದನೆ ತಣಿಸಲು ಈ ಪರದಾಟ. ಹುಟ್ಟು ಅವರಿಗೆ ಬಡತನ ಮತ್ತು ಹಸಿವನ್ನು ನೀಡಿರುತ್ತದೆ. ತಿಂಡಿ ಅಥವಾ ಊಟ ಸ್ವಲ್ಪ ತಡವಾದರೂ ಬಡಿದುಕೊಳ್ಳುವ ನಾವು ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಆ ಹಸಿವಿನ ನೋವು ಸಹಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅವರು ನಮ್ಮಂತೆ ಮನುಷ್ಯರು ಎಂದು ಭಾವಿಸದ ಸಮಾಜ ಅವರನ್ನು ಸರಿ ದಾರಿಗೆ ತರದೇ ನಿರ್ಲಕ್ಷಿಸಿ, ದೂರ ಇಟ್ಟಿರುವುದರಿಂದ ಅವರು ನಿತ್ಯಾ ಕಡು ಬಡತನದ ವೇದನೆ ಅನುಭವಿಸುವಂತಾಗಿದೆ. ಸರಕಾರದ ಯಾವ ಸವಲತ್ತುಗಳೂ ಇವರಿಗೆ ಸಿಗುವುದಿಲ್ಲ ಅಥವಾ ಗುರ್ತಿಸಿ, ಅವರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ನಮ್ಮ ಜನಪ್ರತಿನಿಧಿಗಳು ಮಾಡುವುದಿಲ್ಲ. ಅವರಿಗೆ ಒಂದು ಪರಿಹಾರ ಅಥವಾ ಪರ್ಯಾಯ ಬದುಕಿನ ಮಾರ್ಗವನ್ನು ಯಾರೂ ಹುಡುಕಿಕೊಡುವ ಮನಸ್ಸು ಮಾಡೋದೂ ಇಲ್ಲ. ಇನ್ನೂ ಬಡತನ ನಿರ್ಮೂಲನೆಗೆ ಸರಕಾರಗಳು ಬಿಡುಗಡೆ ಮಾಡುವ ಸಾವಿರಾರು ಕೋಟಿಗಳು ಸಾಲದೇ ಅದು ಇಲಾಖೆಗಳ ಬಾಗಿಲು ದಾಟಿ, ಇಂತಹ ನಿರ್ಗತಿಕರ ತಲುಪುವಲ್ಲಿ ವಿಫಲವಾಗಿದೆ.  ಹಾಗಾಗಿ ಬೀದಿಯಲ್ಲಿರುವುದು ಇಂತಹವರಿಗೆ ಅನಿವಾರ್ಯ ಕರ್ಮ.

ನಮ್ಮ ದೇಶ ಈಗ ಜಾಗತೀಕ ಮಟ್ಟದಲ್ಲಿ ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುವ ಪೈಪೋಟಿಯಲ್ಲಿದೆ. ಆರ್ಥಿಕ ಸ್ಥಿರತೆ ಮತ್ತು ಸದೃಡತೆ ಹೊಂದಲು ಸರಕಾರ, ಖಾಸಗೀ ವಲಯ ನಾನಾ ಶತ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದೊಳಗೆ ಇರುವ ದಾರಿದ್ರ್ಯ ನಿವಾರಣೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಲು ವಿಫಲವಾಗಿದೆ. ನಿತ್ಯಾ ಸಾವಿರಾರು ಕೋಟಿಯಷ್ಟು ಹಣ ಸಲ್ಲದ ವಿಚಾರಕ್ಕೆ ಪೋಲಾಗುತ್ತಿದೆ. ಅನಾವಶ್ಯಕ ಕೆಲಸಗಳಿಗೆ ಖರ್ಚು ಮಾಡಲಾಗುತ್ತಿದೆ. ಇದೂವರೆಗೂ ಬಂಡವಾಳ ಶಾಯಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ಮನ್ನಾ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಸಾವಿರಾರು ಕೋಟಿ ಹಣ ದುಷ್ಟರ ಪಾಲಾಗಿದೆ. ಗಣಿ ಸೇರಿದಂತೆ ದೇಶದ ನಾನಾ ಹಗರಣದಲ್ಲಿ ಕೋಟಿ ಕೋಟಿಯಷ್ಟು ಹಣ ಹಣವಂತರ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಖಜಾನೆ ಸೇರಿದೆ. ಇಷ್ಟು ಹಣದಲ್ಲಿ ಕೇವಲ ಶೇ೧೦ರಷ್ಟು ಹಣ ಖರ್ಚು ಮಾಡಿದರೆ ಇಂಯಹ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಿ, ಪುಣ್ಯ ಕಟ್ಟಿ ಕೊಳ್ಳಬಹುದಲ್ಲವೇ.

ನಿವೇದನೆ: ನಿಮ್ಮ ಅನಿಸಿಕೆಯನ್ನು ದಯಮಾಡಿ ನನಗೆ ಕಳುಹಿಸಿ ಅಥವಾ ದೂರವಾಣಿ ಕರೆ ಮಾಡಿ. ಮೋಬೈಲ್: ೯೪೪೮೪ ೧೬೫೫೦